
Kundalagurki, Sidlaghatta : ಗ್ರಾಮ ಪಂಚಾಯಿತಿಯಿಂದ ಒಂದೇ ನಿವೇಶನವನ್ನು ಇಬ್ಬರಿಗೆ ಮಂಜೂರು ಮಾಡಿ, ಇಬ್ಬರ ನಡುವೆ ಜಗಳವಿಟ್ಟು ಇಬ್ಬರಿಗೂ ನಿವೇಶನ ಇಲ್ಲದಂತೆ ಮಾಡಿದ್ದಾರೆ ಎಂದು ಆರೋಪಿಸಿ ವಿಕಲಚೇತನ ಸಂತೋಷ್ ಕುಮಾರ್ ಅವರು ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಗುರುವಾರದಿಂದ ಅನಿರ್ಧಿಷ್ಟಾವಧಿ ಧರಣಿಯನ್ನು ಆರಂಭಿಸಿದ್ದಾರೆ. ಸಂತೋಷ್ ಅವರು ಮಹಾತ್ಮಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಇಟ್ಟುಕೊಂಡು ಒಬ್ಬಂಟಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
2013ರಲ್ಲಿ ಗ್ರಾಮ ಪಂಚಾಯಿತಿಯು ಸಂತೋಷ್ ಕುಮಾರ್ ಅವರ ತಾಯಿ ಆಂಜಿನಮ್ಮ ಅವರ ಹೆಸರಿಗೆ ನಿವೇಶನವನ್ನು ಮಂಜೂರು ಮಾಡಿತ್ತು. ಇಂದಿರಾ ಆವಾಜ್ ವಸತಿ ಯೋಜನೆಯಡಿ ಮನೆ ಕೂಡ ಮಂಜೂರಾಗಿದ್ದು, ಆಂಜಿನಮ್ಮ ಅವರು ಮನೆ ನಿರ್ಮಿಸಲು ಪಾಯ ಹಾಕಿ, ಮೊದಲ ಬಿಲ್ ಮೊತ್ತವಾದ ₹29,800 ಅನ್ನು ಪಡೆದುಕೊಂಡಿದ್ದರು.
ಆದರೆ, ಅದೇ ನಿವೇಶನವು ತಮಗೂ ಮಂಜೂರು ಆಗಿದೆ ಎಂದು ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ಗ್ರಾಮ ಪಂಚಾಯಿತಿ ನೀಡಿದ ದಾಖಲೆಗಳೊಂದಿಗೆ ಬಂದು ತಗಾದೆ ತೆಗೆದಿದ್ದಾರೆ. ಇದರಿಂದ ಇಬ್ಬರ ನಡುವೆ ದೊಡ್ಡ ಜಗಳ ಮತ್ತು ವಾದ ವಿವಾದ ನಡೆದು, ಅಂತಿಮವಾಗಿ ಸಂತೋಷ್ ಕುಮಾರ್ ಅವರು ನಿರ್ಮಿಸಿದ್ದ ಪಾಯವನ್ನು ಕಿತ್ತು ಹಾಕಲಾಯಿತು.
ಅಂದಿನಿಂದ ಇಂದಿನವರೆಗೂ ನಿವೇಶನಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿದ್ದರೂ, ಸಮಸ್ಯೆ ಬಗೆಹರಿಸಬೇಕಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸುಮ್ಮನಿದ್ದಾರೆ. ಇದರಿಂದ ರೋಸಿಹೋದ ಸಂತೋಷ್ ಕುಮಾರ್ ಅವರು, ತಮ್ಮ ಕುಟುಂಬಕ್ಕೆ ಸದರಿ ನಿವೇಶನವನ್ನು ಪಕ್ಕಾ ಮಾಡಿಕೊಡಬೇಕು, ಇಲ್ಲವೇ ಬೇರೆ ನಿವೇಶನವನ್ನಾದರೂ ನೀಡಬೇಕು ಎಂದು ಆಗ್ರಹಿಸಿ ಧರಣಿ ಆರಂಭಿಸಿದ್ದಾರೆ. ಮೊದಲ ದಿನವಾದ ಗುರುವಾರ ಯಾರೊಬ್ಬರೂ ಧರಣಿ ನಿರತರನ್ನು ಭೇಟಿ ಮಾಡಿಲ್ಲವಾದರೂ, ಪ್ರತಿಭಟನೆ ಮುಂದುವರೆದಿದೆ.