Home Sidlaghatta ಪೌರಕಾರ್ಮಿಕರಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ

ಪೌರಕಾರ್ಮಿಕರಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ

0
Sidlaghatta Municipality

ಶಿಡ್ಲಘಟ್ಟ ನಗರದ ನಗರಸಭೆ ಹತ್ತಿರ ಇರುವ ಶ್ರೀರಾಮ ದೇವಾಲಯಲ್ಲಿ ಪೌರಕಾರ್ಮಿಕರಿಗೆ ವಯಸ್ಕರ ಶಿಕ್ಷಣ ಸಮಿತಿಯಿಂದ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ನಗರಸಭಾ ಪೌರಾಯುಕ್ತ ಶ್ರೀಕಾಂತ್ ಮಾತನಾಡಿದರು.

ಪೌರ ಕಾರ್ಮಿಕರಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ವಯಸ್ಕರ ಶಿಕ್ಷಣ ಸಮಿತಿಯನ್ನು ಜಾರಿಗೆ ಬಂದಿದ್ದು, ಎಲ್ಲಾ ಪೌರಕಾರ್ಮಿಕರು ತಮ್ಮ ಬಿಡುವಿನ ಸಮಯದಲ್ಲಿ ಓದಿ ವಿದ್ಯಾವಂತರಾಗಿ ಎಂದು ಅವರು ತಿಳಿಸಿದರು.

ಇಂದಿನ ಆಧುನಿಕ ಸಮಾಜದಲ್ಲಿ ವಿದ್ಯಾಬ್ಯಾಸ ಬಹು ಮುಖ್ಯ ಪಾತ್ರ ವಹಿಸುತ್ತಿದ್ದು, ನಗರವನ್ನು ಸ್ಚಚ್ಚವಾಗಿಡುವ ಕೆಲಸ ಮಾಡುವ ಪೌರಕಾರ್ಮಿಕರು ಸಹ ವಿದ್ಯಾವಂತರಾಗಬೇಕೆಂಬ ಉದ್ದೇಶದಿಂದ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾಬ್ಯಾಸಕ್ಕೆ ವಯಸ್ಸಿನ ಮಿತಿಯಿಲ್ಲ, ಯಾರೂ ಹಿಂಜರಿಕೆ ಪಡಬೇಕಾದ ಅಗತ್ಯವಿಲ್ಲ, ಎಲ್ಲರೂ ಓದಿ ವಿದ್ಯಾವಂತರಾಗಿ, ಬುದ್ದಿವಂತರಾಗಿ ಎಂದು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಹ ಬಡ ಕುಟುಂಬದಲ್ಲಿ ಹುಟ್ಟಿದ್ದು, ಅವರ ತಂದೆ ತಾಯಿಗಳು ಓದದೆ ಇದ್ದರೂ ಸಹ ಅವರು ಛಲ ಬಿಡದೆ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿ ಭಾರತ ದೇಶದ ಸಂವಿಧಾನ ರಚನೆ ಮಾಡುವುದರಲ್ಲಿ ಗಣನೀಯ ಪಾತ್ರ ವಹಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾ, ಎಲ್ಲಾ ಪೌರಕಾರ್ಮಿಕರು ಸರ್ಕಾರ ನೀಡಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.

 ಪ್ರತಿದಿನ ಕೆಲಸ ಮುಗಿದ ನಂತರ ದೇವಾಲಯದ ಅವರಣದಲ್ಲಿ 1 ಗಂಟೆ ವಿದ್ಯಾಬ್ಯಾಸ ಮಾಡಬೇಕೆಂದು, ಅದಕ್ಕಾಗಿ ಶಿಕ್ಷಕರನ್ನು ನೇಮಕ ಮಾಡಿದ್ದು, 3 ತಿಂಗಳು ಮುಗಿದ ಮೇಲೆ ಪರೀಕ್ಷೆ ನಡೆಸುವುದಾಗಿ, ಅದಕ್ಕೆ ಎಲ್ಲರೂ ಸಿದ್ದರಾಗಿ, ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣ ಪತ್ರಗಳನ್ನು ಸಹ ನೀಡುವುದಾಗಿ ತಿಳಿಸಿದರು.

 ಆರೋಗ್ಯ ನಿರೀಕ್ಷಕ ವಿಜಯಕುಮಾರ್ ಮಾತನಾಡಿ, ಪೌರಕಾರ್ಮಿಕರಲ್ಲಿ ಶೇ 90 ರಷ್ಟು ಕಾರ್ಮಿಕರಿಗೆ ಸಹಿ ಸಹ ಹಾಕಲು ಬರುವುದಿಲ್ಲ. ಸರ್ಕಾರದ ಈ ಅವಕಾಶವನ್ನು ಉಪಯೋಗಿಸಿಕೊಂಡು ಎಲ್ಲರೂ ವಿದ್ಯಾವಂತರಾಗಿ ತಮ್ಮ ತಮ್ಮ ಬ್ಯಾಂಕ್ ವ್ಯವಹಾರಗಳನ್ನು, ಕಚೇರಿಯ ಪತ್ರ ವ್ಯವಹಾರವನ್ನು ಮಾಡಲು ಶಕ್ತರಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಲ್ಲಾ ಪೌರಕಾರ್ಮಿಕರಿಗೆ ನಗರಸಭಾ ಪೌರಾಯುಕ್ತ ಶ್ರೀಕಾಂತ್ ಪುಸ್ತಕಗಳನ್ನು ವಿತರಣೆ ಮಾಡಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version