ಚಿಕ್ಕದಾಸರಹಳ್ಳಿಯ ಸಮೀಪದ ಬ್ಯಾಟರಾಯಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಾಂಗೋಪವಾಗಿ ನಡೆಯಿತು. ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ಪಟ್ಟಣದಿಂದ ಆಗಮಿಸಿದ್ದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.
ರಥೋತ್ಸವ ಅಂಗವಾಗಿ ದೇಗುಲದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಬತ್ತಾಸು, ಸಿಹಿ ಖಾರದ ತಿಂಡಿಗಳು, ವಿವಿಧ ಹಣ್ಣುಗಳು, ತಂಪು ಪಾನೀಯ, ಕರಿದ ತಿಂಡಿ ತಿನಿಸು, ಮಕ್ಕಳಿಗೆ ಆಟಿಕೆ, ಅಚ್ಚೆ ಹಾಕುವವರು, ಬಳೆಗಾರರು ಉತ್ಸವಕ್ಕೆ ರಂಗು ತುಂಬಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಹೆಸರು ಬೇಳೆ ವಿತರಿಸಲಾಯಿತು. ವಿವಿಧ ಗ್ರಾಮಸ್ಥರು ಹೆಸರುಬೇಳೆ ಪಾನಕ ವಿತರಿಸಿದರು.
ವಿಜಯನಗರ ಕಾಲದ ಬ್ಯಾಟರಾಯಸ್ವಾಮಿ ದೇವಾಲಯವು ಎತ್ತರವಾದ ಗುಡ್ಡದ ಮೇಲಿರುವುದರಿಂದ ಕಂಗೊಳಿಸುತ್ತಿತ್ತು. ‘ಶಿಲ್ಪಕಲಾ ದೃಷ್ಟಿಯಿಂದ ಅತ್ಯಂತ ಆಕರ್ಷಕ ಕಲಾನೈಪುಣ್ಯತೆ ಹೊಂದಿದೆ. ಬ್ಯಾಟರಾಯನ ಉತ್ಸವಮೂರ್ತಿ ಜತೆಗೆ ಶ್ರೀದೇವಿ ಭೂದೇವಿ ಅವರ ಸುಂದರ ಶಿಲ್ಪಗಳಿವೆ’ ಎಂದು ಕನ್ವೀನರ್ ಬ್ಯಾಟರಾಯಶೆಟ್ಟಿ ತಿಳಿಸಿದರು.
‘ಪ್ರತಿ ವರ್ಷ ಕಾಮನ ಹುಣ್ಣಿಮೆಯಂದು ಇಲ್ಲಿ ರಥೋತ್ಸವ ನಡೆಯುತ್ತದೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಭಕ್ತರು ಈ ದೇವಾಲಯದಲ್ಲಿ ಪ್ರಸಾದ ಕೇಳುವುದು ರೂಢಿ. ಮನೆಗೆ ಹೆಣ್ಣು ತರಲು, ಹೆಣ್ಣು ಕೊಡಲು, ಬಾವಿ ತೋಡಲು, ಕೊಳವೆ ಬಾವಿ ಕೊರೆಸಲು, ಭೂಮಿ ಕೊಳ್ಳಲು, ಮನೆ ಕಟ್ಟಲು ಮುಂತಾದ ಶುಭ ಕಾರ್ಯಗಳಿಗೆ ಬ್ಯಾಟರಾಯಸ್ವಾಮಿಯ ಪ್ರಸಾದ ಕೇಳುತ್ತಾರೆ’ ಎಂದು ಬ್ಯಾಟರಾಯಸ್ವಾಮಿ ದೇವಾಲಯ ಧರ್ಮದರ್ಶಿ ಎಚ್.ಎನ್.ಬಚ್ಚೇಗೌಡ ಹೇಳಿದರು.
ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು.
ರಥೋತ್ಸವಕ್ಕೆ ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು. ಸೇವಾಕರ್ತರಾದ ನಾರ್ಥ್ ಈಸ್ಸ್ಟ್ ಸುರೇಶ್, ದಾಮೋಧರ್, ಡಿ.ಎಂ.ಮುನಿಯಪ್ಪ, ಎಂ.ಸಿ.ಜಗದೀಶ್, ಎಸ್.ಶ್ರೀನಿವಾಸ್, ಎನ್.ದೇವರಾಜ್, ವಿ.ಹರೀಶ್, ಎಚ್.ಎನ್.ಬಚ್ಚೇಗೌಡ, ಸಿದ್ದಬಸವಾರಾದ್ಯ, ರಾಮಾಂಜಿನಪ್ಪ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







