ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಹೊರವಲಯದ ಜೋಳದ ತೋಟದಲ್ಲಿ ಕಂಡುಬಂದ ಪ್ಲೇನ್ ಪ್ರೀನಿಯಾ ಹಕ್ಕಿ.
http://en.wikipedia.org/wiki/Plain_prinia
ಕೊತ್ತನೂರು ಗ್ರಾಮದಲ್ಲಿ ಪ್ಲೇನ್ ಪ್ರೀನಿಯಾ ಹಕ್ಕಿ
ರಸ್ತೆ ಅಗಲೀಕರಣ ಹಾಗೂ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
ಚಿಂತಾಮಣಿ ಬಾಗೇಪಲ್ಲಿ ರಸ್ತೆ ಅಗಲೀಕರಣ ಹಾಗೂ ಗಂಗಾಪುರ, ಕಾಚಹಳ್ಳಿ, ರಾಚನಹಳ್ಳಿ ಮಾರ್ಗವಾಗಿ ಸರ್ಕಾರಿ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ತಾಲ್ಲೂಕಿನ ಗೋಣಿಮರದಹಳ್ಳಿ ಬಳಿ ಮಂಗಳವಾರ ಡಿ.ವೈ.ಎಫ್.ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಬೆಳಿಗ್ಗೆ ಏಳು ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ರಸ್ತೆ ತಡೆ ನಡೆಸಿ ಸ್ಥಳೀಯ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಡಿ.ವೈ.ಎಫ್.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ,‘ಬಂಗಾರಪೇಟೆ ಬಾಗೇಪಲ್ಲಿ ರಸ್ತೆ ಬಿ.ಬಿ ರಸ್ತೆಯೆಂದೇ ಖ್ಯಾತವಾಗಿದೆ. ಶಿಡ್ಲಘಟ್ಟ ತಾಲ್ಲೂಕು ಗಡಿಭಾಗದಿಂದ ಬಾಗೇಪಲ್ಲಿ ಗಡಿಭಾಗದವರೆಗಿನ ರಸ್ತೆ ಅಗಲೀಕರಣವಿಲ್ಲದ ಕಾರಣ ಹಲವಾರು ಅಪಘಾತಗಳು ಸಂಭವಿಸಿದ್ದು ನಾಗರೀಕರಿಗೆ ಮತ್ತು ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ಇತ್ತೀಚೆಗೆ ಸರ್ಕಾರಿ ಬಸ್ಸು ಇರಗಪ್ಪನಹಳ್ಳಿ ಬಳಿ ಉರುಳಿದ್ದರಿಂದ ಸಾಕಷ್ಟು ಜನರಿಗೆ ತೊಂದರೆಯಾಗಿತ್ತು. ಈ ಭಾಗದಲ್ಲಿ ಹಲವಾರು ಬಾರಿ ಅವಘಡಗಳು ಸಂಭವಿಸಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಸ್ತೆ ಸರಿಪಡಿಸಲು ಮುಂದಾಗದಿರುವುದು ಖಂಡನೀಯ’ ಎಂದು ಹೇಳಿದರು.
ಪ್ರತಿಭಟನೆಯನ್ನು ನಾಲ್ಕು ಗಂಟೆಗಳ ಕಾಲ ನಡೆಸಿದ್ದರಿಂದಾಗಿ ಸಾರಿಗೆ ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡಿದರು. ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಲೋಕೇಶ್ ಭೇಟಿ ನೀಡಿ ಸಧ್ಯಕ್ಕೆ ಕೇತನಾಯಕನಹಳ್ಳಿಯಿಂದ ಗಂಜಿಗುಂಟೆವರೆಗೂ ರಸ್ತೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, 15 ದಿನಗಳಲ್ಲಿ ಡಾಂಬರೀಕರಣ ಮಾಡಲಾಗುವುದು. ಇನ್ನು 70 ಕಿಮೀ ರಸ್ತೆ ಕಾಮಗಾರಿ ಸರ್ಕಾರದ ಮಟ್ಟದಲ್ಲಿ ಆಗುತ್ತಿದ್ದು ಸಮಸ್ಯೆ ಬಗೆಹರಿಸಲಾಗುವುದೆಂದು ತಿಳಿಸಿದರು.
ಡಿ.ವೈ.ಎಫ್.ಐ ತಾಲ್ಲೂಕು ಅಧ್ಯಕ್ಷ ಸದಾನಂದ, ಫೈಯಾಜುಲ್ಲಾ, ಪ್ರವೀಣ್, ಮುರಳಿ, ಮುನಿ, ಬಾಬು, ವೆಂಕಟರಮಣ, ನರಸಿಂಹಮೂರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಿರಂತರ ಸಾಧನೆಯೇ ಯಶಸ್ಸಿನ ಮೆಟ್ಟಿಲು
ನಿರಂತರ ಸಾಧನೆಯೇ ಯಶಸ್ಸಿನ ಮೆಟ್ಟಿಲು. ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅನವಶ್ಯಕ ಭಯ, ಆತಂಕದ ಬಗ್ಗೆ ಚಿಂತಿಸದೆ ತಮ್ಮ ಶ್ರಮವನ್ನು ನಂಬಬೇಕು ಎಂದು ಪ್ರವಚನಕಾರ ಟಿ.ಎಲ್.ಆನಂದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲ್ಲೂಕಿನ ದೊಡ್ಡತೇಕಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಪರೀಕ್ಷೆಯ ಪೂರ್ವಸಿದ್ದತೆ ವಿಷಯವಾಗಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಏಕಾಗ್ರತೆ ಇಲ್ಲದ ಓದು ಜೀರ್ಣವಾಗದ ಆಹಾರದಂತೆ. ಏಕಾಗ್ರತೆಯಿಂದ ಓದುವ, ಓದು ಆನಂದವನ್ನು ಮತ್ತು ಆತ್ಮವಿಶ್ವಾಸವನ್ನು ಕೊಡುತ್ತದೆ. ವಿದ್ಯಾರ್ಥಿಗಳು ವಿಷಯದಲ್ಲಿ ಆಸಕ್ತಿ ಬೆಳೆಸಿಕೊಂಡರೆ ಏಕಾಗ್ರತೆ ತಾನೇ ತಾನಾಗಿ ಬರುತ್ತದೆ. ಪರೀಕ್ಷಾ ತಯಾರಿ ವ್ಯವಸ್ಥಿತವಾಗಿದ್ದಾಗ ಯಾವುದೇ ಭಯ ಆತಂಕಗಳಿಗೆ ಆಸ್ಪದವಿರುವುದಿಲ್ಲ. ಪರೀಕ್ಷಾ ಸಮಯದಲ್ಲಿ ಪೋಷಕಪಾತ್ರವೂ ಮಹತ್ವದ್ದು. ಪೋಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಚೆನ್ನಾಗಿ ಶ್ರಮಪಟ್ಟು ಅಭ್ಯಾಸ ಮಾಡುವ ಪ್ರವೃತ್ತಿಯನ್ನು ಬೆಳೆಸಬೇಕು ಎಂದರು.
ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಮುನ್ನಡೆ ಸಾಧಿಸುತ್ತಿಲ್ಲವೆನಿಸಿದರೆ, ಪ್ರಗತಿ ಸಾಧಿಸುತ್ತಿಲ್ಲವಾದರೆ, ನಿಮ್ಮ ಅಭ್ಯಾಸಕ್ರಮವನ್ನು ಬದಲಿಸಿ, ಆತ್ಮಾವಲೋಕನ ಮಾಡಿಕೊಳ್ಳುತ್ತಾ ಶಿಕ್ಷಕರ ಸಲಹೆ ಪಡೆಯಿರಿ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಟಿ.ಸಿದ್ದೇಶ್, ಶಾಲೆಯ ಶಿಕ್ಷಕರಾದ ಎಸ್.ಎ.ವಿಶ್ವನಾಥ್, ಎಸ್.ನಾಗೇಶ್, ಸಿ.ಕೆ.ಹರೀಶ್ ಬಾಬು, ಸಿ.ಅಮರನಾಥ್, ಎಸ್.ಶಿವಲೀಲಾ, ಭರಮಪ್ಪ ಹಿರೇಕೆರೂರ್ ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಹೀಗಿರಲಿ ನಿಮ್ಮ ದಿನಚರಿ
1. ಪ್ರತಿದಿನ ಆರು ಘಂಟೆಗೆ ಏಳುವ ಅಭ್ಯಾಸ ಒಳ್ಳೆಯದು. ಬೆಳಗಿನ ಪ್ರಶಾಂತ ವಾತಾವರಣ ಓದಲಿಕ್ಕೆ, ಅಭ್ಯಾಸಕ್ಕೆ ಒಳ್ಳೆಯದು. ವಾತಾವರಣದಲ್ಲಿನ ಓಜೋನ್ ಅಂಶವು ಈ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅದರ ಸೇವನೆ ಆರೋಗ್ಯಕ್ಕೆ ಒಳ್ಳೆಯದು.
2. ಇಷ್ಟ ದೇವರನ್ನೂ, ತಾಯಿತಂದೆಯರನ್ನೂ, ಗುರುಹಿರಿಯರನ್ನೂ ನೆನೆದು ದಿನದ ಚಟುವಟಿಕೆಗಳನ್ನು ಪ್ರಾರಂಭಿಸಬೇಕು. ಬೆಳಿಗ್ಗೆ ಎದ್ದ ಕೂಡಲೇ ಮಲ-ಮೂತ್ರ ವಿಸರ್ಜನೆ ಮಾಡುವ ಅಭ್ಯಾಸವು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
3. ಅನಂತರ ಹಲ್ಲು ಉಜ್ಜುವುದು ಮುಖ್ಯ ಕ್ರಮ ಮೆತ್ತಗಿರುವ ಬ್ರಷ್‍ನಿಂದ, ಬೇವಿನ ಕಡ್ಡಿ ಅಥವಾ ಹೊಂಗೆ ಕಡ್ಡಿಯಿಂದ ಒಸಡಿಗೆ ಪೆಟ್ಟಾಗದಂತೆ ಮೇಲ್ಭಾಗ-ಕೆಳಭಾಗಗಳಲ್ಲಿ ಸರಿಯಾಗಿ ಉಜ್ಜಬೇಕು. ಒಸಡುಗಳನ್ನು ಕೈ ಬೆರಳುಗಳಿಂದ ಉಜ್ಜುವುದು ಉತ್ತಮ. ನಾಲಿಗೆಯನ್ನು ಇದೇ ರೀತಿಯಲ್ಲಿ ಸ್ವಚ್ಛಮಾಡಿಕೊಲ್ಲುವುದು ಸರಿಯಾದ ಕ್ರಮ.
4. ಶುದ್ಧವಾದ ನೀರಿನಿಂದ ಸುಮಾರು ಎರಡು ನಿಮಿಷಗಳ ಕಾಲ ಬಾಯಿ ಮುಕ್ಕಳಿಸಬೇಕು.
5. ಪ್ರತಿ ಬಾರಿ ಆಹಾರವನ್ನು ಸೇವಿಸಿದ ನಂತರ ಹಲ್ಲುಗಳನ್ನು ನಾಲಿಗೆಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
6. ಪ್ರತಿದಿನ ಎರಡೆರಡು ಹನಿ ಎಳ್ಳೆಣ್ಣೆ / ಕೊಬ್ಬರಿ ಎಣ್ಣೆಯನ್ನು ಹದವಾಗಿ ಬಿಸಿಮಾಡಿ ಮೂಗಿನ ಹೊಳ್ಳೆಗಳಿಗೆ ಹಾಕಿಕೊಳ್ಳಬೇಕು. ಇದರಿಂದ ನೆಗಡಿ, ಕೆಮ್ಮು ಮುಂತಾದ ತೊಂದರೆಗಳು ನಮ್ಮನ್ನು ಬಾಧಿಸುವ ಸಾಧ್ಯತೆಗಳು ಕಡಿಮೆಯಾಗುತ್ತದೆ.
7. ವಾರಕ್ಕೆರಡು ಬಾರಿ ಶರೀರಕ್ಕೆ ಎಳ್ಳೆಣ್ಣೆಯನ್ನು ನೀವಿಕೊಳ್ಳಬೇಕು. ಕೈಕಾಲುಗಳಿಗೆ ಮೇಲ್ಭಾಗದಿಂದ ಕೆಳಭಾಗದವರೆಗೆ ನೀವಬೇಕು. ಎದೆ, ಹೊಟ್ಟೆಯ ಭಾಗಕ್ಕೆ ವೃತ್ತಾಕಾರವಾಗಿ ಎಣ್ಣೆಯನ್ನು ನೀವಬೇಕು. ತಲೆ ಹಾಗೂ ಮುಖಭಾಗಗಳಿಗೂ ವೃತ್ತಾಕಾರವಾಗಿ ನೀವಬೇಕು.
8. ಸ್ನಾನಕ್ಕೆ ಉಗುರುಬೆಚ್ಚಗಿನ ನೀರನ್ನು ಬಳಸುವುದು, ಹಾಗೂ ಸ್ನಾನದ ನಂತರ ಓದುವ ಅಭ್ಯಾಸ ಬೆಳೆಸಿಕೊಳ್ಳುವುದು ಸೂಕ್ತ.
9. ಅರ್ಧಲೋಟ ಬೆಚ್ಚಗಿರುವ ನೀರನ್ನು ಪ್ರತಿದಿನ ಪ್ರಾತ:ಕಾಲ ಸೇವಿಸುವುದು ಒಳ್ಳೆಯದು.
10. ಸ್ನಾನದ ನಂತರ ನಮ್ಮ ಇಷ್ಟ ದೇವರ ಪ್ರಾರ್ಥನೆ ಮಾಡಬೇಕು. ಶ್ಲೋಕ, ಸ್ತೋತ್ರಗಳನ್ನು ಹೇಳಿಕೊಳ್ಳಬೇಕು.
11. ಸ್ನಾನಕ್ಕೆ ಸೋಪುಗಳನ್ನು ಬಳಸುವ ಬದಲು ಸ್ನಾನಚೂರ್ಣಗಳನ್ನು ಬಳಸಬಹುದು. ಕಡಲೆಹಿಟ್ಟು, ಅರಿಶಿನ, ತುಳಸಿ ಎಲೆಯ ಪುಡಿ, ಬೇವಿನ ಎಲೆಯ ಪುಡಿ – ಇವುಗಳನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿಕೊಂಡು, ಪರಿಮಳಕ್ಕೆ ಗಂಧದ ಪುಡಿ ಹಾಗೂ ಕರ್ಪೂರವನ್ನು ಸ್ವಲ್ಪ ಪ್ರಮಾಣದಲ್ಲಿ ಬೆರೆಸಿ ಈ ಪುಡಿಯನ್ನು ಸ್ನಾನಕ್ಕೆ ಬಳಸಬೇಕು. ಇದರಿಂದ ಚರ್ಮಕ್ಕೆ ಹೊಳಪು ಬರುತ್ತದೆ. ಚರ್ಮವು ಸುಸ್ಥಿತಿಯಲ್ಲಿ ಇರುತ್ತದೆ.
12. ಶುದ್ಧವಾದ-ಶುಭ್ರವಾದ ಬಟ್ಟೆಯನ್ನು ಧರಿಸಬೇಕು, ಹತ್ತಿಯ ಬಟ್ಟೆ ಧರಿಸುವುದು ಒಳ್ಳೆಯದು. ಒಳ ಉಡುಪುಗಳು ಮಾತ್ರ ಹತ್ತಿಯದೇ ಆಗಿರಬೇಕು.
13. ಶುದ್ಧವಾದ ಗಾಳಿ, ಸರಿಯಾದ ಬೆಳಕು ಇರುವ ಜಾಗದಲ್ಲಿ ಓದುವುದು – ಬರೆಯುವುದು ಒಳ್ಳೆಯದು.
14. ನಮ್ಮ ಶರೀರವು ಗಡಿಯಾರದಂತೆಯೇ ಕೆಲಸ ಮಾಡುತ್ತದೆ ಅದನ್ನು ನಾವು “ಜೈವಿಕ ಗಡಿಯಾರ” ಎಂದು ಕರೆಯುತ್ತೇವೆ. ಹಾಗಾಗಿ ನಮ್ಮ ದಿನದ ಎಲ್ಲ ಚಟುವಟಕೆಗಳೂ ಸಮಯಕ್ಕೆ ಸರಿಯಾಗಿ ನಡೆಯಬೇಕು.
15. ವಾರಕ್ಕೊಮ್ಮೆ ಕೈ ಬೆರಳು-ಕಾಲ್ಬೆರಳುಗಳ ಉಗುರುಗಳನ್ನು ಕತ್ತರಿಸಿಕೊಳ್ಳಬೇಕು. ಕಿವಿ-ಮೂಗುಗಳನ್ನೂ ಆಗಾಗ್ಗೆ ಸ್ವಚ್ಛಗೊಳಿಸಿಕೊಳ್ಳಬೇಕು.
16. ಪ್ರತಿದಿನ ತಲೆಗೆ ಕೊಬ್ಬರಿ ಇಣ್ಣೆಯನ್ನು ಹಚ್ಚಿಕೊಳ್ಳಬೇಕು. ಅಕಸ್ಮಾತ್ ಸಾಧ್ಯವಾಗದಿದ್ದಲ್ಲಿ ವಾರಕ್ಕೆ ಎರಡು ಬಾರಿಯಾದರೂ ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು.
17. ದಿನಕ್ಕೆ ಐದಾರು ಬಾರಿ ತಣ್ಣೀರಿನಿಂದ ಮುಖ ಹಾಗೂ ಕಣ್ಣುಗಳನ್ನು ತೊಳೆದುಕೊಳ್ಳಬೇಕು.
18. ದಿನಕ್ಕೆರಡು ಬಾರಿ ಕೂದಲನ್ನು ಸರಿಯಾಗಿ ಬಾಚಿಕೊಳ್ಳಬೇಕು. ಮನೆಯಿಂದ ಹೊರಗೆ ಹೋಗುವಾಗ ಸರಿಯಾದ ಬಟ್ಟೆಯನ್ನು ಧರಿಸಿಕೊಂಡು ಕೂದಲನ್ನು ಬಾಚಿಕೊಂಡು ಹೋಗಬೇಕು.
ಡಾ. ಶ್ರೀವತ್ಸ
ವೃತ್ತಿ ನಿಷ್ಟೆ, ನಿಷ್ಕಳಂಕ ಸೇವೆಯಿಂದ ಯಶಸ್ಸು ಸಾಧ್ಯ
ಯಾವೊಬ್ಬ ನೌಕರನೂ ತನ್ನ ವೃತ್ತಿಯಲ್ಲಿ ವೃತ್ತಿ ನಿಷ್ಠೆ, ಪಾರದರ್ಶಕತೆ ಮತ್ತು ದಕ್ಷತೆಯಂತಹ ಗುಣಗಳನ್ನು ಪರಿಪಾಲಿಸಿದಾಗ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಮುಖ್ಯಶಿಕ್ಷಕ ಜೆ.ವಿ.ಶಿವನಂಜಪ್ಪ ಕರೆನೀಡಿದರು.
ತಾಲ್ಲೂಕಿನ ಜಂಗಮಕೋಟೆ ಸಿಆರ್ಸಿ ಕೇಂದ್ರದಲ್ಲಿ ಈಚೆಗೆ ಶಿಕ್ಷಕವೃಂದವು ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶಾಲೆಗಳಲ್ಲಿ ಸಮಯಪಾಲನೆ, ಅತ್ಯುತ್ತಮ ಮಟ್ಟದ ನಾಯಕತ್ವ ತರಬೇತಿ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರಹಾಕುವ ಹತ್ತು-ಹಲವು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿದ ಹೆಮ್ಮೆಯಿದೆ ಎಂದು ತಿಳಿಸಿದರು.
ನಿವೃತ್ತಮುಖ್ಯ ಶಿಕ್ಷಕ ನಂದೀಶ್ ಮಾತನಾಡಿ, ಎಲ್ಲೆಡೆ ತುಂಬಿ-ತುಳುಕುತ್ತಿರುವ ಭ್ರಷ್ಟಾಚಾರವನ್ನು ತೊಡೆದು ಹಾಕಲು ಯುವಪೀಳಿಗೆಯು ಎಚ್ಚೆತ್ತುಕೊಳ್ಳಬೇಕು. ಸಮಾಜಕ್ಕೆ ಹತ್ತು-ಹಲವು ರೀತಿ ಸೇವೆಗಳನ್ನು ಮಾಡುವ, ಆತ್ಮಸ್ಥೈರ್ಯದ ಜೊತೆಗೆ ಸಾಧಿಸುವ ಛಲವನ್ನು ಮಕ್ಕಳಲ್ಲಿ ತುಂಬುವ ಕಾರ್ಯವಾಗಬೇಕಿದೆ ಎಂದರು.

ಮುಖ್ಯಶಿಕ್ಷಕ ಮುನಿಬಸವಯ್ಯ, ಶಿಕ್ಷಕರಾದ ವಿಜಯಕುಮಾರ್, ಸಿ.ಆರ್.ಪಿ ಸುಂದರಾಚಾರಿ, ಎಚ್.ಎಸ್.ರುದ್ರೇಶಮೂರ್ತಿ, ವಿ.ಎನ್.ಗೋಪಾಲಕೃಷ್ಣಯ್ಯ, ನೇತ್ರಾವತಿ, ಶಕುಂತಲಮ್ಮ, ಗೀತಾ, ಚಂದ್ರಶೇಖರ್, ಜೆ.ಬಿ.ಅಶೋಕ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
SSLC ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಫಲಿತಾಂಶ ಪಡೆದ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಅಭಿನಂದನಾ ಫಲಕ
ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ 2014 ರ ಏಪ್ರಿಲ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಫಲಿತಾಂಶ ಪಡೆದುಅತ್ಯುತ್ತಮವಾಗಿ ಸಾಧನೆ ಮಾಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ ಅಭಿನಂದನಾ ಫಲಕವನ್ನು ನೀಡಲಾಗಿದೆ.
ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯ ರಾಘವೇಂದ್ರ ರಾಜ್ಯ ಮಟ್ಟದ ಕಲಾಶ್ರೀ ಸ್ಪರ್ಧೆಗೆ ಆಯ್ಕೆ
ಶಿಡ್ಲಘಟ್ಟ ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯ ರಾಘವೇಂದ್ರ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ನಡೆಸುವ ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧೆಯ ಸೃಜನಾತ್ಮಕ ಕಲಾ ವಿಭಾಗದಲ್ಲಿ (ಕ್ಲೇ ಮಾಡೆಲಿಂಗ್, ಕರಕುಶಲ ಕಲೆ ಹಾಗೂ ಚಿತ್ರಕಲೆ) ವಿಜೇತರಾಗಿ ದಾವಣಗೆರೆಯಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯ ಸಾಮಾನ್ಯ ಸದಸ್ಯರ ಸಮಿತಿ ರಚನೆ
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಸಾಮಾನ್ಯ ಸದಸ್ಯರ ಸಮಿತಿ ರಚಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಶಾಸಕ ಎಂ.ರಾಜಣ್ಣ, ಕಾರ್ಯದರ್ಶಿಯಾಗಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಅನಿಲ್ಕುಮಾರ್, ತಹಶಿಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಯನಿರ್ವಾಹಣಾಧಿಕಾರಿ ಹಾಗೂ ಒಬ್ಬ ಮಹಿಳೆಯನ್ನು ಒಳಗೊಂಡ ಚುನಾಯಿತಿ ಜನಪ್ರತಿನಿಧಿಗಳನ್ನು ಒಳಗೊಂಡ ಸದಸ್ಯರ ಸಮಿತಿಯನ್ನು ರಚಿಸಿ ಅನುಮೋದನೆ ನೀಡಲಾಯಿತು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಮಿತಿ ರಚನೆಯ ಉದ್ದೇಶ ತಾಲ್ಲೂಕಿನಾದ್ಯಂತ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಸೇವೆ ಸಿಗಬೇಕು. ಆಸ್ಪತ್ರೆಯಲ್ಲಿನ ಕೊರತೆಗಳನ್ನು ನೀಗಿಸಬೇಕು. ವೈದ್ಯರು ಮತ್ತು ಸಿಬ್ಬಂದಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ನೇಮಕಾತಿಗಳು ನಡೆಯಲಿವೆ. ಔಷಧಿಗಳ ಕೊರತೆಯನ್ನೂ ಸರಿಪಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಅನಿಲ್ಕುಮಾರ್, ಪ್ರಥಮ ಸಭೆಯಲ್ಲಿ ಆಸ್ಪತ್ರೆಗೆ ಬೇಕಾಗುವ ಅಗತ್ಯ ಔಷಧಿಗಳ ಖರೀದಿಗೆ ನೇರವಾಗಿ 56 ಸಾವಿರ ರೂಗಳನ್ನು ಆಡಳಿತಾಧಿಕಾರಿಗಳು ಉಪಯೋಗಿಸಬಹುದು. ಹೆಚ್ಚಿನ ಮೊತ್ತಕ್ಕೆ ಸಮಿತಿಯ ಅನುಮೋದನೆ ಪಡೆಯಬೇಕು ಎಂದು ತೀರ್ಮಾನಿಸಲಾಗಿದೆ. ಆಸ್ಪತ್ರೆಯಲ್ಲಿ ಸಮಸ್ಯೆಗಳಾದ ನೀರು, ವಿದ್ಯುತ್, ಸಲಕರಣೆಗಳ ಕೊರತೆಯನ್ನು ಅತಿಶೀಘ್ರವಾಗಿ ಸರಿಪಡಿಸಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಿದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕರೆ, ಜಬೀವುಲ್ಲಾ, ಟಿ.ಬಾಬು, ಸುಬ್ರಮಣಿ, ಅಫ್ಸರ್ಪಾಷ, ಶ್ರೀನಿವಾಸ್, ಸುನಂದಮ್ಮ, ನವೀನ್ಕುಮಾರ್, ಕಿರಣ್ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿಶ್ವ ಅಂಗವಿಕರ ದಿನಾಚರಣೆ ಕಾರ್ಯಕ್ರಮ
ಅಂಗವಿಕಲರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಸಧೃಡರಾಗಲು ಸಹಕರಿಸಬೇಕು. ಅವರು ಸ್ವಾವಲಂಬಿಗಳಾದಾಗ ಕುಟುಂಬಕ್ಕೆ ಹೊರೆಯಾಗುವುದಿಲ್ಲ ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಕಚೇರಿಯ ಮುಂದೆ ಸೋಮವಾರ ಸ್ವಾಮಿ ವಿವೇಕಾನಂದ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಮತ್ತು ತಾಲ್ಲೂಕು ಆಡಳಿತ ಸಹಯೋಗದಲ್ಲಿ ನಡೆದ ‘ವಿಶ್ವ ಅಂಗವಿಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರಿಗೆ ಮೊದಲ ಆದ್ಯತೆ ನೀಡಿ ತ್ವರಿತವಾಗಿ ಅವರ ಕೆಲಸಗಳನ್ನು ಮಾಡಿಕೊಡಬೇಕು. ಸಮಾಜದಲ್ಲಿ ಅಂಗವಿಕಲರನ್ನು ತಾತ್ಸಾರ ಮನೋಭಾವದಿಂದ ನೋಡದೆ ಅವರಲ್ಲಿನ ಪ್ರತಿಭೆಗೆ ಪ್ರೋತ್ಸಾಹಿಸಿ ಸ್ವಾವಲಂಬಿಗಳಾಗಲು ಸಹಾಯ ಮಾಡಬೇಕು. ತಾಲ್ಲೂಕಿನಲ್ಲಿ 15,193 ಅಂಗವಿಕಲರು ಪಿಂಚಣಿ ಪಡೆಯುತ್ತಿದ್ದರೆ. ಅಂಗವಿಕಲರಿಗೆ ಪೆಟ್ರೋಲ್ ಚಾಲಿತ ವಾಹನಗಳನ್ನು ಶಾಸಕರ ಅನುದಾನದಲ್ಲಿ ನೀಡಲು ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯವರು ಪಟ್ಟಿ ಸಿದ್ಧಪಡಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ರಾಜಣ್ಣ ಅವರಿಗೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯವರು ತಾಲ್ಲೂಕಿನಲ್ಲಿ ನಿವೇಶನವನ್ನು ಒದಗಿಸಿ ಭವನವನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿ, ಅಂಗವಿಕಲತೆ ಯಾವುದೇ ಶಾಪವಲ್ಲ. ದೈಹಿಕ ನ್ಯೂನತೆಯಷ್ಟೆ. ತಾವು ಅಸಹಾಯಕರು ಎಂದು ಭಾವಿಸದೆ ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರದ ಅನುದಾನಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಮಾಸಾಶನ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಕೋಚಿಮುಲ್ ನಿರ್ದೇಶಕ ಮುನಿಯಪ್ಪ ತಮ್ಮ ಅನುದಾನದಲ್ಲಿ 50 ಸಾವಿರ ರೂಗಳನ್ನು ಸ್ವಾಮಿ ವಿವೇಕಾನಂದ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಗೆ ನೀಡುವುದಾಗಿ ಘೋಷಿಸಿದರು. ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸ್ವಾಮಿ ವಿವೇಕಾನಂದ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಗವಿಕಲರ ಮೆರವಣಿಗೆಯನ್ನು ಆಯೋಜಿಸಿದ್ದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎನ್.ಎಂ.ಶಾಂತರಸ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕರೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮೀದೇವಮ್ಮ, ರೈತ ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಮಂಜುನಾಥ್, ಮುನಿರಾಜು, ಚಲಪತಿ, ನಟೇಶ್, ಸ್ವಾಮಿ ವಿವೇಕಾನಂದ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ವಿನೋದಮ್ಮ, ಉಪಾಧ್ಯಕ್ಷ ಮಾರಪ್ಪ, ಲಕ್ಷ್ಮಿನಾರಾಯಣ, ಸಂತೋಷ್, ರಾಮಚಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮಕ್ಕಳ ಅಶಿಸ್ತು-ತಾಯಂದಿರ ಗೋಳು
“ನನ್ನ ಮಗ ಪುಸ್ತಕ, ಅವನ ಆಟದ ಸಾಮಾನುಗಳನ್ನು ಎಲ್ಲಿ ಬೇಕೆಂದರಲ್ಲಿ ಬಿಸಾಕುತ್ತಾನೆ: ನನ್ನ ಮಗಳು ಅವಳ ಡ್ರೆಸ್ ಮತ್ತಿತರ ವಸ್ತುಗಳನ್ನು ಸರಿಯಾಗಿ ಇಟ್ಕೊಳ್ಳಲ್ಲ: ಬೆಳೆದ ಮಕ್ಕಳೂ ಕೂಡ ಕಾಫಿ ಕುಡಿದ ಲೋಟವನ್ನೂ ತೊಳೆಸಲ್ಲ, ಚಿಕ್ಕ ಪುಟ್ಟ ಮನೆಕೆಲಸ ಕೂಡ ಮಾಡಲ್ಲ” ಈ ರೀತಿಯ ಗೋಳನ್ನು ಸಾಕಷ್ಟು ಮಂದಿ ತಾಯಂದಿರು ತೋಡಿಕೊಳ್ಳುತ್ತಾರೆ.
ಮಕ್ಕಳಿಗೆ ಮತ್ತೆ ಮತ್ತೆ ತಿಳಿಸಿ ಹೇಳಿ, ಸಮಾಧಾನದಿಂದ ನಿಧಾನವಾಗಿ ಶಿಸ್ತನ್ನು ಕಲಿಸಿ ಅಂತ ತಜ್ಞರು ಸಲಹೆ ಕೊಡುತ್ತಾರೆ. ಪದೇ ಪದೇ ಹೇಳಿದರೆ ಮಕ್ಕಳು ಕಡೆಗಣಿಸುತ್ತಾರೆ. ಅಥವಾ ಸ್ವಲ್ಪ ದೊಡ್ಡ ಮಕ್ಕಳಾದರೆ, “ಅಮ್ಮಾ, ದಿನಾ ನಿಂದು ಇದೇ ಗೋಳು. ನನ್ನ ಕೈಲಿ ಮಾಡಕ್ಕಾಗಲ್ಲ. ನಾನು ಇರೋದು ಹೀಗೇನೇ ನೀನು ಏನು ಬೇಕಾದ್ರೂ ಮಾಡ್ಕೋ” ಅಂತ ಪ್ರತಿಭಟಿಸುತ್ತಾರೆ. ಇತರ ನಾನಾ ತರದ ಒತ್ತಡದಲ್ಲಿರುವ ತಾಯಂದಿರೂ ಮಕ್ಕಳಿಗೆ ದಬಾಯಿಸತೊಡಗುತ್ತಾರೆ. ಒಟ್ಟಾರೆ ಮನೆ ರಣರಂಗ. ಆದರೂ ಪರಿಣಾಮ ಮಾತ್ರ ಶೂನ್ಯ, ಮರುದಿನ ತಾಯಿ ಮಕ್ಕಳು ಇಬ್ಬರದ್ದೂ ಮತ್ತೆ ಅದೇ ಹಾಡು.
ಹಾಗಿದ್ದರೆ ಹೇಗೆ ಈಗ ಚಕ್ರವ್ಯೂಹವನ್ನು ಛೇಧಿಸುವುದು? ಇದಕ್ಕೆಲ್ಲಾ ಒಂದು ಖಾಯಮ್ಮಾದ ಪರಿಹಾರವಿಲ್ಲವೇ?
ನೀವು ಸ್ವಲ್ಪ ತಾಳ್ಮೆ ಇಟ್ಕೊಂಡು, ವ್ಯವಸ್ಥಿತವಾಗಿ ಕೆಲಸ ಮಾಡುವುದು ಸಾಧ್ಯವಾಗುವುದಾದರೆ, ಹೀಗೆ ಮಾಡಬಹುದು;
• ಎಲ್ಲಾ ಶಿಸ್ತನ್ನು ಒಮ್ಮೆಲೆ ಕಲಿಸುವ ಪ್ರಯತ್ನ ಮಾಡಬೇಡಿ. ಮಕ್ಕಳು ಹೇಳಿದ ಕೆಲಸವನ್ನು ತಕ್ಷಣ ಮಾಡದಿದ್ದರೆ, ಪೋಲಿಸರ ಶಿಸ್ತನ್ನು ಹೇರಬೇಡಿ. ಹಾಗೆ ಮಾಡಿದರೆ ಚಿಕ್ಕ ಮಕ್ಕಳು ಹೆದರಿಕೆಯಿಂದ ತಕ್ಷಣ ನೀವು ಹೇಳಿದ್ದನ್ನು ಮಾಡಿದರೂ, ಪ್ರತೀ ಬಾರಿಯೂ ಕೂಗಾಡಿಯೇ ಕೆಲಸ ಮಾಡಿಸಬೇಕಾಗುತ್ತದೆ ಮತ್ತು ಅವರು ನಿಮ್ಮ ಕಣ್ಣಳತೆಯಿಂದ ದೂರ ಹೋದೊಡನೆ ಸ್ವೇಚ್ಛಾಚಾರಿಗಳಾಗಬಹುದು. ಬೆಳೆದ ಮಕ್ಕಳಾದರೆ ನಮಗಿಂತ ದೊಡ್ಡ ಧ್ವನಿಯಲ್ಲಿ ಅವರೂ ಕೂಗಾಡಿ ಮನೆ ಯುದ್ಧಭೂಮಿಯಾಗುತ್ತದೆ.
• ಶಿಸ್ತನ್ನು ಮೊದಲು ನೀವು ಪಾಲಿಸಿ. ತಾಯಿ ಕೆಲಸ ಹೇಳಿದಾಗ, ತಂದೆ “ಹೋಗ್ಲಿ ಬಿಡೆ ಪಾಪ, ಮಗು ಆಡಿಕೊಳ್ಳಲಿ” ಅಂತ ಸಹಾನುಭೂತಿ ತೋರಿಸುವುದಾಗಲಿ, ಅಥವಾ ತಂದೆ ಮಗುವನ್ನು ಸಹಾಯಕ್ಕೆ ಕರೆದಾಗ ಅಮ್ಮ, “ಅವನ್ನ್ಯಾಕ್ರೀ ಕರೀತೀರಾ, ನಿಮ್ಮ ಕೆಲಸ ನೀವು ನೆಟ್ಟಗೆ ಮಾಡ್ಕೊಳ್ಳೋದು ಕಲೀರಿ” ಅಂತ ಹಂಗಿಸುವುದಾಗಲೀ, ಮಾಡಬೇಡಿ. ಮಕ್ಕಳು ಪೋಷಕರ ಭಿನ್ನಾಭಿಪ್ರಾಯಗಳ ಭರಪೂರ ಉಪಯೋಗವನ್ನು ಪಡೆಯುತ್ತವೆ. ಇಬ್ಬರೂ ಒಂದು ಒಪ್ಪಂದಕ್ಕೆ ಬಂದು ಮಕ್ಕಳೊಡನೆ ಮಾತನಾಡಿ.
• ಮಕ್ಕಳ ಮನಸ್ಸು ಪ್ರಫುಲ್ಲವಾಗಿರುವಾಗ ಶಿಸ್ತಿನ ಪಾಠಗಳನ್ನು ಹೇಳಿಕೊಡಿ. ಅವರ ಜೊತೆ ಸ್ವಲ್ಪ ಹೊತ್ತು ಆಟವಾಡಿದ ನಂತರ ಅಥವಾ ಮನೆಯವರೆಲ್ಲ ಕುಳಿತು ಖುಷಿಯಾಗಿ ಊಟಮಾಡುವಾಗ ನಿಮ್ಮ ಅಗತ್ಯಗಳ ಬಗೆಗೆ ತಿಳಿಸಿ.
• “ನೀನು ಹೀಗೆ ಮಾಡಬೇಕು; ಹೀಗೆ ಮಾಡದಿದ್ದರೆ ನಿನಗೇ ತೊಂದರೆ; ಶಿಸ್ತನ್ನು ಕಲಿಯದಿದ್ದರೆ ಮುಂದೆ ಹಾಳಾಗುತ್ತೀಯಾ” ಎನ್ನುವ ರೀತಿಯ ಪೋಲೀಸ್ ಭಾಷೆ ಬಳಸಬೇಡಿ. “ನೋಡು ಮರೀ, ನೀನು ನಿನ್ನ ಸಾಮಾನುಗಳನ್ನು ಸರಿಯಾಗಿಟ್ಟುಕೊಂಡರೆ ನನಗೆ ಮನೆಕೆಲಸದಲ್ಲಿ ಬಹಳ ಸಹಾಯ ಆಗುತ್ತೆ. ಆಗ ನಾನು ನಿನ್ನ ಜೊತೆ ಆಟ ಆಡಬಹುದು ಅಥವಾ ನಿನಗೆ ಹೊಸ ತಿಂಡಿ ಮಾಡಬಹುದು” ಎಂದು ನಿರ್ಮಲ ಪ್ರೀತಿಯಿಂದ ಮಾತನಾಡಿ. ಮಕ್ಕಳು ಮಾಡುವ ಕೆಲಸ ನಮಗಾಗುವ ದೊಡ್ಡ ಸಹಾಯ ಎಂದು ತಿಳಿಸಿ.
• ಇದು ಪೂಸಿಹೊಡೆಯುವ ಕೆಲಸ, ನಮಗಾಗಲ್ಲ, ಎಂದುಕೊಳ್ಳಬೇಡಿ. ಇದು ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಎಂದುಕೊಳ್ಳಿ. ಒಮ್ಮೆ ಮಕ್ಕಳಿಗೆ ತಮ್ಮ ಜವಾಬ್ದಾರಿಗಳ ಅರಿವು ಮೂಡಿ, ಶಿಸ್ತಿನ ಅಭ್ಯಾಸವಾಯಿತೆಂದರೆ ಅದು ಅವರ ಸ್ವಭಾವವಾಗಿಬಿಡುತ್ತದೆ.
• “ನೀನು ಇದು ಮಾಡದಿರುವುದಕ್ಕೆ ನಾನು ಅದು ಮಾಡಲ್ಲ” ಎನ್ನುವ ರೀತಿಯ ವ್ಯಾಪಾರದ ಮಟ್ಟದಲ್ಲಿ ಮಾತನಾಡಿ ಸಂಬಂಧಗಳನ್ನು ಹಾಳು ಮಾಡಿಕೊಳ್ಳಬೇಡಿ.
• ಮಿಲಿಟರಿ ರೀತಿ ಎಲ್ಲಾ ಕೆಲಸಕ್ಕೂ ನೀತಿ ನಿಯಮಗಳನ್ನು ಮಾಡಿದರೆ ನಿಮ್ಮ ಸೋಲು ಖಂಡಿತ. ಅಲ್ಲದೆ ಎಲ್ಲಾ ವಿಚಾರಕ್ಕೂ ಕಿರಿಕಿರಿ ಮಾಡುವವರು ಎಂಬ ಕೆಟ್ಟ ಹೆಸರೂ ಮುಫತ್ತಾಗಿ ಸಿಗುತ್ತದೆ.
• ಎಲ್ಲಾ ಕೆಲಸಕ್ಕೂ ಅದರದೇ ಆದ ಶಿಸ್ತಿನ ಅಗತ್ಯವಿರುತ್ತದೆ. ಉದಾಹರಣೆಗೆ ಮಕ್ಕಳು ಕಾಯಿಲೆ ಬೀಳಬಾರದೆನ್ನುವುದಕ್ಕಾಗಿ ಶುಚಿಯಾಗಿರುವುದನ್ನು ಕಲಿಸಬೇಕಾಗುತ್ತದೆ. ಹಾಗಂತ ಅವರು ಆಟವಾಡುವಾಗ ಅಥವಾ ಹೊರಗಡೆ ಹೋದಾಗ ಬಟ್ಟೆ, ಮೈಕೈಗಳನ್ನು ಹೊಲಸೇ ಮಾಡಿಕೊಳ್ಳಬಾರದೆಂದು ನಿಯಮ ಮಾಡಿದರೆ ಅವರ ಸಹಜ ತುಂಟಾಟಗಳಿಗೇ ಕಟ್ಟುಹಾಕಿದಂತಾಗುತ್ತದೆ. ಅಥವಾ ಮನೆಗೆ ಬಂದ ಮರುಕ್ಷಣದಲ್ಲೇ ಕೈಕಾಲು ತೊಳೆಯಲೇಬೇಕು ಎನ್ನುವ ನಿಯಮ ಮಾಡಿದರೆ ನಿಮಗೆ ನಿರಾಸೆ ಕಾದಿರುತ್ತದೆ.
ನೆನಪಿಡಿ, ಶಿಸ್ತಿಗಾಗಿ ಶಿಸ್ತಲ್ಲ, ಜೀವನಕ್ಕಾಗಿ ಶಿಸ್ತು. ಶಿಸ್ತಿನ ಹೆಸರಿನಲ್ಲಿ ಮಕ್ಕಳ ಸಹಜ ತುಂಟಾಟಗಳನ್ನು ನಿಲ್ಲಿಸಿ ಅವರ ಬಾಲ್ಯವನ್ನೇ ಕಸಿದುಕೊಳ್ಳಬೇಡಿ.
ವಸಂತ್ ನಡಹಳ್ಳಿ

