ವಿದ್ಯುತ್ ಬಿಲ್ ವಸೂಲಿ ಮಾಡಲು ಅಭಿಯಾನ ಕೈಗೊಂಡಿರುವ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಕೇವಲ ಗ್ರಾಹಕರು ಮಾತ್ರವಲ್ಲದೆ ಸರ್ಕಾರಿ ಕಚೇರಿಗಳಲ್ಲಿ ಉಳಿಸಿಕೊಂಡಿರುವ ಬಾಕಿ ವಸೂಲಿಗೆ ಬಿಗಿ ಕ್ರಮ ಕೈಗೊಂಡಿದ್ದಾರೆ.
ನಗರದ ತಾಲ್ಲೂಕು ಕಚೇರಿಗೆ ಸಂಬಂಧಿಸಿದ 6 ಲಕ್ಷ ರೂ.ಗಳು ಪಾವತಿಸಲು ಪದೇಪದೇ ಮನವಿ ಮಾಡಿಕೊಂಡು ನೋಟೀಸ್ ಜಾರಿಗೊಳಿಸಿದರು ಸಹ ಕಂದಾಯ ಇಲಾಖೆಯ ಅಧಿಕಾರಿಗಳು ವಿದ್ಯುತ್ ಪಾವತಿಸಲು ನಿರ್ಲಕ್ಷ ವಹಿಸಿರುವುದರಿಂದ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಕಚೇರಿ (ಮಿನಿ ವಿಧಾನಸೌಧದ) ವಿದ್ಯುತ್ ಸಂಪರ್ಕವನ್ನು ಗುರುವಾರ ಕಡಿತಗೊಳಿಸಿದ್ದರು.
ಸಾಮಾನ್ಯವಾಗಿ ತಾಲ್ಲೂಕು ಕಚೇರಿಗೆ ನಾನಾ ಕೆಲಸ ಕಾರ್ಯಗಳಿಗಾಗಿ ಬರುವ ನಾಗರಿಕರು ವಿದ್ಯುತ್ ಸಂಪರ್ಕವಿಲ್ಲದೆ ತಾಲ್ಲೂಕು ಕಚೇರಿಯಲ್ಲಿ ಕೆಲಸ ಕಾರ್ಯಗಳು ನಡೆಯದೆ, ಎಲ್ಲವೂ ಸ್ಥಗಿತಗೊಂಡಿದ್ದವು. ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ತಾಲ್ಲೂಕು ಕಚೇರಿಯ ಸಿಬ್ಬಂದಿ ವಿದ್ಯುತ್ ಇಲ್ಲದೆ ಅರ್ಜಿಗಳನ್ನು ಅಪ್‍ಲೋಡ್ ಮಾಡಲು ಪರದಾಡುವಂತಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯಿಂದ ಮತ್ತು ತಹಶೀಲ್ದಾರ್ ಕೆ. ಅರುಂಧತಿ ಅವರು ವಿದ್ಯುತ್ ಬಿಲ್ ಪಾವತಿಸಲು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಬೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಪ್ರಭು ಅವರು ತಮ್ಮ ಸಿಬ್ಬಂದಿಯೊಂದಿಗೆ ತಾಲ್ಲೂಕು ಕಚೇರಿಗೆ ತೆರಳಿ ಮರು ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.
“ಶಿಡ್ಲಘಟ್ಟ ತಾಲ್ಲೂಕು ಕಚೇರಿಯಿಂದ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಲಾಗಿತ್ತು. ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಮತ್ತು ತಾಲ್ಲೂಕು ದಂಡಾಧಿಕಾರಿಗಳು ಕಾಲಾವಕಾಶ ಕೇಳಿರುವುದರಿಂದ ಮರು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ”
-ಬಿ.ಪ್ರಭು, ಎಇಇ ಬೆಸ್ಕಾಂ ಇಲಾಖೆ.







