
Sidlaghatta : ಮಾನವ ಕಳ್ಳಸಾಗಣೆ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯವಿದೆ. ಸಾಮಾನ್ಯವಾಗಿ ಉದ್ಯೋಗ ಗಿಟ್ಟಿಸುವ ಅಥವಾ ಹೇಗಾದರೂ ಬದುಕು ಕಟ್ಟಿಕೊಳ್ಳುವ ಭರವಸೆಯಲ್ಲಿ ಜನರು ಸುಲಭವಾಗಿ ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಲುಕುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾದೀಶರಾದ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ನಗರದ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ವ್ಯಾಪ್ತಿಯ ಎಲ್ಲಾ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳಸಾಗಣೆ ತಡೆ ದಿನಾಚರಣೆ ಹಾಗು ಕಾರ್ಮಿಕರಿಗೆ ಇರುವ ಸೌಲಭ್ಯಗಳ ಬಗ್ಗೆ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣುಮಕ್ಕಳು ಲೈಂಗಿಕ ಶೋಷಣೆಗೆ ಸಂಬಂಧಿಸಿದ ಕಳ್ಳಸಾಗಣೆ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಬಲವಂತದ ಗುಲಾಮಗಿರಿಗೆ ಅನಾಥ ಮತ್ತು ಬಡಕುಟುಂಬದ ಮಕ್ಕಳು, ಅಂಗಾಂಗ ದಂಧೆಗೆ ಅಸಹಾಯಕ ವೃದ್ಧರು ಗುರಿಯಾಗುತ್ತಿದ್ದಾರೆ. ಕಳ್ಳಸಾಗಣೆಗೆ ಸಿಲುಕುವ ಜನರ ಬದುಕು ಬಹುಬೇಗ ಛಿದ್ರವಾಗುತ್ತದೆ ಎಂದು ನುಡಿದರು.
ಮಾನವ ಕಳ್ಳಸಾಗಣೆ ಮಾಡುವವರಿಗೆ 7 ವರ್ಷದವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಕಾನೂನಿನ ಮೂಲಕವೇ ಈ ಜಾಲ ನಿಗ್ರಹಿಸಲು ಸಾಧ್ಯವಾಗುವುದಿಲ್ಲ. ಸರ್ಕಾರೇತರ ಸಂಘ-ಸಂಸ್ಥೆಗಳು ಮತ್ತು ಸೇವಾ ಮನೋಭಾವ ಹೊಂದಿದ ಜನರ ಬೆಂಬಲದ ಅಗತ್ಯವಿದೆ ಎಂದರು.
14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕಾರಣಕ್ಕೂ ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ, 14 ರಿಂದ 18 ರೊಳಗಿನ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಕಾದಲ್ಲಿ ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆಯಬೇಕು. 18 ವರ್ಷದ ಮೇಲ್ಪಟ್ಟವರಿಗೆ ಮಾತ್ರ ಉದ್ಯೋಗ ನೀಡಬೇಕು ಎಂಬುದು ಕಾನೂನಾತ್ಮಕವಾಗಿದೆ. ಯಾವುದೇ ಪುರುಷ ಅಥವಾ ಮಹಿಳೆಯರಿಗೆ ಉದ್ಯೋಗ ನೀಡಿದಲ್ಲಿ ಕನಿಷ್ಠ 581 ರೂಪಾಯಿ ವೇತನ ನೀಡಬೇಕೆಂಬ ಹಕ್ಕುಗಳು ನಿರ್ಧರಿಸಲಾಗಿದೆ. ಕಾರ್ಮಿಕರು ತಮ್ಮ ಹಕ್ಕುಗಳನ್ನು ಕೇಳಿ ಪಡೆಯಬೇಕು ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮನೋಹರ್ ಮಾತನಾಡಿ, ಶಿಡ್ಲಘಟ್ಟ ಕ್ಷೇತ್ರವು ರೇಷ್ಮೆ ಮತ್ತು ಹಾಲಿಗೆ ಪ್ರಸಿದ್ಧಿಯಾಗಿದ್ದು ಇಲ್ಲಿನ ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಬಹುತೇಕ ಕಾರ್ಮಿಕರಲ್ಲಿ ಅಸ್ಥಮಾ, ಕ್ಯಾನ್ಸರ್, ಚರ್ಮರೋಗ, ಉಸಿರಾಟದ ತೊಂದರೆ, ಕೆಮ್ಮು, ಕಫ ಮತ್ತು ಹೃದಯ ಸಂಬಂಧಿತ ಕಾಯಿಲೆಗಳು ಸಾಮಾನ್ಯವಾಗಿ ಕಂಡು ಬರುತ್ತಿದ್ದು ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನವಹಿಸಬೇಕು ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರಂಜಿತಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಮಿಕ ನಿರೀಕ್ಷಕಿ ವಿಜಯಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವಿದ್ಯಾ ಎ.ವಸ್ತ್ರದ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್, ಮನೋವೈದ್ಯ ಹೇಮಂತ್‌ಕುಮಾರ್, ಆಯುಷ್ ವೈದ್ಯ ಡಾ.ವಿಜಯ್ ಕುಮಾರ್, ಅಂಚೆ ಇಲಾಖೆಯ ನಂದೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.