ತೋಟದ ಬೆಳೆಗಳನ್ನು ಪಕ್ಷಿ, ಪ್ರಾಣಿಗಳಿಂದ ರಕ್ಷಿಸಲು ದೃಷ್ಟಿಬೊಂಬೆ ನಿಲ್ಲಿಸುವುದು ಹೊಸದೇನಲ್ಲ. ಹಳೆಯ ಅಂಗಿ, ಹರಿದ ಟೋಪಿ, ಬಟ್ಟೆಯ ಮುಖ—ಇಷ್ಟೇ ಸಾಕು; ದೂರದಿಂದ ನೋಡಿದರೆ ಯಾರೋ ಕಾವಲು ಕಾಯುತ್ತಿರುವಂತೆ ಕಾಣಬೇಕು. ಆದರೆ ಮಳಮಾಚನಹಳ್ಳಿ ಗ್ರಾಮದ ರೈತ ಕೃಷ್ಣಮೂರ್ತಿ ಅವರಿಗೆ ಇಷ್ಟಕ್ಕೇ ತೃಪ್ತಿಯಾಗಿಲ್ಲ.
“ಬೇರೆ ಯಾರದ್ದೋ ಮುಖವೇಕೆ? ನನ್ನ ಮುಖವೇ ಇರಲಿ” ಎಂದುಕೊಂಡರೋ ಏನೋ, ತಮ್ಮದೇ ಫೋಟೋವನ್ನು ದೃಷ್ಟಿಬೊಂಬೆಗೆ ಅಳವಡಿಸಿದ್ದಾರೆ.
ಈಗ ತೋಟದ ಮಧ್ಯೆ ಕೃಷ್ಣಮೂರ್ತಿ ಅವರ “ಫೋಟೊ” ಕಾವಲು ಕಾಯುತ್ತಿದೆ. ನಿಜವಾದ ಕೃಷ್ಣಮೂರ್ತಿ ಅವರು ಮನೆಯಲ್ಲಿದ್ದರೂ, ಹೊಲದಲ್ಲಿದ್ದರೂ, ಬೇರೆ ಕೆಲಸದಲ್ಲಿದ್ದರೂ ತೋಟದಲ್ಲಿ ಅವರ ಫೋಟೋ ಮಾತ್ರ ಕರ್ತವ್ಯಕ್ಕೆ ಹಾಜರ್!
ದೂರದಿಂದ ನೋಡಿದರೆ ರೈತರು ತೋಟದಲ್ಲೇ ನಿಂತು ಬೆಳೆಗಳ ಮೇಲೆ ಕಣ್ಣಿಟ್ಟಿರುವಂತೆ ಭಾಸವಾಗುತ್ತದೆ. ಹೀಗಾಗಿ ಪಕ್ಷಿ–ಪ್ರಾಣಿಗಳಿಗೆ ಮಾತ್ರವಲ್ಲ, ದಾರಿಹೋಕರಿಗೂ “ಇವರು ಎಲ್ಲೆಡೆ ಇದ್ದಾರೆ” ಎಂಬ ಅನುಮಾನ ಮೂಡುವಂತಾಗಿದೆ.
ಸಾಮಾನ್ಯವಾಗಿ ರೈತರು ದೃಷ್ಟಿಬೊಂಬೆ ಮೂಲಕ ಪಕ್ಷಿಗಳನ್ನು ಹೆದರಿಸುತ್ತಾರೆ. ಆದರೆ ಇಲ್ಲಿ ಪರಿಸ್ಥಿತಿ ಸ್ವಲ್ಪ ವಿಭಿನ್ನ. ಪಕ್ಷಿಗಳನ್ನು ಹೆದರಿಸಲು ಇಟ್ಟ ದೃಷ್ಟಿಬೊಂಬೆ ಈಗ ಊರಿನ ಜನರನ್ನೇ ನಗಿಸುತ್ತಿದೆ.
“ಕೃಷ್ಣಮೂರ್ತಿ ಅವರು ತೋಟಕ್ಕೆ ಬಂದಿಲ್ಲ” ಎಂದುಕೊಂಡು ಒಳಗೆ ಹೋಗಲು ಹೊರಟವರಿಗೆ, ಎದುರಲ್ಲೇ ಅವರ ಫೋಟೋ ಕಾಣಿಸಿಕೊಂಡರೆ, “ಅಯ್ಯೋ, ಇವರು ಇಲ್ಲೇ ಇದ್ದಾರಲ್ಲ!” ಎಂದು ಹೆಜ್ಜೆ ಹಿಂದಕ್ಕೆ ಹಾಕುವಂತಾಗಬಹುದು.
ತೋಟಕ್ಕೆ ಕಾವಲುಗಾರನನ್ನು ನೇಮಿಸಿದರೆ ಸಂಬಳ ಕೊಡಬೇಕು, ಊಟ ಕೊಡಬೇಕು, ರಜೆ ಕೊಡಬೇಕು. ಆದರೆ ಫೋಟೋ ಕಾವಲುಗಾರನಿಗೆ ಇವೆಲ್ಲ ಬೇಕಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೆ ಒಂದೇ ಭಂಗಿ; ಮಳೆ ಬಂದರೂ ಅದೇ ಭಂಗಿ, ಬಿಸಿಲು ಬಿದ್ದರೂ ಅದೇ ಭಂಗಿ.
ಹೀಗಾಗಿ ಕೃಷ್ಣಮೂರ್ತಿ ಅವರ ಪ್ರಯೋಗದಲ್ಲಿ ಕೃಷಿ ಜಾಣ್ಮೆಯ ಜೊತೆಗೆ “ವೆಚ್ಚ ಕಡಿತ”ದ ಲೆಕ್ಕವೂ ಅಡಗಿರುವಂತಿದೆ.
ಇನ್ನು ಈ ದೃಷ್ಟಿಬೊಂಬೆಯ ದೊಡ್ಡ ವಿಶೇಷವೆಂದರೆ, ಇದು ಕೇವಲ ತೋಟ ಕಾಯುವುದಲ್ಲ; ರೈತನ ಅನುಪಸ್ಥಿತಿಯನ್ನೂ ಉಪಸ್ಥಿತಿಯನ್ನಾಗಿ ಮಾಡುತ್ತಿದೆ. ಕೃಷ್ಣಮೂರ್ತಿ ಅವರು ತೋಟದಲ್ಲಿಲ್ಲದಿದ್ದರೂ, ಅವರ ಫೋಟೋ ಮಾತ್ರ “ಕರ್ತವ್ಯಕ್ಕೆ ಗೈರುಹಾಜರಾಗದೆ” ನಿಂತಿದೆ.
ಕೃಷಿ ಕ್ಷೇತ್ರದಲ್ಲಿ ಸ್ಥಳೀಯ ಅನುಭವಕ್ಕೆ ತಕ್ಕಂತೆ ರೈತರು ಹೊಸ ಹೊಸ ಪ್ರಯೋಗಗಳನ್ನು ಮಾಡುವುದು ಸಾಮಾನ್ಯ. ಆದರೆ ತಮ್ಮದೇ ಫೋಟೋವನ್ನು ದೃಷ್ಟಿಬೊಂಬೆ ಮಾಡಿ, “ನಾನೇ ನನ್ನ ತೋಟದ ಕಾವಲುಗಾರ” ಎಂಬ ಸಂದೇಶ ನೀಡಿರುವ ಕೃಷ್ಣಮೂರ್ತಿ ಅವರ ಪ್ರಯೋಗ ಮಾತ್ರ ಮಳಮಾಚನಹಳ್ಳಿಯಲ್ಲಿ ತುಸು ಹೆಚ್ಚು ಗಮನ ಸೆಳೆದಿದೆ.
ರೈತರು ಮನೆಯಲ್ಲಿದ್ದರೂ, ತೋಟದಲ್ಲಿ ಅವರ “ಡಮ್ಮಿ ಡ್ಯೂಟಿ” ಮಾತ್ರ ನಿರಂತರ!
