
Kundalagurki, sidlaghatta : ಗ್ರಾಮೀಣಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಮುದಾಯ, ಸಂಘಸಂಸ್ಥೆಗಳ ಸಹಕಾರವು ಬಹು ಮಹತ್ವದ್ದಾಗಿದೆ. ಗ್ರಾಮೀಣ ಬಡಮಕ್ಕಳ ಶಿಕ್ಷಣಕ್ಕೆ ಎಲ್ಲರೂ ಕೈಜೋಡಿಸಬೇಕು. ಗ್ರಾಮೀಣಭಾಗದ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ನಗರಪ್ರದೇಶದ ವಿದ್ಯಾರ್ಥಿಗಳೊಂದಿಗೆ ಕಲಿಕೆ, ಉದ್ಯೋಗಗಳಲ್ಲಿ ಸ್ಪರ್ಧೆ ಒಡ್ಡಲು ಸಮಾಜವು ಸಹಕರಿಸಬೇಕಿದೆ ಎಂದು ಲಯನ್ಸ್ ಕ್ಲಬ್ ಆಫ್ ಬೆಂಗಳೂರು ವೆಸ್ಟ್ ನ ಅಧ್ಯಕ್ಷ ಹರಿಪ್ರಸಾದ್ ವರ್ದಾ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬೆಂಗಳೂರಿನ ವಿ.ಎಸ್.ಕೆ ಶ್ರೀ ಫೌಂಡೇಶನ್ ಮತ್ತು ಲಯನ್ಸ್ ಕ್ಲಬ್ ಆಫ್ ಬೆಂಗಳೂರು ವೆಸ್ಟ್ ನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ನೋಟ್‌ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿ.ಎಸ್.ಕೆ ಶ್ರೀ ಫೌಂಡೇಶನ್‌ನ ಉಪಾಧ್ಯಕ್ಷ ಎಸ್.ಎಲ್.ರಾಮಗೋಪಾಲ ಮಾತನಾಡಿ, ಮಕ್ಕಳಲ್ಲಿ ಕಲಿಯುವಲ್ಲಿ ಆಶಕ್ತಿ, ಅಧ್ಯಯನಶೀಲತೆ, ಸಮಯದ ಸದ್ಬಳಕೆ, ಓದುವಲ್ಲಿ ಆತ್ಮವಿಶ್ವಾಸ, ದೃಢಛಲಗಳಂತಹ ಗುಣಗಳು ಸದೃಢವಾಗಬೇಕು. ಕಲಿಕೆಯು ಕೇವಲ ಅಂಕಪಟ್ಟಿ ಗಳಿಸಲು ಮಾತ್ರವಾಗದೇ ನಮ್ಮ ಬದುಕಿಗೆ ಪೂರಕವಾದ ಶಿಕ್ಷಣವಾಗಬೇಕು ಎಂದರು.
ಕುಂದಲಗುರ್ಕಿ ಗ್ರಾಮಪಂಚಾಯಿತಿಯ 9 ಶಾಲೆಗಳ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕ, ಜಾಮಿಟ್ರಿ ಬಾಕ್ಸ್, ಮತ್ತಿತರ ಲೇಖನಸಾಮಗ್ರಿಗಳನ್ನು ವಿತರಿಸಲಾಯಿತು.
ಮುಖ್ಯಶಿಕ್ಷಕ ಎಲ್.ವಿ.ವೆಂಕಟರೆಡ್ಡಿ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ವೆಸ್ಟ್ ನ ಕಾರ್ಯದರ್ಶಿ ಕೆ.ಆರ್.ಎನ್ ಚರಣ್, ಸದಸ್ಯ ವಿಷ್ಣು, ಮಂಜುನಾಥ್ ವರ್ದಾ, ಚೈತನ್ಯ, ಉಷಾ ಕಂಚಿ, ನಾಗಲಕ್ಷ್ಮಿ, ವಿ.ಎಸ್.ಕೆ ಶ್ರೀ ಫೌಂಡೇಶನ್‌ನ ನಿರ್ದೇಶಕ ಟಿ.ಎಸ್.ಶಿವಸಂಕರ್, ಸದಸ್ಯ ಸುದರ್ಶನ್ ಕಂಚಿ, ಶಿಕ್ಷಕ ಸಿ.ಪ್ರಶಾಂತ್‌ಕುಮಾರ್, ವಿ.ಮಂಜುನಾಥ್, ಕೆ.ಎಂ.ರಮೇಶ್‌ಕುಮಾರ್, ಎಸ್.ವೆಂಕಟರಾಜು, ಕಲ್ಪನಾ, ಅರ್ಚನಾ, ಶಬರೀನ್‌ತಾಜ್, ಶ್ರೀನಿವಾಸ್, ನರೇಂದ್ರಬಾಬು ಹಾಜರಿದ್ದರು.