Home News ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ

ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ

0
Sidlaghatta Vaikunta Ekadashi Celebration

Mallur, Sidlaghatta : ವೈಕುಂಠ ಏಕಾದಶಿ ಪ್ರಯುಕ್ತ ಸೋಮವಾರ ತಾಲ್ಲೂಕಿನ ಪ್ರಮುಖ ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಿದ್ದರು. ಎಲ್ಲಾ ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚಿದ್ದು, ಕೆಲವು ದೇವಸ್ಥಾನಗಳಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ನಂಬಿಕೆಯಿಂದ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ವೈಕುಂಠದ ದರ್ಶನಕ್ಕೆ ದ್ವಾರಗಳನ್ನು ಸ್ಥಾಪಿಸಿದ್ದು, ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನಿಂದ ಆಗಮಿಸಿದ್ದ ಭಕ್ತರು ಸಾಲಾಗಿ ಸಾಗುತ್ತಾ ದೇವರ ದರ್ಶನ ಪಡೆದರು. ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆಯನ್ನೂ ದೇವಾಲಯದಲ್ಲಿ ಆಯೋಜಿಸಿದ್ದರು.

ವೈಕುಂಠ ಏಕಾದಶಿಯ ಪ್ರಯುಕ್ತ ಸ್ವಾಮಿಯವರಿಗೆ ಸುಪ್ರಭಾತ ಸೇವೆ, ಅಭಿಷೇಕ, ವಜ್ರಾಕೋಷ ಅಲಂಕಾರ ಹಾಗೂ ವೈಕುಂಠ ದ್ವಾರ ದರ್ಶನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವೈಕುಂಠ ಏಕಾದಶಿಯ ದಿನ ತಮ್ಮ ಪೂರ್ವಜರಿಗೆ, ಮಾತಾ ಪಿತೃಗಳಿಗೆ ಸದ್ಗತಿ ಮತ್ತು ವೈಕುಂಠ ಪ್ರಾಪ್ತಿಯಾಗಲಿ ಎಂದು ಹೇಳಿ ವೈಕುಂಠ ದ್ವಾರ ಪ್ರವೇಶವನ್ನು ಮಾಡಿದರೆ ಸದ್ಗತಿ ಸಿಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಈ ಸಂದರ್ಭದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ತೀರ್ಥ ಪ್ರಸಾದಗಳನ್ನು ವಿನಿಯೋಗ ಮಾಡಲಾಯಿತು.

ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ಶ್ರೀ ಗಾಯಿತ್ರಿದೇವಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿಯ ಅಂಗವಾಗಿ ಶ್ರೀ ಕಲ್ಯಾಣ ವೆಂಕಟೇಶ್ವರ ಸ್ವಾಮಿಯವರಿಗೆ ವಿಶೇಷ ಪೂಜೆ ನಡೆಸಲಾಯಿತು.

ತಾಲ್ಲೂಕಿನ ಮೇಲೂರು ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು. ಸುಪ್ರಭಾತ, ವಿಷ್ಣು ಸಹಸ್ರನಾಮ, ವಿಶ್ವಕ್ಸೇನ ಪೂಜೆ, ಪುಣ್ಯಾಹವಾಚನ, ಪಂಚಾಮೃತಾಭಿಷೇಕ, ರಾಷ್ಟ್ರಾಶೀರ್ವಾದ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗವನ್ನು ನಡೆಸಲಾಯಿತು.

ಮಳ್ಳೂರು, ಮುತ್ತೂರು, ಭಕ್ತರಹಳ್ಳಿ, ಕಂಬದಹಳ್ಳಿ, ಚೌಡಸಂದ್ರ, ಕೇಶವಪುರ, ಅಪ್ಪೆಗೌಡನಹಳ್ಳಿ, ಗಂಗನಹಳ್ಳಿ, ಕೊಂಡೇನಹಳ್ಳಿ, ತಿಮ್ಮನಹಳ್ಳಿ, ಕಾಚಹಳ್ಳಿ, ಕಾಕಚೋಕಂಡಹಳ್ಳಿಗಳಿಂದ ನೂರಾರು ಭಕ್ತರು ಪೂಜೆಯಲ್ಲಿ ಭಾಗವಹಿಸಿ ತೀರ್ಥ ಪ್ರಸಾದಗಳು ಪಡೆದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version