Sidlaghatta, Chikkaballapur : ವೃತ್ತಿ ಯಾವುದೇ ಇರಲಿ, ಅದರಲ್ಲಿ ಮೇಲು-ಕೀಳಿಲ್ಲ. ಪ್ರತಿಯೊಬ್ಬರೂ ತಮ್ಮ ವೃತ್ತಿ ಪಾವಿತ್ರ್ಯತೆ ಮತ್ತು ವೃತ್ತಿ ಧರ್ಮವನ್ನು ಕಾಪಾಡಿಕೊಂಡು ಮುನ್ನಡೆದರೆ, ನಮಗೂ ಮತ್ತು ವೃತ್ತಿಗೂ ಗೌರವ ದೊರೆಯಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇಗೌಡ ಅವರು ತಿಳಿಸಿದರು.
ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ತಾಲ್ಲೂಕು ವಕೀಲರ ಸಂಘದಿಂದ ಆಯೋಜಿಸಿದ್ದ “ವಕೀಲರ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಧೀಶರ ಮತ್ತು ವಕೀಲರ ವೃತ್ತಿಯು ಸಮಾಜ ಹಾಗೂ ನಾಗರಿಕರ ಒಳಿತಿಗಾಗಿ ಮಾರ್ಗದರ್ಶನ ನೀಡುವಂತಹ ಪವಿತ್ರ ವೃತ್ತಿಯಾಗಿದೆ. ಈ ನಿಟ್ಟಿನಲ್ಲಿ ವಕೀಲರು ತಾವು ನಿರ್ವಹಿಸುವ ವೃತ್ತಿಗೆ ಮತ್ತು ಸಮಾಜಕ್ಕೆ ಘನತೆ ತರುವಂತಹ ಕೆಲಸವನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು. ಎಂಜಿನಿಯರ್‌ಗಳು ಕಟ್ಟಡ, ಅಣೆಕಟ್ಟುಗಳನ್ನು ನಿರ್ಮಿಸಿದರೆ, ವಕೀಲರು ಸಮಾಜದ ಎಂಜಿನಿಯರುಗಳಾಗಿ ಕಾರ್ಯನಿರ್ವಹಿಸುತ್ತಾರೆ. ಅವರು ಸಮಾಜದಲ್ಲಿನ ಸಾಮಾಜಿಕ ಅಸಮತೋಲನವನ್ನು ನಿವಾರಿಸಿ, ಎಲ್ಲಾ ವರ್ಗದವರ ಕುಂದುಕೊರತೆಗಳಿಗೆ ನ್ಯಾಯ ಒದಗಿಸಿ, ನೆಮ್ಮದಿಯ ಜೀವನಕ್ಕೆ ದಾರಿ ತೋರಿಸುವ ಮಹತ್ವದ ಕೆಲಸವನ್ನು ನಿರ್ವಹಿಸುತ್ತಾರೆ ಎಂದು ಅವರು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಯುವ ವಕೀಲರಲ್ಲಿ ಅಧ್ಯಯನದ ಕೊರತೆ ಕಾಣುತ್ತಿದೆ. ಪ್ರಕರಣಗಳ ಕಡತಗಳನ್ನು ಸರಿಯಾಗಿ ಪರಿಶೀಲಿಸದೆ ಆತುರಾತುರವಾಗಿ ಮುಂದುವರೆಸುತ್ತಿರುವುದು ಕಂಡುಬರುತ್ತಿದೆ. ಇದರಿಂದ ವಿನಾಕಾರಣ ವಕೀಲರು, ನ್ಯಾಯಾಲಯ ಹಾಗೂ ಮುಖ್ಯವಾಗಿ ಕಕ್ಷಿದಾರರ ಅಮೂಲ್ಯ ಸಮಯ ಹಾಳಾಗುತ್ತಿದೆ. ವಕೀಲಿ ವೃತ್ತಿಯನ್ನು ಇಷ್ಟಪಟ್ಟು ಆಯ್ದುಕೊಂಡಿರುವ ಯುವ ವಕೀಲರು ಹೆಚ್ಚು ಅಧ್ಯಯನ ಮಾಡಿ, ಎಲ್ಲವನ್ನೂ ತಿಳಿದುಕೊಂಡು ಸಮರ್ಥವಾಗಿ ವಾದ ಮಂಡಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯ, ಹಿರಿಯ ವಕೀಲ ಎಂ. ಪಾಪಿರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ. ಭಾಸ್ಕರ್ ಹಾಗೂ ಹಲವು ವಕೀಲರು ಉಪಸ್ಥಿತರಿದ್ದರು.
