Home News ಸುಗಟೂರು ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಹಬ್ಬ ಕಾರ್ಯಕ್ರಮ

ಸುಗಟೂರು ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಹಬ್ಬ ಕಾರ್ಯಕ್ರಮ

0
Sidlaghatta Sugaturu Government School science Festival

ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಂದರಲಾಲ್ ಬಹುಗುಣ ಇಕೋಕ್ಲಬ್ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿಜ್ಞಾನ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.

ಪ್ರತಿಯೊಬ್ಬರಲ್ಲಿಯೂ ವೈಜ್ಞಾನಿಕ ಮನೋಭಾವನೆಯು ಬೆಳೆಯಬೇಕು. ಎಲ್ಲವನ್ನೂ ವೈಜ್ಞಾನಿಕವಾಗಿ ಚಿಂತನೆಗೊಳಪಡಿಸಿ ಆಚರಣೆಗೆ ತಂದುಕೊಳ್ಳಬೇಕು. ಆಗ ಅನೇಕ ಮೌಡ್ಯಾಚರಣೆಗಳನ್ನು ತೊಡೆದುಹಾಕಬಹುದು. ವಿಜ್ಞಾನವೆಂಬುದು ಎರಡು ಅಲುಗಿನ ಕತ್ತಿಯಾಗಿದ್ದು, ಅದನ್ನು ದೇಶದ ಅಭಿವೃದ್ಧಿಗೂ, ಪ್ರಪಂಚ ವಿನಾಶಕ್ಕೂ ಬಳಸಬಹುದು ಎಂದು ಅವರು ತಿಳಿಸಿದರು.

ಮೌಢ್ಯಗಳ ಆಚರಣೆ, ಮೂಢನಂಬಿಕೆಗಳ ಅಳವಡಿಕೆಯಿಂದ ಸಾಕಷ್ಟು ಮಂದಿ ಮೋಸಹೋಗುತ್ತಿದ್ದಾರೆ. ಜ್ಯೋತಿಷ್ಯದಂತಹ ವಿಷಯಗಳನ್ನು ವೈಜ್ಞಾನಿಕವಾಗಿ ಅರಿಯಬೇಕು. ಮೂಢನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಜನರನ್ನು ತಪ್ಪುದಾರಿಗೆಳೆದು ಬದುಕುವಂತಹವರಿಗೆ ಜನರೇ ಬುದ್ಧಿ ಕಲಿಸಬಹುದಾಗಿದೆ ಎಂದರು.

ಶಿಕ್ಷಕಿ ಎಚ್.ತಾಜೂನ್ ಮಾತನಾಡಿ, ಪ್ರಾಚೀನ ಕಾಲದಿಂದಲೂ ಭಾರತೀಯ ಋಷಿಗಳು ವಿಜ್ಞಾನಕ್ಕೆ ನೀಡಿದ ಕೊಡುಗೆ ಅಪಾರವಾದುದು. ಭಾರತೀಯ ವಿಜ್ಞಾನಿಗಳು ಪ್ರಪಂಚದಲ್ಲಿಯೇ ಉತ್ತಮ ಸಾಧನೆ ಮಾಡಿದ್ದು ಇತರೆ ದೇಶದ ವಿಜ್ಞಾನಿಗಳಿಗೆ ಮಾದರಿಯಾಗಿದ್ದಾರೆ. ವೈಜ್ಞಾನಿಕ ಅಂಶಗಳನ್ನು ಅರಿತು ಬದುಕಿನ ಪ್ರತಿ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಪ್ರಯೋಗಗಳ ಪ್ರದರ್ಶನ ನಡೆಯಿತು. ಮಕ್ಕಳಿಗಾಗಿ ವಿಜ್ಞಾನ ದಿನಾಚರಣೆ ಕುರಿತು ಪ್ರಬಂಧಸ್ಪರ್ಧೆ ನಡೆಸಲಾಯಿತು. ವಿಜ್ಞಾನಕ್ಕೆ ಸಂಬಂಧಪಟ್ಟಂತಹ ವಿದ್ಯುತ್ ಉತ್ಪಾದನೆ, ಎಲೆಕ್ಟ್ರೊ ಮ್ಯಾಗ್ನೆಟಿಕ್ ಇಂಡಕ್ಷನ್, ಬಯೋಗ್ಯಾಸ್, ಸ್ಯಾವೇಜ್ ವಾಟರ್ ಸಿಸ್ಟಂ, ರಾಕೆಟ್‌ಗಳ ಮಾದರಿ, ನ್ಯೂಟನ್ ನಿಯಮಗಳು, ಸ್ಮಾರ್ಟ್ ಸಿಟಿ ನಿರ್ಮಾಣ, ಗ್ರಹಗಳ ಚಲನೆ, ನೀರಿನ ಸಂರಕ್ಷಣೆ, ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಅನೇಕ ಪ್ರಯೋಗಗಳ ಬಗ್ಗೆ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ವಿವರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಎಸ್.ಆರ್.ಜಗದೀಶ್, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಬಿ.ನಾಗರಾಜು, ಎ.ಬಿ.ನಾಗರಾಜ, ಲಕ್ಷ್ಮಯ್ಯ, ಹಾಜರಿದ್ದರು. 

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version