ತಾಲ್ಲೂಕಿನ ಮಳಮಾಚನಹಳ್ಳಿಯ ಸಮುದಾಯಭವನದಲ್ಲಿ ಬುಧವಾರ ಸಂಜೆ ತಾಲ್ಲೂಕು ಕಸಾಪ ಹಮ್ಮಿಕೊಂಡಿದ್ದ “ಗಾನಸಿರಿ” ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಬೈರೇಗೌಡ ಮಾತನಾಡಿದರು.
ನಾಟಕ, ಭಜನೆ, ಹರಿಕಥೆ, ಜಾನಪದ ಕಲೆಗಳು ಹಳ್ಳಿಗಳಲ್ಲಿ ಹಿಂದೆ ಅವಿಭಾಜ್ಯ ಅಂಗಗಳಂತಿದ್ದವು. ಈಗಿನ ಯುವ ಪೀಳಿಗೆ ಈ ಕಲೆಗಳತ್ತ ಆಕರ್ಷಿತರಾಗುತ್ತಿಲ್ಲ. ಯುವಪೀಳಿಗೆಗೆ ಗ್ರಾಮೀಣ ಕಲೆಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಹಳ್ಳಿಯಲ್ಲಿರುವ ಕಲಾವಿದರು ಯಾವುದೇ ಪ್ರಶಸ್ತಿ, ಪುರಸ್ಕಾರ, ಫಲಾಪೇಕ್ಷೆಯಿಲ್ಲದೆ ಕಲೆಯನ್ನು ಅನುಭವಿಸಿ, ಆಸ್ವಾದಿಸುತ್ತಾರೆ. ಪ್ರತಿಯೊಂದು ಹಳ್ಳಿಯಲ್ಲೂ ಈ ರೀತಿಯ ಕಲಾವಿದರಿದ್ದಾರೆ. ಒಳ್ಳೆಯ ಪ್ರೇಕ್ಷಕವರ್ಗವೇ ಕಲಾವಿದನಿಗೆ ಪ್ರಶಸ್ತಿಯಿದ್ದಂತೆ. ಕ್ಸಾಪ ವತಿಯಿಂದ ಈ ರೀತಿಯ ಕಲಾವಿದರೊಂದಿಗೆ ನಡೆಸುವ ಕಾರ್ಯಕ್ರಮವು ಯುವಪೀಳಿಗೆಗೆ ಸ್ಥಳೀಯ ಕಲೆಯ ಬಗ್ಗೆ ಆಸಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ. ಪ್ರತಿ ಹಳ್ಳಿಯಲ್ಲೂ ಕಸಾಪ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿ ಎಂದು ಹೇಳಿದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎನ್.ಕೃಷ್ಣಯ್ಯ ಮಾತನಾಡಿ, ಕಲೆಯಲ್ಲೇ ಭಗವಂತನನ್ನು ಕಾಣುವ ಕಲಾವಿದರಿಗೆ ಮಳಮಾಚನಹಳ್ಳಿ ಗ್ರಾಮದಲ್ಲಿ ಪ್ರೋತ್ಸಾಹವಿದೆ. ಪ್ರತಿ ಹುಣ್ಣಿಮೆ, ಹಬ್ಬ, ಶನಿವಾರ ದೇವಸ್ಥಾನದಲ್ಲಿ ಭಾಜನೆ ಕಾರ್ಯಕ್ರಮ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಹೊಸ ತಲೆಮಾರಿನ ಯುವಕರಿಗೂ ತರಬೇತಿ ನೀಡಲಾಗುತ್ತಿದೆ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಜನಪದರ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಾಗೂ ಹಳ್ಳಿಗಳಲ್ಲಿ ಎಲೆಮರೆ ಕಾಯಿಗಳಂತಿರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು “ಗಾನಸಿರಿ” ಕಾರ್ಯಕ್ರಮವನ್ನು ಹಳ್ಳಿಗಳಲ್ಲಿ ನಡೆಸುತ್ತಿದ್ದೇವೆ. ನಮ್ಮ ಸ್ಥಳೀಯ ಕಲಾವಿದರು ನಮ್ಮ ಹೆಮ್ಮೆಯ ಸಾಂಸ್ಕೃತಿಕ ಪ್ರತಿನಿಧಿಗಳು ಎಂದರು.
ಈ ಸಂದರ್ಭದಲ್ಲಿ ನಾಟಕ ನಿರ್ದೇಶಕ ಹಾಗೂ ಹಾರ್ಮೋನಿಯಮ್ ಕಲಾವಿದ ಮಳಮಾಚನಹಳ್ಳಿ ಮುನಿಶಾಮಪ್ಪ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಭಜನೆ ಕಾರ್ಯಕ್ರಮದಲ್ಲಿ ಸೀತಾರಾಮಪ್ಪ, ನಾರಾಯಣಸ್ವಾಮಿ, ವೆಂಕಟೇಶಪ್ಪ, ನಾಗರಾಜ್, ಎಂ.ರಮೇಶ್, ಶೈಲಜಾ, ಆಂಜಿನಮ್ಮ, ಲಕ್ಷ್ಮಮ್ಮ ಭಾಗವಹಿಸಿದ್ದರು.
ಕಸಾಪ ತಾಲ್ಲೂಕು ಕಾರ್ಯದರ್ಶಿ ಸತೀಶ್, ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಾಂಜಿನಪ್ಪ, ವೆಂಕಟೇಶಪ್ಪ, ಮಾಜಿ ಎಸ್.ಎಫ್.ಸಿ.ಎಸ್ ಅಧ್ಯಕ್ಷ ಕೆ.ವಿ.ಕೃಷ್ಣಪ್ಪ, ಕಲಾವಿದ ನಾಮದೇವ್, ಎಂ.ಎಲ್.ಶಿವಮೂರ್ತಿ, ರಮೇಶ್, ಆಂಜಿನಪ್ಪ, ಸುನಿಲ್, ಲಕ್ಷ್ಮಯ್ಯ, ನಾರಾಯಣಪ್ಪ, ಶಾರದಮ್ಮ, ಸೊಣ್ಣಮ್ಮ, ರತ್ನಮ್ಮ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







