Home News ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ

0
SKDRDP Women's Day Programme

ದಿನಪೂರ್ತಿ ವಿಶ್ರಾಂತಿ ಇಲ್ಲದೇ ದುಡಿದರೂ ಕೂಡಾ ಯಾವತ್ತೂ ಸಹನೆ ಕಳೆದುಕೊಳ್ಳದೇ ಹೆಣ್ಣು ಸಂಸಾರದ ಭಾರವನ್ನು ಸರಿದೂಗಿಸುವವಳು ಎಂದು ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಹೇಮಾವತಿ ತಿಳಿಸಿದರು.

ತಾಲ್ಲೂಕಿನ ಹೊಸಪೇಟೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 ಆಧುನಿಕ ಸಮಾಜದಲ್ಲಿ ಮಹಿಳೆ ಪುರುಷನಷ್ಟೇ ಪ್ರಬುದ್ಧಳಾದರೂ ಕೂಡಾ ಕೆಲವಾರು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಪುರುಷನಷ್ಟೇ ಸಮಾನವಾದ ಅವಕಾಶ ನೀಡದೇ ಇರುವುದು ದುರಂತ. ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಭ್ರೂಣಹತ್ಯೆ, ಹೆಣ್ಣು ಮಕ್ಕಳ ಮಾರಾಟ  ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು ಪ್ರತಿ ಹೆಣ್ಣುಮಕ್ಕಳು ಫೋಷಕರು ಜಾಗೃತರಾಗಬೇಕೆಂದರು.

 ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, ಎಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಮಾತಿದೆ. ಪವಿತ್ರ ಮಾತೆಯರ ನೆನಪಿನ ಈ ದಿನ ಕೇವಲ ಮಾರ್ಚ್ 8 ಕ್ಕೆ ಸೀಮಿತವಾಗದೇ ವರ್ಷದ 365 ದಿನಗಳು ಮಹಿಳೆಯರ ಸಂತೋಷದ ಆನಂದದ ದಿನಗಳಾದಾಗ ಮಾತ್ರ ಮಹಿಳಾ ದಿನಾಚರಣೆ ಅರ್ಥಪೂರ್ಣವಾದೀತು ಎಂದರು.

 ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಮಾಲತಿ ಮಾತನಾಡಿ, ಆಧುನಿಕ ಭಾರತದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿ ಸ್ತ್ರೀ ಅಬಲೆಯಲ್ಲ ಸಬಲೆ ಎಂದು ಈ ಸಮಾಜಕ್ಕೆ ತೋರಿಸಿಕೊಟ್ಟ, ಸಾಲು ಮರದ ತಿಮ್ಮಕ್ಕ, ಜ್ಯೋತಿ ಬಾಪುಲೆ, ಸುಧಾಮೂರ್ತಿ ಅವರ ಆದರ್ಶ ಬದುಕಿನ ಬಗ್ಗೆ ಅವರ ಜೀವನ ಶೈಲಿಯ ಬಗ್ಗೆ ತಿಳಿಸಿದರು.

 ಹೊಸಪೇಟೆ ಶಾಲಾ ಶಿಕ್ಷಕಿ ಶೈಲಜಾ ಮಾತನಾಡಿ, ಮಹಿಳೆ ಮಾನಸಿಕವಾಗಿ ದೈಹಿಕವಾಗಿ ಸದೃಢವಾಗಿ ಆತ್ಮಸ್ಥೈರ್ಯದಿಂದ ತಾನು ಬದುಕಿದಾಗ ಮಾತ್ರ ಸಂಸಾರದ ಜೊತೆ ಸಂತೃಪ್ತಿಯಿಂದ ಬಾಳಲು ಸಾಧ್ಯ ಎಂದರು.

 ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಚೇತನ್, ಒಕ್ಕೂಟದ ಅಧ್ಯಕ್ಷೆ ಆರತಿ, ಸೇವಾಪ್ರತಿನಿಧಿ ಸುಶೀಲಮ್ಮ, ಅಂಬಿಕಾ ಮನಿಷಾ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version