
Sidlaghatta : ಅಪ್ರಾಪ್ತರಿಗೆ ದ್ವಿಚಕ್ರ ವಾಹನ ನೀಡುವ, ಅಪಘಾತ ಕೃತ್ಯಕ್ಕೆ ಕಾರಣರಾಗುವ ವಾಹನ ಮಾಲೀಕರ, ಪಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಅಪ್ರಾಪ್ತರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಅವರು ಮಾತನಾಡಿದರು.
ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಲಾಯಿಸಿ ಆಗುವ ಅನಾಹುತಗಳಿಗೆ ಪೋಷಕರೇ ಕಾರಣರಾಗಿ, ಜೀವನ ಪರ್ಯಂತ ಕೊರಗುವ ಪರಿಸ್ಥಿತಿ ಬರಬಹುದು. ಇತ್ತೀಚೆಗೆ ನಡೆದ ರಸ್ತೆ ಅಪಘಾತಗಳಲ್ಲಿ ಅಪ್ರಾಪ್ತ ವಾಹನ ಚಾಲಕರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ವಾಹನ ಕಾಯ್ದೆಯಂತೆ 18 ವರ್ಷ ವಯಸ್ಸಿನೊಳಗಿನವರು ವಾಹನ ಚಲಾಯಿಸುವುದು ಹಾಗೂ ಅಪ್ರಾಪ್ತರಿಗೆ ವಾಹನ ನೀಡುವುದು ಅಪರಾಧ. ಸಂಚಾರಿ ನಿಯಮಗಳ ತಿಳುವಳಿಕೆ ಹಾಗೂ ಅಗತ್ಯ ಚಾಲನಾ ಪರವಾನಗಿ ಪಡೆಯದ ಹೊರತು ಅವರು ವಾಹನ ಚಲಾಯಿಸದಂತೆ ಪೋಷಕರು ಎಚ್ಚರಿಕೆವಹಿಸಬೇಕು ಎಂದು ಹೇಳಿದರು.
ಅಪ್ರಾಪ್ತರು ಅಡ್ಡಾದಿಡ್ಡಿ ವಾಹನ ಚಲಾಯಿಸುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಶಾಲಾ, ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ ಪಾಲಕರು ಯಾವುದೇ ಕಾರಣಕ್ಕೂ ಪರವಾನಗಿ ಇಲ್ಲದೆ ದ್ವಿಚಕ್ರ ವಾಹನ, ಕಾರು ಚಲಾಯಿಸಲು ಬಿಡಬಾರದು. ನಿಯಮ ಉಲ್ಲಂಘಿಸಿ ಅಪ್ರಾಪ್ತರಿಗೆ ವಾಹನ ಕೊಟ್ಟರೆ ಪಾಲಕರು ಹಾಗೂ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
20ಕ್ಕೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಅಪ್ರಾಪ್ತರ ಪಾಲಕರನ್ನು ಕರೆಸಿ ಕಾನೂನು ಪಾಠ ಹೇಳಿಕೊಟ್ಟರು.
ಈ ಸಂದರ್ಭದಲ್ಲಿ ನಗರ ಠಾಣೆ ಪಿ.ಎಸ್.ಐ ವೇಣುಗೋಪಾಲ್, ಸಿಬ್ಬಂದಿ ನಟೇಶ್, ನವೀನ್, ಚೀತಾ ರಾಜೇಶ್, ಮೇಘ, ಪ್ರೇಮ ಹಾಜರಿದ್ದರು.