ಕೊರೊನಾ ತಡೆಗಟ್ಟಲೆಂದು ಎಲ್ಲೆಡೆ ಲಾಕ್ ಡೌನ್ ಮಾಡಿರುವ ಪರಿಣಾಮ ರೈತರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದೆ. ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ರೈತ ಜಯರಾಮ್ ಉತ್ತಮ ಗುಣಮಟ್ಟದ ಕ್ಯಾಪ್ಸಿಕಮ್ (ದೊಣ್ಣೆ ಮೆಣಸಿನಕಾಯಿ) ಬೆಳೆದಿದ್ದು, ಸಾಗಾಣಿಕೆಗೆ ವಾಹನಗಳಿಲ್ಲದೆ, ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಕಂಗಾಲಾಗಿದ್ದಾರೆ.
ಹಂಡಿಗನಾಳದ ರೈತ ಜಯರಾಮ್ ಅವರು ಮೂರು ಎಕರೆಯಲ್ಲಿ ಕ್ಯಾಪ್ಸಿಕಮ್ (ದೊಣ್ಣೆ ಮೆಣಸಿನಕಾಯಿ) ಬೆಳೆದಿದ್ದಾರೆ. ಒಂದು ವಾರಕ್ಕೆ ಹತ್ತು ಟನ್ನಿನಷ್ಟು ಕ್ಯಾಪ್ಸಿಕಮ್ ಬೆಳೆ ಬರುತ್ತಿದೆ. ಎರಡು ಬಾರಿ ಕಿತ್ತು ಚೆನ್ನೈಗೆ ಕಳುಹಿಸಿದ್ದಾರೆ. ಈಗ ಮೂರನೇ ವಾರದ ಫಸಲು ಕಿತ್ತರೆ ಕೂಲಿ ಸಹ ಸಿಗದೆಂದು ಗಿಡದಲ್ಲಿಯೇ ಬಿಟ್ಟಿದ್ದು, ಹಣ್ಣಾಗಿ ಅವು ಉದುರುವ ಹಂತಕ್ಕೆ ಬಂದು ನಿಂತಿವೆ.
“ಮೂವತ್ತು ಸಾವಿರ ನಾರನ್ನು ನೆಟ್ಟು ದೊಣ್ಣೆ ಮೆಣಸಿನಕಾಯಿ ಗಿಡಗಳನ್ನು ಬೆಳೆದಿರುವೆ. ಶೇಡ್ ನೆಟ್, ಹನಿ ನೀರಾವರಿ, ಕೂಲಿ, ರಸಗೊಬ್ಬರ, ಔಷಧಿ ಎಲ್ಲ ಸೇರಿ ಸುಮಾರು ಹದಿನೈದು ಲಕ್ಷ ರೂ ಖರ್ಚಾಗಿದೆ. ಮೊದಲ ಬಾರಿ ಫಸಲನ್ನು ಕಿತ್ತು ಚೆನ್ನೈಗೆ ಕಳುಹಿಸಿದಾಗ 15 ರಿಂದ 20 ರೂ ಬೆಲೆ ಇತ್ತು. ಈಗ ಕೇಳುವವರೇ ಇಲ್ಲವಾಗಿದೆ. ಕೊರೊನಾ ಲಾಕ್ ಡೌನ್ ನಿಂದಾಗಿ ತೋಟಕ್ಕೆ ಔಷಧಿ, ಗೊಬ್ಬರ ತರುವುದು ಕೂಡ ಈಗ ರೈತರಿಗೆ ಕಷ್ಟವಾಗುತ್ತಿದೆ.
ಕೊರೊನಾ ಮಹಾಮಾರಿ ರೈತನನ್ನು ಬದುಕಿರುವಂತೆಯೇ ಕೊಂದುಹಾಕುತ್ತಿದೆ. ಅತ್ಯುತ್ತಮವಾಗಿ ಬೆಳೆ ಬೆಳೆದಿದ್ದರೂ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಗದೇ, ಮಾರಲಾಗದೇ ಕಂಗಾಲಾಗಿದ್ದೇನೆ. ತನ್ನ ಶ್ರಮದ ಕೂಲಿ ಸಹ ರೈತನಿಗೆ ಈಗ ಸಿಗದಾಗಿದೆ. ನಮಗೆ ಪರಿಹಾರವಾಗಲೀ ಸಹಾಯಧನವಾಗಲೀ ಬೇಕಾಗಿಲ್ಲ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಟ್ಟರೆ ಸಾಕು. ನಾವು ಹಾಕಿರುವ ಬಂಡವಾಳದ ಸ್ವಲ್ಪ ಭಾಗವನ್ನಾದರೂ ಹಿಂದಕ್ಕೆ ಪಡೆಯಬಹುದು” ಎಂದು ರೈತ ಜಯರಾಮ್ ತಮ್ಮ ಕಷ್ಟವನ್ನು ವಿವರಿಸಿದರು.
“ಕೊರೊನಾ ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಮಾಡಿರುವುದರಿಂದ ತೊಂದರೆಗೊಳಗಾದ ಬಡ ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಅನೇಕ ದಾನಿಗಳು ನೆರವಾಗುತ್ತಿದ್ದಾರೆ. ಆ ದಾನಿಗಳು ನಮ್ಮಂತಹ ರೈತರ ಬೆಳೆಗಳನ್ನು ಕನಿಷ್ಠ ಬೆಲೆಯಾದರೂ ಕೊಟ್ಟು ಖರೀದಿಸಿ, ದಾನ ಮಾಡಲಿ. ಇದರಿಂದ ಕಷ್ಟದಲ್ಲಿರುವ ರೈತರಿಗೂ ನುಕೂಲವಾಗುತ್ತದೆ” ಎಂದು ಅವ್ಬರು ಹೇಳಿದರು.