Home News ನಗರದ ಅಭಿವೃದ್ಧಿಗೆ ಪೌರ ಕಾರ್ಮಿಕರ ಸೇವೆ ಬೆಲೆಕಟ್ಟಲಾಗದ್ದು – ಶಾಸಕ ಬಿ.ಎನ್. ರವಿಕುಮಾರ್

ನಗರದ ಅಭಿವೃದ್ಧಿಗೆ ಪೌರ ಕಾರ್ಮಿಕರ ಸೇವೆ ಬೆಲೆಕಟ್ಟಲಾಗದ್ದು – ಶಾಸಕ ಬಿ.ಎನ್. ರವಿಕುಮಾರ್

0
Sidlaghatta Pourakarmikas Day Celebration

Sidlaghatta : ಶಿಡ್ಲಘಟ್ಟ ನಗರದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, ಪೌರ ಕಾರ್ಮಿಕರ ಶ್ರಮ ಮತ್ತು ಸೇವೆ ಬೆಲೆಕಟ್ಟಲಾಗದಂತಹದ್ದು ಎಂದು ಶ್ಲಾಘಿಸಿದರು. ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರ ಕಾರಣ ನಗರ ಸುಂದರವಾಗಿ ಕಾಣುತ್ತಿದೆ ಎಂದು ಅವರು ಹೇಳಿದರು.

ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ನಗರಸಭೆಯ ಸಹಯೋಗದಲ್ಲಿ ಅಂಜನಾದ್ರಿ ಕಾಂಪ್ಲೆಕ್ಸ್‌ನಲ್ಲಿ ಮಂಗಳವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದಲ್ಲಿ 12,800 ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಅಮೃತ್ 2 ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ₹92 ಕೋಟಿ ಅನುದಾನ ಲಭಿಸಿದ್ದು, ಮುಂದಿನ 40 ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ₹38 ಕೋಟಿ ಯುಜಿಡಿ ಯೋಜನೆಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಶಾಸಕರು ತಿಳಿಸಿದರು.

ನಗರಸಭೆಯಲ್ಲಿ 150 ಕ್ಕೂ ಹೆಚ್ಚು ಪೌರ ಕಾರ್ಮಿಕರು ಶ್ರಮಿಸುತ್ತಿದ್ದು, ಅಧಿಕಾರಿಗಳು ಮತ್ತು ಸದಸ್ಯರು ಒಗ್ಗಟ್ಟಾಗಿ ಕೆಲಸ ಮಾಡಿ ಮೂಲಭೂತ ಸೌಕರ್ಯಗಳಾದ ಸ್ವಚ್ಛತೆ, ಕುಡಿಯುವ ನೀರು, ಬೀದಿದೀಪಗಳಿಗೆ ಆದ್ಯತೆ ನೀಡಬೇಕೆಂದರು.

ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ಪೌರ ಕಾರ್ಮಿಕರು ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ವೈದ್ಯರಂತೆ ಶ್ರಮಿಸುತ್ತಿದ್ದಾರೆ. ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು ಹಾಗೂ ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ, ಕುಕ್ಕರ್ ಮತ್ತು ಪುರುಷರಿಗೆ ಶರ್ಟ್–ಪ್ಯಾಂಟ್ ಹಾಗೂ ಕುಕ್ಕರ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಭಾಸ್ಕರ್, ಪೌರಾಯುಕ್ತೆ ಜಿ.ಅಮೃತ, ನಗರಸಭೆ ಅಧ್ಯಕ್ಷ ಎಂ.ವಿ. ವೆಂಕಟಸ್ವಾಮಿ, ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಶ್ರೀನಿವಾಸ್, ಎಇಇ ಮಾಲಿನಿ ಸೇರಿದಂತೆ ಸದಸ್ಯರು, ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version