Home News ನ್ಯಾಯಯುತ ರಾಜಿ ಸಂಧಾನದ ಮೂಲಕ ಸಮಯ ಮತ್ತು ನೆಮ್ಮದಿಯನ್ನು ಪಡೆದುಕೊಳ್ಳಿ

ನ್ಯಾಯಯುತ ರಾಜಿ ಸಂಧಾನದ ಮೂಲಕ ಸಮಯ ಮತ್ತು ನೆಮ್ಮದಿಯನ್ನು ಪಡೆದುಕೊಳ್ಳಿ

0
Sidlaghatta Lok Adalat Preparation Meeting

Sidlaghatta : ನ್ಯಾಯಾಲಯದಲ್ಲಿ ಪ್ರಗತಿ ಹಂತದಲ್ಲಿರುವ ತಮ್ಮ ಪ್ರಕರಣಗಳನ್ನು ನ್ಯಾಯಯುತವಾಗಿ ರಾಜಿ ಸಂಧಾನ ಮಾಡಿಸಿಕೊಂಡು, ಹಣ, ಸಮಯ ಹಾಗೂ ನೆಮ್ಮದಿಯನ್ನು ಸಂಪಾದಿಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ನಾಗರಿಕರಿಗೆ ಸಲಹೆ ನೀಡಿದರು.

ನಗರದ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಲೋಕ್ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಷ್ಟು ನ್ಯಾಯಾಧೀಶರ ಕೊರತೆಯೂ ಇದೆ ಎಂದು ಉದ್ಬೋಧಿಸಿದರು. ಅನಗತ್ಯವಾಗಿ ಕೇಸು ದಾಖಲಿಸುವ ಮನೋಭಾವ ಹೆಚ್ಚುತ್ತಿರುವುದರಿಂದ, ವಾದಿ-ಪ್ರತಿವಾದಿಗಳಿಗೆ ಸೂಕ್ತ ಸಮಯಕ್ಕೆ ನ್ಯಾಯ ನೀಡಲು ಸಾಧ್ಯವಾಗುತ್ತಿಲ್ಲ, ಪರಿಣಾಮವಾಗಿ ಪ್ರಕರಣಗಳ ಇತ್ಯರ್ಥ ವಿಳಂಬಗೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ ಮಾರ್ಚ್ 8ರಂದು ರಾಷ್ಟ್ರೀಯ ಲೋಕ್ ಅದಾಲತ್‌ ಆಯೋಜನೆ ಮಾಡುವಂತೆ ಸೂಚನೆ ನೀಡಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಕಕ್ಷಿದಾರರು ತಮ್ಮ ಕೇಸುಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಮಾತನಾಡಿ, ಲೋಕ್ ಅದಾಲತ್‌ನಲ್ಲಿ ಎರಡೂ ಕಡೆಯ ಕಕ್ಷಿದಾರರಿಗೆ ಸಮಾನವಾದ ನ್ಯಾಯ ಸಿಗುತ್ತಿದ್ದು, ಯಾರಿಗೂ ಅನ್ಯಾಯವಾಗುವ ಸಾಧ್ಯತೆಯೇ ಇಲ್ಲ. ಆದ್ದರಿಂದ ಎಲ್ಲ ಕಕ್ಷಿದಾರರು ಇದರ ಸದುಪಯೋಗ ಪಡೆಯಬೇಕು. ವಕೀಲರು ಕೂಡಾ ತಮ್ಮ ಪ್ರತಿನಿಧಿ ಕಕ್ಷಿದಾರರಿಗೆ ಇದರ ಮಹತ್ವವನ್ನು ಮನವರಿಕೆ ಮಾಡಿ, ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೆ.ಪೂಜಾ, ಹಿರಿಯ ವಕೀಲ ಎಂ.ಪಾಪಿರೆಡ್ಡಿ, ವಕೀಲರ ಸಂಘದ ಕಾರ್ಯದರ್ಶಿ ಸಿ.ಜಿ ಭಾಸ್ಕರ್ ಸೇರಿದಂತೆ ಹಲವರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version