ಇಬ್ಬನಿಯ ನೀರಿನಲ್ಲಿ ಬೆಳೆದ ಕ್ಯಾಪ್ಸಿಕಮ್‌ ಬಾಂಗ್ಲಾದೇಶಕ್ಕೆ ರಫ್ತು

- Advertisement -
- Advertisement -

ಒಂದೆಡೆ ಮಳೆಯ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಆಳಕ್ಕಿಳಿಯುತ್ತಿದ್ದರೆ, ಮತ್ತೊಂದೆಡೆ ಮುಂಜಾನೆ ಹೊತ್ತಿನಲ್ಲಿ ಮಂಜು ಆವರಿಸುತ್ತಾ ಮಳೆಗಾಲ ಮುಗಿದಿದೆ ಎಂಬ ಮುನ್ಸೂಚನೆ ನೀಡುತ್ತಿದೆ. ಇಂಥಹ ಕಷ್ಟಕರ ಸನ್ನಿವೇಶದಲ್ಲೂ ತಾಲ್ಲೂಕಿನ ನಾರಾಯಣದಾಸರಹಳ್ಳಿಯ ರೈತ ದೊಡ್ಡಮುನಿಯಪ್ಪನವರ ಮಗ ರೆಡ್ಡಪ್ಪ ಬೆಳಿಗ್ಗೆ ಆವರಿಸುವ ಇಬ್ಬನಿಯಿಂದಲೇ ನೀರು ಹಿಡಿದಿಟ್ಟು ಬಣ್ಣ ಬಣ್ಣದ ಕ್ಯಾಪ್ಸಿಕಮ್‌(ದಪ್ಪ ಮೆಣಸಿನಕಾಯಿ) ಬೆಳೆಯುತ್ತಿದ್ದಾರೆ. ಇವರು ಬೆಳೆಯುತ್ತಿರುವ ಕ್ಯಾಪ್ಸಿಕಮ್‌ ಬಾಂಗ್ಲಾದೇಶಕ್ಕೂ ರಫ್ತಾಗಿದೆ.
ವಾರ್ಷಿಕ ಮಳೆ ಪ್ರಮಾಣ ಕಡಿಮೆಯಾಗುತ್ತಿರುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ಪಾಲಿ ಹೌಸ್‌ ನಿರ್ಮಿಸಲು ಸಹಾಯಧನ ನೀಡುತ್ತಿದ್ದು, ನಾರಾಯಣದಾಸರಹಳ್ಳಿಯ ರೈತ ರೆಡ್ಡಪ್ಪ ಅರ್ಧ ಎಕರೆಯಲ್ಲಿ ಪಾಲಿಹೌಸ್‌ ನಿರ್ಮಿಸಿಕೊಂಡು ಅದರ ಮೇಲೆ ಬೀಳುವ ಇಬ್ಬನಿ, ಮಳೆ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸುತ್ತಿದ್ದಾರೆ.
ಸುಮಾರು ಒಂದೂಕಾಲು ಲಕ್ಷ ರೂಪಾಯಿಗಳನ್ನು ವ್ಯಯಿಸಿ 18 ಮೀಟರ್‌ ಉದ್ದ ಮತ್ತು ಅಗಲದ ಹಾಗೂ 11 ಅಡಿ ಆಳದ ಕೃಷಿ ಹೊಂಡವನ್ನು ನಿರ್ಮಿಸಿಕೊಂಡಿರುವ ಇವರು ಬಿಸಿಲು ಬೀಳದಂತೆ, ಯಾವುದೇ ಪ್ರಾಣಿ, ಕಸ ಬೀಳದಂತೆ ಕಂಬಿಯನ್ನು ಕಟ್ಟಿ ಶೀಟ್‌ ಹೊದಿಸಿ ಹೊಂಡವನ್ನು ರಕ್ಷಿಸಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ನಾರಾಯಣದಾಸರಹಳ್ಳಿಯ ರೈತ ರೆಡ್ಡಪ್ಪ ಮಳೆ ಹಾಗೂ ಇಬ್ಬನಿಯ ನೀರನ್ನು ಸಂಗ್ರಹಿಸಲು ಮಾಡಿರುವ ಕೃಷಿ ಹೊಂಡ.
ಶಿಡ್ಲಘಟ್ಟ ತಾಲ್ಲೂಕಿನ ನಾರಾಯಣದಾಸರಹಳ್ಳಿಯ ರೈತ ರೆಡ್ಡಪ್ಪ ಮಳೆ ಹಾಗೂ ಇಬ್ಬನಿಯ ನೀರನ್ನು ಸಂಗ್ರಹಿಸಲು ಮಾಡಿರುವ ಕೃಷಿ ಹೊಂಡ.

‘ಕೊಳವೆ ಬಾವಿಯನ್ನು ನಾವು ಅವಲಂಬಿಸಿಯೇ ಇಲ್ಲ. ಬೆಳಗಿನ ಹೊತ್ತು ಆವರಿಸುವ ಮಂಜಿನಿಂದಲೇ ಸುಮಾರು 100 ರಿಂದ 200 ಲೀಟರ್‌ ನೀರು ಸಂಗ್ರಹವಾಗುತ್ತದೆ. ಹೆಚ್ಚು ಮಂಜು ಆವರಿಸಿದ ದಿನ 500 ಲೀಟರ್‌ ವರೆಗೂ ನೀರು ಸಂಗ್ರಹಣೆಯಾಗುತ್ತದೆ. ಮಳೆ ಬಿದ್ದರಂತೂ ಸಂಪೂರ್ಣ ನೀರು ಕೃಷಿ ಹೊಂಡ ಸೇರುತ್ತದೆ. ಕೊಳವೆ ಬಾವಿಯ ನೀರಿಗಿಂತ ಆಗಸದ ಪ್ರಕೃತಿಯ ನೀರಿನಲ್ಲಿ ಲವಣಾಂಶಗಳು ಹೆಚ್ಚಿರುತ್ತವೆ. ಪಾಲಿಹೌಸ್‌ನಲ್ಲಿ ಬೆಳೆಯುತ್ತಿರುವ ಕ್ಯಾಪ್ಸಿಕಮ್‌ ಬೆಳೆಗೆ ಬೆಳಿಗ್ಗೆ ಮತ್ತು ಸಂಜೆ ಐದೈದು ನಿಮಿಷ ನೀರು ಹಾಯಿಸಿದರೆ ಸಾಕು’ ಎಂದು ತಮ್ಮ ನೀರಿನ ಸದ್ಭಳಕೆಯ ಬಗ್ಗೆ ರೆಡ್ಡಪ್ಪ ವಿವರಿಸುತ್ತಾರೆ.
‘ಅರ್ಧ ಎಕರೆ ಪ್ರದೇಶದಲ್ಲಿ 15 ಲಕ್ಷ ರೂಗಳು ಬ್ಯಾಂಕ್‌ನಲ್ಲಿ ಸಾಲ ಮಾಡಿ ಪಾಲಿ ಹೌಸ್‌ ನಿರ್ಮಿಸಿದೆ. ಸರ್ಕಾರ 11 ಲಕ್ಷ 75 ಸಾವಿರ ರೂಗಳು ಸಹಾಯಧನ ನೀಡಿದೆ. ಮೊದಲ ಬೆಳೆ ಸೌತೇಕಾಯಿಯನ್ನು ಹಾಕಿದ್ದೆ. ಈಗ ಕೆಂಪು ಮತ್ತು ಹಳದಿ ಬಣ್ಣದ ಕ್ಯಾಪ್ಸಿಕಮ್‌ ಹಾಕಿದ್ದೇನೆ. ವರಮಹಾಲಕ್ಷ್ಮಿ ಹಬ್ಬದ ದಿನ ನಾಟಿ ಮಾಡಿದ್ದು, ಕಳೆದ ಶುಕ್ರವಾರ ಮೊದಲ ಫಸಲು ಬಂದಿತು. 280 ಕೆಜಿ ಆಯಿತು. ಬಾಂಗ್ಲಾದೇಶಕ್ಕೆ ರಫ್ತು ಮಾಡುವವರು ಒಂದು ಕೆಜಿಗೆ 20 ರೂಗಳಂತೆ ತೋಟಕ್ಕೇ ಬಂದು ಕೊಂಡರು. ಎಂಟರಿಂದ ಹತ್ತು ತಿಂಗಳು ಈ ಬೆಳೆ ಬರುತ್ತದೆ. ವಾರಕ್ಕೊಮ್ಮೆ ಅಥವಾ ಹತ್ತು ದಿನಕ್ಕೊಮ್ಮೆ ಹಣ್ಣು ಕೀಳುತ್ತೇವೆ. ಸಾವಯವ ಪದ್ಧತಿಯಲ್ಲಿ ಬೆಳೆಸುತ್ತಿರುವುದರಿಂದ ರಫ್ತು ಮಾಡುವವರು ತೋಟಕ್ಕೇ ಬಂದು ಕೊಳ್ಳುತ್ತಿದ್ದಾರೆ. ಪಾಲಿ ಹೌಸ್‌ ಪದ್ಧತಿಯಿಂದ ಇಳುವರಿ ಮತ್ತು ಗುಣಮಟ್ಟ ಹೆಚ್ಚುವುದಲ್ಲದೆ ರೋಗಗಳು ಕಡಿಮೆ. ನೀರು ಕೂಡ ಉಳಿತಾಯ’ ಎಂದು ಅವರು ಹೇಳಿದರು.
‘ಈಗ ಮಳೆ ಇಲ್ಲದೆ ತಾಲ್ಲೂಕು ಬರಗಾಲವನ್ನು ಎದುರಿಸುತ್ತಿದೆ. ಸರ್ಕಾರ ಪಾಲಿಹೌಸ್‌ ನಿರ್ಮಾಣಕ್ಕೆ ಸಹಾಯಧನ ನೀಡುವುದು ನಿಲ್ಲಿಸಿರುವುದನ್ನು ಹಿಂಪಡೆಯಬೇಕು. ಪಾಲಿಹೌಸ್‌ ನಿರ್ಮಾಣವಾದಂತೆ ಅತ್ಯಂತ ಕಡಿಮೆ ನೀರನ್ನು ಬಳಸಿ ಉತೃಷ್ಟ ಮತ್ತು ಹೆಚ್ಚು ಫಸಲನ್ನು ನಮ್ಮ ರೈತರು ಬೆಳೆಯಲು ಸಾಧ್ಯವಾಗುತ್ತದೆ’ ಎಂದು ತಲಕಾಯಲಬೆಟ್ಟ ಸಾವಯವ ಕೃಷಿ ಪರಿವಾರದ ರಾಮಾಂಜಿನಪ್ಪ ಹೇಳುತ್ತಾರೆ
ಜೀವಾಮೃತ ಮತ್ತು ಸಾವಯವ ಔಷಧಿ:ನೀರಿನೊಂದಿಗೆ ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು, ಮಣ್ಣು, ಸಗಣಿ, ಗಂಜಲದ ಮಿಶ್ರಣವನ್ನು ಜೀವಾಮೃತವೆನ್ನುತ್ತಾರೆ. ಒಂದೊಂದು ಗಿಡಕ್ಕೂ ಒಂದೊಂದು ಲೋಟ ಜೀವಾಮೃತವನ್ನು 15 ದಿನಗಳಿಗೊಮ್ಮೆ ನೀಡುತ್ತಾರೆ. ಜೀವಾಮೃತ ಉಪಯೋಗಿಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎನ್ನುತ್ತಾರೆ ರೆಡ್ಡಪ್ಪ.
ಟ್ರಿಪ್ಸ್‌, ಮೈಟ್ಸ್‌ ಮುಂತಾದ ಕೀಟಗಳನ್ನು ತಡೆಗಟ್ಟಲು ಅರ್ಧ ಲೀಟರ್‌ ನಿಂಬೆ ರಸಕ್ಕೆ ಎರಡು ನಾಟಿ ಮೊಟ್ಟೆಯನ್ನು ಹಾಕಿ 15 ದಿನ ಕೊಳೆಸಿ ಒಂದು ಲೀಟರ್‌ ನೀರಿಗೆ 4 ಮಿಲಿಯಂತೆ ಮಿಶ್ರಣ ಮಾಡಿಕೊಂಡು ಗಿಡಕ್ಕೆ ಸಿಂಪಡಿಸುತ್ತಾರೆ. ಬೂದಿ ರೋಗಕ್ಕೆ 15 ಲೀಟರ್‌ ನೀರಿಗೆ ಒಂದು ಕೆಜಿ ಬೂದಿಯನ್ನು ಮಿಶ್ರಣ ಮಾಡಿಕೊಂಡು ಸಿಪಡಿಸುತ್ತಾರೆ. ಹುಳಿ ಮಜ್ಜಿಗೆಯನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪಡಿಸಿದರೂ ಬೂದಿ ರೋಗ ಇಲ್ಲವಾಗುತ್ತದೆ ಎಂಬುದು ರೆಡ್ಡಪ್ಪ ಅವರ ಅನುಭವದ ನುಡಿ.
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!