17.1 C
Sidlaghatta
Sunday, December 28, 2025
Home Blog Page 1004

ಪ್ರಧಾನಿ ನರೇಂದ್ರ ಮೋದಿ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ದೇಶವನ್ನು ಒತ್ತೆಯಿಡುತ್ತಿದ್ದಾರೆ – ಶ್ರೀರಾಮರೆಡ್ಡಿ

0

ಕಾರ್ಪೊರೇಟ್ ಸಂಸ್ಥೆಗಳ ಸಿ.ಇ.ಒ ರೀತಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ದೇಶವನ್ನು ಒತ್ತೆಯಿಡುತ್ತಿದ್ದಾರೆ ಎಂದು ಸಿ.ಪಿ.ಐ.ಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಶ್ರೀರಾಮರೆಡ್ಡಿ ಆರೋಪಿಸಿದರು.
ಪಟ್ಟಣದ ಸ್ತ್ರೀಶಕ್ತಿ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಸಿ.ಪಿ.ಐ.ಎಂ ಪಕ್ಷದ ಸಂಘಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ನಮ್ಮನ್ನು ಆಳುತ್ತಿರುವ ಸರ್ಕಾರಗಳು ತಾವು ನೀಡಿರುವ ಆಶ್ವಾಸನೆಗಳಿಗೆ ತದ್ವಿರುದ್ದವಾಗಿ ನಡೆಯುತ್ತಿವೆ. ಮಾಜಿ ಪ್ರಧಾನಿ ಮನಮೋಹನ್ಸಿಂಗ್ ಅಸಮರ್ಥತೆಯಿಂದಾಗಿ ದೇಶದ ಆರ್ಥಿಕತೆ ದಿವಾಳಿಯಂಚಿಗೆ ತಲುಪಿತ್ತು. ಈಗ ಹೊಸ ಸರ್ಕಾರ ಬಂದು ಆರು ತಿಂಗಳಾದರೂ ಏನೂ ಬದಲಾವಣೆ ಆಗಿಲ್ಲ. ಆರ್ಥಿಕ ನೀತಿಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಕಾನೂನು ತಿದ್ದುಪಡಿ ಮಾಡಲು ಹೊರಟಿದ್ದಾರೆ. ಕಂಪೆನಿಗಳ ಲಾಭಕ್ಕಾಗಿ ಕಾರ್ಮಿಕ ಕಾಯ್ದೆ ತಿದ್ದುಪಡಿ ಕೂಡ ಮಾಡುತ್ತಿದ್ದಾರೆ. ಇದರ ಪರಿಣಾಮ ಸಾಮಾನ್ಯ ಜನರ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಔಷಧಿ ದರ ನಿಯಂತ್ರಣ ಸರ್ಕಾರದ ಅಧೀನದಲ್ಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಪ್ರವಾಸದ ಸಾಧನೆಯಿದು. ಅಮೆರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹಿ ಹಾಕಿದ ಒಡಂಬಡಿಕೆಯಿಂದಾಗಿ 80 ಜೀವರಕ್ಷಕ ಔಷಧಿಗಳ ದರ ಹೆಚ್ಚುತ್ತಿವೆ. ಸಾವಿರಾರು ಕೋಟಿ ರೂಗಳು ಚುನಾವಣೆಯ ಸಮಯದಲ್ಲಿ ಖರ್ಚು ಮಾಡಿದ ಅದಾನಿ ಗ್ರೂಪ್ ಕಂಪೆನಿಗೆ ಕೃತಜ್ಞತೆಯ ರೂಪವಾಗಿ ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿ ಒಪ್ಪಂದ ಮಾಡಿಸಿಕೊಡಲಾಗಿದೆ. ಕಪ್ಪು ಹಣ ವಾಪಸ್ ತರುವುದಾಗಿ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ಗಾಂಧಿಯನ್ನು ಹತ್ಯೆ ಮಾಡಿದ ಜನ ಸ್ವಚ್ಛಭಾರತದ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ದುರಂತವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಲಕ್ವ ಹೊಡೆದಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸ್ವಸಹಾಯ ಸಂಘಗಳನ್ನು ರಚಿಸುವ ಮೂಲಕ ಸಿ.ಪಿ.ಐ.ಎಂ ಮತ್ತು ಎಡಪಕ್ಷಗಳ ಆಡಳಿತದಿಂದ ಮಾತ್ರ ಜನಸಾಮಾನ್ಯರಿಗೆ ಅನುಕೂಲ ಮತ್ತು ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಹಿಂದೆ ದೇಶದ ಭೂಮಾಲೀಕರು ಹಾಗೂ ಬಂಡವಾಳಶಾಹಿಗಳ ವಿರುದ್ಧ ಹೋರಾಡುವುದೊಂದೇ ಸಿ.ಪಿ.ಐ.ಎಂ ಪಕ್ಷದ ಮುಖ್ಯ ಉದ್ದೇಶವಾಗಿತ್ತು. ಈಗ ದೇಶ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಕೋಮುವಾದಿ ಅಪಾಯವಿದೆ, ಧರ್ಮದ ಹೆಸರಿನಲ್ಲಿ ಶೋಷಣೆ, ಜಾತಿಯ ಹೆಸರಿನಲ್ಲಿ ಶೋಷಣೆ, ಮೂಡನಂಬಿಕೆಗಳ ಮೂಲಕ ಜನಸಾಮಾನ್ಯರ ಶೋಷಣೆ ನಡೆಯುತ್ತಿದೆ. ನೀರಿನ ಸಮಸ್ಯೆಗೆ ಪರಿಹಾರವಾಗಿ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವ ತುರ್ತಿದೆ. ನಮ್ಮ ಭಾಗದಲ್ಲಿ ಎಲ್ಲಾ ಜನಪ್ರತಿನಿಧಿಗಳೂ ಮತ್ತು ಕೆಲ ಮುಖಂಡರು ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾತ್ರ ಶಾಶ್ವತ ನೀರಾವರಿ ಯೋಜನೆಯ ವಿಷಯವನ್ನು ಬಳಸಿಕೊಳ್ಳುತ್ತಿದ್ದಾರೆಯೇ ವಿನಃ ನೀರು ತರಲು ಅವರಿಗೆ ಆಸಕ್ತಿಯಿಲ್ಲ ಎಂದು ಲೇವಡಿ ಮಾಡಿದರು.
ಸಿ.ಪಿ.ಐ.ಎಂ ಮುಖಂಡರಾದ ಕೆ.ಎಂ.ವೆಂಕಟೇಶ್, ಲಕ್ಷ್ಮೀದೇವಮ್ಮ, ಮುನಿವೆಂಕಟಪ್ಪ, ಮಳ್ಳೂರು ಶಿವಣ್ಣ, ಕೆ.ಸಿ.ವೆಂಕಟೇಶ್, ಮುನಿಕೃಷ್ಣಪ್ಪ, ಮುನೀಂದ್ರ, ಪಾಪಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಜೀವನದಲ್ಲಿ ಸ್ವಚ್ಛತೆ

0

ಪ್ರತಿಯೊಬ್ಬರ ಜೀವನ ಕ್ರಮವು ಬೇರೆ ಬೇರೆಯಾಗಿರುತ್ತದೆ. ಬೆಳಿಗ್ಗೆ ಏಳುವುದರಿಂದ ರಾತ್ರಿಯವರೆಗೂ ಉನ್ನತ ಸ್ತರದವರು ಕೆಳವರ್ಗದವರೂ ಎಲ್ಲರೂ ಅವರವರದೇ ಆದ ರೀತಿಯನ್ನು ರೂಢಿಸಿಕೊಂಡಿರುತ್ತಾರೆ. ನಮ್ಮ ಜೀವನದಲ್ಲಿ ಸ್ವಚ್ಛತೆಯ ಪ್ರಾಧಾನ್ಯತೆ ಏನು? ಹೇಗಿರಬೇಕು? ಮಕ್ಕಳ ವಿಷಯದಲ್ಲಿ ಸ್ವಚ್ಛತೆಯ ಪ್ರಾಮುಖ್ಯತೆ ಏನು?
ನನಗೆ ತಿಳಿದ ಮಟ್ಟಿಗೆ ಕೆಳವರ್ಗದ ಮಕ್ಕಳು ಅದ್ಭುತವಾದ ಪ್ರತಿರೋಧ ಶಕ್ತಿಯನ್ನು ಹೊಂದಿರುತ್ತವೆ. ಕೊಳಚೆ ಪ್ರದೇಶದ ಮಕ್ಕಳು, ರಸ್ತೆ ಮಾಡುವವರ ಮಕ್ಕಳು, ಕಲ್ಲು ಕೊರೆಯುವವರ ಮಕ್ಕಳು ದಷ್ಟಪುಷ್ಠವಾಗಿ ಆರೋಗ್ಯವಾಗಿರುವಂತೆ ಕಂಡುಬರುತ್ತದೆ. ಎಣ್ಣೆಯೇ ಕಾಣದ ತಲೆಕೂದಲು, ಸ್ನಾನವನ್ನು ಕಾಣದೇ ಎಷ್ಟು ದಿನಗಳೇ ಕಳೆದು ಹೋದವೆನೋ ಎನ್ನುವಂತೆ ಕಾಣುವ ಮೈ, ಬಟ್ಟೆಯ ಪರಿವೆಯೇ ಇಲ್ಲದೆ ಮಣ್ಣುರಾಶಿಯ ಮೇಲೋ, ಕಲ್ಲುರಾಶಿಯ ಮೇಲೋ ಆಡುತ್ತಿರುತ್ತವೆ. ಹಾಗಿದ್ದರೆ ಆ ಮಕ್ಕಳು ಅದೆಷ್ಟರ ಮಟ್ಟಿಗೆ ಸ್ವಚ್ಛತೆಯಲ್ಲಿ ಬೆಳೆಯಲು ಸಾಧ್ಯವಾಗಬಹುದು. ದೇವರು ಆ ಮಕ್ಕಳಿಗೆ ವಿಶೇಷವಾದ ಪ್ರತಿರೋಧ ಶಕ್ತಿಯನ್ನು ಕೊಟ್ಟಿರಬಹುದೇ?
ನನ್ನ ಅಜ್ಜಿ ಹೇಳುತ್ತಿದ್ದಳು “ಕೋಣೆ ಮಕ್ಕಳು ಕೊಳೆಯುತ್ತವೆ, ಬೀದಿ ಮಕ್ಕಳು ಬೆಳೆಯುತ್ತವೆ” ಎಂದು, ಅಂದರೆ ಅದರರ್ಥ ನಾವು ಸ್ವಚ್ಛತೆಯಲ್ಲಿ ಬೆಳೆಸುವುದರಿಂದ ಮಕ್ಕಳು ಆರೋಗ್ಯವಾಗಿ ಬೆಳೆಯಲಾರರು ಎಂದರ್ಥವಲ್ಲ. ಕೋಣೆಯ ಮಕ್ಕಳು ಅಂದರೆ ಅತಿ ಕಾಳಜಿಯಿಂದ ಬೆಳೆಸಿದ ಮಕ್ಕಳು, ಅಂದರೆ ಮಣ್ಣಿನಲ್ಲಿ ಹೋಗಬೇಡ, ಸೋಂಕು ತಗುಲುತ್ತದೆ, ಮಳೆಯಲ್ಲಿ ನೆನೆಯಬೇಡ ಶೀತ ಆಗುತ್ತದೆ ಎಂದು ಹೇಳುತ್ತಾ ಮನೆಯಲ್ಲಿಯೇ ಬಂಧಿಯಾಗಿರುವ ಮಕ್ಕಳು. ಬೀದಿಯ ಮಕ್ಕಳು ಎಂದರೆ ಸ್ವತಂತ್ರವಾಗಿ ತಮಗೆ ಬೇಕೆಂದಲ್ಲಿ ಹೋಗಿ ಆಡಿಕೊಂದು ಇರುವ ಮಕ್ಕಳು.
ಈಗಿನ ಮಕ್ಕಳು ಎಂದಿಗೂ ಮಣ್ಣಿನಲ್ಲಿ ಆಟವಾಡಲಾರರು, ಮಳೆಯಲ್ಲಿ ನೆನೆಯಲಾರರು, ಬಿಸಿಲಲ್ಲಿ ಬೇಯಲಾರರು ಅಥವಾ ನಾವು ಬಿಡಲಾರೆವು ಮಕ್ಕಳನ್ನು ಪ್ರಕೃತಿಯ ಸನಿಹಕ್ಕೆ. ಇಲ್ಲಿ ಯಾಕೆ ಬಿಡಲಾರೆವು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಅಲ್ಲೇ ಉತ್ತರವೂ ಇದೆ, ನಾವೇ ಕಲುಷಿತಗೊಳಿಸಿರುವ ಪ್ರದೇಶಕ್ಕೆ ಗೊತ್ತಿದ್ದು ಗೊತ್ತಿದ್ದು ಯಾವ ತಂದೆ ತಾಯಿ ತಾನೆ ಮಕ್ಕಳನ್ನು ಕಳಿಸಲು ಇಚ್ಛಿಸುತ್ತಾರೆ. ಎಲ್ಲಿ ನೋಡಿದರೂ ಉಗುಳುತ್ತಾ ಓಡಾಡುವ ಜನ, ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಸ, ಕಡ್ಡಿ, ಕೊಳಚೆ ನೀರು ಇರುವಂತಹುದು, ಹೀಗೇ ಉದ್ದವಾಗುತ್ತಾ ಹೋಗುತ್ತದೆ ನಮ್ಮ ಘನಂದಾರಿ ಕೆಲಸಗಳು. ಇಂಥ ಪರಿಸ್ಥಿಯನ್ನು ತಂದೊಡ್ಡಿ ಈಗಿನ ಮಕ್ಕಳು ನಮ್ಮಂತೆ ಪ್ರಕೃತಿಯಲ್ಲಿ ಬೆರೆಯಲಾರವು ಎಂದು ಅವಲತ್ತುಕೊಂಡರೆ ಪ್ರಯೋಜನವೇನು? ನಾವು ಚಿಕ್ಕವರಾಗಿದ್ದಾಗ ಇದ್ದ ನೆಲ ಜಲ ಯಾವುದೂ ಈಗ ಇಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಈಗ ನಾವೆಷ್ಟು ನಮ್ಮನ್ನು ನಾವು ಪ್ರಕೃತಿಯಲ್ಲಿ ತೊಡಗಿಸಿಕೊಂಡಿದ್ದೇವೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆಯಲ್ಲವೆ? ಪ್ರಕೃತಿಯ ಯಾವುದೇ ಸೃಷ್ಠಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದ ಕಾರಣ ಪ್ರತಿರೋಧ ಶಕ್ತಿ ಕುಂಠಿತವಾಗಬಹುದೇನೋ ಎನ್ನುವುದು ಇದರ ಅರ್ಥ ಇರಬಹುದೆಂದು ನನ್ನ ಅನಿಸಿಕೆ.
ಸ್ವಚ್ಛತೆಯ ಬಗ್ಗೆ ಮಾತನಾಡಲು ಹೋದರೆ ಎಲ್ಲರೂ ಅವರವರದೇ ಅದ ಕ್ರಮವನ್ನು ಹೇಳುತ್ತಾರೆ ಕೆಲವರು ಮಕ್ಕಳು ಮಣ್ಣಿನಲ್ಲಿ ಆಡಬೇಕು, ಮಳೆಯಲ್ಲಿ ನೆನೆಯಬೇಕು ಆಗ ಮಕ್ಕಳಿಗೆ ಎಲ್ಲವನ್ನೂ ಸಹಿಸುವ ಶಕ್ತಿ ಬರುತ್ತದೆ ಎಂದರೆ ಕೆಲವರು ಇದಕ್ಕೆ ವಿರುದ್ದವಾಗಿ ಹಾಗೆ ಮಾಡಿದರೆ ಆರೋಗ್ಯ ಹಾಳಾಗುತ್ತದೆ ಎನ್ನುತ್ತಾರೆ. ಯಾವುದು ಸರಿ ಯಾವುದು ತಪ್ಪು ಎಂದು ವಿಮರ್ಶೆ ಮಾಡಲು ಬರುವುದಿಲ್ಲವೆನೊ, “ಲೋಕೋ ಭಿನ್ನ ರುಚಿ:”
ಇದೆಲ್ಲವನ್ನೂ ಮೀರಿ ಪ್ರತಿಯೊಬ್ಬರೂ ಅವರದೇ ಆದ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡು ಜೀವಿಸುವುದೂ ಅಷ್ಟೇ ಸತ್ಯ ಅಲ್ಲವೇ….?

ಚಳಿ ಚಳಿ ತಾಳೆನು ಈ ಚಳಿಯಾ

0

ಬೆಚ್ಚನೆಯ ಹೊದಿಕೆಯನ್ನು ಹೊದೆದು ಸೂರ್ಯನ ಕಿರಣಗಳು ಮಲಗುವ ಕೋಣೆಯ ಕಿಟಕಿಗಳನ್ನು ಹಾದು ಬರುವವರೆಗೆ ಮಲಗುವುದೆಂದರೆ ಚಳಿಗಾಲದಲ್ಲಿ ಆಪ್ಯಾಯಮಾನ ಆಬಾಲ ವೃದ್ಧರಾದಿಯಾಗಿ ಎಲ್ಲರೂ ಇಷ್ಟಪಡುವ ಕಾಲ ಇದು. ಬಿಸಿ ಬಿಸಿ ಕಾಫಿಯನ್ನು ಹೀರುತ್ತಾ ಮುಂಜಾನೆಯ ವೃತ್ತ ಪತ್ರಿಕೆಗಳನ್ನು ಓದುವುದು ಅಥವಾ ದೂರದರ್ಶನದಲ್ಲಿ ವಾರ್ತೆಗಳನ್ನು ವೀಕ್ಷಿಸುವವರ ಗುಂಪು ಒಂದು ಕಡೆಯಾದರೆ ಈ ಚಳಿಗಾಲದಲ್ಲೂ (ಮಾಘ ಮಾಸ) ಮುಂಜಾನೆ ಬೇಗನೆ ಎದ್ದು, ಸ್ನಾನ ಮುಗಿಸಿ ಪೂಜೆ ಪುನಸ್ಕಾರಗಳನ್ನು ಮುಗಿಸಿ ದೇವಸ್ಥಾನಗಳಿಗೆ ಭೇಟಿ ಕೊಡುವವರ ಗುಂಪು ಇನ್ನೊಂದು ಕಡೆ ಈ ಕಾಲದಲ್ಲಿ ಗಿಡಮರಗಳ ಎಲೆಗಳು ಉದುರುತ್ತವೆ. ಇದು ಪ್ರಕೃತಿಯ ಬದಲಾವಣೆಗೆ ತಕ್ಕಂತೆ ನೀರಿನ ಅಂಶವನ್ನು ತನ್ನಲ್ಲಿಯೇ ಶೇಖರಿಸಿಟ್ಟುಕೊಳ್ಳಲು ಮರ, ಗಿಡಗಳು ಮಾಡಿಕೊಳ್ಳುವ ಬದಲಾವಣೆ. ಈ ಋತುವಿನಲ್ಲಿ ಜೀರ್ಣ ಶಕ್ತಿ ಹೆಚ್ಚಿರುತ್ತದೆ. ದೇಹದ ಬಲವೂ ಚೆನ್ನಾಗಿರುತ್ತದೆ. ಪರಿಸರದಲ್ಲಿ ಒಣ ಗಾಳಿಯು ಬೀಸುತ್ತಿರುವುದರಿಂದ ಚರ್ಮವು ಒಡಿಯುವುದಲ್ಲದೆ, ಚರ್ಮದ ಸೋಂಕುಗಳು ಹೆಚ್ಚಾಗಿ ಕಂಡು ಬರುತ್ತವೆ. ಇದಲ್ಲದೆ ಜ್ವರ, ನೆಗಡಿ ಹಾಗೂ ಶ್ವಾಸಕೋಶ ಸಂಬಂಧಿ ರೋಗಗಳೂ ಕೂಡ ಕಂಡು ಬರುವ ಸಾಧ್ಯತೆ ಹೆಚ್ಚು. ಆದ ಕಾರಣ ಚಳಿಗಾಲದಲ್ಲಿ ಆಹಾರ ವಿಹಾರ ಹೀಗಿದ್ದರೆ ಒಳ್ಳೆಯದು.
ಆಹಾರ:
1. ಅಧಿಕವಾಗಿ ಹಸಿವು ಇರುವುದರಿಂದ ಜೀರ್ಣಕ್ಕೆ ಜಡವಾದಂಥಹ ಆಹಾರ ಸೇವನೆ ಮಾಡುವುದು
2. ಒಣ ಗಾಳಿಯು ಬೀಸುತ್ತಿರುವುದರಿಂದ ಜಿಡ್ಡಿನಂಶ ಹೆಚ್ಚಾಗಿರುವ ಆಹಾರ ಸೇವನೆ ಅಗತ್ಯ. ಆಹಾರವನ್ನು ಸೇವಿಸುವಾಗ ಬಿಸಿ ಆಹಾರದೊಂದಿಗೆ ಒಂದರಿಂದ ಎರಡು ಚಮಚದಷ್ಟು ತುಪ್ಪವನ್ನು ಸೇರಿಸಿ ಸೇವಿಸುವುದು ಹಿತಕರ.
3. ಸಿಹಿ, ಹುಳಿ ಉಪ್ಪು, ಖಾರ ಹಾಗೂ ಕ್ಷಾರ ರಸ ಪ್ರಧಾನವಾಗಿರುವ ಆಹಾರ ಸೇವನೆ ಈ ಋತುವಿನಲ್ಲಿ ಒಳ್ಳೆಯದು.
4. ಅಡುಗೆಗೆ ಸಾಸಿವೆ ಎಣ್ಣೆಯನ್ನು ಬಳಸುವುದು ಹಿತಕರ ಸಾಸಿವೆ ಎಣ್ಣೆ ದೇಹವನ್ನು ಬೆಚ್ಚಗಿಡುವುದಲ್ಲದೆ ವಾತವನ್ನು ಶಮನಗೊಳಿಸುವುದು.
5. ಗೋಧಿ ಹಿಟ್ಟಿನಿಂದ ತಯಾರಿಸಿದ ಪೂರಿ, ಚಪಾತಿ, ದೋಸೆಗಳನ್ನೂ ಕೂಡ ಈ ಋತುವಿನಲ್ಲಿ ಹಿತಕರ. ಗೋಧಿ ಜೀರ್ಣಕ್ಕೆ ಜಡ ಅಲ್ಲದೆ ವಾತವನ್ನು ಶಮನಗೊಳಿಸುವುದು.
6. ತುಪ್ಪದಲ್ಲೇ ತಯಾರಿಸಿದ ಸಜ್ಜಿಗೆ, ಹಿಟ್ಟಿನ ಉಂಡೆ, ಪೊಂಗಲ್ ಹಾಗೂ ಇತರೇ ಸಿಹಿ ತಿನಿಸುಗಳೂ ಕೂಡ ಈ ಋತುವಿನಲ್ಲಿ ಅಗತ್ಯ.
7. ಹಾಲು ಹಾಗೂ ಹಾಲಿನಿಂದ ತಯಾರಿಸಿದ ಪದಾರ್ಥಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪಗಳನ್ನೂ ಕೂಡ ಈ ಋತುವಿನಲ್ಲಿ ಯಥೇಚ್ಛವಾಗಿ ಬಳಸಬಹುದು.
8. ಹಾಲು ಹಾಗೂ ತುಪ್ಪದಿಂದ ತಯಾರಿಸಿದ ಬೂದುಗುಂಬಳದ ಹಲ್ವಾ, ಸೋರೇಕಾಯಿ ಹಲ್ವಾ, ಸೀಮೆ ಬದನೆಕಾಯಿ ಹಲ್ವಾ, ಪಾಯಸಗಳೂ ಕೂಡ ಈ ಋತುವಿನಲ್ಲಿ ಉತ್ತಮ.
9. ಮೊಸರಿನಿಂದ ಶ್ರೀಖಂಡವನ್ನು ತಯಾರಿಸಿ ಬಳಸಬಹುದು.
10. ಬೂದುಗುಂಬಳ, ಸೋರೇಕಾಯಿ, ಸೌತೆಕಾಯಿ, ಮಂಗಳೂರು ಸೌತೆ, ಸೀಮೆ ಬದನೆಕಾಯಿ, ಇವುಗಳಿಂದ ಮಜ್ಜಿಗೆ ಹುಳಿಯನ್ನು ತಯಾರಿಸಿ ಸೇವಿಸುವುದು ಹಿತಕರ.
11. ನುಗ್ಗೇಕಾಯಿ, ಹೀರೇಕಾಯಿ, ತೊಂಡೇಕಾಯಿ, ಕ್ಯಾರೆಟ್ ಹಾಗೂ ವಿವಿಧ ರೀತಿಯ ಸೊಪ್ಪುಗಳು (ಉದಾ: ಪಾಲಕ್, ಮೆಂತ್ಯ, ಸಬ್ಬಸಿಗೆ, ಹರಿವೆ, ದಂಟಿನ ಸೊಪ್ಪು) ಗಳನ್ನೂ ಕೂಡ ಈ ಋತುವಿನಲ್ಲಿ ಬಳಸಬಹುದು.
12. ಅಲ್ಲದೆ ಗಡ್ಡೆ, ಗೆಣಸುಗಳು ಬೀಟ್ರೂಟ್, ಆಲುಗಡ್ಡೆ, ಕೆಸವಿನ ಗಡ್ಡೆ, ಬಾಳೆದಿಂಡು ಇವುಗಳನ್ನೂ ಕೂಡ ಸ್ವಲ್ಪ ಪ್ರಮಾಣದಲ್ಲಿ ಬಳಸಬಹುದು. ಇವೆಲ್ಲವೂ ಜೀರ್ಣಕ್ಕೆ ಜಡವಾದರೂ ಕೂಡ ಈ ಋತುವಿನಲ್ಲಿ ಜೀರ್ಣ ಶಕ್ತಿ ಹೆಚ್ಚಿರುವುದರಿಂದ ಇವುಗಳ ಬಳಕೆ ಹಿಚ್ಚಿನ ತೊಂದರೆಯನ್ನುಂಟು ಮಾಡುವುದಿಲ್ಲ.
13. ಕಬ್ಬು, ಕಬ್ಬಿನಿಂದ ತಯಾರಿಸಿದ ಬೆಲ್ಲ, ಸಕ್ಕರೆ ಹಾಗೂ ಇತರೇ ಬೆಲ್ಲದಿಂದ ತಯಾರಿಸಿದ ಆಹಾರವನ್ನು ಬಳಸುವುದು ಒಳ್ಳೆಯದು.

ವಿಹಾರ:
1. ನಿತ್ಯವೂ ಮೈಗೆ ಎಳ್ಳೆಣ್ಣೆಯನ್ನು ಹಚ್ಚಿ ತಿಕ್ಕಿ ಬಿಸಿ ನೀರಿನ ಸ್ನಾನ ಮಾಡಬೇಕು. ಇದರಿಂದ ವಾತ ಶಮನವಾಗುವುದಲ್ಲದೆ, ಮೈ ಒಡೆಯುವುದು ಕಡಿಮೆಯಾಗಿ, ಚರ್ಮ ನುಣುಪಾಗಿ ಕಾಂತಿಯುಕ್ತವಾಗುತ್ತದೆ.
2. ತಲೆಗೆ ನಿತ್ಯವೂ ಎಣ್ಣೆಯನ್ನು ಹಚ್ಚುವುದು ಹಿತಕರ ಸ್ವಲ್ಪ ಹತ್ತಿಯನ್ನು ಎಣ್ಣೆಯಲ್ಲಿ ಅದ್ದಿ ನೆತ್ತಿಯ ಮೇಲೆ ಇಟ್ಟುಕೊಳ್ಳುವುದೂ ಹಿತಕರ.
3. ಕಪ್ಪನೆಯ ಹತ್ತಿಯ ಅಥವಾ ಉಣ್ಣೆಯ ಬಟ್ಟೆಗಳನ್ನು ಬಳಸುವುದು ಹಿತಕರ. ಕಂಬಳಿ, ಉಣ್ಣೆಯ ಬಟ್ಟೆಗಳು, ಚರ್ಮದ ಹೊದಿಕೆಗಳು ಈ ಋತುವಿನಲ್ಲಿ ಅಗತ್ಯ.
4. ಮನೆಯ ಒಳಗಡೆ ಅಗ್ಗಿಷ್ಠಿಕೆ ಅಥವಾ ಕೆಂಡದ ಒಲೆಗಳನ್ನು ಉರಿಸಿ, ಅವುಗಳಲ್ಲಿ ಮೈ ಕಾಯಿಸಿಕೊಳ್ಳಬೇಕು.
5. ಸ್ನಾನ ಮತ್ತು ಇತರೇ ಶೌಚ ಕಾರ್ಯಗಳಿಗೆ ಬೆಚ್ಚಗಿನ ನೀರನ್ನು ಬಳಸಬೇಕು.
6. ಸ್ನಾನದ ನಂತರ ಮೈಗೆ ಚಂದನ, ಕರ್ಪೂರ ಇತ್ಯಾದಿ ಸುಗಂಧ ದ್ರವ್ಯಗಳ ಲೇಪನ ಹಿತಕರ.
7. ವ್ಯಾಯಾಮ ಈ ಋತುವಿನಲ್ಲಿ ಅಗತ್ಯ. ನಮ್ಮ ಶಕ್ತಿಯ ಅರ್ಧದಷ್ಟು ವ್ಯಾಯಾಮ ಅವಶ್ಯಕ.
8. ಹಗಲು ನಿದ್ದೆ ಈ ಋತುವಿನಲ್ಲಿ ನಿಷಿದ್ಧ.
ಡಾ. ನಾಗಶ್ರೀ.ಕೆ.ಎಸ್.

ಬುರ್ರಕಥಾ ಕಲಾಪ್ರಕಾರ ಕಲಾವಿದ

0

10dec4ಶಿಡ್ಲಘಟ್ಟದಲ್ಲಿ ಮಂಗಳವಾರ ಬುರ್ರಕಥಾ ಕಲಾವಿದನೊಬ್ಬ ಭಿಕ್ಷಾಟನೆ ನಡೆಸುತ್ತಾ ಅಂಗಡಿಯೊಂದರ ಬಳಿ ಕುಳಿತಿದ್ದ ದೃಶ್ಯ ಮರೆಯಾಗುತ್ತಿರುವ ಕಲಾಪ್ರಕಾರದ ಕೊನೆಯ ಕೊಂಡಿಯಂತೆ ಕಂಡು ಬಂದಿತ್ತು.

ರಾಗಿ ಬೆಳೆ ಕ್ಷೇತ್ರೋತ್ಸವ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಎ.ಎನ್.ಮುನಿನಾರಾಯಣಪ್ಪ ಅವರ ಹೊಲದಲ್ಲಿ ಮಂಗಳವಾರ ಭೂ ಚೇತನ ಯೋಜನೆಯಡಿಯಲ್ಲಿ ರಾಗಿ ಬೆಳೆ ಕ್ಷೇತ್ರೋತ್ಸವವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಸಮಗ್ರ ಪೋಷಕಾಂಶಗಳ ನಿರ್ವಹಣೆ, ತಳಿ ಬದಲಾವಣೆ, ಮಣ್ಣು ಹಾಗೂ ನೀರು ಸಂರಕ್ಷಣಾ ಕ್ರಮಗಳನ್ನು ಅನುಸರಿಸಿ ಬೆಳೆ ಉತ್ಪಾದನೆ ಹೆಚ್ಚಿಸಲು ತಾಂತ್ರಿಕ ಮಾಹಿತಿಗಳನ್ನು ತಿಳಿಸಿದರು.
ಕೃಷಿ ಇಲಾಖೆಯ ಉಪನಿರ್ದೇಶಕಿ ಅನುರೂಪ ಮಾತನಾಡಿ,‘ಶೇಕಡಾ 70 ರಿಂದ 80 ಭಾಗ ಮಳೆಯಾಶ್ರಿತ ಪ್ರದೇಶದಲ್ಲಿ ಒಣಬೇಸಾಯವನ್ನು ನಡೆಸಲಾಗುತ್ತಿದೆ. ಅದರ ಉತ್ಪಾದನೆಯನ್ನು ಹೆಚ್ಚಿಸಲು ಭೂ ಚೇತನ ಯೋಜನೆಯನ್ನು ರೂಪಿಸಲಾಗಿದೆ. ನಮ್ಮ ಭಾಗದ ಮಣ್ಣಿನಲ್ಲಿ ಸಾವಯವ ಗೊಬ್ಬರದ ಅಂಶವು ಕಡಿಮೆಯಿರುವುದು ಮಣ್ಣಿನ ಪರೀಕ್ಷೆಯಿಂದ ತಿಳಿದುಬಂದಿದೆ. ಇದರಿಂದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ, ಬೆಳೆಗೆ ಪೂರಕವಾದ ಜೀವಾಣುಗಳ ಕೊರತೆಯನ್ನು ಎದುರಿಸುತ್ತಿದೆ. ದನಕರುಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಈಗ ಕೊಟ್ಟಿಗೆ ಗೊಬ್ಬರದ ಬೆಲೆಯೂ ಗಗನಕ್ಕೇರಿದೆ. ಈ ಎಲ್ಲಾ ಅಂಶಗಳು ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಒಟ್ಟಾರೆಯ ಉತ್ಪಾದನೆಯ ಕೊರತೆಯುಂಟಾಗಿದೆ’ ಎಂದು ತಿಳಿಸಿದರು.
ಅಪ್ಪೇಗೌಡನಹಳ್ಳಿ ಗ್ರಾಮದ ಎ.ಎನ್.ಮುನಿನಾರಾಯಣಪ್ಪ, ತಮ್ಮ ಅನುಭವಗಳನ್ನು ವಿವರಿಸುತ್ತಾ, ಹಿಂದೆ ಎತ್ತುಗಳನ್ನು ಬಳಸಿ ಭೂಮಿಯನ್ನು ಉಳುಮೆಮಾಡಲಾಗುತ್ತಿತ್ತು. ಆದರೆ ಈಗ ಟ್ರಾಕ್ಟರ್ನ ಕಲ್ಟಿವೇಟರ್ ಮೂಲಕ ಉಳುಮೆ ಮಾಡಿ ಬೇಕಾಬಿಟ್ಟಿ ವ್ಯವಸಾಯ ಮಾಡುವುದರಿಂದ ಇಳುವರಿ ಕ್ಷೀಣಿಸುತ್ತಿದೆ. ಭೂಮಿಯನ್ನು ಸಮಯಕ್ಕನುಗುಣವಾಗಿ ಹದವಾಗಿ ಟ್ರಾಕ್ಟರ್ನ ಡಿಸ್ಕ್ ಬಳಸಿ ಉಳುಮೆ ಮಾಡಿದ್ದಲ್ಲಿ ಮಳೆ ಏರುಪೇರಾದರೂ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರಬಲ್ಲದು. ಇದರಿಂದ ಇಳುವರಿ ಹೆಚ್ಚುತ್ತದೆ ಎಂದು ಹೇಳಿದರು.
ಕೃಷಿ ಸಹಾಯಕ ನಿರ್ದೇಶಕ ದೇವೇಗೌಡ, ಆತ್ಮಾ ತಾಂತ್ರಿಕ ಅಧಿಕಾರಿ ಅಶ್ವತ್ಥನಾರಾಯಣ, ರಾಮಣ್ಣ, ರಾಮಾಂಜಿನಪ್ಪ, ಅಪ್ಪಾಜಿಗೌಡ, ಪ್ರಕಾಶ್, ಮಂಜುನಾಥ್, ಆನಂದ್, ಕೃಷ್ಣ, ಪಟಾಲಪ್ಪ, ತ್ಯಾಗರಾಜ್, ಅನುವುಗಾರ ರಾಮಾಂಜಿನಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಪರಾಧ ತಡೆಯಲು ಪೊಲೀಸರ ಜಾಗೃತಿ ಕಾರ್ಯಕ್ರಮ

0

ವಾಯುವಿಹಾರಕ್ಕೆ ಹೋದಾಗ ಚಿನ್ನದ ಚೈನ್ ಅಪಹರಿಸುವ ಚೋರರು, ಬ್ಯಾಂಕಿನಿಂದ ಹಣ ಡ್ರಾ ಮಾಡಿ ತರುವಾಗ ಗಮನವನ್ನು ಬೇರೆಡೆಗೆ ಸೆಳೆದು ಹಣದ ಚೀಲ ಕದಿಯುವ ಕಳ್ಳರು, ದ್ವಿಚಕ್ರ ವಾಹನವನ್ನು ಕಳ್ಳತನ ಮಾಡುವುದು ಮುಂತಾದ ಅಪರಾಧಗಳ ಕುರಿತಂತೆ ಪ್ರಾತ್ಯಕ್ಷಿಕೆಯ ಮೂಲಕ ಸ್ವತಃ ಅಭಿನಯಿಸುವುದರ ಮೂಲಕ ಪುರಠಾಣೆ ಪೊಲೀಸರು ಜಾಗೃತಿ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಂಡಿದ್ದರು.
ಅಪರಾಧ ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪಟ್ಟಣದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಮುಂದೆ ಪೊಲೀಸರು ಅಣಕು ಪ್ರದರ್ಶನವನ್ನು ನೀಡಿದರು. ಶಾಲಾ ವಿದ್ಯಾರ್ಥಿಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಪರಾಧ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಠಾಣೆ ಸಬ್ಇನ್ಸ್ಪೆಕ್ಟರ್ ಪುರುಷೋತ್ತಮ್, ‘ಅಪರಾಧವನ್ನು ತಡೆಯಬೇಕಾದರೆ ಎಚ್ಚರಿಕೆಯಿಂದಿರಬೇಕು. ಅಪರಿಚಿತರು ಕರೆದಾಗ ಶಾಲಾ ವಿದ್ಯಾರ್ಥಿಗಳು, ಒಂಟಿಯಾಗಿ ಮಹಿಳೆಯರು ತೆರಳಬಾರದು. ವಾಕಿಂಗ್ ಹೋಗುವಾಗ ಗುಂಪಿನಲ್ಲಿ ಹೋಗಬೇಕು. ಬ್ಯಾಂಕಿನಿಂದ ಹಣ ತರುವಾಗ ಬಹು ಎಚ್ಚರಿಕೆಯಿಂದಿರಬೇಕು. ಗಮನವನ್ನು ಬೇರೆಡೆಗೆ ಸೆಳೆದು ಹಣದ ಚೀಲವನ್ನು ಲಪಟಾಯಿಸುವವರಿರುತ್ತಾರೆ. ಎಟಿಎಂ ನ ಕಾರ್ಡ್ ಮತ್ತು ಪಾಸ್ವರ್ಡ್ ಬೇರೆಯವರಿಗೆ ಕೊಡಬಾರದು. ದ್ವಿಚಕ್ರ ವಾಹನಗಳನ್ನು ಮನೆಯ ಆವರಣದಲ್ಲಿ ನಿಲ್ಲಿಸುವಾಗ ಚೈನ್ ಹಾಕಿ ಭದ್ರಪಡಿಸಬೇಕು. ಅಪರಿಚಿತರು ಕೋಳಿ ವ್ಯಾಪಾರ, ಶಾಸ್ತ್ರ, ಮಣಿ ವ್ಯಾಪಾರ, ಪಾಲಿಷ್ ನೆಪದಲ್ಲಿ ಬಂದಾಗ ತಕ್ಷಣ ಪೊಲೀಸರಿಗೆ ಮಾಹಿತಿ ಕೊಡಿ. ಅಪರಿಚಿತರು ಮನೆಗೆ ಬಂದಾಗ ಬಾಗಿಲು ತೆರೆಯಬೇಡಿ’ ಎಂದು ಹಲವಾರು ಎಚ್ಚರಿಕೆಯ ಮಾತುಗಳನ್ನು ತಿಳಿಸಿದರು.
ಅಸಿಸ್ಟೆಂಟ್ ಸಬ್ಇನ್ಸ್ಪೆಕ್ಟರ್ ಇಸ್ಮಾಯಿಲ್, ಮುಖ್ಯಪೇದೆಗಳಾದ ಪ್ರಕಾಶ್, ಆಂಜಿನೇಯ, ರಮೇಶ್, ಶಿವಕುಮಾರ್, ದಿಬ್ಬೂರಹಳ್ಳಿ ಮಹಿಳಾಪೇದೆ ಗಾಯತ್ರಿ, ಡಾಲ್ಫಿನ್ ವಿದ್ಯಾಸಂಸ್ಥೆಯ ನಿರ್ದೇಶಕ ಅಶೋಕ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮೀಟರ್ಗಳನ್ನು ಕಿತ್ತು ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು

0

ರೈತರ ಕೊಳವೆ ಬಾವಿಗಳ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದನ್ನು ಖಂಡಿಸಿ, ಈಗಾಗಲೇ ಕೆಲ ರೈತರ ಪಂಪ್ಸೆಟ್ಗಳಿಗೆ ಅಳವಡಿಸಿರುವ ಮೀಟರ್ಗಳನ್ನು ಕಿತ್ತು ಪ್ರತಿಭಟನಾ ಮೆರವಣಿಗೆಯನ್ನು ರೈತರು ನಡೆಸಿ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ಸೋಮವಾರ ನಡೆಯಿತು.
ಪಟ್ಟಣದ ಉಲ್ಲೂರುಪೇಟೆಯಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ರೈತರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಧಿಕ್ಕಾರವನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಸಾಗಿ ಬೆಸ್ಕಾಂ ಕಚೇರಿಯನ್ನು ತಲುಪಿದರು.
ಕಳೆದ ಬಾರಿ ಪ್ರತಿಭಟನೆಯನ್ನು ರೈತರು ಹಮ್ಮಿಕೊಂಡಿದ್ದಾಗ ರೈತರ ಕೊಳವೆ ಬಾವಿಗಳ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದಿಲ್ಲವೆಂದಿದ್ದ ಅಧಿಕಾರಿಗಳು ಈಗ ಮಾತಿಗೆ ತಪ್ಪಿದ್ದಾರೆ. ಬಯಲುಸೀಮೆ ಪ್ರದೇಶದ ರೈತು ಅತೀವ ಸಂಕಷ್ಟದಲ್ಲಿದ್ದಾರೆ. ಆಳವಾದ ಕೊಳವೆ ಬಾವಿಗಳನ್ನು ಕೊರೆಸಿ ಸಾಲಗಳ ಸುಳಿಯಲ್ಲಿ ಸಿಲುಕಿ ಅತ್ಯಲ್ಪ ನೀರಿನಲ್ಲಿ ಬೆಳೆ ಬೆಳೆಯುವ ಸಂದರ್ಭದಲ್ಲಿ ಅಧಿಕಾರಿಗಳು ಕಷ್ಟಕ್ಕೆ ನಷ್ಟ ಎನ್ನುವಂತೆ ಬರೆ ಎಳೆಯುತ್ತಿದ್ದಾರೆ ಎಂದು ದೂರಿದರು.
ಪಟ್ಟಣಕ್ಕೆ ಹೊಂದಿಕೊಂಡ ರೈತರ ಕೊಳವೆ ಬಾವಿಗಳ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿದ್ದಾರೆ. ನಗರ ಪ್ರದೇಶದ ರೈತರು ಗ್ರಾಮೀಣ ರೈತರು ಎಂದು ಅಧಿಕಾರಿಗಳು ವಿಂಗಡನೆ ಮಾಡುತ್ತಾ ರೈತರಲ್ಲಿ ಒಡಕನ್ನು ಉಂಟುಮಾಡುತ್ತಿರುವುದನ್ನು ಖಂಡಿಸುತ್ತೇವೆ. ರೈತರೆಲ್ಲರೂ ಒಂದೇ, ಎಲ್ಲರದ್ದೂ ಒಂದೇ ಸಮಸ್ಯೆಯಾಗಿದೆ. ಒಂದೆಡೆ ಸರಿಯಾಗಿ ವಿದ್ಯುತ್ ಒದಗಿಸದೇ ಬೆಸ್ಕಾಂ ಇಲಾಖೆಯು ಕಣ್ಣಾಮುಚ್ಚಾಲೆ ಆಡುತ್ತಿದ್ದರೆ, ಇನ್ನೊಂದೆಡೆ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವ ಮೂಲಕ ಶೋಷಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಬೆಸ್ಕಾಂ ಇಲಾಖೆಯನ್ನು ಮುತ್ತಿಗೆ ಹಾಕಿ ಪ್ರತಿಭಟಿಸಿದ ರೈತರು 26 ಮೀಟರ್ಗಳನ್ನು ಬೆಸ್ಕಾಂ ಇಲಾಖೆಯ ಸಹಾಯಕ ಲೆಕ್ಕಾಧಿಕಾರಿ ಶಿವಣ್ಣ ಮತ್ತು ಶ್ರೀಧರ್ ಅವರಿಗೆ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಂಜಪ್ಪ, ಅಬ್ಲುಡು ಆರ್.ದೇವರಾಜ್, ನಾರಾಯಣಸ್ವಾಮಿ, ವೇಣುಗೋಪಾಲ್, ಶ್ರೀನಿವಾಸ್, ಮಂಜುನಾಥ್, ಮಾದವಪ್ಪ, ಮೂರ್ತಿ, ರಮೇಶ್, ಸೋಮಶೇಖರ್, ಕೃಷ್ಣ, ರವಿಕುಮಾರ್, ಗೋಪಾಲಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಘಟಮಾರನಹಳ್ಳಿ ಮತ್ತು ತೊಟ್ಲಗಾನಹಳ್ಳಿ ರಸ್ತೆ ಕಾಮಗಾರಿ ಉದ್ಘಾಟನೆ

0

ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯತಿಯ ಘಟಮಾರನಹಳ್ಳಿ ಗ್ರಾಮ ಮತ್ತು ಭಕ್ತರಹಳ್ಳಿ ಗ್ರಾಮ ಪಂಚಾಯತಿಯ ತೊಟ್ಲಗಾನಹಳ್ಳಿ ಗ್ರಾಮಗಳಿಗೆ ಒಟ್ಟು ಹತ್ತೂವರೆ ಲಕ್ಷ ರೂಪಾಯಿಗಳ ರಸ್ತೆ ಕಾಮಗಾರಿಯನ್ನು ಶಾಸಕ ಎಂ.ರಾಜಣ್ಣ ಭಾನುವಾರ ಉದ್ಘಾಟಿಸಿದರು.
ಸುಮಾರು ವರ್ಷಗಳಿಂದ ಹದಗೆಟ್ಟಿದ್ದ ರಸ್ತೆಗಳ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ರಾಜಣ್ಣ, ‘ಮಳೆ ಬಂದರೆ ಓಡಾಡಲು ಅಸಾಧ್ಯವಾಗಿದ್ದ ರಸ್ತೆಯ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರಿಂದ ದೂರುಗಳು ಬಂದಿದ್ದವು. ವಿಶೇಷ ಅನುದಾನದ ಅಡಿಯಲ್ಲಿ ತೊಟ್ಲಗಾನಹಳ್ಳಿ ಗ್ರಾಮಕ್ಕೆ ಐದು ಲಕ್ಷ ರೂಪಾಯಿ ವೆಚ್ಚದ 500 ಮೀಟರ್ ರಸ್ತೆ ಡಾಂಬರೀಕರಣ ಮತ್ತು ಘಟಮಾರನಹಳ್ಳಿ ಗ್ರಾಮಕ್ಕೆ ಐದೂವರೆ ಲಕ್ಷ ರೂಪಾಯಿ ವೆಚ್ಚದ 600 ಮೀಟರ್ ರಸ್ತೆ ಡಾಂಬರೀಕರಣ ನಡೆಸಲಾಗುತ್ತದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಪಕ್ಷಾತೀತವಾಗಿ ಗ್ರಾಮಸ್ಥರು ಒಗ್ಗೂಡಬೇಕು’ ಎಂದು ತಿಳಿಸಿದರು.
ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲಗೌಡ, ನಾರಾಯಣಸ್ವಾಮಿ, ಕೃಷ್ಣಪ್ಪ, ತ್ಯಾಗರಾಜ್, ನರಸಿಂಹಪ್ಪ, ರಮೇಶ್, ಗುತ್ತಿಗೆದಾರ ದೇವರಾಜ್, ಕೇಶವ, ಕಲ್ಯಾಪುರ ಆಂಜಿನಪ್ಪ, ಅಂಬರೀಶ್, ನಂಜಪ್ಪ ಮತ್ತಿತರರು ಇ ಸಂದರ್ಭದಲ್ಲಿ ಹಾಜರಿದ್ದರು.

ಮಕ್ಕಳಲ್ಲಿ ಸುರಕ್ಷತಾ ಭಾವನೆ ಹೆಚ್ಚಿದರೆ ಕಲಿಕೆಯೂ ಸುಲಭ

0

ಮಕ್ಕಳಿಗೆ ಮನೆ, ಸಮಾಜ, ಶಾಲೆಗಳೆಲ್ಲೆಡೆ ಸುರಕ್ಷತಾ ಹಾಗೂ ಸ್ವತಂತ್ರ ವಾತಾವರಣ ಸೃಷ್ಠಿಯಾದರೆ ಕಲಿಕೆಯೂ ಸುಲಭವಾಗುತ್ತದೆ ಎಂದು ಶಿಕ್ಷಕ ಬೈರಾರೆಡ್ಡಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸುರಕ್ಷತಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತವೆ. ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಬೇಕಾದ ಹೊಣೆಗಾರಿಕೆಯು ಪೋಷಕರು, ಶಿಕ್ಷಕರು, ಸರ್ಕಾರದ ಮೇಲಿದೆ ಎಂದು ತಿಳಿಸಿದರು.
ಮಕ್ಕಳೊಡನೆ ಸುರಕ್ಷತೆ ಕುರಿತಾಗಿ ಸಂವಾದ ನಡೆಯಿತು. ಗ್ರಾಮದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಂದ ಮಕ್ಕಳ ಸುರಕ್ಷೆಯ ಬಗ್ಗೆ ಕಿರುರೂಪಕ ಪ್ರದರ್ಶನ ನಡೆಯಿತು.
ಎಸ್ಡಿಎಂಸಿ ಅಧ್ಯಕ್ಷ ಎಸ್.ಆರ್.ನಾಗೇಶ್, ಗ್ರಾಮಪಂಚಾಯಿತಿ ಸದಸ್ಯ ಎನ್.ಅಶ್ವತ್ಥಪ್ಪ, ಎಸ್ಡಿಎಂಸಿ ಉಪಾಧ್ಯಕ್ಷೆ ಆರತಿ, ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಅಂಗನವಾಡಿ ಕಾರ್ಯಕರ್ತೆಯರು, ಪೋಷಕರು, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಲಾತಂಡಗಳ ಮೂಲಕ ಎಚ್.ಐ.ವಿ ಜಾಗೃತಿ ಕಾರ್ಯಕ್ರಮ

0

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲ್ಲೂಕಿನ ವಿವಿದೆಡೆ ಈಚೆಗೆ ಕಲಾತಂಡಗಳ ಮೂಲಕ ಎಚ್.ಐ.ವಿ ಮತ್ತು ಏಡ್ಸ್ ಕುರಿತಂತೆ ಜಾಗೃತಿ ಮೂಡಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ವೀರಭದ್ರೇಶ್ವರ ವೀರಗಾಸೆ ಕಲಾತಂಡದ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್ ಮಾತನಾಡಿ, ‘ತಾಲ್ಲೂಕಿನಲ್ಲಿ 2009 ರಿಂದ 2014 ಅಕ್ಟೋಬರ್ ವರೆಗೆ 334 ಎಚ್.ಐ.ವಿ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ 15 ವರ್ಷದಿಂದ 29 ವರ್ಷದ ವಯೋಮಾನದವರು ಈ ರೋಗಕ್ಕೆ ತುತ್ತಾಗುತ್ತಿರುವುದು ಆತಂಕಕಾರಿಯಾಗಿದೆ. ಯುವಪೀಳಿಗೆಗೆ ಏಡ್ಸ್ ಕುರಿತಂತೆ ಜಾಗೃತಿ ಮೂಡಿಸುವುದು ಅತಿ ಮುಖ್ಯವಾಗಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐ.ಸಿ.ಟಿ.ಸಿ ಕೇಂದ್ರದ ಆಪ್ತಸಮಾಲೋಚಕ ಎನ್.ಗಂಗಾಧರಯ್ಯ ಎಚ್.ಐ.ವಿ/ಏಡ್ಸ್ ನ ಬಗ್ಗೆ, ಹರಡುವ ವಿಧಾನ ಮತ್ತು ತಡೆಗಟ್ಟುವ ಬಗ್ಗೆ ತಿಳಿಸಿದರು.
ಆರೋಗ್ಯ ಸಿಬ್ಬಂದಿ, ಸೌಖ್ಯ ಸಂಜೀವಿನಿ ಸಂಸ್ಥೆ, ಮೈರಾಡ ಸಂಸ್ಥೆ ಸಿಬ್ಬಂದಿ, ದಿಬ್ಬೂರಹಳ್ಳಿ ಪ್ರಾಥಮಿಕ ಕೇಂದ್ರದ ಡಾ.ಮುನಿಸ್ವಾಮಿರೆಡ್ಡಿ, ಐ.ಸಿ.ಟಿ.ಸಿ ಕೇಂದ್ರದ ಆಪ್ತಸಮಾಲೋಚಕ ಎಂ.ಯತೀಶ್ ಮತ್ತಿತರರು ಹಾಜರಿದ್ದರು.

error: Content is protected !!