ಎಸ್ಸೆಸ್ಸೆಲ್ಸಿ 2020 ಫಲಿತಾಂಶ ಪ್ರಕಟವಾಗಿದ್ದು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹೆಣ್ಣುಮಕ್ಕಳು ಮೊದಲ ನಾಲ್ಕು ಸ್ಥಾನಗಳನ್ನು ತಮ್ಮದಾಗಿಸಿಕೊಂಡು ಪಾರಮ್ಯ ಮೆರೆದಿದ್ದಾರೆ. ಶಿಕ್ಷಕರ ಮಗಳು ಬಿ.ಜಿ.ಎಸ್ ಶಾಲೆಯ ಮಹಿಮಾ (ಶೇ 99.2) ಪ್ರಥಮಳಾಗಿದ್ದರೆ, ರೈತರ ಮಕ್ಕಳಾದ ದ್ವಿತೀಯ ಸ್ಥಾನ ಪಡೆದಿರುವ ಚೇತನಾ ಶಾಲೆಯ ಟಿ.ಕೆ.ಜನನಿ (ಶೇ 98.72), ತೃತೀಯ ಸ್ಥಾನ ಪಡೆದಿರುವ ಬಿ.ಜಿ.ಎಸ್ ಶಾಲೆಯ ಅನೂಷಾ (ಶೇ 98.56), ಬಿ.ಜಿ.ಎಸ್ ಶಾಲೆಯ ಟಿ.ರಕ್ಷಿತಾ (ಶೇ 98.24) ಮತ್ತು ಬಿ.ಜಿ.ಎಸ್ ಶಾಲೆಯ ನೇಹಲ (ಶೇ 98.8) ಪಡೆದು ಸಾಧನೆ ಮಾಡಿದ್ದಾರೆ.
ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಮೇಲೂರು, ಕುಂದಲಗುರ್ಕಿ ಮತ್ತು ಈ.ತಿಮ್ಮಸಂದ್ರ ಸರ್ಕಾರಿ ಪ್ರೌಢಶಾಲೆಗಳು ಹಾಗೂ ಕಿತ್ತೂರು ರಾಣಿ ಚನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಶೇಕಡಾ ನೂರರಷ್ಟು ಫಲಿತಾಂಶ ದಾಖಲಿಸಿವೆ. ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಕೆ.ವಿ.ತೇಜಸ್ (ಶೇ 96.48) ಗಳಿಸಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಯಾಗಿದ್ದಾನೆ. ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆಯ ಕೆ.ಸಿ.ಪಲ್ಲವಿ (ಶೇ 93.44) ಪಡೆದಿದ್ದಾಳೆ. ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯ ಏಳು ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ. ಅವರಲ್ಲಿ ಪವನ್ ಕುಮಾರ್ (ಶೇ 88.16), ಎಚ್.ಸತೀಶ (ಶೇ 82.4), ಪುಷ್ಪ (ಶೇ 82.08) ಅಂಕಗಳನ್ನು ಗಳಿಸಿದ್ದಾರೆ.







