Home News ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದವರ ಬಂಧನ

ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದವರ ಬಂಧನ

0
Sidlaghatta Red SandalWood

Sidlaghatta : ರಕ್ತ ಚಂದನ ಮರದ ತುಂಡನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡುತ್ತಿದ್ದ ಹಾಗೂ ಖರೀದಿಸುತ್ತಿದ್ದ ತಂಡವನ್ನು ಶಿಡ್ಲಘಟ್ಟದ ಪೊಲೀಸರು ಹಿಡಿದಿದ್ದು ಸುಮಾರು 2 ಲಕ್ಷ ರೂ. ಮೌಲ್ಯದ ರಕ್ತ ಚಂದನ ತುಂಡು ಹಾಗೂ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.

ಬಂದಿತರಿಂದ ಸುಮಾರು 31 ಕೆಜಿ ತೂಕ ತೂಗುವ ಮಾರುಕಟ್ಟೆಯಲ್ಲಿ 2 ಲಕ್ಷ ರೂ.ಬೆಲೆ ಬಾಳುವ ರಕ್ತ ಚಂದನದ ತುಂಡು, ಅದನ್ನು ಸಾಗಿಸುತ್ತಿದ್ದ 1.5 ಲಕ್ಷ ರೂ.ಬೆಲೆಯ ಪಲ್ಸರ್ ಬೈಕ್ ಹಾಗೂ ಮರದ ತುಂಡನ್ನು, ಕಡಿಯುವ ಗರಗಸವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಹಳಿಯೂರು ಗ್ರಾಮದ ವಿದ್ಯಾರ್ಥಿ ಲಿಖಿತ್‌ಗೌಡ(22), ಅದೇ ಗ್ರಾಮದ ಕೃಷಿಕ ಬಾಸ್ಕರ್‌ಗೌಡ(32), ಗಡ್ಡದನಾಯಕನಹಳ್ಳಿಯ ಅತಿಥಿ ಉಪನ್ಯಾಸಕ ಗಣೇಶ್(36), ಚಿಕ್ಕಬಳ್ಳಾಪುರ ತಾಲ್ಲೂಕು ಕೊಂಡೇನಹಳ್ಳಿಯ ಪ್ರವೀಣ್(26) ಹಾಗೂ ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಮೂಲದ ವಿಜಯಪುರ ವಾಸಿ ಕೇಶವ(24) ಬಂದಿತ ಆರೋಪಿಗಳು.

ಬಂದಿತ ಎಲ್ಲ ಆರೋಪಿಗಳು ಒಬ್ಬೊಬ್ಬರು ಒಂದೊಂದು ಉದ್ಯೋಗದಲ್ಲಿದ್ದು ಬಹುತೇಕ ಎಲ್ಲರೂ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲೆ ಇದ್ದರಾದರೂ ಸುಲಭವಾಗಿ ಹೆಚ್ಚಿನ ಹಣಗಳಿಸುವ ದುರುದ್ದೇಶದಿಂದ ರಕ್ತ ಚಂದನದ ಕಳ್ಳ ಸಾಗಣೆ, ಮಾರಾಟದ ದಂಧೆಗೆ ಇಳಿದಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕು ಅಜ್ಜಕದಿರೇನಹಳ್ಳಿಯ ಅರಣ್ಯದಲ್ಲಿನ ರಕ್ತ ಚಂದನದ ತುಂಡನ್ನು ಕತ್ತರಿಸಿಕೊಂಡು ಲಿಖಿತ್‌ಗೌಡ ಹಾಗೂ ಬಾಸ್ಕರ್ ಇಬ್ಬರೂ ಪಲ್ಸರ್ ಬೈಕ್‌ನಲ್ಲಿ ಸಾಗಿಸುವಾಗ ಶಿಡ್ಲಘಟ್ಟದ ದಿಬ್ಬೂರಹಳ್ಳಿ ಮಾರ್ಗದ ನ್ಯಾಯಾಲಯದ ಕಟ್ಟಡ ಬಳಿ ಗಸ್ತಿನಲ್ಲಿದ್ದ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಲಿಖಿತ್‌ಗೌಡ ಹಾಗೂ ಬಾಸ್ಕರ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಗಣೇಶ್, ಪ್ರವೀಣ್, ಕೇಶವ ಅವರು ರಕ್ತ ಚಂದನದ ತುಂಡುಗಳ ಕಳ್ಳಸಾಗಣೆ ಮಾರಾಟಕ್ಕೆ ಪ್ರೇರಣೆ ನೀಡಿದ್ದರು ಎಂದು ತಪ್ಪೊಪ್ಪಿಕೊಂಡಿದ್ದಾರೆ. ಶಿಡ್ಲಘಟ್ಟ ನಗರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

ಸಿಪಿಐ ಬಿ.ಎಸ್.ನಂದಕುಮಾರ್, ಶಿಡ್ಲಘಟ್ಟ ನಗರಠಾಣೆಯ ಎಸ್‌ಐ ಸುನಿಲ್‌ಕುಮಾರ್, ಪ್ರೊಬೆಷನರಿ ಎಸ್‌ಐ ಹರೀಶ್, ಸಿಬ್ಬಂದಿ ಕಿರಣ್, ಹರೀಶ್, ಮುರಳಿಕೃಷ್ಣೇಗೌಡ, ನಾರಾಯಣ,  ಚಂದ್ರಪ್ಪಯಲಿಗಾರ್, ಪ್ರವೀಣ್‌ಕುಮಾರ್ ಇಂಚೂರ್, ತಿಮ್ಮಣ್ಣ, ರಾಯಣ್ಣ, ಮಂಜುನಾಥ್ ಅವರ ತಂಡವನ್ನು ಎಸ್ಪಿ ಡಿ.ಎಲ್.ನಾಗೇಶ್ ಅವರು ಶ್ಲಾಘಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version