Home News ನಗರಸಭೆಯ ಮಳಿಗೆಯನ್ನು ಬಾಡಿಗೆರಹಿತವಾಗಿ ನೀಡುವಂತೆ ರೈತ ಸಂಘದ ಒತ್ತಾಯ

ನಗರಸಭೆಯ ಮಳಿಗೆಯನ್ನು ಬಾಡಿಗೆರಹಿತವಾಗಿ ನೀಡುವಂತೆ ರೈತ ಸಂಘದ ಒತ್ತಾಯ

0
Sidlaghatta Raita sangha urge free office from municipality

Sidlaghatta : ಕಳೆದ ಎರಡು ದಶಕಗಳಿಂದ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ) ರೈತರ ಹಿತಾಸಕ್ತಿಗಾಗಿ ಹಾಗೂ ಸಾರ್ವಜನಿಕ ಕಲ್ಯಾಣಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದು, ಸಂಘದ ಚಟುವಟಿಕೆಗಳನ್ನು ನಿರ್ವಹಿಸಲು ಯಾವುದೇ ಹಣಕಾಸಿನ ಮೂಲವಿಲ್ಲ. ಈ ಕಾರಣದಿಂದ ನಗರಸಭೆಗೆ ಸೇರಿದ ಮಳಿಗೆಯೊಂದನ್ನು ಬಾಡಿಗೆ ರಹಿತವಾಗಿ ಒದಗಿಸಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಒತ್ತಾಯಿಸಿದರು.

ಶುಕ್ರವಾರ ರೈತ ಸಂಘದ ಪದಾಧಿಕಾರಿಗಳೊಂದಿಗೆ ನಗರಸಭೆ ಕಾರ್ಯಾಲಯಕ್ಕೆ ತೆರಳಿ, ಈ ಸಂಬಂಧ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ಅವರು ಮಾತನಾಡಿ, “ನಮ್ಮ ಸಂಘವು ನಾಡು, ನುಡಿ, ಜಲ ಸೇರಿದಂತೆ ರೈತರ ಹಿತಾಸಕ್ತಿಗಾಗಿ ಅನೇಕ ಹೋರಾಟಗಳನ್ನು ಮಾಡುತ್ತಿದೆ. ಆದರೆ, ಕಾರ್ಯಚಟುವಟಿಕೆಗಳಿಗೆ ನಮ್ಮ ಸಂಘಕ್ಕೆ ಸ್ವಂತ ಸ್ಥಳವಿಲ್ಲ. ಬಾಡಿಗೆ ಮಳಿಗೆ ಪಡೆಯಲು ಹಣಕಾಸಿನ ವ್ಯವಸ್ಥೆಯೂ ಇಲ್ಲ. ಆದ್ದರಿಂದ, ನಗರಸಭೆಯ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿರುವ ಮಳಿಗೆಗಳಲ್ಲಿ ಒಂದನ್ನು ಬಾಡಿಗೆರಹಿತವಾಗಿ ಒದಗಿಸಿದರೆ, ಸಂಘದ ಚಟುವಟಿಕೆಗಳನ್ನು ಸುಗಮವಾಗಿ ನಿರ್ವಹಿಸಬಹುದು” ಎಂದು ಮನವಿ ಮಾಡಿದರು.

ಈ ಮನವಿಯನ್ನು ನಗರಸಭೆ ವ್ಯವಸ್ಥಾಪಕಿ ರಾಜರಾಜೇಶ್ವರಿ ಅವರ ಮೂಲಕ ಪೌರಾಯುಕ್ತರಿಗೆ ಸಲ್ಲಿಸಲಾಯಿತು. ಈ ವೇಳೆ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಉಪಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಸಿ.ಎನ್.ಶ್ರೀಧರ್, ಮುಖಂಡರಾದ ಎಸ್.ಆರ್.ಮಂಜುನಾಥ, ಮನೋಜ್‌ಗೌಡ, ಮಾಧವಾಚಾರ್ಯ, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶ್ರೀರಾಮ್ ಹಾಗೂ ಇತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version