‘ಅಗ್ನಿಮಿಳೇ ಪುರೋಹಿತಂ…ಯಜ್ಞಸ್ತದೇವಮೃತ್ವಿಜಂ|
ಹೊರಾರಂ ರತ್ನಧಾತಮಂ||೧||’
ಮನುಕುಲದ ಅತ್ಯಂತ ಪುರಾತನವಾದ ವೇದಗಳಲ್ಲಿ ಮೊದಲನೆಯದಾದ ಋಗ್ವೇದದ ಮೊಟ್ಟ ಮೊದಲ ಸಾಲು ‘ಅಗ್ನಿದೇವನೇ ನಿನ್ನನ್ನು ಪ್ರಾರ್ಥಿಸುತ್ತಿದ್ದೇವೆ. ಅಂಧಕಾರವನ್ನ ಕರಗಿಸಿ ಬೆಳಕು ನೀಡುವವನೇ, ನಿನ್ನೆಡೆಗೆ ಅನುದಿನವು ಬರುತ್ತಿದ್ದೇವೆ. ಅತ್ಯಂತ ಭಕ್ತಿಪೂರ್ವಕವಾಗಿ ಕೃತಜ್ಞತಾಭಾವದಿಂದ ನಿನಗಿದೋ ವಂದನೆ.’ ಇದು ಸನಾತನ ಹಿಂದುಧರ್ಮಕ್ಕೆ, ಭಾರತೀಯ ಸಂಸ್ಕೃತಿಗೆ ಹಿಡಿದ ಕನ್ನಡಿ. ಇದರಿಂದ ಜರ್ಮನಿಯ ಪ್ರಖ್ಯಾತ ವಿದ್ವಾಂಸರಾದ ಮ್ಯಾಕ್ಸ್ ಮುಲ್ಲರ್ ಕೂಡ ಪ್ರಭಾವಿತರಾಗಿದ್ದರಂತೆ.
ಈ ವೇದಗಳೆಡೆಗೆ ತಾಲ್ಲೂಕಿನ ಮೇಲೂರು ಗ್ರಾಮದ ಎಂ.ಆರ್.ಪ್ರಭಾಕರ್ ಕೂಡ ಆಕರ್ಷಿತರಾಗಿದ್ದಾರೆ. ಸುಮಾರು 10 ಸಾವಿರ ಪುಟಗಳ ನಾಲ್ಕೂ ವೇದಗಳ 21 ಸಾವಿರ ಮಂತ್ರಗಳನ್ನು ಕೇವಲ 60 ಪುಟಗಳಲ್ಲಿ ಸೂಕ್ಷ್ಮವಾದ ಅಕ್ಷರಗಳಲ್ಲಿ ಬರೆಯಲು ಮುಂದಾಗಿದ್ದಾರೆ.
ಈ ಪ್ರಯತ್ನದಲ್ಲಿ ಒಂದಿನಿತೂ ಚಿತ್ತಿಲ್ಲದೆ ಸೂಕ್ಷ್ಮವಾಗಿ ಸುಮಾರು 13 ಸಾವಿರ ಮಂತ್ರಗಳನ್ನು ಬರೆದಿದ್ದಾರೆ. ಋಗ್ವೇದ, ಯಜುರ್ವೇದವನ್ನು ಮುಗಿಸಿ ಸಾಮವೇದದ ಮಂತ್ರಗಲನ್ನು ಬರೆಯುತ್ತಿದ್ದಾರೆ.
ಈಗಾಗಲೇ ಭಗವದ್ಗೀತೆಯ 18 ಅಧ್ಯಾಯಗಳ ಏಳು ನೂರು ಶ್ಲೋಕಗಳನ್ನು 9 ಅಂಗುಲ ಉದ್ದ ಮತ್ತು 8 ಅಂಗುಲ ಅಗಲದ ಹಾಳೆಯಲ್ಲಿ ಬರೆದಿರುವ ಅವರು ಕೆಲ ದಿನಗಳಲ್ಲಿ ವೇದಗಳನ್ನು ಬರೆದು ಒಂದೆಡೆ ಪ್ರದರ್ಶಿಸುವ ಆಶಯದಲ್ಲಿದ್ದಾರೆ.
‘ಸುಮಾರು 60 ವರ್ಷಗಳ ಹಿಂದೆ ಮೈಸೂರು ಮಹಾರಾಜರು ಋಗ್ವೇದವನ್ನು ಕನ್ನಡಕ್ಕೆ ತಂದಿದ್ದರು. ಅದರ ನಂತರ ಆರ್ಯ ಸಮಾಜದವರು ಈಚೆಗೆ ನಾಲ್ಕೂ ವೇದಗಳನ್ನು ಕನ್ನಡಕ್ಕೆ ತಂದರು. ಈ ಪ್ರಯತ್ನ ಭಾರತೀಯ ಭಾಷೆಗಳಲ್ಲಿ ಅಪರೂಪದ್ದು. ಅವರ ಒಡನಾಟದಿಂದ ಈ ಪುಸ್ತಕಗಳನ್ನು ಕೊಂಡು ಕನ್ನಡದಲ್ಲಿ ಓದುವಾಗ ಈ 10 ಸಾವಿರ ಪುಟಗಳನ್ನು 60 ಪುಟದಲ್ಲಿ ಬರೆಯುವ ಮನಸ್ಸಾಯಿತು. ಹಿಂದೆ ಭಗವದ್ಗೀತೆಯ ಶ್ಲೋಕಗಳನ್ನು ಸೂಕ್ಷ್ಮ ಅಕ್ಷರದಲ್ಲಿ ಬರೆದಿದ್ದ ಅನುಭವವಿದ್ದುದರಿಂದ ಈ ಕೆಲಸವನ್ನು ಪ್ರಾರಂಭಿಸಿದೆ. ಈ ಮಂತ್ರಗಳಲ್ಲಿ ಬಹಳಷ್ಟು ಕನ್ನಡ ಪದಗಳಿವೆ. ಅಥವಾ ಅಲ್ಲಿನ ಸಂಸ್ಕೃತ ಪದಗಳು ಈಗ ಕನ್ನಡದ್ದಾಗಿವೆ ಎನ್ನಬಹುದು. ಹೀಗಾಗಿ ಕನ್ನಡಕ್ಕೂ ವೇದಕ್ಕೂ ನಂಟಿದೆ. ಆದಷ್ಟು ಬೇಗ ಬರೆದು ಮುಗಿಸಿ ಈ ಎಲ್ಲಾ ಮಂತ್ರಗಳನ್ನೂ ಒಂದೆಡೆ ದರ್ಶಿಸುವಂತೆ ಪ್ರದರ್ಶಿಸುತ್ತೇನೆ’ ಎಂದು ಎಂ.ಆರ್.ಪ್ರಭಾಕರ್ ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.
ಸೂಕ್ಷ್ಮ ಹಸ್ತಾಕ್ಷರದಲ್ಲಿ ವೇದ ಮಂತ್ರಗಳು
ವಾಸವಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಸುರಕ್ಷತಾ ಸಪ್ತಾಹ ಕಾರ್ಯಕ್ರಮ
ಶಿಡ್ಲಘಟ್ಟದ ವಾಸವಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ ಮಕ್ಕಳ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿ ಎಸ್.ಭವಾನಿ ಮಾತನಾಡಿದರು. ಆಡಳಿತ ಅಧಿಕಾರಿ ಸತ್ಯನಾರಾಯಣಶೆಟ್ಟಿ, ಮುಖ್ಯ ಶಿಕ್ಷಕರಾದ ಗೋಪಿನಾಥ್, ವೆಂಕಟರಮಣಪ್ಪ ಹಾಜರಿದ್ದರು.
ದೇವರಮಳ್ಳೂರು ಗ್ರಾಮದಲ್ಲಿ ಶನಿವಾರ ಮಳ್ಳೂರಾಂಭ ದೇವಿಯ ರಥೋತ್ಸವ
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶನಿವಾರ ಮಳ್ಳೂರಾಂಭ ದೇವಿಯ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಅತ್ಯಂತ ಪುರಾತನ ದೇವಾಲಯವಾದ ಮಳ್ಳೂರಾಂಭ ದೇವಾಲಯದ ರಥೋತ್ಸವವು ಜಿಲ್ಲೆಯಾದ್ಯಂತ ಪ್ರಸಿದ್ಧವಾಗಿದ್ದು, ಧನುರ್ಮಾಸ ಹುಣ್ಣಿಮೆಯ ವಿಶೇಷವಾಗಿದೆ. ಇಲ್ಲಿ ನಡೆಯುವ ದನಗಳ ಜಾತ್ರೆ ವಿಶೇಷವಾಗಿದ್ದು ನೆರೆರಾಜ್ಯಗಳಿಂದಲೂ ಜನರು ದನಗಳೊಂದಿಗೆ ಆಗಮಿಸುತ್ತಾರೆ.
ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಜನರು ದೇವಿಯ ದರ್ಶನ ಪಡೆದು ಪೂಜೆಯಲ್ಲಿ ಪಾಲ್ಗೊಂಡು ರಥವನ್ನು ಎಳೆದರು. ದೇವರನ್ನು ವಿಶೇಷವಾಗಿ ಅಲಕರಿಸಿದ್ದರು. ಬ್ರಹ್ಮರಥೋತ್ಸವಕ್ಕೆ ರಥವನ್ನು ವಿಶೇಷವಾಗಿ ಅಲಂಕರಿಸಿ ದಾರಿಯುದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ವೀರಗಾಸೆ, ತಮಟೆ ವಾದನ ಆಕರ್ಷಕವಾಗಿತ್ತು. ತಿಂಡಿ ತಿನಿಸುಗಳು, ಆಟಿಕೆಗಳು, ಅಚ್ಚೆ ಹಾಕುವವರು, ದಿನೋಪಯೋಗಿ ವಸ್ತುಗಳು ಸೇರಿದಂತೆ ಬಹುತೇಕ ಅಂಗಡಿಗಳು ತೆರೆದಿದ್ದು ಜನಾಕರ್ಷಕವಾಗಿದ್ದವು.
ಶಾಸಕ ಎಂ.ರಾಜಣ್ಣ ಮತ್ತು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ, ರಜಸ್ವ ನಿರೀಕ್ಷಕ ಸುಬ್ರಮಣಿ, ಡಿ.ಎ.ಮಳ್ಳೂರಯ್ಯ, ರೆಡ್ಡಿಸ್ವಾಮಿ, ಛಾಯಾರಮೇಶ್ ಮತ್ತಿತರರು ಪೂಜಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ಸಮವಸ್ತ್ರ ವಿತರಣೆ
ಶಿಡ್ಲಘಟ್ಟ ತಾಲ್ಲೂಕಿನ ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ 24 ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳಾದ ಚಂದ್ರ, ಶ್ರೀಕಾಂತ್, ರಾಮಾಂಜಿ, ಚಂದ್ರಶೇಖರ್ ಸಮವಸ್ತ್ರಗಳನ್ನು ವಿತರಿಸಿದರು.
ಸಿದ್ದಾರ್ಥ ನಗರದ ಸ್ಮಶಾನದಲ್ಲಿ ಮೂಢನಂಬಿಕೆ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ
ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ವತಿಯಿಂದ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಮೂಢನಂಬಿಕೆ ವಿರುದ್ಧ ಜನ ಜಾಗೃತಿ ಮೂಡಿಸಲು ಪರಿವರ್ತನಾ ದಿನವನ್ನಾಗಿ ಪಟ್ಟಣದ ಸಿದ್ದಾರ್ಥ ನಗರದ ಸ್ಮಶಾನದಲ್ಲಿ ದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಎಂ.ಮುನಯ್ಯ ಮಾತನಾಡಿ,‘ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಮೌಢ್ಯತೆಯನ್ನು ಶಿಕ್ಕರಿಸುವ ಪರಿವರ್ತನಾ ದಿನವನ್ನಾಗಿ ಈ ಬಾರಿ ಆಚರಿಸುತ್ತಿದ್ದೇವೆ. ಬುದ್ಧ, ಬಸವ, ಅಂಬೇಡ್ಕರ್ ಕಲ್ಪನೆಯ ಸಮಾಜ ಸ್ಥಾಪನೆಗಾಗಿ ಈ ಕ್ರಾಂತಿಕಾರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೌಢ್ಯಾಚರಣೆಗಳು, ಅರ್ಥಹೀನ ಕಂದಾಚರಣೆಗಳ ಮೂಲಕ ಪುರೋಹಿತಶಾಹಿ ಶಕ್ತಿಗಳು ಸಾವಿರಾರು ವರ್ಷಗಳಿಂದ ದಲಿತ ಸಮುದಾಯವನ್ನು ಮತ್ತು ಮಹಿಳೆಯರನ್ನು ಶೋಷಿಸುತ್ತಾ ಬಂದಿದೆ. ಕನ್ನಡ ನಾಡಿನ ಹಳ್ಳಿಗಳಲ್ಲಿ ಸ್ವಾಭಿಮಾನದ ಕೂಗನ್ನು ಮೊಳಗಿಸಬೇಕಿದೆ’ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಂತೆ ಹಾಡುಗಳನ್ನು ಹಾಡಿ, ಅಡುಗೆಯನ್ನು ಸಿದ್ದಾರ್ಥ ನಗರದ ಸ್ಮಶಾನದಲ್ಲಿ ತಯಾರಿಸಿ ದಾಸೋಹವನ್ನು ನಡೆಸಲಾಯಿತು.
ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ಎನ್.ಎ.ವೆಂಕಟೇಶ್, ಸಂಘಟನಾ ಸಂಚಾಲಕ ಟಿ.ಎ.ಚಲಪತಿ, ಸಿ.ಎಂ.ಲಕ್ಷ್ಮೀನಾರಾಯಣ, ಡಿ.ಎಂ.ವೆಂಕಟೇಶ್, ಹುಜಗೂರು ವೆಂಕಟೇಶ್, ದೊಡ್ಡತಿರುಮಳಯ್ಯ, ರವಿ. ನರಸಿಂಹಪ್ಪ, ಶ್ರೀರಾಮಪ್ಪ, ಪುರಸಭಾ ಸದಸ್ಯ ಚಿಕ್ಕಮುನಿಯಪ್ಪ, ಕೃಷ್ಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಣೆ
ವಿಶ್ವದಲ್ಲೇ ಶ್ರೇಷ್ಠ ಲಿಖಿತ ಸಂವಿಧಾನವನ್ನು ನೀಡಿರುವ ಅಂಬೇಡ್ಕರ್ ಅವರ ಆಶಯಗಳು ಇನ್ನೂ ಜಾರಿಗೊಳ್ಳದಿರುವುದು ದುರಂತ ಎಂದು ನಿವೃತ್ತ ಶಿಕ್ಷಣ ಸಂಯೋಜಕ ತಲದುಮ್ಮನಹಳ್ಳಿ ಆರ್.ಕೃಷ್ಣಪ್ಪ ವಿಷಾಧಿಸಿದರು.
ಪಟ್ಟಣದ ಕೋಟೆ ವೃತ್ತದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ಸರ್ಕಾರಿ ನೌಕರರು ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಅವರು ಮಾತನಾಡಿದರು.
ದಲಿತ ಜನಾಂಗದವರು ಇಂದಿಗೂ ಶೋಷಣೆಗೆ ಒಳಗಾಗುತ್ತಿರುವುದರೊಂದಿಗೆ ಅಸ್ಪೃಶ್ಯತೆಗೂ ಈಡಾಗುತ್ತಿದ್ದಾರೆ. ಈ ಜನಾಂಗ ಶಿಕ್ಷಣ ಪಡೆದು, ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪುರಸಭಾ ಸದಸ್ಯ ವೆಂಕಟಸ್ವಾಮಿ, ನರಸಿಂಹಯ್ಯ, ಎಂ.ಮಂಜುನಾಥ್, ವಿಜಯಕುಮಾರ್, ಎ.ವಿ.ವೆಂಕಟನರಸಪ್ಪ, ಮುನಿಯಪ್ಪ, ಗುರುರಾಜ್, ಲಕ್ಷ್ಮೀದೇವಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಎಂ.ಎನ್.ಶ್ರೀನಿವಾಸಮೂರ್ತಿ ಅವರಿಗೆ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಸನ್ಮಾನ
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಶುಕ್ರವಾರ ಗ್ರಾಮಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಎಂ.ಎನ್.ಶ್ರೀನಿವಾಸಮೂರ್ತಿ(ಪುಲಿ) ಅವರಿಗೆ ಸನ್ಮಾನ ಮಾಡಲಾಯಿತು.
ಸುರಕ್ಷತಾ ಸಪ್ತಾಹದ ಅಂಗವಾಗಿ ಜಾಗೃತಿಜಥಾ
ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸುರಕ್ಷತಾ ಸಪ್ತಾಹದ ಅಂಗವಾಗಿ ಶುಕ್ರವಾರ ಜಾಗೃತಿಜಥಾಗೆ ಗ್ರಾಮಪಂಚಾಯಿತಿ ಸದಸ್ಯ ಎನ್.ಅಶ್ವತ್ಥಪ್ಪ ಚಾಲನೆ ನೀಡಿದರು. ಎಸ್ಡಿಎಂಸಿ ಉಪಾಧ್ಯಕ್ಷೆ ಆರತಿ, ಸದಸ್ಯ ಎನ್.ಪಿ.ನಾಗರಾಜಪ್ಪ ಹಾಜರಿದ್ದರು.
ಸುಗಟೂರು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ನಗರಪ್ರದೇಶಗಳಲ್ಲಿ ವಲಸಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅನ್ಯಭಾಷಿಕರ ಆಗಮನದಿಂದಾಗಿ ಭಾಷಾ ಸಮಸ್ಯೆಯೂ ಹೆಚ್ಚುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಕನ್ನಡತನ, ಭಾಷೆ ಉಳಿದಿದೆ ಎಂದು ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಗ್ರಾಮದ ಮುಖ್ಯ ವೃತ್ತದಲ್ಲಿ ಕಾಲೋನಿ ಅಭಿವೃದ್ಧಿ ಸಮಿತಿ ಮತ್ತು ಅಂಬೇಡ್ಕರ್ ಯುವಕಸಂಘದ ಆಶ್ರಯದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆದರೆ ಮಾತ್ರ ಮಕ್ಕಳಲ್ಲಿ ಭಾವನೆಗಳ ಅಭಿವ್ಯಕ್ತಿ ಸುಲಭವಾಗುತ್ತದೆ. ಸೃಜನಶೀಲತೆ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷ ಡಿ.ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗ್ರಾಮದಲ್ಲಿ ಪ್ರಭಾತ್ಭೇರಿ, ಮೆರವಣಿಗೆ ನಡೆಯಿತು.
ಗುತ್ತಿಗೆದಾರ ಶಿವಶಂಕರಪ್ಪ, ಎಂ.ದೇವರಾಜು, ಪಿಳ್ಳಣ್ಣ, ಬಾಬು, ಯುವಕಸಂಘದ ಪ್ರಸಾದ್, ರವಿಕುಮಾರ್. ಎಸ್.ಆರ್.ಮಂಜುನಾಥ್, ನರಸಿಂಹಮೂರ್ತಿ, ಸುರೇಶ್, ರವಿಕುಮಾರ್, ನರಾಜು, ಸತೀಶ್, ಪ್ರಸನ್ನಕುಮಾರ್, ಮುನಿರಾಜು, ಮತ್ತಿತರರು ಇದ್ದರು.
ತಾಲ್ಲೂಕು ಕಚೇರಿ ಆವರಣದಲ್ಲಿ ನೂತನ ನಂದಿನಿ ಹಾಲಿನ ಉತ್ಪನ್ನ ಮಳಿಗೆ
ಜನರ ಆರೋಗ್ಯದ ಬಗ್ಗೆ ಗಮಹರಿಸುವುದರೊಂದಿಗೆ ಕಡಿಮೆ ಬೆಲೆಗೂ ಜನ ಸಾಮಾನ್ಯರಿಗೂ ಸಿಗುವಂತೆ ತಯಾರಿಸಿರುವ ನಂದಿನಿ ಹಾಲಿನ ಉತ್ಪನ್ನಗಳನ್ನು ಖರೀದಿಸುವುದರಿಂದ ಈ ಭಾಗದ ಹೈನುಗಾರಿಕೆ ಕ್ಷೇತ್ರ ಮತ್ತು ರೈತರನ್ನು ಸಹ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಗುರುವಾರ ನೂತನವಾಗಿ ನಿರ್ಮಿಸಲಾಗಿರುವ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ದಿಂದ ನಂದಿನಿ ಹಾಲಿನ ಉತ್ಪನ್ನಗಳನ್ನು ಎಲ್ಲಾ ವಯೋಮಾನದ ಜನರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗುತ್ತಿದೆಯೆ ಹೊರತು ಲಾಭದ ದೃಷ್ಟಿಯಿಂದಲ್ಲ. ಆದರೆ ಇತರೆ ಕಂಪೆನಿಗಳಿಗೆ ಲಾಭವೇ ಮುಖ್ಯ ಹೊರತು ಜನರ ಆರೋಗ್ಯವಲ್ಲ. ಹಾಗಾಗಿ ಅಂತಹ ಕಂಪೆನಿಗಳು ಬಗೆ ಬಗೆಯ ವಸ್ತುಗಳನ್ನು ತಯಾರಿಸಿ ಬಣ್ಣ ಬಣ್ಣದ ಪಾಕೇಟ್ಗಳಲ್ಲಿ ಮಾರಾಟ ಮಾಡುತ್ತಾರೆ. ಅದಕ್ಕೆ ಜನ ಬಹಳ ಬೇಗ ಮರುಳಾಗುತ್ತಾರೆ. ನಂದಿನಿ ಹಾಲಿನ ಉತ್ಪನ್ನಗಳು ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟ ಹೊಂದಿದ್ದು ರುಚಿ, ಶುಚಿಯಾಗಿಯೂ ಇರುತ್ತದೆಯಲ್ಲದೆ ಜನರ ಆರೋಗ್ಯದ ದೃಷ್ಟಿಯಿಂದ ನಂದಿನಿ ಉತ್ಪನ್ನಗಳ ಸೇವನೆ ಬಹಳ ಮುಖ್ಯ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ಹಾಲು, ಮಜ್ಜಿಗೆ, ಮೊಸರು, ಪೇಡ, ಅಲ್ವಾ ಇನ್ನಿತರೆ ಉತ್ಪನ್ನಗಳು ಬಹಳ ಕಡಿಮೆ ಬೆಲೆಗೆ ಇಲ್ಲಿ ಸಿಗಲಿವೆ. ಇವುಗಳನ್ನು ಖರೀದಿಸುವುದರಿಂದ ನಾವು ಹೈನುಗಾರಿಕೆಯನ್ನು ಜತೆಗೆ ರೈತರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಬೇರೆ ಬೇರೆ ಬ್ರಾಂಡ್ಗಳ ವಸ್ತುಗಳಿಗಿಂತಲೂ ನಂದಿನಿ ಬ್ರಾಂಡ್ನ ಉತ್ಪನ್ನಗಳು ಆರೋಗ್ಯ ಹಾಗೂ ಬೆಲೆ ದೃಷ್ಟಿಯಿಂದಲೂ ಉತ್ತಮವಾಗಿದ್ದು ನಂದಿನಿ ಉತ್ಪನ್ನಗಳನ್ನು ಖರೀದಿಸಿ ಸಹಕಾರ ಕ್ಷೇತ್ರ, ಹಾಗು ಈ ಭಾಗದ ರೈತರ ಆರ್ಥಿಕ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಕೆಎಂಎಫ್ನ ಅಧ್ಯಕ್ಷ ಪಿ.ನಾಗರಾಜ್, ವ್ಯವಸ್ಥಾಪಕ ನಿರ್ದೆಶಕ ಎ.ಎಸ್.ಪ್ರೇಮನಾಥ್, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಜೆ.ಕಾಂತರಾಜ್, ಕೋಚಿಮುಲ್ ನಿರ್ದೇಶಕರಾದ ಬಂಕ್ಮುನಿಯಪ್ಪ, ಆರ್.ಎ.ಉಮೇಶ್, ವೈ.ಬಿ.ಅಶ್ವತ್ಥನಾರಾಯಣ, ಕೆ.ವಿ.ನಾಗರಾಜ್, ಕೆ.ಅಶ್ವತ್ಥರೆಡ್ಡಿ. ಮಹಿಳಾ ನಿರ್ದೇಶಕಿ ಸುನಂದಮ್ಮ ಕೋಲಾರ ಜಿಲ್ಲಾ ಕೇಂದ್ರ ಬ್ಯಾಂಕ್ನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಕೋಚಿಮುಲ್ ನಿರ್ವಾಹಕ ನಿರ್ದೇಶಕ ಡಾ.ಡಿ.ಟಿ.ಗೋಪಾಲ್, ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಂ.ರಘುನಂದನ್, ಸ್ಥಳೀಯ ಶಿಬಿರದ ವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ, ನಂದಿನಿ ಮಾರಾಟ ಮಳಿಗೆಯ ಮಾಲೀಕ ಎ.ಶಶಿಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

