
Sidlaghatta, Chikkaballapur : ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದರೆ ಅದು ಅವರಿಗಷ್ಟೇ ಅಲ್ಲ, ಕುಟುಂಬ ಮತ್ತು ಇಡೀ ಸಮಾಜಕ್ಕೂ ಶಕ್ತಿಯ ಮೂಲವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅಭಿಪ್ರಾಯಪಟ್ಟರು.
ನಗರದ ಸರಸ್ವತಿ ಕಾನ್ವೆಂಟ್ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಕ್ಷಣಿಕ ಸುಖಕ್ಕಾಗಿ ತಪ್ಪು ದಾರಿಯಲ್ಲಿ ನಡೆಯಬೇಡಿ. ನಿಮ್ಮ ಸ್ನೇಹಿತರು ತಪ್ಪು ದಾರಿಗೆ ಹೋಗುತ್ತಿದ್ದರೆ ಶಿಕ್ಷಕರಿಗೂ, ಹೆತ್ತವರಿಗೂ ತಿಳಿಸಿ. ಶಿಕ್ಷಣ ನಿಮ್ಮ ಜೀವನದ ಶಕ್ತಿಯಾಗಿದೆ,” ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
“ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಸಮಾನರು. ಎಲ್ಲರಿಗೂ ಸಮಾನ ಅವಕಾಶಗಳಿವೆ. ಗಂಡು ಹೆಚ್ಚು, ಹೆಣ್ಣು ಕಡಿಮೆ ಎನ್ನುವ ಭಾವನೆಗಳಿಂದ ಬದುಕು ನಾಶವಾಗಬಾರದು,” ಎಂದರು.
ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ ಮಾತನಾಡಿ, “ಹೆಣ್ಣು ಮತ್ತು ಗಂಡು ಇಬ್ಬರೂ ಎರಡು ಕಣ್ಣುಗಳಂತವರು. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣನ್ನು ತಾಯಿ, ಅಕ್ಕ, ದೇವಿಯ ರೂಪದಲ್ಲಿ ಕಾಣುವ ಪರಂಪರೆ ಇದೆ. ಆ ಗೌರವವನ್ನು ಉಳಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಹೆಣ್ಣು ಮಕ್ಕಳು ಮುಂದಾಗಬೇಕು,” ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಇಒ ನರೇಂದ್ರ ಕುಮಾರ್, ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯ ಅಧ್ಯಕ್ಷ ಎನ್. ಶ್ರೀಕಾಂತ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಭಾಸ್ಕರ್, ಎಪಿಪಿ ಮೊಹಮ್ಮದ್ ಖಾಜಾ, ವಕೀಲರಾದ ರಾಘವೇಂದ್ರ, ಪ್ರಭು, ಆರ್. ವೀಣಾ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.