Sidlaghatta : ಸಾಮಾಜಿಕ ಭದ್ರತೆ ಸೇರಿದಂತೆ ವಿವಿಧ ಪಿಂಚಣಿ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಪಿಂಚಣಿ ಅದಾಲತ್‌ಗಳನ್ನು ಆಯೋಜಿಸಲಾಗುತ್ತಿದೆ ಎಂದು ತಹಶೀಲ್ದಾರ್ ಗಗನ ಸಿಂಧು ಹೇಳಿದರು.
ತಾಲ್ಲೂಕಿನ ಕಳನಾಯಕನಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಆಯೋಜಿಸಿದ್ದ ಪಿಂಚಣಿ ಅದಾಲತ್ ನಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ ಅವರು ಮಾತನಾಡಿದರು.
“ಸಮಾಜದ ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸುವುದು ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್‌ಗಳನ್ನು ನಡೆಸಿ ಅರ್ಹರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮಸ್ಥರು ಇಲಾಖೆಯೊಂದಿಗೆ ಸಹಕರಿಸಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು” ಎಂದು ತಿಳಿಸಿದರು.
60 ವರ್ಷ ಮೇಲ್ಪಟ್ಟ ವಯೋವೃದ್ಧರು ಹಾಗೂ ವಿಧವೆಯರಿಗೆ ಸಾಮಾಜಿಕ ಭದ್ರತೆ ಯೋಜನೆಯಡಿ ಮಂಜೂರಾದ ಮಾಶಾಸನಗಳ ಸಾಂಕೇತಿಕ ಮಂಜೂರಾತಿ ಪ್ರಮಾಣಪತ್ರಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ತಾ.ಪಂ ಮಾಜಿ ಸದಸ್ಯ ಮುನಿನಾಗಪ್ಪ, ನಾಗರಾಜ್, ಮಂಜಯ್ಯ, ಜಂಗಮಕೋಟೆ ಹೋಬಳಿ ರಾಜಸ್ವ ನಿರೀಕ್ಷಕ ಶಶಿಧರ್, ಉಪ ತಹಶೀಲ್ದಾರ್ ರಮೇಶ್, ಗ್ರಾಮ ಆಡಳಿತ ಅಧಿಕಾರಿ ತ್ರಿಮೂರ್ತಿ, ರಾಮು, ಸಿದ್ದಪ್ಪ, ಮೋಹನ್, ಮುನಿರಾಜು, ಪ್ರಭು, ಕಾರ್ತಿಕ್, ರಮಾನಂದ, ವರುಣಿತ, ಕವಿತಾ, ಫಹದ್, ಮಂಜಯ್ಯ ಹಾಜರಿದ್ದರು.
In English: Sidlaghatta Tahsildar Gagana Sindhu said pension adalats are being organised at the hobli and village level to deliver social security and other pension scheme benefits to eligible beneficiaries at their doorstep. At an adalat held in Kalanayakanahalli village, symbolic sanction certificates for monthly pensions under the social security scheme were distributed to senior citizens above 60 and widows.








