Sidlaghatta : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15 ರ ಭಾನುವಾರ ತಾಲ್ಲೂಕಿನ ಲಕ್ಕಹಳ್ಳಿ ಗ್ರಾಮದಿಂದ ಪ್ರಾರಂಭಗೊಂಡು ಎಚ್.ಕ್ರಾಸ್ ವರೆಗಿನ ಸುಮಾರು 26 ಕಿಮೀ ಉದ್ದದ ಮಾನವ ಸರಪಳಿ ನಿರ್ಮಿಸಲು ಸಿದ್ದತೆ ನಡೆಸಿದ್ದು ಇದರಲ್ಲಿ ಪ್ರತಿಯೊಬ್ಬ ನಾಗರೀಕರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ತಹಶೀಲ್ದಾರ್ ಬಿ.ಎನ್.ಸ್ವಾಮಿ ಮನವಿ ಮಾಡಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ದೇಶದ ಸಾರ್ವಭೌಮತ್ವದ ಹಿರಿಮೆಯನ್ನು ಸ್ಮರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಜ್ಯದ ಬೀದರ್ ನಿಂದ ಚಾಮರಾಜನಗರದವರೆಗಿನ ಸುಮಾರು 2800 ಕಿಮೀ ಉದ್ದದ ಮಾನವ ಸರಪಳಿ ನಿರ್ಮಾಣ ಮಾಡುತ್ತಿರುವುದು ಐತಿಹಾಸಿಕ ದಾಖಲೆಯಾಗಲಿದೆ. ಇದರಲ್ಲಿ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ, ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಾಗರೀಕರೂ ಪಾಲ್ಗೊಂಡು ದೇಶದ ಸಂವಿಧಾನ ಹಾಗು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಜಾಗೃತಿ ಮಾಡಿಸುವ ಅಗತ್ಯತೆಯಿದೆ ಎಂದರು.
ತಾಲ್ಲೂಕಿನ ಲಕ್ಕಹಳ್ಳಿ ಗ್ರಾಮದಿಂದ ಶುರುವಾಗುವ ಮಾನವ ಸರಪಳಿ ಆನೂರು, ಚಿಕ್ಕದಾಸರಹಳ್ಳಿ, ಚೀಮಂಗಲ ಮಾರ್ಗವಾಗಿ ಎಚ್. ಕ್ರಾಸ್ ಮೂಲಕ ಕೋಲಾರ ಗಡಿಯವರೆಗೂ ಸುಮಾರು 26 ಕಿಮೀ ನಷ್ಟು ಉದ್ದವಾಗಿ ನಿರ್ಮಾಣಗೊಳ್ಳಲಿದೆ. ಪ್ರತಿ ಕಿಮೀ ಒಂದಕ್ಕೆ ತಾಲ್ಲೂಕು ಮಟ್ಟದ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಲಾಗುವುದು. ಪ್ರತಿ 500 ಮೀಟರ್‌ಗೆ ಒಬ್ಬ ಪಿಡಿಓ ಅಥವ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರನ್ನು ಹಾಗು ಪ್ರತಿ 100 ಮೀ ಗೆ ಓರ್ವ ಶಿಕ್ಷಕರನ್ನು ನಿಯೋಜನೆ ಮಾಡುವ ಮೂಲಕ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಯಾವುದೇ ಲೋಪ ದೋಷಗಳಾಗದಂತೆ ಎಚ್ಚರ ವಹಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ನಾಗರಿಕರೂ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾ.ಪಂ ಇಓ ಹೇಮಾವತಿ, ನಗರಸಭೆ ಪೌರಾಯುಕ್ತ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ತಾಲ್ಲೂಕು ವಕೀಲರ ಸಮಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.