18.7 C
Sidlaghatta
Saturday, February 28, 2026

ರೈತರ ಶ್ರಮದ ಫಲವನ್ನು ಮಧ್ಯವರ್ತಿಗಳು ಅನುಭವಿಸುತ್ತಾರೆ

- Advertisement -
- Advertisement -

ತಾಲ್ಲೂಕಿನ ಕಂಬದಹಳ್ಳಿಯ ಸುರೇಂದ್ರಗೌಡ ಅವರ ಮಾವಿನ ತೋಟದಲ್ಲಿ ಮಂಗಳವಾರ ಕ್ಷೇತ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ತೋಟಗಾರಿಕೆ ಇಲಾಖೆ ನಿವೃತ್ತ ಅಪರ ನಿರ್ದೇಶಕ ಡಾ.ಹಿತ್ತಲಮನಿ ಮಾತನಾಡಿದರು.

ಮಾವಿನ ಹಣ್ಣನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಾ, ವ್ಯವಸ್ಥಿತವಾಗಿ ಸ್ವತಃ ರೈತರೇ ಗ್ರಾಹಕರಿಗೆ ಮಾರಾಟ ಮಾಡಿದಾಗ ಹೆಚ್ಚಿನ ಆದಾಯ ಸಿಗುತ್ತದೆ ಎಂದು ಅವರು ತಿಳಿಸಿದರು.

 ಉತ್ತಮವಾಗಿ ಮಾವನ್ನು ಬೆಳೆದ ರೈತರು ಮಧ್ಯವರ್ತಿಗಳಿಗೆ ನೀಡಿ ತಮ್ಮ ಶ್ರಮದ ಫಲವನ್ನು ಅವರು ತಿನ್ನುವಂತೆ ಮಾಡುತ್ತಾರೆ. ಅದು ತಪ್ಪು. ಸ್ವಯಂ ಗ್ರಾಹಕರಿಗೆ ಮಾರಾಟ ಮಾಡಬೇಕು. ರೈತರೇ ಗುಣಮಟ್ಟಕ್ಕೆ ತಕ್ಕಂತೆ ಬೇರ್ಪಡಿಸಿ, ಡಬ್ಬದಲ್ಲಿ ಹಾಕಿ, ತಮ್ಮದೇ ಹೆಸರಿನ ಬ್ರಾಂಡ್ ಮಾಡಿ ಮಾರಾಟ ಮಾಡಿ, ಹೆಚ್ಚು ಹಣವನ್ನು ಪಡೆಯಬೇಕು. ಸ್ವಯಂ ಮಾರಾಟದಲ್ಲಿ ಶಕ್ತಿಯಿದೆ, ಲಾಭವಿದೆ, ರೈತರ ಹಿತವಿದೆ ಎಂದರು.

 ಮಾವು ಬೆಳೆಗಾರರು ತಳಿಗಳ ಬಗ್ಗೆ ಚಿಂತಿಸುವ ಸಮಯವಿದು. ಇಷ್ಟು ದಿನ ಬಾದಾಮಿ, ಬಂಗನಪಲ್ಲಿ, ತೋತಾಪುರಿ ಉತ್ಪಾದನೆ ಹೆಚ್ಚಾಗಿ ಬೆಲೆ ಕುಸಿತ ಕಂಡಿವೆ. ಈಗಿರುವ ಮಾವಿನ ತೋಟಗಳಲ್ಲಿ ಗಿಡ ಒಣಗಿದರೆ ಮಲ್ಲಿಕಾ, ದಶೇರಿ, ಇಮಾಮ್ ಪಸಂದ್ ರೀತಿಯ ತಳಿಗಳನ್ನು ಹಾಕಿ. ಇಮಾಮ್ ಪಸಂದ್ ತಳಿಗಂತೂ ಅತಿ ಹೆಚ್ಚಿನ ಬೇಡಿಕೆಯಿದ್ದು, ಕಂಬದಹಳ್ಳಿಯ ಸುರೇಂದ್ರಗೌಡ ಅವರು ತಾವೇ ಭತ್ತದ ಒಣಹುಲ್ಲಿನಲ್ಲಿಟ್ಟು ಹಣ್ಣಾಗಿಸಿ ಒಂದು ಕೆ.ಜಿ.ಗೆ ಇನ್ನೂರು ರೂಗಳಿಗೆ ಮಾರುತ್ತಿದ್ದಾರೆ. ನಮ್ಮ ಜಿಲ್ಲೆಗಳ ವಿಶೇಷತೆಯೆಂದರೆ ಹಲವು ತಳಿಗಳನ್ನು ಬೆಳೆಯುವರು. ಹೀಗಾಗಿ ಮಾರುಕಟ್ಟೆಯನ್ನು ಆರು ತಿಂಗಳುಗಳ ಕಾಲ ನಡೆಸಿಕೊಂಡು ಹೋಗುವ ಸಾಮರ್ಥ್ಯ ನಮ್ಮ ರೈತರಿಗಿದೆ ಎಂದು ಹೇಳಿದರು.

 ಚಿಂತಾಮಣಿ ಮಾವು ಅಭಿವೃದ್ಧಿ ಕೇಂದ್ರದ ತೋಟಗಾರಿಕೆ ಉಪನಿರ್ದೇಶಕ ಕೆ.ಬಿ.ಕೃಷ್ಣಮೂರ್ತಿ ಮಾತನಾಡಿ, ಮಾವು ಅಭಿವೃದ್ಧಿ ಕೇಂದ್ರದ ವತಿಯಿಂದ ಕಳೆದ ವರ್ಷ ಬಿ ಟು ಸಿ ಪೋರ್ಟಲ್ ಪ್ರಾರಂಭಿಸಿದ್ದೇವೆ. ಅದರಲ್ಲಿ 120 ಕ್ಕೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದಾರೆ. ರೈತರು ತಾವು ಬೆಳೆದ ಮಾವಿನ ಹಣ್ಣಿನ ತಳಿಗಳು, ಗುಣಮಟ್ಟ, ಬೆಲೆಯನ್ನು ನಮೂದಿಸುವರು. ಗ್ರಾಹಕರು ಅದನ್ನು ಆನ್ ಲೈನ್ ನಲ್ಲಿ ಖರೀದಿಸುತ್ತಾರೆ. ಹಣ್ಣನ್ನು ಸುರಕ್ಷಿತವಾಗಿ ಬಾಕ್ಸ್ ನಲ್ಲಿರಿಸಿ ನಾವು ಅಂಚೆ ಇಲಾಖೆಯ ಸಹಯೋಗದೊಂದಿಗೆ ಮನೆಗಳಿಗೆ ತಲುಪಿಸುತ್ತೇವೆ.

 ಕಳೆದ ಎರಡು ತಿಂಗಳಿನಲ್ಲಿ, ಕೊರೊನಾ ಅವಧಿಯಲ್ಲಿ, ಬೆಂಗಳೂರು 1.4 ಕೋಟಿ ರೂಗಳ ವಹಿವಾಟನ್ನು ಈ ಮೂಲಕ ನಡೆಸಿದ್ದೇವೆ. 1,500 ಅಪಾರ್ಟ್ ಮೆಂಟ್ ಸಂಘಗಳೊಡನೆ ಮಾತನಾಡಿ ರೈತರನ್ನು ಆಲ್ಲಿಗೇ ಕಳುಹಿಸಿ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಇದರಿಂದ ರೈತರಿಗೆ ಒಳ್ಳೆಯ ಧಾರಣೆ ದೊರಕಿದೆ. ಫ್ಲಿಪ್ ಕಾರ್ಟ್ ಎಂಬ ಪ್ರಸಿದ್ಧ ಆನ್ ಲೈನ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಇದರಿಂದ ಗ್ರಾಹಕರು ಮತ್ತು ರೈತರನ್ನು ಒಗ್ಗೂಡಿಸಿದ್ದೇವೆ ಎಂದರು.

 ಕಂಬದಹಳ್ಳಿ ಸುರೇಂದ್ರಗೌಡ ಅವರು ಮಾತನಾಡಿ, ಕಳೆದ ನಾಲ್ಕು ವರ್ಷದ ಹಿಂದೆ ನಮ್ಮ ಮೂರೂವರೆ ಎಕರೆ ಜಮೀನಿನಲ್ಲಿದ್ದ ನೀಲಗಿರಿ ಮರಗಳನ್ನು ತೆಗೆದು ಮಾವು ಅಭಿವೃದ್ಧಿ ಕೇಂದ್ರದ ಅಧಿಕಾರಿಗಳ ಮಾರ್ಗದರ್ಶನದಂತೆ ಇಮಾಮ್ ಪಸಂದ್, ಮಲ್ಲಿಕಾ, ದಶೇರಿ, ಆಲ್ಫಾಂಜೋ ಮುಂತಾದ ಮಾವಿನ ತಳಿಗಳನ್ನು ಬೆಳೆದೆ. ಅಧಿಕಾರಿಗಳ ಮಾರ್ಗದರ್ಶನದಂತೆ ಬೆಳೆದ ಹಣ್ಣನ್ನು ಭತ್ತದ ಒಣಹುಲ್ಲಿನಲ್ಲಿಟ್ಟು ಮಾಗಿಸಿ, ಅವರೇ ರಿಯಾಯಿತಿ ದರದಲ್ಲಿ ಕೊಟ್ಟ ಬಾಕ್ಸ್ ನಲ್ಲಿಟ್ಟು ಸ್ವಯಂ ಮಾರಾಟ ಮಾಡುತ್ತಿದ್ದೇನೆ. ಇದರಿಂದ ಲಾಭದಾಯಕವಾಗಿದೆ ಎಂದರು.

 ನಂದಿಬೆಟ್ಟದ ತೋಟಗಾರಿಕಾ ವಿಶೇಷ ಅಧಿಕಾರಿ ಗೋಪಾಲ್, ತೋಟಗಾರಿಕಾ ಸಹಾಯಕ ನಿರ್ದೇಶಕರಾದ ಗೀತಾ, ರಮಾದೇವಿ, ಮಾವು ಸಲಹೆಗಾರ ಜಯಚಂದ್ರ, ಪ್ರಗತಿಪರ ರೈತರಾದ ಎಚ್.ಜಿ.ಗೋಪಾಲಗೌಡ, ಎಚ್.ಸುರೇಶ್, ಮೇಲೂರು ಪ್ರಕಾಶ್ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!