Home News ಹಂದಿಬೇಟೆಯನ್ನಾಡುವ ನಾಯಿಯ ಸ್ಮಾರಕದ ಶಿಲ್ಪ

ಹಂದಿಬೇಟೆಯನ್ನಾಡುವ ನಾಯಿಯ ಸ್ಮಾರಕದ ಶಿಲ್ಪ

0

Mallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ವೃತ್ತದ ಬಳಿ ಹಂದಿಬೇಟೆಯನ್ನಾಡುವ ನಾಯಿಯ ಸ್ಮಾರಕದ ಶಿಲ್ಪ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಪತ್ತೆಯಾಗಿದ್ದು, ಅದರ ಜೊತೆಯಲ್ಲಿ ನಾಲ್ಕು ಸಾಲುಗಳ ಕನ್ನಡ ಶಾಸನ ಕೂಡ ಕಂಡುಬಂದಿತ್ತು.

ಮಣ್ಣಿನಲ್ಲಿ ಹುದುಗಿ, ಎರಡು ತುಂಡಾಗಿ ಬಿದ್ದಿದ್ದ ಈ ಕಲ್ಲುಗಳನ್ನು ಗ್ರಾಮಸ್ಥರಾದ ನಾರಾಯಣಸ್ವಾಮಿ, ಮಂಜುನಾಥ್, ನಾಣಿ, ರೆಡ್ಡಿ, ಬೇಕರಿ ವೆಂಕಟೇಶ್, ಮಧು, ಶ್ರೀನಿವಾಸ ನಾಯಕ್, ನರಸಿಂಹಮೂರ್ತಿ, ಅಶೋಕ್ ಹೊರತೆಗೆದಿದ್ದರು.

ಇದೀಗ ಗ್ರಾಮಸ್ಥರು ಎರಡು ತುಂಡುಗಳನ್ನೂ ಜೋಡಿಸಿ, ಅದಕ್ಕೊಂದು ಸುಂದರ ಕಮಾನನ್ನೂ ರೂಪಿಸಿ ಸಂರಕ್ಷಣೆ ಮಾಡಿದ್ದಾರೆ. ಶಾಸನತಜ್ಞರಾದ ಧನಪಾಲ್ ಮತ್ತು ತ್ಯಾಗರಾಜ್ ಅದರಲ್ಲಿ ಕೆತ್ತಿರುವ ಕನ್ನಡ ಲಿಪಿಯನ್ನು ಓದಿದ್ದಲ್ಲದೆ, ಕರ್ನಾಟಕ ಇತಿಹಾಸ ಅಕಾದೆಮಿ ವತಿಯಿಂದ ಶಾಸನದ ಪಾಠ, ಸಾರಾಂಶ ಹಾಗೂ ಚಿತ್ರಗಳನ್ನೊಳಗೊಂಡ ಮಾಹಿತಿ ಫಲಕವನ್ನು ಸಿದ್ಧಪಡಿಸಿ ಗ್ರಾಮಸ್ಥರಿಗೆ ಈಚೆಗೆ ನೀಡಿದರು.

Sidlaghatta Mallur Wild boar dog memorial Stone

ಈ ಶಿಲ್ಪವು ಶಾಸನದ ಲಿಪಿಯ ದೃಷ್ಟಿಯಿಂದ ಸುಮಾರು 15 ನೇ ಶತಮಾನಕ್ಕೆ ಅಂದರೆ ಕ್ರಿ. ಶ. 1432 ರ ಮಾರ್ಚ್ 8 ರ ಶನಿವಾರಕ್ಕೆ ಅಂದಾಜಿಸಬಹುದು. ಗ್ರಾಮದ ಹೊಲಗಳಲ್ಲಿ ಹಂದಿಯ ಉಪಟಳ ಹೆಚ್ಚಾದಾಗ ಗ್ರಾಮದ ಗಡ್ಡೆದಡೆ ವೊಂಡೆದೆಯರ ಬಾಣ ಎಂಬಾತನು ತನ್ನ ಮುದ್ದಿನ “ಬೀಮಾಂಚ” ಎಂಬ ನಾಯಿಯೊಡನೆ ಬೇಟೆಗೆ ಹೋದಾಗ, ಬಲಿಷ್ಠ ಹಂದಿಯೊಡನೆ ಹೋರಾಡಿ ಹಂದಿಯನ್ನು ಕೊಂದು ನಾಯಿಯೂ ಮರಣಹೊಂದಿದಾಗ, ತನ್ನ ಮುದ್ದಿನ ನಾಯಿಯ ವೀರತ್ವ ಸೂರ್ಯ ಚಂದ್ರರು ಇರೋವರೆಗೂ ಮುಂದಿನ ಜನಾಂಗಕ್ಕೆ ತಿಳಿಯಲು ಈ ಸ್ಮಾರಕವನ್ನು ಹಾಕಲಾಗಿದೆ ಎಂದು ಅವರು ವಿವರಿಸಿದರು.

“ಬೇಟೆಯಲ್ಲಿ ಕುಶಲತೆಯನ್ನು ಹೊಂದಿರುವ ಬೀಮಾಂಚ ನಾಯಿಯು ಮೊದಲ ಪಟ್ಟನ್ನು ಮುಂದುಗಡೆಯಿಂದ ಹಂದಿಯ ಕುತ್ತಿಗೆಯ ಹಿಂಭಾಗಕ್ಕೆ ಹಾಗೂ ಮುಂಗಾಲಿನ ಮೇಲಿರುವ ಸೂಕ್ಷ್ಮ ಸ್ಥಳಕ್ಕೆ ಬಾಯಿ ಹಾಕಿ ಭದ್ರವಾಗಿ ಕಚ್ಚಿ ಹಿಡಿದಿರುವಂತೆ ಶಿಲ್ಪವನ್ನು ಕೆತ್ತಲಾಗಿದೆ. ಆಗ ಹಂದಿಯು ಅರ್ಧ ಶಕ್ತಿಹೀನವಾದಂತಾಗುತ್ತದೆ. ಹಂದಿಯು ಚೇತರಿಸಿಕೊಳ್ಳಲು ಕೊಂಚವೂ ಅವಕಾಶ ಕೊಡದೆ ಕ್ಷಣಮಾತ್ರದಲ್ಲಿ ಎರಡನೇ ಪಟ್ಟನ್ನು ಹಂದಿಯ ವೃಷಣಕ್ಕೆ ಬಾಯಿಹಾಕಿ ಸಂಪೂರ್ಣವಾಗಿ ಜರ್ಜರಿತಗೊಳಿಸಿ ಕೊಲ್ಲುತ್ತದೆ. ಇದು ಬೇಟೆ ನಾಯಿಯ ಕೌಶಲ್ಯ” ಎಂದು ಹೇಳಿದರು.

ಗ್ರಾಮಸ್ಥರಾದ ಮಂಜುನಾಥ, ತಿರುಮಲೇಶ, ಸಿ. ನಾರಾಯಣಸ್ವಾಮಿ, ಚಂದನ್, ಮೂರ್ತಿ, ಮುನಿರಾಜಪ್ಪ, ಎಂ.ಜಿ. ನಾರಾಯಣಸ್ವಾಮಿ, ಅಶ್ವಿನಿ, ಜ್ಞಾನೇಶ್ವರಿ, ಅರುಣ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version