
Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕಾರ್ಯ ಇನ್ನೇನು ಆರಂಭವಾಗಲಿದ್ದು ನಮ್ಮ ಕಾಂಗ್ರೆಸ್ ಪಕ್ಷದ ಯಾವೊಬ್ಬ ಕಾರ್ಯಕರ್ತರ ಹೆಸರು ಕೂಡ ಕೈ ಬಿಟ್ಟು ಹೋಗದಂತೆ ಎಚ್ಚರಿಕೆವಹಿಸಬೇಕು ಎಂದು ಮುಖಂಡ ಬಿ.ವಿ.ರಾಜೀವ್‌ಗೌಡ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಮ್ಮ ವಿರೋಧಿಗಳು ಅವರಿಗೆ ಬೇಕಾದ ಅಧಿಕಾರಿಗಳನ್ನು ಮತಗಟ್ಟೆಗಳಿಗೆ ಬಿ.ಎಲ್.ಒ ಅಧಿಕಾರಿಗಳನ್ನಾಗಿ ನೇಮಿಸಿಕೊಂಡಿದ್ದು ಅವರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಹೆಸರುಗಳನ್ನು ಮತಪಟ್ಟಿಯಿಂದ ಕೈ ಬಿಡುವ ಅವಕಾಶಗಳು ಹೆಚ್ಚಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಯಾವುದೆ ಬಿ.ಎಲ್.ಒಗಳು ಪಕ್ಷ, ಜಾತಿ ತಾರತಮ್ಯವಾಗಿ ಕಾರ್ಯನಿರ್ವಹಿಸಿದರೆ ಅಥವಾ ಕರ್ತವ್ಯ ನಿರ್ಲಕ್ಷಿಸಿದರೆ ಕೂಡಲೆ ಅಂತಹವರ ಬಗ್ಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ತನ್ನಿ. ಚುನಾವಣಾ ಆಯೋಗವು ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು.
ನಮ್ಮ ಸಿಎಂ ಡಿ.ಕೆ.ಶಿವಕುಮಾರ್ ಕೂಡ ಈ ಬಗ್ಗೆ ನಮ್ಮೆಲ್ಲರಿಗೂ ಮಾಹಿತಿ ನೀಡಿದ್ದು ಈ ವಿಷಯದಲ್ಲಿ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು, ನಮ್ಮ ಪಕ್ಷದ ಯಾವುದೆ ಒಬ್ಬ ಕಾರ್ಯಕರ್ತ, ಕಾರ್ಯಕರ್ತೆಯ ಹೆಸರು ಕೂಡ ಉದ್ದೇಶಪೂರ್ವಕವಾಗಿ ಕೈ ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ನನ್ನ ಸಂಪೂರ್ಣ ಸಹಕಾರ ನಿಮಗಿರುತ್ತದೆ ಎಂದರು.