ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ತಾಲ್ಲೂಕಿನ ಯಾವ ಗ್ರಾಮಗಳಲ್ಲಿ ಅತಿ ಹೆಚ್ಚು ಸಮಸ್ಯೆಯಿದೆಯೆಂದು ಸ್ವತಃ ಪಿಡಿಒಗಳು ಪರಿಶೀಲಿಸಿ ತಾಲ್ಲೂಕು ಪಂಚಾಯಿತಿ ಇಓ ಅವರಿಗೆ ಕೂಡಲೇ ಮಾಹಿತಿ ನೀಡಬೇಕೆಂದು ಶಾಸಕ ವಿ.ಮುನಿಯಪ್ಪ ಹೇಳಿದರು.
ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಥಮ ಆದ್ಯತೆ ನೀಡಬೇಕೆಂದು ಅವರು ತಿಳಿಸಿದರು.
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಈಗಾಗಲೇ ಕೊರೆಸಿರುವ ಕೊಳವೆಬಾವಿಗಳು ಬತ್ತಿಹೋಗುತ್ತಿವೆ. ಗ್ರಾಮ ಪಂಚಾಯಿತಿ ಪಿಡಿಒ ಗಳು ಗ್ರಾಮದಲ್ಲಿರುವ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಬೇಕು. ತೀರಾ ಸಮಸ್ಯೆಯಿದ್ದರೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಜನಗಳಿಗೆ ಅನುಕೂಲ ಕಲ್ಪಿಸಬೇಕೆಂದರು.
ಇ.ತಿಮ್ಮಸಂದ್ರ, ಮೇಲೂರು, ಮಳ್ಳೂರು, ವೈ.ಹುಣಸೇನಹಳ್ಳಿ, ಆನೂರು, ತುಮ್ಮನಹಳ್ಳಿ, ದಿಬ್ಬೂರಹಳ್ಳಿ, ಕುಂಬಿಗಾನಹಳ್ಳಿ, ಕುಂದಲಗುರ್ಕಿ, ಚೀಮಂಗಲ, ಅಬ್ಲೂಡು, ಹಂಡಿಗನಾಳ, ಜಂಗಮಕೋಟೆ, ಹೊಸಪೇಟೆ, ಎಸ್.ದೇವಗಾನಹಳ್ಳಿ, ಸಾದಲಿ, ತಲಕಾಯಲಬೆಟ್ಟ, ಗಂಜಿಗುಂಟೆ, ಮಳಮಾಚನಹಳ್ಳಿ, ಕೊತ್ತನೂರು, ನಾಗಮಂಗಲ, ಪಲೀಚೇರ್ಲು, ಬಶೆಟ್ಟಹಳ್ಳಿ, ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.
ವಲಸೆ ಬಂದಿರುವ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿ. ಪಡಿತರ ವಿತರಿಸಲು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ. ಓಟಿಪಿ ಇಲ್ಲದೇ ಪಡಿತರದಾರರ ಸಹಿ ಪಡೆದುಕೊಂಡು ಪಡಿತರ ವಿತರಿಸಲು ಸರ್ಕಾರ ಆದೇಶಿಸಿದ್ದರೂ ಸಹ ಆಹಾರ ಇಲಾಖೆಯ ಅಧಿಕಾರಿಗಳು ಪಾಲಿಸುತ್ತಿಲ್ಲವೆಂದು ದೂರು ಸಾಮಾನ್ಯವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಿ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಕೆ.ಅರುಂಧತಿ, ತಾಲೂಕು ಪಂಚಾಯಿತಿ ಇಓ ಶಿವಕುಮಾರ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಚಂದ್ರಪ್ಪ, ನಗರಸಭೆಯ ಪೌರಾಯುಕ್ತ ತ್ಯಾಗರಾಜ್, ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯ ಇಲಾಖೆಯ ಎಇಇ ಲೋಕೇಶ್, ಬಿಇಓ ಆರ್.ಶ್ರೀನಿವಾಸ್, ತಾಲ್ಲೂಕು ಕೃಷಿ ಅಧಿಕಾರಿ ಡಾ.ಮಂಜುನಾಥ್ ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃಧ್ಧಿ ಅಧಿಕಾರಿಗಳು ಹಾಜರಿದ್ದರು.