Hosapete, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ, ಕೈಗೊಂಡ ಮತ್ತು ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಚರ್ಚಿಸುವುದಕ್ಕಿಂತಲೂ ಹೆಚ್ಚಾಗಿ, ಪಿಡಿಒ ಯಮುನಾರಾಣಿ ಅವರ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರು ದೂರುವುದರಲ್ಲೇ ಸಭೆಯ ಬಹುತೇಕ ಸಮಯ ಕಳೆದುಹೋಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ಯಾವಮ್ಮಕೆಂಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪಿಡಿಒ ಯಮುನಾರಾಣಿ ಅವರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಪಿಡಿಒ ವಿರುದ್ಧದ ಪ್ರಮುಖ ಆರೋಪಗಳು: ಸಾರ್ವಜನಿಕರು ಪಿಡಿಒ ವಿರುದ್ಧ ಹಳ್ಳಿಗಳಿಗೆ ಭೇಟಿ ನೀಡದಿರುವುದು, ಗ್ರಾಮಸ್ಥರ ಸಮಸ್ಯೆಗಳನ್ನು ಕೇಳದಿರುವುದು ಮತ್ತು ಮನರೇಗಾ ಸೇರಿದಂತೆ ವಿವಿಧ ಯೋಜನೆಗಳ ಕಾಮಗಾರಿಗಳು ನಡೆಯುವ ಸ್ಥಳಕ್ಕೆ ಭೇಟಿ ನೀಡದೆ ಕಚೇರಿಯಲ್ಲೇ ಕುಳಿತು ಕೆಲಸ ಮಾಡುವುದು ಹೆಚ್ಚಾಗಿದೆ ಎಂದು ದೂರಿದರು. ಅಲ್ಲದೆ, ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಬಂದರೂ ಅವರು ಹೆಚ್ಚಾಗಿ ಲಭ್ಯವಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆ ಆಯೋಜನೆಯ ಬಗ್ಗೆ ಆಕ್ಷೇಪ: ಗ್ರಾಮ ಸಭೆ ಕರೆದಿರುವ ಬಗ್ಗೆ ಗ್ರಾಮಗಳಲ್ಲಿ ವಾರ್ಡ್ ಸಭೆಗಳು ನಡೆದಿವೆಯೇ ಎಂಬ ಮಾಹಿತಿ ಇಲ್ಲ. ಅಲ್ಲದೆ, ಗ್ರಾಮ ಸಭೆಗೂ ಮುನ್ನ ಸಾರ್ವಜನಿಕರಿಗೆ ಕರಪತ್ರಗಳ ಮೂಲಕ ಪ್ರಚಾರ ಮಾಡಿಲ್ಲ. ಪರಿಣಾಮವಾಗಿ ಗ್ರಾಮ ಸಭೆಯಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಹೊರತುಪಡಿಸಿ ಸಾರ್ವಜನಿಕರ ಕೊರತೆ ಎದ್ದು ಕಾಣುತ್ತಿತ್ತು. ಕಾಟಾಚಾರಕ್ಕೆ ಗ್ರಾಮಸಭೆ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು.
ಇಲಾಖಾ ಅಧಿಕಾರಿಗಳ ಗೈರು ಮತ್ತು ನಿಯಮ ಉಲ್ಲಂಘನೆ: ತಾಲ್ಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಅಥವಾ ಅವರ ಪರವಾಗಿ ಇಲಾಖಾ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು. ಪಂಚಾಯಿತಿಯಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಿಲ್ಲ, ಈ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಅಲ್ಲದೆ, ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ ನಡೆಸಿ ವರದಿ ಕಳುಹಿಸುವಂತೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ನೋಟಿಸ್ ಕಳುಹಿಸಿದ್ದರೂ ಪೂರ್ವಭಾವಿ ಸಭೆ ನಡೆಸಿಲ್ಲ ಎಂದು ದೂರಲಾಯಿತು.
ಮಕ್ಕಳ ಗ್ರಾಮಸಭೆ ಬಗ್ಗೆ ದೂರು: ಗ್ರಾಮಸಭೆಯ ದಿನದಂದೇ ಮಕ್ಕಳ ಗ್ರಾಮಸಭೆ ಮಾಡುವುದಾಗಿ ಮಾಹಿತಿ ಕೇಂದ್ರದಲ್ಲಿ ಪ್ರಕಟಣೆ ಹಾಕಿದ್ದರೂ, ಮಕ್ಕಳ ಗ್ರಾಮಸಭೆ ನಡೆಸಿಲ್ಲ. ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚೆಯನ್ನೇ ನಡೆಸದೆ ಅವರ ಹಕ್ಕುಗಳಿಗೆ ಚ್ಯುತಿ ತಂದಿದ್ದೀರಿ ಎಂದು ಸಾರ್ವಜನಿಕರು ದೂರಿಕೊಂಡರು. ಸಭೆಯಲ್ಲಿ ಕೆಲ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯಿಂದ ಸಿಗುವ ಸವಲತ್ತುಗಳು ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ವೇತಾಹರೀಶ್, ಕಾರ್ಯದರ್ಶಿ ಮಹಾಲಿಂಗಪ್ಪ, ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಸೋಮಣ್ಣ, ಪಶುಪಾಲನಾ ಇಲಾಖೆಯ ಡಾ. ಮುನಿಶಾಮಿ, ಸದಸ್ಯರಾದ ರವಿಕುಮಾರ್, ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
