24.1 C
Sidlaghatta
Sunday, December 28, 2025
Home Blog Page 1001

ಮಳಮಾಚನಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಳಮಾಚನಹಳ್ಳಿ ಗ್ರಾಮದ ಎಂ.ರಾಮಾಂಜಿನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕನ್ನಡ ಭಾಷೆಗೆ ಧಕ್ಕೆ ಬಂದಾಗ ಎಲ್ಲರೂ ಒಗ್ಗೂಡಿ

0

ಕನ್ನಡ ನಾಡು ನುಡಿ ಸಂಸ್ಕೃತಿ ಭಾಷೆಯನ್ನು ಸಂರಕ್ಷಿಸಲು ಕನ್ನಡಿಗರೆಲ್ಲಾ ಒಂದಾಗಿ ಶ್ರಮಿಸುವಂತೆ ಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ಕನ್ನಡ ರಾಜ್ಯೋತ್ಸವಗಳನ್ನು ಸಂಘಸಂಸ್ಥೆಗಳು ಆಚರಿಸುತ್ತಾ ಬಂದಿರುವುದು ಶ್ಲಾಘನೀಯ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಶುಕ್ರವಾರ ಭುವನೇಶ್ವರಿ ಕನ್ನಡ ಕಲಾ ಯುವಕರ ಸಂಘ, ಉಪ್ಪಿ ಗೆಳೆಯರ ಬಳಗ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷಿಗರು ಸಹೃದಯರು. ಕನ್ನಡ ಭಾಷೆಯೊಂದಿಗೆ ಬೇರೆ ಭಾಷೆಯನ್ನೂ ಗೌರವಿಸುತ್ತಾರೆ. ಕನ್ನಡ ನೆಲ, ಜಲ, ಭೂಮಿ, ಸಂಸ್ಕೃತಿ, ಭಾಷೆಗೆ ಧಕ್ಕೆ ಬಂದಾಗ ಒಗ್ಗಟ್ಟಾಗಿ ಹೋರಾಡಿ ರಕ್ಷಣೆ ಮಾಡುವ ಕೆಲಸ ಕನ್ನಡಿಗರಾದ ನಮ್ಮ ಜವಾಬ್ದಾರಿ ಎಂದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಬಿ.ಪಿ ರಾಮಕೃಷ್ಣಪ್ಪ ನೆರವೇರಿಸಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಅದ್ಯಕ್ಷ ವಿ.ಸುಬ್ರಮಣಿ, ಸ್ಥಾಯಿ ಸಮಿತಿ ಮಾಜಿ ಅದ್ಯಕ್ಷ ಆರ್.ಶ್ರೀನಿವಾಸ್, ಮುನಿಕೃಷ್ಣಪ್ಪ, ತಾಲ್ಲೂಕು ಪಂಚಾಯತಿ ಅದ್ಯಕ್ಷೆ ಆಂಜನಮ್ಮ, ಸದಸ್ಯ ವೆಂಕಟೇಶ್, ಸಂತೋಷ್, ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಬೈರೇಗೌಡ, ಜಂಗಮಕೋಟೆ ಬ್ಲಾಕ್ ಕಾಂಗ್ರೆ್ರಸ್ ಅದ್ಯಕ್ಷ ಎಚ್.ಎಂ.ಮುನಿಯಪ್ಪ, ವೈ-ಹುಣಸೇನಹಳ್ಳಿ ಕ್ಯಾತಪ್ಪ, ಬಿ.ಕೆ.ಮುನಿಕೆಂಪಣ್ಣ, ಎಸ್.ವೆಂಕಟೇಶ್, ಡಿ.ವಿ.ಚಂದ್ರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಶವಸಾಗಾಣಿಕೆಯ ವಾಹನ ಸಾರ್ವಜನಿಕ ಸೇವೆಗೆ

0

ಶವಸಾಗಾಣಿಕೆಯ ವಾಹನವನ್ನು ಪುರಸಭೆಯ ಆವರಣದಲ್ಲಿ ಪುರಸಭಾ ಅಧ್ಯಕ್ಷೆ ಮತ್ತು ಸದಸ್ಯರು ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕರ ಸೇವೆಗೆ ಶನಿವಾರ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಅಧ್ಯಕ್ಷೆ ಮುಷ್ಠರಿ ತನ್ವೀರ್, ‘ಪಟ್ಟಣದ ಎಲ್ಲಾ ವರ್ಗದ ಜನತೆಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಮಾಜಿ ಶಾಸಕ ವಿ.ಮುನಿಯಪ್ಪ ಅವರು ಅಧಿಕಾರದಲ್ಲಿದ್ದಾಗ ಸುಮಾರು ೧೦ ಲಕ್ಷ ರೂಪಾಯಿ ಹಣವನ್ನು ಶವಸಾಗಾಣಿಕೆ ವಾಹನದ ಖರೀದಿಗಾಗಿ ನೀಡಿದ್ದು ತಾಂತ್ರಿಕ ದೋಷಗಳಿಂದ ವಾಹನದ ಕಾರ್ಯಾರಂಭ ವಿಳಂಬವಾಗಿತ್ತು. ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಬಿ.ಆರ್.ಅನಂತಕೃಷ್ಣ, ಮಾಜಿ ಪುರಸಭಾ ಸದಸ್ಯ ಎನ್.ಲಕ್ಷ್ಮೀನಾರಾಯಣ್ ಮತ್ತು ಸರಸ್ವತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಮೂರು ವರ್ಷಗಳ ಕಾಲ ಸತತ ಪರಿಶ್ರಮದಿಂದ ಈ ವಾಹನ ಜನರ ಸೇವೆಗೆ ಲಭ್ಯವಾಗಿದೆ’ ಎಂದು ಹೇಳಿದರು.
ಜಿಲ್ಲಾಧಿಕಾರಿಯವರ ಆದೇಶದಂತೆ ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ವಾಹನವು ಕಾರ್ಯನಿರ್ವಹಿಸುವುದು. ಪಟ್ಟಣದ ಜನತೆಗೆ ರುದ್ರಭೂಮಿಗಳು ದೂರವಿರುವುದರಿಂದ ಯಾರಾದರೂ ಮೃತಪಟ್ಟರೆ ಮೃತದೇಹವನ್ನು ಸಾಗಿಸಲು ವಾಹನವನ್ನು ಉಪಯೋಗಿಸಿಕೊಳ್ಳಬಹುದು. ವಾಹನದ ಸಂಪೂರ್ಣ ನಿರ್ವಹಣೆಯನ್ನು ಪುರಸಭೆಯಿಂದಲೇ ಮಾಡಲಾಗುತ್ತದೆ. ವಾಹನದ ಶುಲ್ಕ ನಿಗಧಿಯ ಬಗ್ಗೆ ಪುರಸಭೆ ಸರ್ವ ಸದಸ್ಯರ ಸಮ್ಮುಖದಲ್ಲಿ ತಿರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ರಾಮ್ಪ್ರಕಾಶ್, ಉಪಾಧ್ಯಕ್ಷೆ ಸುಮಿತ್ರಮ್ಮ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೇಶವಮೂರ್ತಿ, ಸದಸ್ಯರಾದ ಜೆ.ಎಂ.ಬಾಲಕೃಷ್ಣ, ಸುಹೇಲ್ಅಹ್ಮದ್, ಎಚ್.ಎಸ್.ನಯಾಜ್, ಜಬೀವುಲ್ಲಾ, ವಿಪ್ರಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮಾಜಿ ಪುರಸಭಾ ಸದಸ್ಯ ಎನ್.ಲಕ್ಷ್ಮೀನಾರಾಯಣ್ ಮತ್ತು ಸರಸ್ವತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್, ಮುಸ್ತು, ಎಲ್.ಮಂಜುನಾಥ್, ಸುರೇಶ್, ಸಾಧಿಕ್ ಮತ್ತಿತರರು ಹಾಜರಿದ್ದರು.

ರೈತರ ಪಂಪ್ಸೆಟ್ಗಳಿಗೆ ಮೀಟರು ಅಳವಡಿಸಬಾರದು

0

ವಿದ್ಯುತ್ ಮೀಟರ್ ತಯಾರಿಕೆ ಕಂಪನಿಗಳ ಆಮಿಷಕ್ಕೆ ಒಳಗಾಗಿರುವ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಅವರು ನೀಡುವ ಕಮೀಷನ್ ಹಣಕ್ಕೆ ಆಸೆ ಬಿದ್ದು ರೈತರ ಪಂಪ್ಸೆಟ್ಗಳಿಗೆ ಮೀಟರು ಅಳವಡಿಸಲು ಮುಂದಾಗಿದ್ದಾರೆ ಎಂದು ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಆರೋಪಿಸಿದರು.
ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಮೀಟರ್ ಅಳವಡಿಸುತ್ತಿರುವ ಕ್ರಮ ಖಂಡಿಸಿ ಪಟ್ಟಣದ ಬೆಸ್ಕಾಂ ಕಚೇರಿಗೆ ಮೀಟರ್ಗಳ ಸಮೇತವಾಗಿ ರೈತರು ಮುತ್ತಿಗೆ ಹಾಕಿದ್ದರ ಹಿನ್ನಲೆಯಲ್ಲಿ ಬೆಸ್ಕಾಂ ಅಧಿಕಾರಿಗಳು ಶನಿವಾರ ಕರೆದಿದ್ದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ಮಾಡಲು ಅಧಿಕಾರಿಗಳು ಮುಂದಾಗಿದ್ದೇ ಆದಲ್ಲಿ ಅದೇ ವಿದ್ಯುತ್ ಕಂಬಗಳಿಗೆ ಕಟ್ಟಿಹಾಕುತ್ತೇವೆ. ಈ ಹಿಂದೆ ಎರಡು ಬಾರಿ ಪಟ್ಟಣದ ಸುತ್ತಮುತ್ತಲಿನ ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆಯನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿತ್ತಾದರೂ ಕೆಲವು ಮಂದಿ ಲೈನ್ಮೆನ್ಗಳು ರೈತರಿಗೆ ಬೆದರಿಕೆಯೊಡ್ಡಿ ಮೀಟರುಗಳನ್ನು ಅಳವಡಿಸಿದ್ದುದನ್ನು ಖಂಡಿಸಿ ಇಲಾಖೆಗೆ ಮುತ್ತಿಗೆಯೂ ಹಾಕಲಾಗಿತ್ತು ಎಂದರು.
ಈ ಭಾಗದಲ್ಲಿ ಅಂತರ್ಜಲ ಕುಸಿದು ೧೫೦೦ ಅಡಿಗಳಿಂದ ನೀರು ತೆಗೆಯುತ್ತಿದ್ದು ಸಿಗುವ ಅಲ್ಪ ಪ್ರಮಾಣದ ನೀರಿನಲ್ಲಿ ರೈತ ವ್ಯವಸಾಯ ಮಾಡುತ್ತಿದ್ದಾನೆ. ಅಂತಹ ರೈತನ ಬೆನ್ನ ಮೇಲೆ ಬರೆ ಹಾಕುವ ಕೆಲಸಕ್ಕೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಮಾಡಬಾರದು ಎಂದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ಕಳೆದ ಎರಡು ದಶಕಗಳಿಂದ ಈ ಭಾಗದ ರೈತರಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಟಾನಗೊಳಿಸಬೇಕೆಂದು ನಿರಂತರ ಹೋರಾಟ ಮಾಡಿಕೊಂಡು ಬಂದಿರುವ ರೈತರ ತೋಟಗಳಿಗೆ ಅಳವಡಿಸಿರುವ ಪಂಪ್ಸೆಟ್ಗಳಿಗೆ ವಿದ್ಯುತ್ ಮೀಟರು ಅಳವಡಿಕೆ ಮಾಡಲು ಹೊರಟಿರುವ ಕ್ರಮ ಸರಿಯಿಲ್ಲ. ಈವರೆಗೂ ಶಾಂತರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿರುವ ನಾವು ಉಗ್ರಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬೆಸ್ಕಾಂ ಇಲಾಖೆಯ ಪ್ರಭಾರಿ ಎಇಇ ಅನ್ಸರ್ಪಾಷಾ ಮಾತನಾಡಿ ವಿದ್ಯುತ್ ಟ್ರಾನ್ಸ್ಫರ್ಗಳ ಹತ್ತಿರ ಮೀಟರುಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತರ ಪಂಪ್ಸೆಟ್ಗಳಿಗೆ ಮೀಟರ್ಗಳನ್ನು ಅಳವಡಿಕೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ಮುನಿನಂಜಪ್ಪ, ಓ.ಟಿ.ಮುನಿಕೃಷ್ಣಪ್ಪ, ರಾಮಕೃಷ್ಣಪ್ಪ, ವೇಣುಗೋಪಾಲ್, ಅನಂತ್, ಮಂಜುನಾಥ್, ಪರಮೇಶ್ವರ್, ಪುರುಷೋತ್ತಮ್, ದೇವರಾಜು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ತಿನಬಡಿಸುವ ಹಬ್ಬ

0

ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಅಪೌಷ್ಠಿಕ ಮಕ್ಕಳಿಗೆ ‘ಪೌಷ್ಠಿಕ ಆಹಾರವನ್ನು ತಿನಬಡಿಸುವ ಹಬ್ಬ’ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಆಯೋಜಿಸಲಾಗಿತ್ತು.
ಮಕ್ಕಳ ವೈದ್ಯರಾದ ಡಾ.ಗಿರೀಶ್‌ ಮಕ್ಕಳ ಆರೋಗ್ಯವನ್ನು ತಪಾಸಣೆ ನಡೆಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 49 ಮಕ್ಕಳಿಗೆ ವಿವಿಧ ಬಗೆಯ ಪೌಷ್ಠಿಕ ಆಹಾರಗಳನ್ನು ತಯಾರಿಸಿ ಬಡಿಸಿ ತಿನಿಸಲಾಯಿತು. ಅಪೌಷ್ಠಿಕ ಮಕ್ಕಳ ತಾಯಂದಿರಿಗೆ ಮಕ್ಕಳ ಪೋಷಣೆ, ಶುಚಿತ್ವ,ಔಷಧೋಪಚಾರ ಮತ್ತು ಆಹಾರ ಪದ್ಧತಿಯ ಬಗ್ಗೆ ತಿಳಿಸಿಕೊಡಲಾಯಿತು.
ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಮೇಲ್ವಿಚಾರಕರಾದ ಗಿರಿಜಾಂಬಿಕೆ, ಶಾಂತಾಜಿಂದಾಳೆ, ಸರೋಜಮ್ಮ, ಸಂದೀಪ್‌, ಅಂಗನವಾಡಿ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಸದಸ್ಯತ್ವ ಅಭಿಯಾನ

0

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ವತಿಯಿಂದ ತಾಲ್ಲೂಕು ಘಟದ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ನಾಡು, ನುಡಿ ಹಾಗೂ ರೈತರ ಏಳಿಗೆಗಾಗಿ ಶ್ರಮಿಸುವುದಾಗಿ ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌, ಜನಪರ ಹೋರಾಟಗಳಿಗೆ ಬೆಂಬಲ ನೀಡುತ್ತಾ, ರೈತರ ಸಮಸ್ಯೆಗಳು ಮತ್ತು ನಾಡು ನುಡಿಗಾಗಿ ಸದಾ ಜಾಗೃತ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ವಿನೋದ್‌ಕುಮಾರ್‌, ತಾಲ್ಲೂಕು ಅಧ್ಯಕ್ಷ ಪವನ್‌ಕುಮಾರ್‌ಗೌಡ, ಪ್ರವೀಣ್‌ಕುಮಾರ್‌, ಶಶಿಕುಮಾರ್‌, ರಮೇಶ್‌, ಮಂಜು, ಕೊಂಡಪ್ಪ, ಬೈರೇಗೌಡ, ಮಹಾರವಿಚಂದ್ರ, ನರಸಿಂಹಮೂರ್ತಿ, ಅಪ್ಪಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕುಚ್ಚುಮಾವಿನಕಾಯಿ ಗೊಜ್ಜು

0

ಬೇಕಾಗುವ ಸಾಮಾಗ್ರಿ
2 ಬೇಯಿಸಿ ಉಪ್ಪುನೀರಿನಲ್ಲಿ ನೆನೆಸಿಟ್ಟ ಮಾವಿನಕಾಯಿ
1 ದೊಡ್ಡ ಬೆಳ್ಳುಳ್ಳಿ
5 ಹಸಿಮೆಣಸು
ಉಪ್ಪು
1 ಟೀ ಸ್ಪೂನ್ ಬೆಲ್ಲ
ಮಾಡುವ ವಿಧಾನ
ಮಾವಿನಕಾಯಿಯನ್ನು ಗೊರಟೆ ತೆಗೆದು ರಸವನ್ನು ತೆಗೆದಿಟ್ಟುಕೊಳ್ಳಿ. ಸಿಪ್ಪೆ ತೆಗೆದ ಬೆಳ್ಳುಳ್ಳಿ, ಹಸಿಮೆಣಸು ರುಬ್ಬಿಟ್ಟುಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ, ಅರಿಶಿನಪುಡಿಯನ್ನು ಸಿಡಿಸಿ, ನಂತರ ಅದಕ್ಕೆ ರುಬ್ಬಿ ಇಟ್ಟ ಬೆಳ್ಳುಳ್ಳಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿಯಿರಿ, ಅದು ಸ್ವಲ್ಪ ಕೆಂಪಾದ ನಂತರ ಅದಕ್ಕೆ ತೆಗೆದಿಟ್ಟುಕೊಂಡ ಮಾವಿನಕಾಯಿ ರಸವನ್ನು ಹಾಕಿ, ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿ. ಇದನ್ನು ಅನ್ನಕ್ಕೆ ಹಾಕಿ ಕಲಸಿಕೊಂಡು ಊಟಮಾಡಿ.
ಹಬ್ಬ ಹರಿದಿನಗಳಲ್ಲಿ ಸಿಹಿ ತಿಂದು ಬಾಯಿರುಚಿ ಕೆಟ್ಟಾಗ ಇದು ಖಾರ ಖಾರ ಹುಳಿ ಹುಳಿಯಾಗಿ ಊಟಮಾಡಲೂ ತುಂಬಾ ರುಚಿಯಾಗಿರುತ್ತದೆ, ಅಲ್ಲದೆ ದಿನಕ್ಕಿಂತ ಒಂದು ತುತ್ತು ಅನ್ನ ಜಾಸ್ತಿ ಸೇರುತ್ತದೆ.

ವಿದ್ಯಾರ್ಥಿಗಳ ಮೌನ ಪ್ರತಿಭಟನಾ ಮೆರವಣಿಗೆ

0

ಪಾಕಿಸ್ತಾನದ ಪೆಶಾವರದಲ್ಲಿ ಸೈನಿಕ ಶಾಲೆಯ ವಿದ್ಯಾರ್ಥಿಗಳ ಮೇಲಿನ ಹತ್ಯಾಕಾಂಡ ಖಂಡಿಸಿ ಶುಕ್ರವಾರ ಎಸ್‌.ಎಫ್‌.ಐ ಮತ್ತು ಡಿ.ವೈ.ಎಫ್‌.ಐ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಉಗ್ರಗಾಮಿಗಳು ಪೆಶಾವರದ ಸೈನಿಕ ಶಾಲೆಯಲ್ಲಿ ಅಮಾಯಕ 132 ಮಕ್ಕಳನ್ನು ಕೊಂದಿರುವುದು ಅತ್ಯಂತ ಹೀನಾಯ ಕೃತ್ಯವಾಗಿದೆ. ಇದರಿಂದ ಇಡೀ ವಿಶ್ವವೇ ಬೆಚ್ಚಿ ಬಿದ್ದಿದ್ದು, ಎಲ್ಲಾ ದೇಶಗಳಿಗೂ ಇದು ಆತಂಕಕಾರಿ ಸಂಗತಿಯಾಗಿದೆ. ವಿಕೃತ ಮನಸ್ಸಿನ ಉಗ್ರರದ್ದು ರಾಕ್ಷಸೀ ಕೃತ್ಯವಾಗಿದೆ. ಇದರಿಂದ ಇಡೀ ವಿಶ್ವವೇ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಸನ್ನಿವೇಶ ಎದುರಾಗಿದೆ. ಭಯೋತ್ಪಾದನೆ ಮತ್ತು ಧರ್ಮಾಂಧತೆಗೆ ಎಂದೂ ಮಾನವೀಯ ಸಂಬಂಧಗಳು ಮತ್ತು ಮೌಲ್ಯವಿರುವುದಿಲ್ಲ. ಧರ್ಮಾಂಧ ಮೂಲಭೂತವಾದಿಗಳ ವಿರುದ್ಧ ಮತ್ತು ಭಯೋತ್ಪಾದಕರ ವಿರುದ್ಧ ವಿಶ್ವ ಸಂಸ್ಥೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೃತಪಟ್ಟ ಮಕ್ಕಳ ಆತ್ಮಕ್ಕೆ ಶಾಂತಿ ಕೋರಿ ತಾಲ್ಲೂಕು ಕಚೇರಿಯ ಮುಂದೆ ಒಂದು ನಿಮಿಷ ಮೌನಾಚರಣೆ ನಡೆಸಿದರು.
ಡಿ.ವೈ.ಎಫ್‌.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ, ಎಸ್‌.ಎಫ್‌.ಐ ನ ನಾಗರಾಜು, ಮಂಜುನಾಥ, ವೆಂಕಟೇಶ್‌, ಸೌಮ್ಯ, ಮಂಜುಶ್ರೀ, ನೇತ್ರಾ, ಶೋಭಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಜಂಗಮಕೋಟೆ ರೇಷ್ಮೆ ಸಹಕಾರ ಸಂಘದ ಆವರಣದಲ್ಲಿ ನಂದಿನಿ ಉತ್ಪನ್ನಗಳ ಮಾರಾಟಮಳಿಗೆ

0

ಕೋಲಾರ-ಚಿಕ್ಕಬಳ್ಳಾಪುರ ಅವಿಭಾಜ್ಯ ಜಿಲ್ಲೆಗಳಲ್ಲಿನ ಎಲ್ಲಾ ವ್ಯವಸಾಯ ಸೇವಾ ಸಹಕಾರ ಸಂಘಗಳ ಮುಖಾಂತರ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಮಾಡಿಸಿ ಸಹಕಾರ ಸಂಘಗಳ ಅಭಿವೃದ್ಧಿಗೆ ಕೋಚಿಮುಲ್ ನಿರ್ದೇಶಕರು ಸಹಕಾರ ನೀಡಬೇಕು ಎಂದು ಕೋಲಾರ ಜಿಲ್ಲಾಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ರೇಷ್ಮೆ ಬೆಳೆಗಾರರ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ನಂದಿನ ಉತ್ಪನ್ನಗಳ ಮಾರಾಟಮಳಿಗೆಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಹಕಾರ ಸೇವಾ ಸಂಘಗಳ ಮುಖಾಂತರ ರೈತರುಗಳಿಗೆ ಬೇಕಾಗಿರುವ ರಸಗೊಬ್ಬರಗಳು, ಕಾಫಿ, ಬೂಸಾ, ಹಿಂಡಿ, ದಿನಸಿ ವಸ್ತುಗಳು, ಇ.ಸ್ಟಾಂಪಿಂಗ್, ಮತ್ತು ರೈತರುಗಳಿಗೆ ಸಾಲಗಳ ವಿತರಣೆಗಳ ಮೂಲಕ ಸಂಘವನ್ನು ನಡೆಸಲಾಗುತ್ತಿತ್ತು, ಈಗ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಸಹಕಾರ ಸಂಘಕ್ಕೆ ನೀಡಿರುವುದರಿಂದ ಮತ್ತಷ್ಟು ಲಾಭಾಂಶವನ್ನು ಪಡೆದುಕೊಂಡು ರೈತರಿಗೆ ಅನುಕೂಲ ಮಾಡಿಕೊಡಲು ಸಹಕಾರಿಯಾಗುತ್ತದೆ, ಇದರಿಂದಾಗಿ ಕೋಚಿಮುಲ್‌ಗೂ ಮಾರುಕಟ್ಟೆಯ ಸೌಲಭ್ಯವೂ ಲಭ್ಯವಾಗುತ್ತದೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟಂತಾಗುತ್ತದೆ, ಉತ್ತರ ಕನ್ನಡ, ಉತ್ತರ ಕರ್ನಾಟಕ, ಕೊಡಗು ಜಿಲ್ಲೆಗಳ ಮಾದರಿಯಲ್ಲಿ ಸಹಕಾರ ಸಂಘಗಳ ಅಭಿವೃದ್ದಿಗಾಗಿ ಹೆಚ್ಚಿನ ಪ್ರೋತ್ಸಾಹ ಅಗತ್ಯವಾಗಿದೆ, ರೈತರೂ ಕೂಡಾ ನಮ್ಮ ಡಿ.ಸಿ.ಸಿ,ಬ್ಯಾಂಕುಗಳ ಮುಖಾಂತರ ವಹಿವಾಟುಗಳನ್ನು ನಡೆಸುವ ಮೂಲಕ ಬ್ಯಾಂಕುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ರೈತರು, ಸಾಮಾನ್ಯ ವರ್ಗದವರೂ ಸೇರಿದಂತೆ ನಾಗರೀಕರು ಹೆಚ್ಚು ನಂದನಿ ಉತ್ಪನ್ನಗಳನ್ನು ಖರೀದಿ ಮಾಡಿ ಜನರ ಆರೋಗ್ಯದ ಬಗ್ಗೆ ಗಮನಹರಿಸುವುದರೊಂದಿಗೆ ಕಡಿಮೆ ಬೆಲೆಗೂ ಜನ ಸಾಮಾನ್ಯರಿಗೂ ಸಿಗುವಂತೆ ತಯಾರಿಸಿರುವ ನಂದಿನಿ ಹಾಲಿನ ಉತ್ಪನ್ನಗಳನ್ನು ಖರೀದಿಸುವುದರಿಂದ ಈ ಭಾಗದ ಹೈನುಗಾರಿಕೆ ಕ್ಷೇತ್ರ ಮತ್ತು ರೈತರನ್ನು ಸಹ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕರಾದ ಕೆ.ವಿ.ನಾಗರಾಜ್, ಕೆ.ಅಶ್ವತ್ಥರೆಡ್ಡಿ. ಸುನಂದಮ್ಮ,ಡಿ.ಆರ್.ಎಸ್.ಸಿ. ಬಿ.ಜಿ.ಮಂಜುಳಾ, ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಮುಖ್ಯಕಾರ್ಯನಿರ್ವಾಹಕ ವ್ಯವಸ್ಥಾಪಕ ಬಾಬುರೆಡ್ಡಿ, ಜಂಗಮಕೋಟೆ ಸಹಕಾರ ಸಂಘದ ಅಧ್ಯಕ್ಷ ಟಿ.ರವಿಕುಮಾರ್, ಜಿಲ್ಲಾ ಯೂನಿಯನ್ ನಿರ್ದೇಶಕ ತಾದೂರು ರಮೇಶ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ನಾಗರಾಜ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜೆ.ಎಂ.ವೆಂಕಟೇಶ್, ಮಾಜಿ ಅಧ್ಯಕ್ಷ ನಜೀರ್‌ಸಾಬ್, ಪುರಸಭಾ ಸದಸ್ಯ ಅಪ್ಸರ್‌ಪಾಷಾ, ಎಚ್.ಎಂ.ಮುನಿಯಪ್ಪ, ರತ್ನಮ್ಮ, ಶ್ರೀನಿವಾಸ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಜೀವ ವಿಮಾ ಸಪ್ತಾಹ ನೋಂದಣಿ

0

ಜೀವ ವಿಮಾ ಸಪ್ತಾಹ ನೋಂದಣಿಯನ್ನು ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಡಿಸೆಂಬರ್ 23 ರಿಂದ ಒಂದು ವಾರದ ಕಾಲ ನಡೆಸುತ್ತಿರುವುದಾಗಿ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್ ಗೌಡ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರೀಯ ವೇಡ್ಪಾಲ್ ಭೀಮಾ ಯೋಜನೆಯು ಕುರಿಗಾರರಿಗೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ಅನುಷ್ಠಾನಗೊಳ್ಳುತ್ತಿದೆ. ಈ ಪಾಲಿಸಿಗೆ ಕಟ್ಟಬೇಕಾದ ಒಟ್ಟು ಮೊತ್ತ 330 ರೂ ಆಗಿದ್ದು, ಅದರಲ್ಲಿ ಕುರಿಗಾರರು 80 ರೂಗಳನ್ನು ನೀಡಿದರೆ, ಎಲ್.ಐ.ಸಿ 100 ರೂಗಳನ್ನು ಮತ್ತು ಕೇಂದ್ರೀಯ ಉಣ್ಣೆ ನಿಗಮ 150 ರೂಗಳನ್ನು ಭರಿಸುತ್ತದೆ. ಈ ವಿಮೆಗೆ ಒಳಪಟ್ಟ ಕುರಿಗಾರರ ಕುಟುಂಬದಲ್ಲಿ ಯಾರಾದರೂ ಸ್ವಾಭಾವಿಕ ಮರಣ ಹೊಂದಿದಲ್ಲಿ ಎಲ್.ಐ.ಸಿ 60 ಸಾವಿರ ರೂಗಳನ್ನು ನೀಡುತ್ತದೆ. ಆಕಸ್ಮಿಕವಾದ ದುರ್ಘಟನೆಯಿಂದ ಒಂದು ಕಣ್ಣು ಅಥವಾ ಕಿವಿ ಅಥವಾ ಕಾಲು ಕಳೆದುಕೊಂಡಲ್ಲಿ 75 ಸಾವಿರ ರೂಗಳನ್ನು, ಅಕಸ್ಮಾತ್ ಎರಡೂ ಕಣ್ಣು ಅಥವಾ ಕಿವಿ ಅಥವಾ ಕಾಲು ಕಳೆದುಕೊಂಡಲ್ಲಿ ಒಂದೂವರೆ ಲಕ್ಷ ಪರಿಹಾರವಾಗಿ ಸಿಗುತ್ತದೆ.
ಈ ವಿಮೆಗೆ ಒಳಪಟ್ಟ ಕುರಿಗಾರರ ಮಕ್ಕಳಿಗೆ ಒಂಭತ್ತರಿಂದ ಪಿಯುಸಿ ವರೆಗಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ಸಹ ಸಿಗಲಿದೆ. ಒಂದು ಕುಟುಂಬದ ಇಬ್ಬರು ಮಕ್ಕಳಿಗೆ ತಲಾ 1200 ರೂಗಳು ವಾರ್ಷಿಕವಾಗಿ ನೀಡಲಾಗುತ್ತದೆ. ರಾಜ್ಯ ಸರ್ಕಾರ ಕುರಿಗಳು ಆಕಸ್ಮಿಕವಾಗಿ ಮೃತಪಟ್ಟರೆ ನೀಡುತ್ತಿದ್ದ 3000 ರೂ ಪರಿಹಾರ ಧನವನ್ನು 5 ಸಾವಿರ ರೂಗಳಿಗೆ ಏರಿಸಿದ್ದಾರೆ. ಆದರೆ ಇದು ತಾತ್ಕಾಲಿಕ ಯೋಜನೆಯಾಗಿದೆ. ಒಂದು ವಾರದ ಕಾಲ ನಡೆಯುವ ಈ ನೋಂದಣಿ ಕಾರ್ಯದಲ್ಲಿ ಕುರಿಗಾರರು ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು. ಜನವರಿ ತಿಂಗಳಿನಲ್ಲಿ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರ ಮೂಲಕ ವಿಮೆಯ ಸರ್ಟಿಫಿಕೇಟ್ ವಿತರಿಸಲಾಗುತ್ತದೆ.
ಹರಿಯಾಣದ ಇಸ್ಸಾರಿನ ಕೇಂದ್ರೀಯ ಕುರಿಸಾಕಾಣಿಕಾ ಕೇಂದ್ರಕ್ಕೆ ಫೆಬ್ರುವರಿ ತಿಂಗಳಿನಲ್ಲಿ ನಮ್ಮ ಸಂಘದಿಂದ 25 ಮಂದಿ ಕುರಿಗಾರರನ್ನು ಆರು ದಿನಗಳ ತರಬೇತಿಗೆ ಕಳುಹಿಸಿಕೊಡಲಾಗುತ್ತದೆ. ರಾಣೆಬೆನ್ನೂರಿನ ಉಣ್ಣೆ ಉತ್ಪನ್ನಗಳ ಮಾರಾಟ ಮಂಡಳಿಯು ಸಂಘದ ಆಯ್ದ ಸದಸ್ಯರಿಗೆ ತಿಂಗಳಿಗೆ 3 ಸಾವಿರ ರೂಗಳ ವಿದ್ಯಾರ್ಥಿ ವೇತನದೊಂದಿಗೆ ಆರು ತಿಂಗಳ ಕಾಲ ತರಬೇತಿಯನ್ನು ಉಚಿತವಾಗಿ ನೀಡುತ್ತಿದೆ. ರಾಜಾಸ್ಥಾನದ ಜೋದ್ಪುರಕ್ಕೆ ಇಬ್ಬರನ್ನು ಒಂದು ವಾರದ ಕಾಲ ಉಣ್ಣೆಯ ಕುರಿತಂತೆ ತರಬೇತಿಗೂ ಸಂಘದಿಂದ ಕಳುಹಿಸುವುದಾಗಿ ತಿಳಿಸಿದರು.
ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ನಿರ್ದೇಶಕರಾದ ರಾಮಣ್ಣ, ಶಿವಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!