
Tummanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆ ಜಿಲ್ಲಾ ಮಟ್ಟದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆದ್ದು ಕೀರ್ತಿ ಸಾಧಿಸಿದೆ. ಚಿಕ್ಕಬಳ್ಳಾಪುರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ನಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ಎಲ್ಲಾ ತಾಲ್ಲೂಕುಗಳ ವಿದ್ಯಾರ್ಥಿಗಳು ನಿಜ ಜೀವನದಲ್ಲಿ ಡಿಜಿಟಲ್ ಬಳಕೆಯ ಕುರಿತ ನಾಟಕಗಳನ್ನು ಪ್ರದರ್ಶಿಸಿದ್ದರು. ಈ ಸ್ಪರ್ಧೆಯಲ್ಲಿ ತುಮ್ಮನಹಳ್ಳಿ ಶಾಲೆಯು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಈ ಸಂದರ್ಭದಲ್ಲಿ ಶಿಕ್ಷಕಿ ಹೇಮಾವತಿ ಉತ್ತಮ ನಿರ್ದೇಶಕಿ ಪ್ರಶಸ್ತಿಯನ್ನು, ವಿದ್ಯಾರ್ಥಿ ಎಲ್. ಕಾರ್ತಿಕ್ ಉತ್ತಮ ನಟ ಪ್ರಶಸ್ತಿಯನ್ನು ಹಾಗೂ ವಿದ್ಯಾರ್ಥಿನಿ ಉಮಾ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ವಿಜೇತರಿಗೆ ಡಯಟ್ ಪ್ರಾಂಶುಪಾಲ ಎಂ. ಮುನಿಕೆಂಪೇಗೌಡ ಬಹುಮಾನಗಳನ್ನು ವಿತರಿಸಿದರು. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಈ ತಂಡವು ಸೆಪ್ಟೆಂಬರ್ 24 ರಂದು ಬೆಂಗಳೂರಿನಲ್ಲಿ ನಡೆಯುವ ವಿಭಾಗಮಟ್ಟದ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
ತಂಡವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ. ನರೇಂದ್ರಕುಮಾರ್, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ. ವೆಂಕಟರೆಡ್ಡಿ, ಕಾರ್ಯದರ್ಶಿ ಎಚ್.ಎಸ್. ರುದ್ರೇಶಮೂರ್ತಿ ಹಾಗೂ ಶಿಕ್ಷಣ ಸಂಯೋಜಕ ಯು.ವೈ. ಮಂಜುನಾಥ್ ಅಭಿನಂದಿಸಿದ್ದಾರೆ.