27.5 C
Sidlaghatta
Wednesday, July 30, 2025

ಸುಗಟೂರು ಮಾದರಿ ಶಾಲೆ ಯೋಜನೆಯಡಿ ಕಾಮಗಾರಿ ಪರಿಶೀಲನೆ

- Advertisement -
- Advertisement -

ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿದ್ದು, ಜಿಲ್ಲಾಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್ ಅವರು ಭೇಟಿ ನೀಡಿ ಪರಿಶೀಲಿಸಿ, ಶಾಲೆಯಲ್ಲಿನ ಶೈಕ್ಷಣಿಕ ಚಟುವಟಿಕೆಗಳು, ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯಲ್ಲಿ ಕಳೆದ ಸುಮಾರು 15 ವರ್ಷಗಳಿಂದಲೂ ದಾಖಲಾತಿ, ಹಾಜರಾತಿಯನ್ನು ಕಾಯ್ದುಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ, ಎನ್‌ಎಂಎಂಎಸ್ ಪರೀಕ್ಷೆ, ಡ್ರಾಯಿಂಗ್ ಗ್ರೇಡ್ ಲೋಯರ್ ಮತ್ತು ಹೈಯರ್ ಪರೀಕ್ಷೆಗೆ ನೊಂದಾಯಿಸಿ ಉತ್ತಮ ಫಲಿತಾಂಶ ಪಡೆಯಲಾಗುತ್ತಿರುವುದು ಸರ್ಕಾರಿ ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ಪ್ರತಿನಿಧಿಸುವಂತಿದೆ ಎಂದರು.

ವಿವಿಧ ವಿಜ್ಞಾನ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದು, ಕಳೆದ ನವೆಂಬರ್‌ನಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಅಂತರಾಷ್ಟ್ರೀಯ ಮಕ್ಕಳ ಶಿಬಿರದಲ್ಲಿ ನಾಲ್ಕುಮಂದಿ ವಿದ್ಯಾರ್ಥಿಗಳು ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯಲ್ಲಿ ಉತ್ತಮ ಕಲಿಕಾಪರಿಸರವನ್ನು ಸೃಷ್ಟಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದರು.

ನರೇಗಾ ಯೋಜನೆಯಡಿ ಶಾಲೆಯ ಆವರಣದಲ್ಲಿ ಮಿನಿ ಉದ್ಯಾನವನ ನಿರ್ಮಿಸುತ್ತಿದ್ದು ವಿವಿದೋದ್ದೇಶಕ್ಕಾಗಿ ಬಳಸುವಂತಿದೆ. ಪ್ರಾರ್ಥನೆ, ರಾಷ್ಟ್ರೀಯ ಹಬ್ಬಗಳ ಆಚರಣೆ, ಪರಿಸರದೊಂದಿಗೆ ಚಟುವಟಿಕೆಗಳ ಮೂಲಕ ಕಲಿಸಲು ಪೂರಕವಾಗಿದ್ದು, ಮಕ್ಕಳ ಪ್ಲೇ ಏರಿಯಾವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಶಾಲೆಯಲ್ಲಿ ವಾಟರ್‌ಲೆಸ್ ಶೌಚಾಲಯವಿದ್ದು ಮತ್ತಷ್ಟು ಆಕರ್ಷಣಿಯಗೊಳಿಸಬೇಕು. ಎತ್ತರದ ಕಾಂಪೌಂಡ್‌ ನಿರ್ಮಾಣ, ಸಸಿನೆಡುವುದು, ಅಡುಗೆಕೋಣೆ ನಿರ್ಮಾಣ, ಶೌಚಾಲಯ ನಿರ್ಮಾಣ ಕಾಮಗಾರಿಗಳು ಶೀಘ್ರವಾಗಿ ಮುಗಿಸಬೇಕು. ಮಳೆನೀರುಕೊಯ್ಲು, ನೆನಸುಗುಂಡಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಶಾಲೆಯ ಮಕ್ಕಳ ಉಪಯೋಗಕ್ಕಾಗಿ ಸೈಕಲ್‌ಸ್ಟ್ಯಾಂಡ್ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಲಿಕಲಿ ಕೊಠಡಿಯನ್ನು ವೀಕ್ಷಿಸಿದ ಅವರು ಪ್ರಶಂಶಿಸಿ, ಗ್ರಂಥಾಲಯ, ಪ್ರಯೋಗಾಲಯಗಳು ಕಿರಿದಾಗಿದ್ದು, ಉತ್ತಮ ಶಾಲಾ ಪರಿಸರವನ್ನು ಹೊಂದಿರುವುದರಿಂದ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು.

ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾದರಿ ಶಾಲೆ ಕ್ರಿಯಾಯೋಜನೆ ಕಿರು ಕೈಪಿಡಿಯನ್ನು ಹಸ್ತಾಂತರಿಸಿ ಮಾತನಾಡಿ, ಶಾಲೆಯ ಎಲ್ಲಾ ಶಿಕ್ಷಕರಿಗೂ ನವದೆಹಲಿಯ ಭಾರತ ಸರ್ಕಾರದ ಮಿನಿಸ್ಟ್ರಿ ಆಫ್ ವಾಟರ್ ಅಂಡ್ ಸ್ಯಾನಿಟೇಶನ್, ಮಿನಿಸ್ಟ್ರಿ ಆಫ್ ಯೂತ್ ಅಫೇರ‍್ಸ್ ಅಂಡ್ ಸ್ಪೋರ್ಟ್ಸ್, ಮಿನಿಸ್ಟ್ರಿ ಅಫ್ ಹ್ಯೂಮನ್ ರಿಸೋರ್ಸ್ ಡೆವೆಲಪ್‌ಮೆಂಟ್ ವತಿಯಿಂದ 2018-19 ರಲ್ಲಿ ಸ್ವಚ್ಚಭಾರತ್ ಸಮ್ಮರ್ ಇಂಟರ‍್ನ್‌ಶಿಪ್‌ನಲ್ಲಿ ಭಾಗವಹಿಸುವಂತೆ ಅವಕಾಶ ಕಲ್ಪಿಸಿ ಸರ್ಟಿಫಿಕೇಟ್ ನೀಡಲಾಗಿದೆ ಎಂದರು.

ಪರೀಕ್ಷೆಗೆ ಅವಕಾಶ: ಶಾಲೆಯ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ವೋದಯ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಗಾಂಧಿ ವಿಚಾರದರ್ಶಿನಿ, ಗಾಂಧಿಸಂಸ್ಕಾರ್ ಪರೀಕ್ಷೆಗೆ ಕೂರಿಸಿ ಸರ್ಟಿಫಿಕೇಟ್‌ಗಳನ್ನು ಕೊಡಿಸಲಾಗಿದೆ. ಪ್ರತಿವರ್ಷವೂ ಶೈಕ್ಷಣಿಕ ಪ್ರವಾಸ, ವಿಜ್ಞಾನಕೇಂದ್ರ, ತೋಟಗಾರಿಕಾ ಪ್ರದೇಶ, ಹಾಲುಶಿಥಿಲೀಕರಣ ಕೇಂದ್ರ, ಜಲಸಂಕರ‍್ಷಣಾ ಚೆಕ್‌ಡ್ಯಾಂಗಳಿಗೆ ಭೇಟಿ ನೀಡಲಾಗಿದೆ ಎಂದು ವಿವರಿಸಿದರು.

ಶಿಕ್ಷಕರಿಂದ ವರ್ಲಿ ಆರ್ಟ್: ಇಡೀ ಶಾಲೆಯ ಕಟ್ಟಡದ ಒಳಗೆ ಮತ್ತು ಹೊರಗೆ ಬಣ್ಣ ಹಾಕಿದ್ದು ಹೊರಭಾಗದಲ್ಲಿ ಗೋಡೆಗಳ ಮೇಲೆ ಶಿಕ್ಷಕರೇ ವರ್ಲಿ ಆರ್ಟ್ ಮಾಡುತ್ತಿದ್ದುದನ್ನು ವೀಕ್ಷಿಸಿ ಸಿಇಒ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕುಪಂಚಾಯಿತಿ ಇಒ ಕೆ.ಬಿ.ಶಿವಕುಮಾರ್, ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ್‌ಕುಮಾರ್, ಗುತ್ತಿಗೆದಾರರಾದ ಎಸ್.ಎ.ನಾಗೇಶ್‌ಗೌಡ, ಎಸ್.ಡಿ.ದೇವರಾಜು, ಬಚ್ಚೇಗೌಡ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಗಂಜಿಗುಂಟೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಿ.ನಾರಾಯಣಸ್ವಾಮಿ, ಗ್ರಾಮಸ್ಥರು, ಅಧಿಕಾರಿಗಳು ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!