Home News ಮೇಲೂರು ಗ್ರಾಮದೇವತೆ ಗಂಗಾದೇವಿ ರಥೋತ್ಸವ

ಮೇಲೂರು ಗ್ರಾಮದೇವತೆ ಗಂಗಾದೇವಿ ರಥೋತ್ಸವ

0

Melur, Sidlaghatta : ಪುರಾಣ ಪ್ರಸಿದ್ದ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಬುಧವಾರ ಅದ್ದೂರಿಯಾಗಿ ವಿವಿಧ ಪೂಜೆ ಹಾಗೂ ಆಚರಣೆಗಳೊಂದಿಗೆ ನೆರವೇರಿತು. ತಹಶೀಲ್ದಾರ್ ಗಗನಸಿಂಧು ಮತ್ತು ಶಾಸಕ ಬಿ.ಎನ್.ರವಿಕುಮಾರ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.

ತಾಲ್ಲೂಕಿನ ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಮೇಲೂರಿನ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯವನ್ನು ಜೋಳದ ತೆನೆಗಳು ಹಾಗೂ ನಾನಾ ವಿಧದ ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು, ವಿವಿಧ ವೀರಗಾಸೆ ಮೊದಲಾದ ಜಾನಪದ ಕಲಾತಂಡಗಳು, ತಮಟೆಗಳ ವಾದನ, ಗಾರುಡಿ ಬೊಂಬೆಗಳ ನರ್ತನಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು.

ಬ್ರಹ್ಮರಥೋತ್ಸವದ ಅಂಗವಾಗಿ ಹೋಮಕುಂಡವನ್ನು ಸ್ಥಾಪನೆ ಮಾಡಿ, ಲೋಕ ಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು, ಗಂಗಾದೇವಿಗೆ ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆಗಳನ್ನು ಸಮರ್ಪಣೆ ಮಾಡಲಾಯಿತು, ನೆರೆದಿದ್ದ ಭಕ್ತಾದಿಗಳು ರಥಕ್ಕೆ ದವನದೊಂದಿಗಿನ ಬಾಳೇ ಹಣ್ಣು ಎಸೆಯುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು, ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳಿಗೆ ಕೋಸಂಬರಿ ಪಾನಕಗಳನ್ನು ವಿತರಿಸಲಾಯಿತು. ದೇವಾಲಯದಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ತಾಯಿ ಗಂಗಾದೇವಿ ಅಮ್ಮನವರು ಮೇಲೂರು ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ರಕ್ಷಣೆ ಹಾಗೂ ಆರಾಧನೆಯ ದೈವವಾಗಿದ್ದಾಳೆ.

ಪ್ರತಿ ವರ್ಷ ನಡೆಯುವ ಶ್ರೀ ಗಂಗಾದೇವಿ ಜಾತ್ರಾ ಮಹೋತ್ಸವದಲ್ಲಿ ಸೊಪ್ಪಿನ ರಥ, ದೀಪೋತ್ಸವ ಹಾಗೂ ರಥೋತ್ಸವ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಗ್ರಾಮದ ಹೆಣ್ಣು ಮಕ್ಕಳು ತವರಿಗೆ ಒಂದು ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಾಡಿಕೆ.

Sidlaghatta Melur Sri Gangadevi Brahmarathotsava

ವಾಲ್ಮೀಕಿ ಮತಸ್ಮರಾದ ನಾಯಕ ಜನಾಂಗದವರಿಂದ ಸೊಪ್ಪಿನ ರಥ ಹಾಗೂ ಪೂಜೆಯನ್ನು ಆಯೋಜಿಸಲಾಗಿತ್ತು, ನಾಯಕ ಜನಾಂಗದವರು ಬೆಳಿಗ್ಗೆಯಿಂದ ಉಪವಾಸವಿದ್ದು, ಮಡಿಯಿಂದ ಮರ ಕಡಿದು ಹಸಿ ಮರದಿಂದ ರಥ ತಯಾರಿಸಿ ಹೂ ಮತ್ತು ದೀಪಾಲಂಕಾರಗಳೊಂದಿಗೆ ತಾಯಿಯ ಕೀರ್ತನೆ ಮತ್ತು ಹಾಡುಗಳನ್ನು ಹಾಡುತ್ತಾ ಹುಳಿ ಸೊಪ್ಪಿನ ಸಾರು ಮತ್ತು ಮುದ್ದೆಯನ್ನು ಉತ್ಸವದಲ್ಲಿ ತಂದು ಪೂಜೆ ಸಲ್ಲಿಸಿದರು. ತೀರ್ಥ ಪ್ರಸಾದಗಳ ವಿನಿಯೋಗ ನಡೆಯಿತು.

ಮುತ್ತೂರು, ಮಳ್ಳೂರು, ಕಾಚಹಳ್ಳಿ, ಭಕ್ತರಹಳ್ಳಿ, ಗಂಗನಹಳ್ಳಿ, ಕಂಬದಹಳ್ಳಿ, ಅಪ್ಪೇಗೌಡನಹಳ್ಳಿ, ಚೌಡಸಂದ್ರ, ಕೇಶವಪುರ, ಬೆಳ್ಳೂಟಿ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ, ರಥೋತ್ಸವದಲ್ಲಿ ಭಾಗಿಯಾದರು.

ಜೆಡಿಎಸ್ ಮುಖಂಡ ಸಚಿನ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಆರ್.ಎ.ಉಮೇಶ್, ಎಂ.ಕೆ.ರವಿಪ್ರಸಾದ್, ಎಂ.ಜೆ.ಶ್ರೀನಿವಾಸ್, ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಧರ್ಮೇಂದ್ರ, ಮಂಜುನಾಥ್, ಸುದರ್ಶನ್, ಸುದೀರ್, ಶ್ರೀನಿವಾಸಮೂರ್ತಿ(ಪುಲಿ), ಶಿವಕುಮಾರ್, ಜೇಜಿಗೌಡ, ಗೋಪಾಲರೆಡ್ಡಿ, ಎಂ. ಶ್ರೀನಿವಾಸ್, ರಮೇಶ್, ಎನ್.ಎಲ್.ಎನ್.ಮೂರ್ತಿ, ಆರ್.ಕೆ.ರಾಮಕೃಷ್ಣಪ್ಪ, ಅಶ್ವತ್ಥಪ್ಪ, ಗಜೇಂದ್ರ, ಅರ್ಚಕರಾದ ಮುತ್ತೂರು ನಾರಾಯಣಮೂರ್ತಿ, ಅಮೃತರಾಜ್, ಮತ್ತು ದೇವಾಲಯದ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version