Melur, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ರೂಪಿಸಲಾಗಿರುವ ದೇಶದಲ್ಲಿಯೇ ಪ್ರಪ್ರಥಮ ಅಂಗವಿಕಲರಿಗಾಗಿಯೇ ಸ್ಥಾಪಿಸಲಾಗಿರುವ ಡ್ಯೂಸ್ ಟೆನಿಸ್ ಸೆಂಟರ್ (DTC) ಯಲ್ಲಿ ವೀಲ್‌ಚೇರ್ ಟೆನಿಸ್ ಟೂರ್ನಮೆಂಟ್ ಗೆ ಜಿಲ್ಲಾಧಿಕಾರಿ ಪ್ರಭು ಹಾಗೂ ತಹಶೀಲ್ದಾರ್ ಗಗನಸಿಂಧು ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಭು ಅವರು, “ದೇಶದ ಮೊದಲ ವೀಲ್‌ಚೇರ್ ಟೆನಿಸ್ ತರಬೇತಿ ಕೇಂದ್ರವು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಆಗಿರುವುದು ಹೆಮ್ಮೆಯ ಸಂಗತಿ. ಜಿಲ್ಲಾಡಳಿತದಿಂದ ಮತ್ತು ತಾಲ್ಲೂಕು ಆಡಳಿತದಿಂದ ನಿಮಗೆ ಸಂಪೂರ್ಣ ಸಹಕಾರ ಸಿಗುತ್ತದೆ” ಎಂದು ಹೇಳಿದರು.
ಡಿಟಿಸಿ ಅಧ್ಯಕ್ಷ ಸಿ.ಎ.ಸುನಿಲ್ ಜೈನ್ ಮಾತನಾಡಿ, “ಡಿಟಿಸಿ ಒಂದು ತಂಡದ ಪ್ರಯಾಣ. ದೈಹಿಕ ಸಾಮರ್ಥ್ಯದ ಹೊರತಾಗಿಯೂ ಸಾಧಕರನ್ನು ಸೃಷ್ಟಿಸುವ ಧ್ಯೇಯ ನಮ್ಮದು. ಎಂದು ಹೇಳಿದರು.
ತಹಶೀಲ್ದಾರ್ ಗಗನಸಿಂಧು ಮಾತನಾಡಿ, “ಈ ಕ್ರೀಡಾ ಕೇಂದ್ರವು ರಾಜ್ಯದ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಇದು ಕ್ರೀಡೆಗಳಲ್ಲಿ ಎಲ್ಲರನ್ನೂ ಒಳಗೊಳ್ಳುವಿಕೆಗೆ ಹೊಸ ರೂಪ ನೀಡಿದೆ. ಸರ್ಕಾರ, ನಾಗರಿಕ ಸಮಾಜ ಮತ್ತು ಕಾರ್ಪೊರೇಟ್ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದಾಗ ಏನೆಲ್ಲಾ ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ” ಎಂದು ಹೇಳಿದರು.
ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್ ಹಾಜರಿದ್ದರು.








