Jangamkote, Sidlaghatta : ಇತ್ತೀಚೆಗೆ ನಕಲಿ ಕ್ಲಿನಿಕ್ ಗಳ ಹಾವಳಿ ಹೆಚ್ಚಾಗುತ್ತಿದೆ. ಸೂಕ್ತ ವಿದ್ಯಾರ್ಹತೆ, ಕೆ.ಪಿ.ಎಂ.ಎ ಪ್ರಮಾಣಪತ್ರ ಇಲ್ಲದವರಿಗೆ ಅಂಗಡಿಯನ್ನು ಬಾಡಿಗೆ ಕೊಡುವ ಮಾಲೀಕರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ವೃತ್ತದ ಹತ್ತಿರದ ಪೆಟ್ರೋಲ್ ಬಂಕ್ ಬಳಿಯ ಅಂಗಡಿ ಮಳಿಗೆಯಲ್ಲಿ ಶ್ರೀ ಶ್ರದ್ಧಾ ಸ್ಟೋರ್ಸ್ ಎಂದು ಫಲಕವನ್ನು ಹಾಕಿಕೊಂಡು ದೈನಂದಿನ ವಸ್ತುಗಳನ್ನು ಮಾರುತ್ತಾ ಒಳಗೆ ಕ್ಲಿನಿಕ್ ನಡೆಸುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮತ್ತು ಆರೋಗ್ಯ ನಿರೀಕ್ಷಕ ದೇವರಾಜ್ ಭೇಟಿ ನೀಡಿ ಪರಿಶೀಲಿಸಿದರು.
ಒಳಗಿನ ಕೋಣೆಗೆ ಬೀಗ ಹಾಕಿದ್ದರಿಂದ ಪೊಲೀಸ್ ಅಲ್ತಾಫ್ ಮುಖಾಂತರ ಬೀಗ ತೆರೆಸಿದಾಗ, ಒಳಗೆ ಔಷಧಿ ಅಂಗಡಿಯೇ ಇತ್ತು. ಅಲ್ಲದೆ ರೋಗಿಗೆ ಚಿಕಿತ್ಸೆ ನೀಡುವ ಎಲ್ಲಾ ಸಲಕರಣೆಗಳೂ ಇದ್ದವು. ಸ್ಥಳಕ್ಕೆ ಸಹಾಯಕ ಔಷಧ ನಿಯಂತ್ರಕಿ ಸವಿತಾ ಅವರು ಸಹ ಬಂದು ಪರಿವೀಕ್ಷಿಸಿದರು.
“ಭಾಗ್ಯಮ್ಮ ಎನ್ನುವವರು ಎ.ಎನ್.ಎಂ ತರಬೇತಿ ಪಡೆದಿದ್ದು, ಈ ಕ್ಲಿನಿಕ್ ನಡೆಸುತ್ತಿದ್ದರು. ಹೊರಗಡೆಯಿಂದ ನೋಡಿದಾಗ ದಿನನಿತ್ಯ ಬಳಕೆಯ ವಸ್ತುಗಳನ್ನು ಮಾರುವ ಅಂಗಡಿಯಂತೆ ಕಾಣುತ್ತಿತ್ತಾದರೂ, ಒಳಗೆ ಎಲ್ಲಾ ರೀತಿಯ ಔಷಧಿಗಳು, ಚುಚ್ಚುಮದ್ದು, ಯಂತ್ರೋಪಕರಣಗಳನ್ನೆಲ್ಲಾ ಇಟ್ಟುಕೊಂಡಿದ್ದರು. ನಾವು ಹೋದಾಗ ಅವರಿಗೆ ಫೋನ್ ಮಾಡಿ ಕರೆದರೂ ಬರಲಿಲ್ಲ. ಆದರೆ ಮಾರನೆ ದಿನ ಬಂದು ತಪ್ಪೊಪ್ಪಿಗೆ ಬರೆದುಕೊಟ್ಟರು. ಈಗ ಅಂಗಡಿಯನ್ನು ಸೀಜ್ ಮಾಡಿದ್ದು, ನಾವು ಹಾಗೂ ಸಹಾಯಕ ಔಷಧ ನಿಯಂತ್ರಕಿ ಇಬ್ಬರೂ ಜಿಲ್ಲಾಧಿಕಾರಿ ಅವರ ನ್ಯಾಯಾಲಯಕ್ಕೆ ಪುರಾವೆ, ವರದಿ ಸಲ್ಲಿಸುತ್ತೇವೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದೇವೆ” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.