
Sidlaghatta : ಕ್ಷೇತ್ರದ ಜನತೆ ಅದರಲ್ಲಿಯೂ ಮುಖ್ಯವಾಗಿ ರೈತರಿಗೆ ಶೀಘ್ರವಾಗಿ ಸೇವೆ ಸಲ್ಲಿಸಲು ನೆರವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ್ದು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿ ಅವರು ಮಾತನಾಡಿದರು.
ಗ್ರಾಮ ಆಡಳಿತಾಧಿಕಾರಿಗಳ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಲ್ಯಾಪ್ ಟಾಪ್ ನೀಡಿದೆ. ಜನಸಾಮಾನ್ಯರು ಸೇರಿದಂತೆ ರೈತರು ತಮ್ಮ ಕೆಲಸಕ್ಕಾಗಿ ಕಚೇರಿಗೆ ಬಂದಾಗ ವಿನಾಕಾರಣ ಅವರನ್ನು ಕಚೇರಿಗೆ ಅಲೆಸದೇ ಶೀಘ್ರವಾಗಿ ಕೆಲಸ ಮಾಡಿಕೊಡಿ ಎಂದರು.
ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, ಡಿಜಿಟಲ್ ಕರ್ನಾಟಕದ ಭಾಗವಾಗಿ ಕಂದಾಯ ಇಲಾಖೆಯಲ್ಲಿ ರಾಜ್ಯದ ಎಲ್ಲಾ ಭೂ ದಾಖಲೆಗಳನ್ನು ಆನ್ ಲೈನ್ ವ್ಯವಸ್ಥೆಗೆ ತರಲಾಗುತ್ತಿದೆ. ಭೂ ಸುರಕ್ಷಾ, ಪಬ್ಲಿಕ್ ಖಾತೆ ಸೇರಿದಂತೆ ಎಲ್ಲವೂ ಡಿಜಿಟಲ್ ಆಗುತ್ತಿದೆ. ಹಿಂದಿನಂತೆ ಕಚೇರಿಯಿಲ್ಲದೆ ಫೋನ್ ನಲ್ಲಿ ಮಾತ್ರ ಕೆಲಸ ಮಾಡಬೇಕಾಗುತ್ತಿದ್ದ ತೊಂದರೆಯನ್ನು ನಿವಾರಿಸಲು ಇದೀಗ ಲ್ಯಾಪ್ ಟಾಪ್ ವಿತರಣೆಯಾಗಿದ್ದು ಅಧಿಕಾರಿಗಳು ಸರಿಯಾದ ತಾಂತ್ರಿಕ ಸೌಲಭ್ಯಗಳೊಂದಿಗೆ ಜನತೆಗೆ ಉತ್ತಮ ಸೇವೆ ನೀಡಲು ಸಜ್ಜಾಗಬೇಕಿದೆ ಎಂದರು.
ಗ್ರಾಮ ಆಡಳಿತಾಧಿಕಾರಿಗಳು ಈಗ ಡಿಜಿಟಲ್ ವ್ಯವಸ್ಥೆಯೊಂದಿಗೆ ತೊಡಗಿಸಿಕೊಂಡು ಗ್ರಾಮೀಣ ಮಟ್ಟದಲ್ಲಿಯೇ ಮಾಹಿತಿ ನಿರ್ವಹಣೆ, ದಾಖಲೆ ಸಂರಕ್ಷಣೆ ಹಾಗೂ ಸೇವಾ ವಿತರಣೆಯಲ್ಲಿ ನೂತನ ಪ್ರಗತಿಗೆ ಕಾರಣರಾಗಬೇಕಿದೆ. ಇದು “ಡಿಜಿಟಲ್ ಕರ್ನಾಟಕ” ಕನಸು ಸಾಕಾರವಾಗಲು ನೆರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಆಯಿಷಾ ಬೀ ಸೇರಿದಂತೆ ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.