Sidlaghatta : ಅಯೋಧ್ಯನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ಹಾಗೂ ಮಹಿಳಾ ಮಂಡಳಿ ವತಿಯಿಂದ ನಗರದ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ಬಗೆಯ ಹಣ್ಣುಗಳು, ತಿಂಡಿ-ತಿನಿಸುಗಳು ಹಾಗೂ ತಂಪು ಪಾನೀಯಗಳನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸಿ, ವ್ಯಾವಹಾರಿಕ ಜ್ಞಾನವನ್ನು ಹೆಚ್ಚಿಸಿಕೊಂಡರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರ್ತ ಮಂಡಳಿ ಅಧ್ಯಕ್ಷ ಶಿವಶಂಕರ್ ಅವರು ಮಾತನಾಡಿ, ದೈನಂದಿನ ಬದುಕಿನಲ್ಲಿ ಹಣದ ಮಹತ್ವ, ಲಾಭ ಮತ್ತು ನಷ್ಟದ ಬಗ್ಗೆ ಮಕ್ಕಳಿಗೆ ಪ್ರಾಯೋಗಿಕ ಜಾಗೃತಿ ಮೂಡಿಸಲು ಈ ರೀತಿಯ ಮಕ್ಕಳ ಸಂತೆಗಳು ಬಹಳ ಉಪಯುಕ್ತವಾಗಿವೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳು ಬಹಳ ಉತ್ಸಾಹದಿಂದ ವಿವಿಧ ರೀತಿಯ ತಿಂಡಿ ತಿನಿಸುಗಳಾದ ಪಾನಿಪುರಿ, ಬೇಲ್‌ಪುರಿ, ತಂಪು ಪಾನೀಯಗಳು ಮತ್ತು ಇತರ ಪದಾರ್ಥಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು. ಪಾಲಕರು ಸಹ ತಮ್ಮ ಮಕ್ಕಳು ತಯಾರಿಸಿದ ಮತ್ತು ಮಾರಾಟ ಮಾಡಿದ ಪದಾರ್ಥಗಳ ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಗರ್ತ ಮಂಡಳಿ ಉಪಾಧ್ಯಕ್ಷ ಎಸ್.ಎಸ್. ನಾಗರಾಜ್, ಕಾರ್ಯದರ್ಶಿ ಕೆ.ಎಂ. ವಿನಾಯಕ, ಶುಭ, ಮೃತ್ಯುಂಜಯ, ಕಿರಣ್, ಲಕ್ಷ್ಮಿ, ಸುಚಿತ್ರಾ, ಶೋಭಾ ರಾಣಿ, ಶಶಿಕಲಾ, ಚೇತನ, ದಿವ್ಯ ಬಿ, ಮೆಡಿಕಲ್ ಎಸ್ ಮಂಜುನಾಥ್, ದೇವರಾಜ್ ಸೇರಿದಂತೆ ನಗರ್ತ ಮಂಡಳಿಯ ಸದಸ್ಯರುಗಳು, ನಗರ್ತ ಯುವಕ ಮಂಡಳಿ, ಮಹಿಳಾ ಮಂಡಳಿಯ ಪದಾಧಿಕಾರಿಗಳು ಹಾಗೂ ಅನೇಕ ಯುವಕರು ಮಕ್ಕಳ ಸಂತೆಯಲ್ಲಿ ಭಾಗವಹಿಸಿ ಯಶಸ್ವಿಗೆ ಸಹಕರಿಸಿದರು.
