Home News ವಿಜ್ಞಾನ ಗ್ರಾಮ ನಿರ್ಮಾಣಕ್ಕೆ ಉದ್ಯಮಿಯಿಂದ 10 ಎಕರೆ ಉಚಿತ ಭೂಮಿ ನೀಡಿಕೆ

ವಿಜ್ಞಾನ ಗ್ರಾಮ ನಿರ್ಮಾಣಕ್ಕೆ ಉದ್ಯಮಿಯಿಂದ 10 ಎಕರೆ ಉಚಿತ ಭೂಮಿ ನೀಡಿಕೆ

0
Free Land Donation for Science Village construction Sidlaghatta

ಮೂಢ ನಂಬಿಕೆ, ಅಂಧಶ್ರದ್ದೆಗಳ ವಿರುದ್ಧ ಹೋರಾಟವನ್ನು ನಡೆಸುತ್ತಿರುವ, ಜನ ಸಾಮಾನ್ಯರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿ ಮೂಢ ನಂಬಿಕೆಗಳನ್ನು ಹೋಗಲಾಡಿಸಿ ಪವಾಡಗಳನ್ನು ಬಯಲು ಮಾಡುತ್ತಿರುವ ಪವಾಡ ಭಂಜಕ ಹುಲಿಕಲ್ ನಟರಾಜ್ ಹಾಗೂ ಅವರ ಸ್ನೇಹಿತರು ಸೇರಿ ವಿಜ್ಞಾನ ಗ್ರಾಮ ನಿರ್ಮಾಣ ಮಾಡಲು ಹೊರಟಿದ್ದಾರೆ.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ್ನು ರಚಿಸಿಕೊಂಡಿದ್ದು ಪರಿಷತ್ ಮೂಲಕ ನಿರ್ಮಿಸುವ ವಿಜ್ಞಾನ ಗ್ರಾಮಕ್ಕೆ ಶಿಡ್ಲಘಟ್ಟದ ಚಿಕ್ಕದಾಸರಹಳ್ಳಿ ಬಳಿ ಉದ್ಯಮಿ ಬಿಳಿಶಿವಾಲೆ ರವಿ ಅವರು ಉಚಿತವಾಗಿ 10 ಎಕರೆ ಜಮೀನನ್ನು ನೀಡಿದ್ದಾರೆ.

ವಿಜ್ಞಾನ ಗ್ರಾಮಕ್ಕೆ ನೀಡಿದ ಜಮೀನನ್ನು ವೀಕ್ಷಿಸಲು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.

ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಸ್ಥಳ ವೀಕ್ಷಿಸಿ ವಿಜ್ಞಾನ ಗ್ರಾಮ ನಿರ್ಮಾಣದ ಉದ್ದೇಶಗಳನ್ನು ಹುಲಿಕಲ್ ನಟರಾಜ್ ಅವರು ವಿವರಿಸಿದರು.

ವಿಜ್ಞಾನ ಗ್ರಾಮದ ಪರಿಕಲ್ಪನೆ ದೇಶದಲ್ಲೆ ಮೊದಲಾಗಿದೆ. ಉದ್ಯಮಿ ಬಿಳಿಶಿವಾಲೆ ರವಿ ಅವರು ಉಚಿತವಾಗಿ 10 ಎಕರೆ ಜಮೀನು ನೀಡಲು ಒಪ್ಪಿದ್ದಾರೆ. ಇಲ್ಲಿ ವಿಜ್ಞಾನಿಗಳ ಪರಿಚಯ, ಆವಿಷ್ಕಾರಗಳು, ತರಬೇತಿ, ಕಾರ‍್ಯಾಗಾರಗಳು ನಡೆಯಲಿವೆ.

ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳನ್ನು ಉದ್ದೇಶವಾಗಿಟ್ಟುಕೊಂಡು ನಿರ್ಮಾಣವಾಗುವ ವಿಜ್ಞಾನ ಗ್ರಾಮದ ಮೂಲಕ ಅಂಧಶ್ರದ್ದೆಗಳು, ಮೌಢ್ಯಗಳನ್ನು ಹೋಗಲಾಡಿಸುವ ವೈಜ್ಞಾನಿಕ ಭಾವನೆಯನ್ನು ಬೆಳೆಸಲಾಗುತ್ತದೆ. ಬರದ ನಾಡು ಕೋಲಾರ ಎಂಬುದರ ಬದಲಿಗೆ ವಿಜ್ಞಾನದ ನಾಡು ಎನ್ನುವಂತೆ ಮಾಡಲಾಗುವುದು ಎಂದು ವಿವರಿಸಿದರು.

ಸರ್ಕಾರಕ್ಕೂ ಪ್ರಸ್ತಾವನೆ ಕಳುಹಿಸಿ ಹಣಕಾಸಿನ ನೆರವು ಕೋರುತ್ತೇವೆ. ದೊರೆತರೆ ಒಳ್ಳೆಯದು, ಇಲ್ಲವಾದರೆ ದಾನಿಗಳಿಂದ, ಸಂಘ ಸಂಸ್ಥೆಗಳಿಂದ ಹಣಕಾಸನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.

ಪರಿಷತ್‌ನ ಉಪಾಧ್ಯಕ್ಷ ಡಾ.ಆಂಜಿನಪ್ಪ, ಮಧುರ ಆಶೋಕ್‌ಕುಮಾರ್, ಭೂದಾನಿ ಬಿಳಿಶಿವಾಲೆ ರವಿ, ಅರುಣ್‌ಕುಮಾರ್, ಡಾ.ಪಲ್ಲವಿ, ವಿ.ಟಿ.ಸ್ವಾಮಿ, ಹನುಮಂತೇಗೌಡ, ಶ್ರೀಧರ್ ಗೋವಿಂದರಾವ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version