
Sidlaghatta : ಕರ್ನಾಟಕ ಜಾನಪದ ಅಕಾಡೆಮಿಯ 2025ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಗೌರವ ಪ್ರಶಸ್ತಿಗೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಖ್ಯಾತ ಕೀಲುಕುದುರೆ ಮತ್ತು ಗಾರುಡಿಗೊಂಬೆ ಕಲಾವಿದ ಕೆ.ಎಂ.ನಾರಾಯಣಸ್ವಾಮಿ ಅವರು ಆಯ್ಕೆಯಾಗಿದ್ದಾರೆ. ಜಂಗಮಕೋಟೆಯ ನಿವಾಸಿಯಾದ ಇವರು ಗಾರುಡಿಗೊಂಬೆ ಕುಣಿತ ಮತ್ತು ತಯಾರಿಕೆಯಲ್ಲಿ ಅಸಾಧಾರಣ ಪರಿಣತಿ ಹೊಂದಿದ್ದು, ಕಳೆದ ಆರೂವರೆ ದಶಕಗಳಿಂದ ಜಾನಪದ ಕಲೆಯ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕೀಲುಕುದುರೆಗಳನ್ನು ಕುಣಿಸುವುದರ ಜೊತೆಗೆ ಮಣ್ಣು, ಬಿದಿರು ಮತ್ತು ಲಭ್ಯವಿರುವ ನೈಸರ್ಗಿಕ ವಸ್ತುಗಳನ್ನು ಬಳಸಿ ಗೌರಿ-ಗಣೇಶನ ವಿಗ್ರಹಗಳು, ಜಿರಾಫೆ, ನವಿಲು ಹಾಗೂ ಹತ್ತು-ಹನ್ನೆರಡು ಅಡಿ ಎತ್ತರದ ಬೃಹತ್ ಗಾರುಡಿಗೊಂಬೆಗಳಿಗೆ ಜೀವತುಂಬುವ ಇವರ ಕಲೆ ವಂಶಪಾರಂಪರ್ಯವಾಗಿ ಬಂದಿದ್ದಾಗಿದೆ. ಪ್ರಸ್ತುತ 80 ವರ್ಷ ವಯಸ್ಸಿನ ನಾರಾಯಣಸ್ವಾಮಿ ಅವರು ತಮ್ಮ 15ನೇ ವಯಸ್ಸಿನಲ್ಲೇ ಕಲಾ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು, ಒಟ್ಟು 65 ವರ್ಷಗಳ ಸುದೀರ್ಘ ಕಲಾ ಸೇವೆಯನ್ನು ಸಲ್ಲಿಸಿರುವುದು ವಿಶೇಷವಾಗಿದೆ.
ತಮ್ಮ ತಂದೆ ಕೆ.ಎಸ್.ಮುನಿಯಪ್ಪ ಅವರಿಂದ ತರಬೇತಿ ಪಡೆದ ಇವರು, ಕೇವಲ ಒಬ್ಬ ಕಲಾವಿದರಾಗಿ ಉಳಿಯದೆ ರಂಗಭೂಮಿ ಮತ್ತು ಧಾರ್ಮಿಕ ಉತ್ಸವಗಳಿಗೂ ತಮ್ಮ ಸೇವೆಯನ್ನು ವಿಸ್ತರಿಸಿದ್ದಾರೆ. ನಾಟಕ ಮತ್ತು ಯಕ್ಷಗಾನಗಳಿಗೆ ಬೇಕಾದ ವಿಶಿಷ್ಟ ಮಾದರಿಯ ಕಿರೀಟಗಳನ್ನು ತಯಾರಿಸುವುದು ಹಾಗೂ ವಿವಿಧ ಜಿಲ್ಲೆಗಳಲ್ಲಿ ರಥೋತ್ಸವಗಳ ಸಂದರ್ಭದಲ್ಲಿ ಆಕರ್ಷಕ ಮುತ್ತಿನ ಪಲ್ಲಕ್ಕಿಗಳನ್ನು ನಿರ್ಮಿಸಿಕೊಡುವುದರಲ್ಲಿ ಇವರು ಸಿದ್ಧಹಸ್ತರು. ತಮ್ಮ ತಂದೆ ಸ್ಥಾಪಿಸಿದ್ದ ಶ್ರೀ ಪಾಂಡುರಂಗ ಗಾರುಡಿಗೊಂಬೆ ನೃತ್ಯ ಯುವಕರ ಸಂಘವನ್ನು ಇಂದಿಗೂ ಸಕ್ರಿಯವಾಗಿ ಮುನ್ನಡೆಸುತ್ತಿರುವ ನಾರಾಯಣಸ್ವಾಮಿ, ತಮ್ಮ ಮಕ್ಕಳಾದ ಮುರಳಿ ಮತ್ತು ಮಂಜುನಾಥ್ ಅವರಿಗೂ ಈ ಕಲೆಯನ್ನು ಧಾರೆ ಎರೆದಿದ್ದಾರೆ. ಆ ಮೂಲಕ ಜಾನಪದ ಕಲೆಯು ಮುಂದಿನ ಪೀಳಿಗೆಗೂ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ.
ಇವರ ಕಲಾ ತರಬೇತಿಯು ಶಿಡ್ಲಘಟ್ಟದ ಜಂಗಮಕೋಟೆ ಮಾತ್ರವಲ್ಲದೆ ಕೋಲಾರ ತಾಲ್ಲೂಕಿನ ವೇಮಗಲ್, ಬೆಂಗಳೂರು ಮತ್ತು ತಿರುಪತಿಗಳಿಗೂ ವ್ಯಾಪಿಸಿದ್ದು, ಅಲ್ಲಿ ಹಲವು ಯುವ ತಂಡಗಳನ್ನು ರಚಿಸಿ ತರಬೇತಿ ನೀಡಿದ್ದಾರೆ. ಜಾನಪದದ ಮೇಲಿನ ಅಪಾರ ಪ್ರೀತಿಯಿಂದಾಗಿ ರಾಮನಗರದ ಜಾನಪದ ಲೋಕಕ್ಕೆ ತಮ್ಮ ಸಂಗ್ರಹದಲ್ಲಿದ್ದ ಹಲವು ಅಮೂಲ್ಯ ಜಾನಪದ ಗೊಂಬೆಗಳು ಮತ್ತು ಅಪರೂಪದ ಕಲಾಕೃತಿಗಳನ್ನು ದಾನವಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ. ರಾಜ್ಯದ ಮೂಲೆಮೂಲೆಗಳಲ್ಲಿ ಮತ್ತು ಹೊರರಾಜ್ಯಗಳಲ್ಲೂ ಪ್ರದರ್ಶನ ನೀಡಿರುವ ಇವರಿಗೆ ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವ ಕನ್ನಡ ಸಮ್ಮೇಳನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಲವು ಪುರಸ್ಕಾರಗಳು ಲಭಿಸಿವೆ. ಈಗ ಜಾನಪದ ಅಕಾಡೆಮಿಯ ಗೌರವ ಪ್ರಶಸ್ತಿಯು ಇವರ ಮುಡಿಗೆ ಏರುತ್ತಿರುವುದು ಜಿಲ್ಲೆಯ ಕಲಾ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.