ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿನ ಸರ್ಕಾರಿ ಕುಂಟೆ ಜಾಗದಲ್ಲಿ ಅತಿಕ್ರಮವಾಗಿ ಓಂ ಶಕ್ತಿ ದೇವಾಲಯ ನಿರ್ಮಿಸಲು ಕೆಲವರು ಸಿದ್ದತೆಗಳನ್ನು ನಡೆಸಿದ್ದರು. ಅಲ್ಲಿ ತಾತ್ಕಾಲಿಕವಾಗಿ ಚಪ್ಪರ ಹಾಕಿ ಬಾಳೆ ದಿಂಡು ಕಟ್ಟಿ ಫೋಟೋ ಇಟ್ಟು ಪೂಜೆ ನೆರವೇರಿಸಿದ್ದರು.
ಕಂದಾಯ ಇಲಾಖೆಯ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಿ ಜಾಗದಲ್ಲಿ ದೇವಸ್ಥಾನ ನಿರ್ಮಿಸುವುದು ತಪ್ಪು ಹಾಗಾಗಿ ತೆಗೆಯಿರಿ ಎಂದು ಸೂಚಿಸಿದ್ದಾರೆ.
ಆದರೆ ಓಂ ಶಕ್ತಿ ದೇವಾಲಯ ನಿರ್ಮಿಸಲು ಮುಂದಾಗಿದ್ದ ಕೆಲ ಮಹಿಳೆಯರು ಒಟ್ಟುಗೂಡಿ ಪೊಲೀಸರು ಹಾಗೂ ಸಿಬ್ಬಂದಿ ವಿರುದ್ದ ಹರಿಹಾಯ್ದಿದ್ದು ನಾವು ದೇವಾಲಯವನ್ನು ಕಟ್ಟುತ್ತೇವೆ, ಇಲ್ಲಿ ಏನನ್ನೂ ತೆರವುಗೊಳಿಸಲು ಬಿಡೊಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಎಷ್ಟೆ ಮನವೊಲಿಸಿದರೂ ಮಹಿಳೆಯರು ಅಲ್ಲಿಂದ ಸ್ಥಳ ಬಿಟ್ಟು ಕದಲಿಲ್ಲ. ಈ ಬೆಳವಣಿಗೆ ನಂತರ ಆರ್‌ಆರ್‌ಟಿ ಶಿರಸ್ತೇದಾರ್ ಕೆ.ಎನ್.ಎಂ.ಮಂಜುನಾಥ್ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ, ದೇವರಮಳ್ಳೂರು ಗ್ರಾಮ ಪಂಚಾಯಿತಿ ಪಿಡಿಒ ಸುಧಾಮಣಿ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸ್ ಸಿಬ್ಬಂದಿ ಜಂಟಿ ಕಾರ‍್ಯಾಚರಣೆ ನಡೆಸಿದರು.
ಓಂ ಶಕ್ತಿ ದೇವಾಲಯ ನಿರ್ಮಾಣಕ್ಕೆ ನಿರ್ಮಿಸಿದ್ದ ಚಪ್ಪರ ಕಿತ್ತು ಕೆಡವಲಾಯಿತು. ಅಷ್ಟೆ ಅಲ್ಲ ಸರ್ಕಾರಿ ಕುಂಟೆಯ 1.18 ಎಕರೆ ಜಮೀನಿನಲ್ಲಿ ಇದ್ದ ಇತರೆ ಅಲ್ಲ ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಿಸಿ ಬೀಗ ಜಡಿದಿದ್ದಾರೆ.
ಕುಂಟೆಯ ಜಾಗದಲ್ಲಿವೆ ಎನ್ನಲಾದ ಎಲ್ಲ ಅಂಗಡಿಗಳನ್ನೂ ತಾಲ್ಲೂಕು ಆಡಳಿತ ವಶಕ್ಕೆ ಪಡೆದು ಬೀಗ ಹಾಕಿದ್ದು ಕುಂಟೆಯ ಸುತ್ತಲೂ ಟ್ರಂಚ್ ನಿರ್ಮಾಣ ಕಾರ‍್ಯವನ್ನು ನಡೆಸಲಾಯಿತು. ಸೋಮವಾರ ಸರ್ವೆ ಕಾರ‍್ಯ ನಡೆಸಿ ಸರ್ಕಾರಿ ಕುಂಟೆಯ ಅಷ್ಟೂ ಜಾಗದಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi