Sidlaghatta : ಕುರ್ಚಿ ಭದ್ರಪಡಿಸಿಕೊಳ್ಳುವುದಕ್ಕೆ ಮಾತ್ರ ರಾಜ್ಯ ಕಾಂಗ್ರೆಸ್ ಪಕ್ಷ ಸೀಮಿತವಾಗಿದೆ. ರಾಜ್ಯದ ಅಭಿವೃದ್ಧಿಯ ಚಿಂತನೆ ಅವರಲ್ಲಿ ಎಳ್ಳಷ್ಟೂ ಇಲ್ಲ ಎಂದು ಜೆ.ಡಿ.ಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಶಿಡ್ಲಘಟ್ಟದ ಹೊರವಲಯದ ಚೀಮನಹಳ್ಳಿ ಮತ್ತು ವರದನಾಯಕನಹಳ್ಳಿ ನಡುವಿನ ಖಾಸಗಿ ಜಮೀನಿನಲ್ಲಿ ನಡೆದ “ಜನರೊಂದಿಗೆ ಜನತಾದಳ” ಎಂಬ ಬೃಹತ್ ಜೆಡಿಎಸ್ ಪಕ್ಷದ ಸಮಾವೇಶ ಹಾಗೂ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಎಂಟರಿಂದ ಹತ್ತು ಪರ್ಸೆಂಟ್ ಅಪ್ ಗ್ರೇಡ್(ಕಮಿಷನ್) ಹಣ ಕೊಟ್ಟರೆ ನಮಗೆ ಕಾಮಗಾರಿಗಳು ಸಿಗಬಹುದೇನೋ ಎಂದು ಕಾಂಗ್ರೆಸ್ ಶಾಸಕರು ಹೇಳುವುದನ್ನು ಕೇಳುವಾಗ, ಎಂತಹ ಹೀನಾಯಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ತಲುಪಿದೆ. ನಾಲ್ಕೂವರೆ ಲಕ್ಷ ಕೋಟಿಯ ದೊಡ್ಡ ಬಡ್ಜೆಟ್ ಮಂದಿಸಿರುವುದಾಗಿ ಮುಖ್ಯ ಮಂತ್ರಿ ಹೇಳಿಕೊಳ್ಳುತ್ತಾರೆ. ಬಡ್ಜೆಟ್ ಪ್ರಮಾಣ ಹೇಳುತ್ತಾರೆ, ಆದರೆ ಎಷ್ಟು ಸಾಲ ಮಾಡಿದ್ದಾರೆ ಎಂಬುದನ್ನು ಹೇಳುತ್ತಿಲ್ಲ. ಗ್ಯಾರಂಟಿಗೆ ಹಂಚಲು ನಿಮಗೆ 55 ಸಾವಿರ ಕೋಟಿ ರೂ ಬೇಕು ಹಾಗಾಗಿ ರಾಜ್ಯದ ಅಭಿವೃದ್ಧಿಗೆ ಹಣವಿಲ್ಲ. ಆದರೆ ಕುಮಾರಣ್ಣನವರು ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ಕೋಟಿ ರೂ ರೈತರ ಸಾಲ ಮನ್ನಾ ಮಾಡಿದ್ದರು. ಯಾವುದೇ ಕ್ಷೇತ್ರಕ್ಕೂ ಅನುದಾನ ಕಡಿಮೆ ಮಾಡಿರಲಿಲ್ಲ ಎಂದು ಹೇಳಿದರು.
ಗ್ಯಾರಂಟಿಗಳ ಬಗ್ಗೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಭಿನ್ನ ಭಿನ್ನವಾಗಿ ಮಾತನಾಡುತ್ತಿದ್ದಾರೆ. ಗ್ಯಾರಂಟಿಗಳು ಕೊಡುವುದಕ್ಕೆ ಜನರ ಮೇಲೆ ತೆರಿಗೆ ಹೇರಲಾಗಿದೆ. ಗಾಳಿ, ಬೆಳಕು ಬಿಟ್ಟು, ಎಲ್ಲದರ ಮೇಲೆ ತೆರಿಗೆ ಹಾಕಿದ್ದಾರೆ. ಜೆಡಿಎಸ್ ಪಕ್ಷದ 12 ಮಂದಿ ಶಾಸಕರು ನಮ್ಮೊಂದಿಗೆ ಇದ್ದಾರೆ ಎಂದು ಕೆಲವರು ಕನಸು ಕಾಣುತ್ತಿದ್ದಾರೆ. ಹಣಕ್ಕಾಗಿ, ಅಧಿಕಾರಕ್ಕಾಗಿ ಮಾರಾಟವಾಗುವ ಶಾಸಕರು ನಮ್ಮಲ್ಲಿ ಇಲ್ಲ ಎಂದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ನಮ್ಮ ಪಕ್ಷದ ಕಾರ್ಯಕರ್ತರಿಗೆ ಇರುವ ದೊಡ್ಡ ಶ್ರೀರಕ್ಷೆಯೆಂದರೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕುಮಾರಣ್ಣನವರು ಅವರ ಅಧಿಕಾರಾವಧಿಯಲ್ಲಿ ಮಾಡಿರುವ ಜನೋಪಯೋಗಿ ಕಾರ್ಯಗಳು. ಪ್ರತಿಯೊಂದು ಮನೆ ಮನಗಳಿಗೂ ಈ ವಿಚಾರವನ್ನು ನಮ್ಮ ಕಾರ್ಯಕರ್ತರು ತಲುಪಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ, ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಕರ್ತರು ಶ್ರಮಿಸಬೇಕಿದೆ. 2028 ರ ಚುನಾವಣೆ ನಡೆಯಲ್ಲಿ ಎನ್.ಡಿ.ಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಬೇಕು, ಐದು ವರ್ಷಗಳ ಕಾಲ ನಮ್ಮ ಕುಮಾರಣ್ಣನವರನ್ನು ಮುಖ್ಯಮಂತ್ರಿಯಾಗಿ ನೋಡಬೇಕು ಎಂಬ ಸಂಕಲ್ಪ ನಮ್ಮದು ಎಂದರು.
ಕೃಷಿಗೆ ಮತ್ತು ಕುಡಿಯಲು ನೀರು ಒದಗಿಸಿಕೊಡಬೇಕು ಎಂಬ ನಮ್ಮ ಸಂಕಲ್ಪ ನೆರವೇರಬೇಕಾದರೆ, ಬಯಲು ಸೀಮೆಗೆ ನೀರು ಸಿಗಬೇಕಾದರೆ ನಮ್ಮ ರಾಜ್ಯದಲ್ಲಿ ಎನ್.ಡಿ.ಎ ಮೈತ್ರಿ ಕೂಟ ಅಧಿಕಾರಕ್ಕೆ ಬಂದು ನಮ್ಮ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು ಎಂದು ನುಡಿದರು.
ನಗರಕ್ಕೆ ಆಗಮಿಸಿದ ಜೆ.ಡಿ.ಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಬೃಹತ್ ಗಾತ್ರದ ಡ್ರಾಗನ್ ಫ್ರೂಟ್, ಚಕ್ಕೋತಾ ಮತ್ತು ಸೇಬಿನ ಹಾರಗಳನ್ನು ಕ್ರೇನ್ ಮೂಲಕ ಹಾಕಿ, ಕಳಸ ಸ್ವಾಗತ ಕೋರಲಾಯಿತು. ಹೊತ್ತ ಮಹಿಳೆಯರು ಮತ್ತು, ದೇವತಾ ವೇಷಧಾರಿಗಳು, ತಮಟೆ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಯಶಸ್ವಿನಿ ಎಂಬ ಡಿಪ್ಲೊಮ ಓದುವ ವಿಶೇಷಚೇತನ ಹೆಣ್ಣುಮಗುವಿಗೆ ಮೆಕ್ಯಾನಿಕ್ಸ್ ಸಾಫ್ಟ್ವೇರ್ ಸೊಲ್ಯೂಷನ್ಸ್ ಮುಖ್ಯಸ್ಥ ಕೃಷ್ಣಾ ಸಾಮಂತ್ ಲಾಪ್ ಟಾಪ್ ನೀಡಿದರು.

ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಂ.ಮಲ್ಲೇಶ್ ಬಾಬು, ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ನಾಗಮಂಗಲ ಸುರೇಶ್ ಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯ್ಯದ್ ರೋಷನ್ ಅಬ್ಬಾಸ್, ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಹಾಸನ ಶಾಸಕ ಸ್ವರೂಪ್ ಪ್ರಕಾಶ್, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜುನಾಥ್, ಮಾಲೂರು ಜಿ.ಇ ರಾಮೇಗೌಡ, ಸಂದೀಪ್ ಪಾಟೀಲ್, ವಕ್ಕಲೇರಿ ರಾಮಣ್ಣ, ವೆಂಕಟೇಶ್ವರರಾವ್, ಕೋಲಾರ ಸಿಎಂಆರ್ ಶ್ರೀನಾಥ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮುನಿಯಪ್ಪ, ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್, ಬಂಕ್ ಮುನಿಯಪ್ಪ, ಮೇಲೂರು ಮಂಜುನಾಥ್, ತೂಪಲ್ಲಿ ಚೌಡರೆಡ್ಡಿ, ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ, ಡಾ.ಧನಂಜಯರೆಡ್ಡಿ, ಶಿವಾರೆಡ್ಡಿ, ಕೆ.ಲಕ್ಷ್ಮೀನಾರಾಯಣರೆಡ್ಡಿ, ತಾದೂರು ರಘು, ಮುಗಿಲಡಿಪಿ ನಂಜಪ್ಪ, ಹುಜಗೂರು ರಾಮಣ್ಣ ಹಾಜರಿದ್ದರು.