Devaramallur, Sidlaghatta : ಜಾತಿ, ಧರ್ಮ, ಭಾಷೆಯ ತಾರತಮ್ಯವಿಲ್ಲದೆ ಎಲ್ಲರನ್ನೂ ಕೂಡ ಒಗ್ಗೂಡಿಸುವ ಶಕ್ತಿ ಕೇವಲ ಸಂಗೀತ, ಕ್ರೀಡೆ, ಕಲೆ ಮತ್ತು ಮಾನವೀಯತೆಗೆ ಮಾತ್ರ ಇದೆ ಎಂದು ಕಾಂಗ್ರೆಸ್ ಮುಖಂಡ ನಿರಂಜನ್ ಅವರು ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶ್ರೀಮಳ್ಳೂರಾಂಭೆಯ ಬ್ರಹ್ಮ ರಥೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರಾಜೀವ್ ಗೌಡ ವಾಲೀಬಾಲ್ ಕಪ್-ಸೀಸನ್ 1ರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಫಿ ವಿತರಿಸಿ ಅವರು ಮಾತನಾಡಿದರು.
ಕಾಲ ಬದಲಾದಂತೆ ನಾಗರೀಕತೆಯ ರಭಸದಲ್ಲಿ ಗ್ರಾಮೀಣ ಭಾಗದ ಕಲೆ, ಸಂಪ್ರದಾಯ, ಆಚಾರ-ವಿಚಾರಗಳು ಕಡಿಮೆಯಾಗುತ್ತಿದ್ದು, ಯುವ ಪೀಳಿಗೆಯು ಆಸಕ್ತಿ ಕಳೆದುಕೊಳ್ಳುತ್ತಿದೆ ಎಂದು ನಿರಂಜನ್ ಬೇಸರ ವ್ಯಕ್ತಪಡಿಸಿದರು. ಆದರೂ ಗ್ರಾಮೀಣ ಭಾಗದಲ್ಲಿ ಇಂದಿಗೂ ಸಂಪ್ರದಾಯಗಳು ಉಳಿದುಕೊಂಡಿವೆ. ಜಾತ್ರೆ, ಪರಿಷೆ, ಪೂಜೆ-ಪುನಸ್ಕಾರಗಳು ಎಲ್ಲರನ್ನೂ ಒಗ್ಗೂಡಿಸುತ್ತವೆ ಮತ್ತು ಪರಸ್ಪರ ಒಗ್ಗಟ್ಟಿನಿಂದ ಬದುಕು ಬಾಳಲು ನೆರವಾಗುತ್ತವೆ. ಪರಸ್ಪರ ಕಷ್ಟ-ಸುಖಕ್ಕೆ ಸ್ಪಂದಿಸುವ ಮನೋಭಾವ ಹೆಚ್ಚಿದೆ ಎಂದರು.
ಕೆಪಿಸಿಸಿ ಕೋ-ಆರ್ಡಿನೇಟರ್ ರಾಜೀವ್ ಗೌಡ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತಿದ್ದು, ಸಮುದಾಯ ಭವನ ನಿರ್ಮಾಣ, ಕ್ರೀಡಾ ಕೂಟಗಳ ಆಯೋಜನೆ ಮತ್ತು ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಾ ಸಂಕಷ್ಟದಲ್ಲಿ ಇರುವವರ ಪರವಾಗಿ ನಿಲ್ಲುತ್ತಿದ್ದಾರೆ. ಈ ವಾಲಿಬಾಲ್ ಕ್ರೀಡಾಕೂಟಕ್ಕೆ ಸಂಪೂರ್ಣ ನೆರವು ನೀಡಿ ಯಶಸ್ವಿಯಾಗಲು ಅವರ ಬೆಂಬಲ ಹೆಚ್ಚಿದೆ ಎಂದು ಅವರು ಕೃತಜ್ಞತೆ ಸಲ್ಲಿಸಿದರು. ನಿರೀಕ್ಷೆಗೂ ಮೀರಿ ಹೆಚ್ಚಿನ ತಂಡಗಳು ಆಗಮಿಸಿ, ಗ್ರಾಮಸ್ಥರ ಸಹಕಾರದಿಂದ ಪಂದ್ಯಾವಳಿ ಯಶಸ್ವಿಯಾಗಿದೆ ಎಂದು ಧನ್ಯವಾದಗಳನ್ನು ಅರ್ಪಿಸಿದರು.
ಎಬಿಡಿ ಟ್ರಸ್ಟ್‌ನ ಅಧ್ಯಕ್ಷ ರಾಜೀವ್ ಗೌಡ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ ಅವರು ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ಪ್ರಾಯೋಜಿಸಿದ್ದರು. ನಾನಾ ಕಡೆಯಿಂದ 25ಕ್ಕೂ ಹೆಚ್ಚು ತಂಡಗಳು ಆಗಮಿಸಿದ್ದವು.
- ಪ್ರಥಮ ಬಹುಮಾನ: ಗುಡಿಬಂಡೆ ತಂಡಕ್ಕೆ – 50,000 ರೂ. ನಗದು ಮತ್ತು ಟ್ರೋಫಿ.
- ದ್ವಿತೀಯ ಬಹುಮಾನ: ಹಾಸನ ತಂಡಕ್ಕೆ – 25,000 ರೂ. ನಗದು ಮತ್ತು ಟ್ರೋಫಿ.
- ತೃತೀಯ ಬಹುಮಾನ: ಕೋಲಾರ ತಂಡಕ್ಕೆ – 10,000 ರೂ. ನಗದು ಮತ್ತು ಟ್ರೋಫಿ.
- ನಾಲ್ಕನೇ ಬಹುಮಾನ: ಶಿಡ್ಲಘಟ್ಟ ತಂಡಕ್ಕೆ – 5,000 ರೂ. ನಗದು.
ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರವಿ, ಗ್ರಾಮ ಪಂಚಾಯಿತಿ ಸದಸ್ಯ ಎನ್. ವೆಂಕಟೇಶ್, ಬೆಳ್ಳೂಟಿ ವೆಂಕಟೇಶ್ ಸೇರಿದಂತೆ ಹಲವು ಮುಖಂಡರು ಹಾಗೂ ಕ್ರೀಡಾಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
