Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪೇನಹಳ್ಳಿ ಗ್ರಾಮದ ವಿಕಲಚೇತನ ವಿದ್ಯಾರ್ಥಿನಿ ಕುಮಾರಿ ಯಶಸ್ವಿನಿ ಅವರಿಗೆ ಶಾಸಕ ಬಿ.ಎನ್. ರವಿಕುಮಾರ್ ಅವರು ಲ್ಯಾಪ್‌ಟಾಪ್ ಹಾಗೂ ಎಲೆಕ್ಟ್ರಿಕ್ ವೀಲ್‌ಚೇರ್ ವಿತರಿಸಿದರು.
ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿರುವ ಯಶಸ್ವಿನಿ ಅವರು ಶಾಸಕ ಬಿ.ಎನ್. ರವಿಕುಮಾರ್ ಅವರನ್ನು ಭೇಟಿ ಮಾಡಿ, ಉನ್ನತ ಶಿಕ್ಷಣ ಮುಂದುವರಿಸಲು ಲ್ಯಾಪ್‌ಟಾಪ್ ಮತ್ತು ಸಂಚಾರಕ್ಕೆ ಎಲೆಕ್ಟ್ರಿಕ್ ವೀಲ್ ಚೇರ್ ಅಗತ್ಯವಿದೆ ಎಂದು ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಶಾಸಕ ಬಿ.ಎನ್. ರವಿಕುಮಾರ್ ಅವರು ವಿದ್ಯಾರ್ಥಿನಿಗೆ ಅಗತ್ಯವಿದ್ದ ಲ್ಯಾಪ್‌ಟಾಪ್ ಹಾಗೂ ಎಲೆಕ್ಟ್ರಿಕ್‌ವೀಲ್‌ಚೇರ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಎನ್. ರವಿಕುಮಾರ್, “ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕಾಗಿದೆ. ದೈಹಿಕ ಅಸಮರ್ಥತೆ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು. ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣವನ್ನು ನಿರಂತರವಾಗಿ ಮುಂದುವರಿಸಲು ಸಹಕಾರ ನೀಡುವುದು ಸಮಾಜದ ಜವಾಬ್ದಾರಿಯಾಗಿದೆ. ಯಶಸ್ವಿನಿ ಅವರು ಉತ್ತಮವಾಗಿ ವ್ಯಾಸಂಗ ಮಾಡಿ ತಮ್ಮ ಗುರಿಗಳನ್ನು ಸಾಧಿಸಲಿ” ಎಂದು ಹೇಳಿದರು.
ಈ ಹಿಂದೆಯೂ ಶಾಸಕ ಬಿ.ಎನ್. ರವಿಕುಮಾರ್ ಅವರು 9,600 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಹಾಗೂ ಗಂಜಿಗುಂಟೆ ಸರ್ಕಾರಿ ಶಾಲೆಗೆ ಶಿಕ್ಷಣ ಸಾಮಗ್ರಿ ವಿತರಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಿದ್ದರು.
In English: MLA B.N. Ravikumar handed over a laptop and an electric wheelchair to Yashaswini, a computer science student with a physical disability from Tippenahalli village under Thummanahalli Gram Panchayat in Sidlaghatta taluk, after she sought support to continue her higher education. The MLA said physical disability should not hinder a talented student’s education and that society has a duty to support such students.








