ಶಾಲೆಯಲ್ಲಿನ ಕುಡಿಯುವ ನೀರಿನ ತೊಂದರೆ, ಬೀದಿ ದೀಪಗಳಿಲ್ಲದಿರುವುದು, ಶಾಲೆಯ ಆವರಣವನ್ನು ಗಲೀಜು ಮಾಡುವ ಕುಡುಕರು, ಶಾಲೆಗೆ ಬರಲು ಬಸ್ ಸೌಲಭ್ಯವಿಲ್ಲದಿರುವುದು, ಗಣಿತ ಶಿಕ್ಷಕರಿಲ್ಲದಿರುವುದು ಮುಂತಾದ ಸಮಸ್ಯೆಗಳನ್ನು ವಿದ್ಯಾರ್ಥಿಗಳು ವಿವರಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಗ್ರಾಮಾಂತರ ಟ್ರಸ್ಟ್, ಸಿ.ಎಂ.ಸಿ.ಎ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ “ಮಕ್ಕಳ ಗ್ರಾಮಸಭೆಯಲ್ಲಿ” ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಶಾಲೆ ಹಾಗೂ ಗ್ರಾಮದ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಮಳಮಾಚನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಗಂಗೋತ್ರಿ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತಿಳಿಸಿದರೆ, ಬಸವಾಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ತರುಣ್, ಶಾಲೆಯ ಆವರಣವನ್ನು ಗಲೀಜು ಮಾಡುವ ಕುಡುಕರು, ಶಾಲೆಗೆ ಬರಲು ಬಸ್ ಸೌಕರ್ಯವಿಲ್ಲದಿರುವುದು, ರಸ್ತೆ ಹಾಗೂ ಬೀದಿ ದೀಪದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದನು. ಬಿಸಿಯೂಟದ ಅಡುಗೆ ಸಿಬ್ಬಂದಿ ಅಂಗನವಾಡಿ ಕಟ್ಟಡಕ್ಕೆ ಕಾಂಪೌಂಡ್ ಇಲ್ಲದಿರುವುದರ ಬಗ್ಗೆ ಹೇಳಿದರು. ಚಿಕ್ಕದಾಸರಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಪವನ್ ಶಾಲೆಯಲ್ಲಿ ಗಂಡು ಮಕ್ಕಳಿಗೆ ಶೌಚಾಲಯವಿಲ್ಲವೆಂದು ಸಮಸ್ಯೆ ಬಗೆಹರಿಸಲು ಕೋರಿದನು.
ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ವಿಜಯರೆಡ್ಡಿ ಮಾತನಾಡಿ, “ಶಾಲೆ ದೇವಸ್ಥಾನದಂತೆ, ಮಕ್ಕಳ ಭವಿಷ್ಯ ರೂಪುಗೊಳ್ಳುವ ಶಾಲೆಯನ್ನು ಚೆನ್ನಾಗಿರಿಸಲು ಗ್ರಾಮಸ್ಥರೂ ಸಹಕರಿಸಬೇಕು. ಶಾಲೆಯ ಆವರಣದಲ್ಲಿ ಇಸ್ಪೀಟು ಆಡುವುದು ಅಥವಾ ಕುಡುಕರನ್ನು ಕಂಡಲ್ಲಿ ನಮಗೆ ನೇರವಾಗಿ ದೂರವಾಣಿ ಕರೆ ಮಾಡಿ, ತಕ್ಷಣ ಕ್ರಮ ಕೈಗೊಳ್ಳುತ್ತೇನೆ” ಎಂದು ಹೇಳಿ ಮಕ್ಕಳಿಗೆ ತಮ್ಮ ಫೋನ್ ನಂಬರ್ ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪವಿತ್ರ ತಮ್ಮ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು. ವೈದ್ಯಾಧಿಕಾರಿ ಡಾ.ರಮೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಕೆ.ಲಕ್ಷ್ಮೀದೇವಮ್ಮ, ಮಕ್ಕಳ ಹಕ್ಕುಗಳ ಜಿಲ್ಲಾ ಘಟಕದ ಅಧಿಕಾರಿ ಗೋಪಾಲ್ ಮಾತನಾಡಿ ಸಮಸ್ಯೆಗಳ ಪರಿಹಾರಕ್ಕೆ ಸಲಹೆಗಳನ್ನು ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ರಾಮಾಂಜಿ, ಕಾರ್ಯದರ್ಶಿ ರಾಜಣ್ಣ, ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ, ಮುಖ್ಯ ಶಿಕ್ಷಕಿ ಎ.ಎಂ.ಸಾವಿತ್ರಿ ದೇವಿ, ಚೈಲ್ಡ್ ರೈಟ್ಸ್ ಟ್ರಸ್ಟ್ ನ ಸತೀಶ್, ನಾಗರಾಜ್, ಸಿ.ಡಬ್ಲೂ.ಸಿ ಮೇರಿ ಚೆಲ್ಲಾದೇವಿ ಹಾಜರಿದ್ದರು.
- Advertisement -
- Advertisement -
- Advertisement -