Sidlaghatta (Sugaturu) : ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ವೈಯಕ್ತಿಕ ನೈರ್ಮಲ್ಯವೇ ಮೊದಲ ಮೆಟ್ಟಿಲು. ಯೋಗಾಭ್ಯಾಸವು ದೈಹಿಕ ಕಸರತ್ತು ಆಗಿರದೇ ದೇಹ ಮತ್ತು ಮನಸ್ಸನ್ನು ಶುದ್ಧವಾಗಿಡುವ ಪ್ರಕ್ರಿಯೆಯಾಗಿದೆ. ವಿದ್ಯಾರ್ಥಿಗಳು ದಿನನಿತ್ಯದ ಆಚಾರ-ವಿಚಾರಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಶುದ್ಧವಾದ ದೇಹ ಮತ್ತು ಪರಿಸರದಲ್ಲಿ ಮಾತ್ರ ಸತ್ ಚಿಂತನೆಗಳು ಮೂಡಲು ಸಾಧ್ಯ. ಯೋಗಾಭ್ಯಾಸವು ಮಕ್ಕಳಲ್ಲಿ ಆಂತರಿಕ ಶಿಸ್ತನ್ನು ಮೂಡಿಸುವ ಮೂಲಕ ಸ್ವಚ್ಛ ಹಾಗೂ ಆರೋಗ್ಯಕರ ಜೀವನಶೈಲಿಗೆ ಪ್ರೇರಣೆ ನೀಡುತ್ತದೆ ಎಂದು ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ ಶಾಲೆಯ ಸುಂದರಲಾಲ್ ಬಹುಗುಣ ಇಕೋಕ್ಲಬ್ ಹಾಗೂ ಬೆಂಗಳೂರಿನ ಎಸ್ ವ್ಯಾಸ ಯೋಗ ವಿಶ್ವವಿದ್ಯಾಲಯದ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ “ಯೋಗಸಪ್ತಾಹ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾಭ್ಯಾಸದಲ್ಲಿ ಯೋಗದ ಅವಶ್ಯಕತೆ:
ಇಂದಿನ ತೀವ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಯೋಗ ಅತ್ಯಂತ ಅವಶ್ಯಕ ಪಠ್ಯೇತರ ಚಟುವಟಿಕೆಯಾಗಿದೆ. ಪರೀಕ್ಷೆಯ ಒತ್ತಡ, ಆತಂಕಗಳನ್ನು ದೂರ ಓಡಿಸಿ, ನೆನಪಿನ ಶಕ್ತಿಯನ್ನು ವೃದ್ಧಿಸುವ ಅದ್ಭುತ ಶಕ್ತಿ ಯೋಗಕ್ಕಿದೆ. ದಿನಕ್ಕೆ ಕೇವಲ ಹದಿನೈದು ನಿಮಿಷಗಳ ಪ್ರಾಣಾಯಾಮ ಮತ್ತು ಧ್ಯಾನವು ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ದುಪ್ಪಟ್ಟು ಮಾಡುತ್ತದೆ. ನಿರಂತರ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳು ಓದಿನಲ್ಲಿ ಮಾತ್ರವಲ್ಲದೆ, ಕ್ರೀಡೆ ಮತ್ತು ಇತರ ಸೃಜನಶೀಲ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿ ಇರಬಹುದು ಎಂದು ವಿವರಿಸಿದರು.
ಒಂದು ವಾರ ಕಾಲ ಯೋಗಾಭ್ಯಾಸ:
ಶಾಲೆಯಲ್ಲಿ ಪ್ರತಿ ಶನಿವಾರವೂ ಯೋಗ ತರಗತಿ ನಡೆಯಲಿದ್ದು, ಈ ವಾರಪೂರ್ತಿ ಬೆಳಿಗ್ಗೆ ಒಂದು ಗಂಟೆ ಕಾಲ ಸರಳಯೋಗ, ಮಧ್ಯಾಹ್ನ ಒಂದು ಅವಧಿ ಉಪನ್ಯಾಸ, ಪ್ರಾತ್ಯಕ್ಷಿಕೆ ಪ್ರದರ್ಶನ ನಡೆಯಲಿದೆ. ಇದೇ ತಿಂಗಳ 21 ರಂದು ಸಪ್ತಾಹದ ಸಮಾರೋಪ ನಡೆಯಲಿದೆ ಎಂದು ಅವರು ತಿಳಿಸಿದರು.
ಆರೋಗ್ಯಕರ ಜೀವನಕ್ಕೆ ಯೋಗದ ಆವಶ್ಯಕತೆ:
ವಿಶ್ವವಿದ್ಯಾಲಯದ ಸ್ವಯಂಸೇವಕಿ ಕೃತಿಕಾ ಮಾತನಾಡಿ, ಇಂದಿನ ಆಧುನಿಕ ಹಾಗೂ ಒತ್ತಡದ ಜೀವನಶೈಲಿಯಲ್ಲಿ ಯೋಗವು ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ. ವಿದ್ಯಾರ್ಥಿ ದೆಸೆಯಲ್ಲೇ ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಏಕಾಗ್ರತೆ, ನೆನಪಿನ ಶಕ್ತಿ ಹಾಗೂ ದೈಹಿಕ ಸದೃಢತೆ ಹೆಚ್ಚುತ್ತದೆ. ಪ್ರಕೃತಿಯನ್ನು ಪ್ರೀತಿಸುವ ಇಕೋಕ್ಲಬ್, ಮಾನವನ ಆಂತರಿಕ ಪ್ರಕೃತಿಯನ್ನು ಸಮತೋಲನದಲ್ಲಿಡುವ ಯೋಗವನ್ನು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಎಸ್-ವ್ಯಾಸ ವಿಶ್ವವಿದ್ಯಾಲಯದ ತರಬೇತಿ:
ಬೆಂಗಳೂರಿನ ಹೆಸರಾಂತ ಎಸ್-ವ್ಯಾಸ ಯೋಗ ವಿಶ್ವವಿದ್ಯಾಲಯದ ನುರಿತ ಸ್ವಯಂಸೇವಕರಾದ ಕೃತಿಕಾ, ಹರಿಪ್ರಿಯಾ ಮತ್ತು ಹಿರಣ್ಯ ಅವರು ವಿದ್ಯಾರ್ಥಿಗಳಿಗೆ ಸರಳ ಪ್ರಾಣಾಯಾಮ, ಸೂರ್ಯನಮಸ್ಕಾರ ಮತ್ತು ಆಸನಗಳ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ದಿನನಿತ್ಯದ ಅಭ್ಯಾಸದಿಂದ ಆಗುವ ಧನಾತ್ಮಕ ಬದಲಾವಣೆಗಳು, ವೈಯಕ್ತಿಕ ನೈರ್ಮಲ್ಯಗಳ ಕುರಿತು ಉಪನ್ಯಾಸ ನಡೆಯಿತು.
ಮುಖ್ಯ ಶಿಕ್ಷಕಿ ಪದ್ಮಶ್ರೀ, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಹಾಜರಿದ್ದರು.








