Sidlaghatta : ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಆಚರಿಸದೆ, ನಿರ್ಲಕ್ಷ್ಯ ವಹಿಸಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾನವ ಹಕ್ಕುಗಳು ಮತ್ತು ಮಾಧ್ಯಮ ಸಂಘಟನೆ ಸದಸ್ಯರು ಶನಿವಾರ ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ ಅವರಿಗೆ ಮನವಿ ಸಲ್ಲಿಸಿದರು.
ಡಿಸೆಂಬರ್ 29 ರಂದು ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆಯನ್ನು ಸರ್ಕಾರದ ಸುತ್ತೋಲೆಯಿದ್ದರೂ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಆಚರಣೆ ಮಾಡಿಲ್ಲ. ಇದು ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ ಹಾಗೆ. ನಿರ್ಲಕ್ಷ್ಯ ಧೋರಣೆ ತೋರಿರುವ ಗ್ರಾಮ ಪಂಚಾಯಿತಿ ಪಿಡಿಒ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರದ ಸುತ್ತೋಲೆಯನ್ನು ಧಿಕ್ಕರಿಸಿರುವುದು ಈ ನಾಡಿನ ಐಕ್ಯತೆಗೆ ಧಕ್ಕೆ ತರುವಂತಹುದ್ದಾಗಿದ್ದು, ಈ ವಿಚಾರವನ್ನು ತಾವು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕುಗಳು ಮತ್ತು ಮಾಧ್ಯಮ ಸಂಘಟನೆ ಸದಸ್ಯರು ಒತ್ತಾಯಿಸಿದರು.
ಮಾನವ ಹಕ್ಕುಗಳು ಮತ್ತು ಮಾಧ್ಯಮ ಸಂಘಟನೆ ಸದಸ್ಯರು ಈ ವಿಚಾರವನ್ನು ತೀವ್ರವಾಗಿ ಖಂಡಿಸುತ್ತೇವೆ ಹಾಗೂ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತಮ್ಮ ಕಚೇರಿಯ ಮುಂದೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ ಮಾತನಾಡಿ, ಈ ಬಗ್ಗೆ ಎಲ್ಲಾ ಪಿ.ಡಿ.ಒ ಗಳಿಂದ ಮಾಹಿತಿ ಒಂದು ವಾರದೊಳಗೆ ಪಡೆಯಲಾಗುವುದು. ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಮೇಲಧಿಕಾರಿಗಳಿಗೂ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಮಾನವ ಹಕ್ಕುಗಳು ಮತ್ತು ಮಾಧ್ಯಮ ಸಂಘಟನೆಯ ಕೆ.ಎಸ್.ಅರುಣ್ ಕುಮಾರ್, ಅಶೋಕ್, ಮಂಜುನಾಥ, ನವೀನ್ ಕುಮಾರ್, ಎಸ್.ಎಂ.ರಮೇಶ್, ಮಂಜುನಾಥ, ಕದಿರಪ್ಪ ಹಾಜರಿದ್ದರು.