ಚಿಕ್ಕಬಳ್ಳಾಪುರದಲ್ಲಿ ನಡೆಯುವ ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ ಮತ್ತು ಸದಸ್ಯತ್ವ ಆಂದೋಲನಕ್ಕೆ ತಾಲ್ಲೂಕಿನಿಂದ ಶುಕ್ರವಾರ ನೂರಾರು ಮಂದಿ ತೆರಳಿದರು.
ಜಿಲ್ಲೆಯಲ್ಲಿ ಕನ್ನಡಿಗರನ್ನು ಜಾಗೃತಿಗೊಳಿಸುವುದರ ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡು ಕನ್ನಡ ರಕ್ಷಣಾ ವೇದಿಕೆಯನ್ನು ಪ್ರಭಲವಾಗಿ ಸಂಘಟಿಸಲು ಕ.ರ.ವೇ ರಾಜ್ಯಾಧ್ಯಕ್ಷ ಟಿ.ಎಂ.ನಾರಾಯಣಗೌಡರ ನಾಯಕತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳುತ್ತಿದ್ದೇವೆ. ಜಿಲ್ಲೆಯ ಜನರ ಸಮಸ್ಯೆಯನ್ನು ನೀಗಿಸಲು ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯ ಸೇರಿದಂತೆ ನಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ ಕ.ರ.ವೇ ಮೂಲಕ ಶ್ರಮಿಸಲಿದ್ದೇವೆ ಎಂದು ಕ.ರ.ವೇ ತಾಲ್ಲೂಕು ಅಧ್ಯಕ್ಷ ಎಂ.ವೆಂಕಟರಮಣಪ್ಪ ಈ ಸಂದರ್ಭದಲ್ಲಿ ತಿಳಿಸಿದರು.
ಕ.ರ.ವೇ ತಾಲ್ಲೂಕು ಗೌರವಾಧ್ಯಕ್ಷ ರಾಮಣ್ಣ, ರವಿಕುಮಾರ್, ಮುನಿರಾಜ್, ದೇವರಾಜ್, ಶಿವಣ್ಣ, ವಿಜಯ್, ನಾರಾಯಣಸ್ವಾಮಿ, ಚಂದ್ರು, ನೂರುಲ್ಲಾ ಮತ್ತಿತರರು ಈ ಸಂದರಭದಲ್ಲಿ ಹಾಜರಿದ್ದರು.
ಕನ್ನಡಿಗರ ಜಾಗೃತಿ ಸಮಾವೇಶ ಮತ್ತು ಸದಸ್ಯತ್ವ ಆಂದೋಲನ
ಆದಿಚುಂಚನಗಿರಿ ನಿರ್ಮಲಾನಂದ ಮಹಾಸ್ವಾಮಿಗಳ ಗುರುವಂದನಾ ಕಾರ್ಯಕ್ರಮ
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಮಹಾಸ್ವಾಮಿಗಳ ಗುರುವಂದನಾ ಕಾರ್ಯಕ್ರಮವನ್ನು ತಾಲ್ಲೂಕಿನ ಅಬ್ಲೂಡು ಗ್ರಾಮದಲ್ಲಿ ವಿಜೃಂಭಣೆಯಿಂದ ಶುಕ್ರವಾರ ಆಚರಿಸಲಾಯಿತು.
ತಾಲ್ಲೂಕು ಒಕ್ಕಲಿಗರ ಯುವಸೇನೆ ಮತ್ತು ಅಬ್ಲೂಡು ಗ್ರಾಮ ಪಂಚಾಯತಿ ಒಕ್ಕಲಿಗರ ಯುವಸೇನೆ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಶಿಡ್ಲಘಟ್ಟದ ಬಸ್ ನಿಲ್ದಾಣದಿಂದ ಅಬ್ಲೂಡು ವೇದಿಕೆಯವರೆಗೆ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ವಿಶೇಷವಾಗಿ ಹೂಗಳಿಂದ ಅಲಂಕೃತಗೊಂಡ ಪಲ್ಲಕ್ಕಿಯಿರುವ ವಾಹನದಲ್ಲಿ ನಿರ್ಮಲಾನಂದ ಮಹಾಸ್ವಾಮಿಗಳ ಮೆರವಣಿಗೆಯನ್ನು ನಡೆಸಲಾಯಿತು. ಡೊಳ್ಳು, ಕಂಸಾಲೆ, ಗಾರುಡಿ ಬೊಂಬೆ, ವೇಷಭೂಷಣಗಳೊಂದಿಗೆ ವಿವಿಧ ಕಲಾ ತಂಡಗಳು, ವಾದ್ಯ ವೃಂದಗಳು ಮೆರವಣಿಗೆಯ ಕಳೆಯನ್ನು ಹೆಚ್ಚಿಸಿದ್ದವು. ಒಕ್ಕಲಿಗರ ಯುವಸೇನೆ ವತಿಯಿಂದ ಬೈಕ್ ರ್ಯಾಲಿಯನ್ನು ಆಯೋಜಿಸಿದ್ದು ನೂರಾರು ಬೈಕುಗಳಲ್ಲಿ ಯುವಕರು ಕೆಂಪೇಗೌಡನ ಚಿತ್ರವುಳ್ಳ ಧ್ವಜವನ್ನು ಹಿಡಿದು ಮೆರವಣಿಯ ಮುಂದೆ ಸಾಗಿದರು. ವಿವಿಧ ಗ್ರಾಮಗಳಿಂದ ಟ್ರಾಕ್ಟರ್ಗಳನ್ನು ಅಲಂಕರಿಸಿಕೊಂಡು ಸ್ವಾಮೀಜಿ ಹಾಗೂ ಕೆಂಪೇಗೌಡ ಚಿತ್ರಗಳೊಂದಿಗೆ ಆಗಮಿಸಿದ್ದರು.
ಕೋಟೆ ವೃತ್ತದ ಮದೀನಾ ಮಸೀದಿಯ ಬಳಿ ಮೆರವಣಿಗೆ ಆಗಮಿಸುತ್ತಿದ್ದಂತೆಯೇ ಮಸೀದಿಯ ವತಿಯಿಂದ ಮುಸ್ಲೀಮರು ನಿರ್ಮಲಾನಂದ ಸ್ವಾಮಿಗಳಿಗೆ ಗಂಧ ಪುಷ್ಪಗಳನ್ನು ನೀಡಿ ಆಶೀರ್ವಾದ ಪಡೆದರು.
ಅಬ್ಲೂಡು ಗ್ರಾಮದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ನಿರ್ಮಲಾನಂದ ಸ್ವಾಮಿಗಳು, ‘ಈ ಭಾಗದ ಜಿಲ್ಲೆಗಳಿಗೆ ಶಾಶ್ವತವಾದ ನೀರು ತರಲು ರಾಜಕೀಯವನ್ನು ಬದಿಗಿಟ್ಟು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಶ್ರಮಿಸಬೇಕು. ಅಗತ್ಯಬಿದ್ದಲ್ಲಿ ಜನರೆಲ್ಲಾ ಒಗ್ಗೂಡಿ ನೀರಿಗಾಗಿ ಹೋರಾಟ ನಡೆಸಲು ಮುಂದಾಗಬೇಕು. ಒಕ್ಕಲುತನವು ಅನ್ನವನ್ನು ಉತ್ಪಾದಿಸುವ ಉತೃಷ್ಟ ಕೆಲಸ. ವ್ಯವಸಾಯವನ್ನು ಬಿಡದೆ, ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಆದಿಚುಂಚನಗಿರಿ ಮಠವು ಜನಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಸಮುದಾಯದವರೂ ಮಠದ ಸೇವಾ ಕಾರ್ಯಗಳಾದ ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಹೇಳಿದರು.
ಗುಡಿಯಪ್ಪ, ಆನೂರು ಜಿ.ಬಚ್ಚಪ್ಪ, ತಿಪ್ಪೇನಹಳ್ಳಿ ರಾಘವೇಂದ್ರ, ಭಕ್ತರಹಳ್ಳಿ ಬೈರೇಗೌಡ, ವೆಂಕಟರಾಮರೆಡ್ಡಿ, ಮಳ್ಳೂರು ಹರೀಶ್, ಜಗನ್ನಾಥ್ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಯಿತು. ಹೆಚ್ಚು ಅಂಕ ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ನಿರ್ಮಲಾನಂದ ಸ್ವಾಮಿಗಳಿಗೆ ಬೆಳ್ಳಿ ಕಿರೀಟವನ್ನಿಟ್ಟು, ಫಲಪುಷ್ಪಗಳನ್ನು ನೀಡಿ ಗುರುವಂದನೆಯನ್ನು ಸಲ್ಲಿಸಲಾಯಿತು.
ಶಾಸಕರಾದ ಎಂ.ರಾಜಣ್ಣ, ಡಾ.ಸುಧಾಕರ್, ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಾಥನಂದ ಸ್ವಾಮೀಜಿ, ಪ್ರೊ.ಶಿವರಾಮರೆಡ್ಡಿ, ಡಾ.ರಮೇಶ್, ಸತೀಶ್, ರಾಮಚಂದ್ರ, ಪ್ರತಾಪ್, ಎಸ್.ಎಂ.ನಾರಾಯಣಸ್ವಾಮಿ, ಗೋಪಾಲ್, ಬೈರೇಗೌಡ, ಆಂಜನೇಯರೆಡ್ಡಿ, ಮುನಿಕೃಷ್ಣಪ್ಪ, ಮುನೇಗೌಡ, ಆರ್.ಎ.ಉಮೇಶ್, ಸುರೇಂದ್ರಗೌಡ, ಅಜಿತ್, ಬಿ.ನಾರಾಯಣಸ್ವಾಮಿ, ಜೆ.ಎಸ್.ವೆಂಕಟಸ್ವಾಮಿ, ಪುರುಷೋತ್ತಮ್, ಪ್ರಾಂಶುಪಾಲ ಮಹದೇವಯ್ಯ, ಚಿಕ್ಕೇಗೌಡ, ಮಂಜುನಾಥ್, ಸುಧಾಕರ್, ಆಂಜನೇಯರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಅಂಗವಿಕಲರಿಗೆ ಅನುಕಂಪದ ಬದಲಿಗೆ ಅವಕಾಶಗಳನ್ನು ಕಲ್ಪಿಸಿ
ಅಂಗವಿಕಲರಿಗೆ ಅನುಕಂಪದ ಬದಲಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟಾಗ ಸಮಾಜದಲ್ಲಿ ಉತ್ತಮವಾದ ವ್ಯಕ್ತಿಗಳಾಗಿ ರೂಪುಗೊಳ್ಳುವುದರಲ್ಲಿ ಅನುಮಾನವಿಲ್ಲವೆಂದು ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ ಅರಸ್ ಹೇಳಿದರು.
ಪಟ್ಟಣದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಆಯೋಜನೆ ಮಾಡಿದ್ದ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಅಂಗವೈಕಲ್ಯವೆಂಬುದು ಶಾಪವಲ್ಲ, ಜೀವನದಲ್ಲಿ ಆಕಸ್ಮಿಕವಾಗಿ ಸಂಭವಿಸುವಂತಹ ಕೆಲವು ಘಟನೆಗಳಿಂದ ಅಂಗವೈಕಲ್ಯ ಉಂಟಾಗುತ್ತದೆ, ಇದು ಯಾವುದೇ ಶಾಪವಲ್ಲ. ಸಮಾಜದಲ್ಲಿ ಎಲ್ಲರಂತೆ ಬದುಕು ಕಟ್ಟಿಕೊಳ್ಳುವಂತಹ ಸಾಮರ್ಥ್ಯ ಅಂಗವಿಕಲರಲ್ಲಿದೆ. ಕೈಕಾಲುಗಳಿಲ್ಲದಿದ್ದರೂ ಮೀನಿನಂತೆ ಈಜಬಲ್ಲರು, ವಿಮಾನವನ್ನು ಚಾಲನೆ ಮಾಡಬಲ್ಲರು, ಅಂಗವೈಕಲ್ಯದಿಂದ ಕುಗ್ಗಿ ಹೋಗದೆ ಎಲ್ಲರಂತೆ ಪರೀಕ್ಷೆಗಳಲ್ಲಿ ಉತ್ತಮವಾದ ಫಲಿತಾಂಶವನ್ನು ತರಬಲ್ಲರು. ಇಂತಹ ಮಕ್ಕಳಿಗೆ ಉತ್ತಮವಾದ ಅವಕಾಶಗಳನ್ನು ನೀಡಿದಾಗ ಅವರು ಸಮಾಜದಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸುತ್ತಾರೆ ಎಂದರು.
ನ್ಯಾಯಾಧೀಶರಾದ ಶ್ರೀಕಂಠ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಪಾಪಿರೆಡ್ಡಿ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಗುಣಮಟ್ಟದ ಹಾಲಿನಿಂದಲೇ ಒಕ್ಕೂಟಗಳು ಉಳಿಯಲು ಸಾಧ್ಯವಾಗುತ್ತದೆ
ಹಾಲು ಉತ್ಪಾದಕರು ಪೂರೈಕೆ ಮಾಡುತ್ತಿರುವ ಗುಣಮಟ್ಟದ ಹಾಲಿನಿಂದಲೇ ಒಕ್ಕೂಟಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ಕೆ.ಎಂ.ಎಫ್.ಅಧ್ಯಕ್ಷ ಪಿ.ನಾಗರಾಜು ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರ ಕೋಚಿಮುಲ್ ಹಾಗೂ ತುಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಪಿ.ಟಿ.ಎಸ್.ಯೋಜನೆಯ ಎಲ್ಲಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿದ್ದ ಪಿ.ಡಿ.ಎಸ್.ಯೋಜನೆಯಲ್ಲಿ ಜನಿಸಿರುವ ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಬರಗಾಲ ಪೀಡಿತ ಪ್ರದೇಶವಾಗಿದ್ದರೂ ಕೂಡಾ ಬಹಳಷ್ಟು ಗುಣಮಟ್ಟದ ಹಾಲನ್ನು ಉತ್ಪಾದನೆ ಮಾಡುವಂತಹ ತಳಿಯ ಹಸುಗಳನ್ನು ಹೊಂದಿರುವ ಈ ಭಾಗದ ರೈತರುಗಳು, ಹಣಕಾಸಿನ ತೊಂದರೆಯಿಂದಾಗಿ ಉತ್ತಮ ತಳಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ರಾಸುಗಳಿಗೆ ನೀಡುವಂತಹ ಮೇವುಗಳು ಬಹಳ ಮುಖ್ಯವಾಗುತ್ತದೆ, ಈ ಭಾಗದಲ್ಲಿ ನೀರಿನ ಅಭಾವದಿಂದಾಗಿ ಮೇವುಗಳ ಕೊರತೆ ತೀವ್ರವಾಗಿ ಕಾಡುತ್ತಿರುವುದರಿಂದ ಹಾಲಿನ ಪ್ರಮಾಣವು ಕಡಿಮೆಯಾಗುವ ಸ್ಥಿತಿ ಬರಬಹುದಾಗಿದೆ ಈ ನಿಟ್ಟಿನಲ್ಲಿ ನಮ್ಮ ಒಕ್ಕೂಟದಲ್ಲಿ ರಾಸುಗಳಿಗೆ ಅವಶ್ಯವಾಗಿರುವ ಪೌಷ್ಟಿಕಾಂಶಯುಕ್ತವಾದ ಪಶುಆಹಾರವನ್ನು ಸಿದ್ದಪಡಿಸುತ್ತಿದ್ದು, ರೈತರು ಖರೀದಿ ಮಾಡಿ ರಾಸುಗಳಿಗೆ ನೀಡಿ ಉತ್ತಮಗುಣಮಟ್ಟದ ಹಾಲನ್ನು ಉತ್ಪಾದನೆ ಮಾಡಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ತೀವ್ರ ನೀರಿನ ಕೊರತೆಯಿಂದಾಗಿ ಈ ಭಾಗದ ರೈತರು ಗುಣಮಟ್ಟದ ಹಾಲನ್ನು ಪೂರೈಕೆ ಮಾಡಲು ಪರದಾಡುವಂತಾಗಿದೆ, ಹಸುವಿನ ಹಾಲಿನಲ್ಲಿ ಪ್ಲೋರೈಡ್‌ನ ಅಂಶ ಕಂಡು ಬರುತ್ತಿದೆ ಎಂಬ ಆತಂಕಗಳು ರೈತರನ್ನು ಕಾಡತೊಡಗಿವೆ. ೧೪೦೦ ಅಡಿಗಳು ಕೊರೆದರೂ ನೀರಿನ ಮೂಲಗಳು ಕಾಣಿಸದೆ ಇರುವುದರಿಂದ ನೀರಿಗೆ ಹಾಹಾಕಾರ ಉಂಟಾಗುತ್ತಿರುವುದರಿಂದ ಮೇವುಗಳಿಗೂ ಸಮಸ್ಯೆಯಾಗುತ್ತಿದೆ, ಈ ನಿಟ್ಟಿನಲ್ಲಿ ಕೆ.ಎಂ.ಎಫ್.ಒಕ್ಕೂಟ ಈ ಭಾಗದ ರೈತರ ನೆರವಿಗೆ ಧಾವಿಸಬೇಕಾಗಿದೆ, ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ಈ ಭಾಗದ ರೈತರನ್ನು ಉಳಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಡಿ.ಸಿ.ಸಿ.ಬ್ಯಾಂಕಿನಿಂದ ತುಮ್ಮನಹಳ್ಳಿ, ಎ.ಹುಣಸೇನಹಳ್ಳಿ, ಮಲ್ಲಿಶೆಟ್ಟಿಪುರ ಹಾಗೂ ಮುಗಲಡಪಿ ಸಹಕಾರ ಸಂಘಗಳಿಗೆ ೩೭ ಲಕ್ಷ ರೂಪಾಯಿಗಳ ಸಾಲವನ್ನು ವಿತರಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಸಹಕಾರ ಸಂಘಗಳಿಗೆ ಸಾಲವನ್ನು ವಿತರಣೆ ಮಾಡಲಾಗುತ್ತದೆ, ಸಹಕಾರ ಸಂಘಗಳು ಡಿ.ಸಿ.ಸಿ.ಬ್ಯಾಂಕುಗಳಲ್ಲಿ ವ್ಯವಹರಿಸಬೇಕು ಎಂದು ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಹೇಳಿದರು.
ಹಾಲು ಉತ್ಪಾದಕಕ ಸಹಕಾರ ಸಂಘಗಳಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡಿದ್ದ ಸಂಘಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ಕೋಚಿಮುಲ್ ಅಧ್ಯಕ್ಷ ಜೆ.ಕಾಂತರಾಜ್, ನಿರ್ದೇಶಕ ಬಂಕ್ ಮುನಿಯಪ್ಪ, ಕೆ.ಎಂ.ಎಫ್.ನ ಸಿ.ಇ.ಓ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಪ್ರೇಮ್‌ನಾಥ್, ನಿರ್ದೇಶಕ ಕೆ.ವಿ.ನಾಗರಾಜ್, ಕೆ. ಅಶ್ವಥ್ಥರೆಡ್ಡಿ, ಆರ್.ರಾಮಕೃಷ್ಣೇಗೌಡ, ವೈ.ಬಿ. ಅಶ್ವಥ್ಥನಾರಾಯಣ, ಸುನಂದಮ್ಮ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾ ಪಿ.ಶಿವಾರೆಡ್ಡಿ, ಪಿ.ವಿ.ನಾಗರಾಜ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಡಿ.ಸಿ.ಸಿ.ಬ್ಯಾಂಕ್ ವ್ಯವಸ್ಥಾಪಕ ಲಿಂಗರಾಜು, ಕೋಚಿಮುಲ್ ಉಪವ್ಯವಸ್ಥಾಪಕರಾದ ಕೆ.ಜಿ.ಈಶ್ವರಯ್ಯ, ಗೋಪಾಲರಾವ್, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಹಾಯ ಸೌಲಭ್ಯ ಕಡಿತ – ರೇಷ್ಮೆ ಕೃಷಿಕರ ತೀವ್ರ ಆಕ್ರೋಶ
ಬೆಳಗಾವಿ ಅಧಿವೇಶನದಲ್ಲಿ ರೇಷ್ಮೆ ಕೃಷಿಕರ ಸಮಸ್ಯೆಗಳನ್ನು ಪ್ರಸ್ತಾಪಿಸಲು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ವತಿಯಿಂದ ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಕುಂದು ಕೊರತೆಗಳ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಸರ್ಕಾರವು ರೇಷ್ಮೆ ಕೃಷಿಕರ ಸಹಾಯ ಧನ ಸೌಲಭ್ಯವನ್ನು ಕಡಿತಗೊಳಿಸಿರುವ ರೈತ ವಿರೋಧಿ ನೀತಿಗೆ ಒಕ್ಕೊರಲಿನಿಂದ ಆಕ್ರೋಶ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಈ ಜಿಲ್ಲೆಗಳಲ್ಲಿ ರೇಷ್ಮೆ ಕೃಷಿಯು ಕೃಷಿಕರ ಪಾಲಿಗೆ ಕಲ್ಪವೃಕ್ಷದಂತಿದೆ. ಇತ್ತೀಚಿಗೆ ಸರ್ಕಾರವು ರೇಷ್ಮೆ ಕೃಷಿ ಇಲಾಖೆಯಿಂದ ಕೊಡುತ್ತಿದ್ದ ಸಹಾಯಧನ ಸೌಲಭ್ಯವನ್ನು ಶೇಕಡಾ ೫೦ ರಷ್ಟು ಕಡಿತಗೊಳಿಸಿ, ಈ ಸೌಲಭ್ಯವನ್ನು ಪಡೆಯಲು ದ್ವಿತಳಿ ರೇಷ್ಮೆ ಗೂಡನ್ನು ಬೆಳೆಯಬೇಕೆಂಬ ನಿಯಮ ರೂಪಿಸಿರುವುದರಿಂದ ರೈತರು ಸಹಾಯಧನ ಸೌಲಭ್ಯ ಪಡೆಯುವಲ್ಲಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ದ್ವಿತಳಿ ರೇಷ್ಮೆ ಬೆಳೆಯು ಅತ್ಯಂತ ಸೂಕ್ಷ್ಮ ಬೆಳೆಯಾಗಿದ್ದು, ಇದರಲ್ಲಿ ರೋಗವನ್ನು ತಡೆದುಕೊಳ್ಳುವ ಶಕ್ತಿ ಕಡಿಮೆ ಇರುವುದರಿಂದ ಪದೇ ಪದೇ ಬೆಳೆಗಳು ವಿಫಲವಾಗುತ್ತಿದ್ದು, ರೈತನಿಗೆ ನಷ್ಟವಾಗುತ್ತಿದೆ. ಇಲಾಖೆಯು ದ್ವಿತಳಿ ರೇಷ್ಮೆ ಗೂಡನ್ನು ಬೆಳೆಯಬೇಕೆಂಬ ಕಡ್ಡಾಯ ನಿಯಮವನ್ನು ಸಡಿಲಿಸಿ ಪ್ರೋತ್ಸಾಹ ಧನ ಮತ್ತು ಸಹಾಯಧನವನ್ನು ಎಲ್ಲಾ ರೈತರಿಗೂ ತಲುಪುವಂತೆ ಮಾಡುವುದರಿಂದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಮಾತನಾಡಿ, ಬರಗಾಲದ ಜಿಲ್ಲೆಗಳಾದ ನಮ್ಮ ಜಿಲ್ಲೆಗಳಲ್ಲಿ ಹನಿನೀರಾವರಿ ಅಳವಡಿಸಿಕೊಂಡ ಎಲ್ಲಾ ರೈತರಿಗೆ ಯಾವುದೇ ಮಿತಿ ನಿಗಧಿಪಡಿಸದೇ ಸೌಲಭ್ಯವನ್ನು ಈ ಹಿಂದಿನಂತೆ ನೀಡಬೇಕಾಗಿದೆ. ಅದೇ ರೀತಿಯಾಗಿ ಸಲಕರಣೆಗಳಿಗೆ ಕೊಡುತ್ತಿದ್ದ ಸಹಾಯಧನ ಸೌಲಭ್ಯವನ್ನು ಈ ಹಿಂದಿನಂತೆ ನೀಡಲು ಕ್ರಮ ಕೈಗೊಂಡು ಕೂಲಿಗಾರರ ಸಮಸ್ಯೆಯನ್ನು ಹೋಗಲಾಡಿಸಲು ಮಿನಿ ಟ್ರ್ಯಾಕ್ಟರ್, ಸೊಪ್ಪು ಕಟಾವು ಯಂತ್ರ, ಕಳೆ ತೆಗೆಯುವ ಸಾಧನ, ಸ್ಪ್ರೇಯರ್, ಜನರೇಟರ್, ಪ್ಲಾಸ್ಟಿಕ್ ತಟ್ಟೆಗಳು ಇತರೆ ಸಾಮಾಗ್ರಿಗಳನ್ನು ಈ ಹಿಂದಿನಂತೆ ಸಹಾಯಧನ ಸೌಲಭ್ಯ ಕಲ್ಪಿಸಿ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕಿದೆ ಎಂದರು.
ನೂಲು ಬಿಚ್ಚಾಣಿಕೆದಾರರಾದ ಮಹಮದ್ ಅನ್ವರ್‌ರವರು ಮಾತನಾಡಿ ಕೆ.ಎಸ್.ಎಂ.ಬಿ.ಯಲ್ಲಿ ಬಿಡುಗಡೆಯಾದ ಹಣವನ್ನು ಪ್ರತ್ಯೇಕವಾಗಿ ಮೀಸಲಿರಿಸಿ ಕಚ್ಚಾ ರೇಷ್ಮೆ ಕುಸಿತ ಕಂಡಾಗ ಬೆಂಬಲ ಬೆಲೆಯಾಗಿ ಮತ್ತು ಒತ್ತೆ ಸಾಲದ ರೂಪದಲ್ಲಿ ಬಳಸಿಕೊಳ್ಳಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಪಹಣಿಗಳನ್ನು ಪರಿಗಣಿಸಿ ಬಂಗಾರದ ಮೇಲೆ ಕೊಡುವ ಕಡಿಮೆ ಬಡ್ಡಿ ಸಾಲದ ವಿಧಾನದಂತೆ ನೂಲು ಬಿಚ್ಚಾಣಿಕೆದಾರರಿಗೆ ಅವರ ಪರವಾನಗಿಯನ್ನು ಪಹಣಿಯಂತೆ ಪರಿಗಣಿಸಿ ಬಂಗಾರದ ಮೇಲೆ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಹುತೇಕ ರೈತರು ಅಸಮಾಧಾನ ವ್ಯಕ್ತಪಡಿಸಿ ಮಿಶ್ರತಳಿ ಗೂಡಿಗೆ ಕೊಡುತ್ತಿರುವ ಒಂದು ಕೆ.ಜಿ.ಗೆ ೩೦ ರೂ. ದ್ವಿತಳಿ ಗೂಡಿಗೆ ೫೦ ರೂ. ಸಹಾಯ ಧನವನ್ನು ಆಗಸ್ಟ್ ನಂತರ ಘೋಷಿಸಲಾಗಿದ್ದು, ಸರ್ಕಾರವು ಈವರೆಗೂ ಹಣ ಬಿಡುಗಡೆ ಮಾಡದೇ ಇರುವುದರಿಂದ ಅನವಶ್ಯಕವಾಗಿ ರೈತರು ಇಲಾಖೆಯ ಬಾಗಿಲಿಗೆ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅಲೆದಾಡಬೇಕಿದೆ. ಇಂತಹ ಯೋಜನೆಗಳನ್ನು ಜಾರಿಗೆ ತರುವುದನ್ನು ವಿರೋಧಿಸಿ ಈ ಯೋಜನೆಯನ್ನು ಸಂಪೂರ್ಣ ನಿಲ್ಲಿಸುವಂತೆ ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಮಳ್ಳೂರು ಹರೀಶ್, ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ತಾದೂರು ಮಂಜುನಾಥ್, ಭಾಸ್ಕರ್ ರೆಡ್ಡಿ, ಮಳಮಾಚನಹಳ್ಳಿ ದೇವರಾಜ್, ಸೊಣ್ಣೇನಹಳ್ಳಿ ನಿರಂಜನ್, ಅಬ್ಲೂಡು ದೇವರಾಜ್, ಮಳ್ಳೂರು ನಾರಾಯಣಸ್ವಾಮಿ, ಮುತ್ತೂರು ಭೈರೇಗೌಡ, ರೀಲರುಗಳಾದ ಅಹಮದ್ ಅಜೀಜ್, ಸಮೀವುಲ್ಲಾ, ಜಗದೀಶ್, ಪದ್ಮನಾಭ್ ಮುಂತಾದವರು ಹಾಜರಿದ್ದರು.
ಮಕ್ಕಳ ಸುರಕ್ಷತಾ ಸಪ್ತಾಹದ ಅಂಗವಾಗಿ ಜಾಗೃತಿ ಜಾಥಾ
ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಗುರುವಾರ ಮಕ್ಕಳ ಸುರಕ್ಷತಾ ಸಪ್ತಾಹದ ಅಂಗವಾಗಿ ಜಾಗೃತಿ ಜಾಥಾ ಹಾಗೂ ಸುರಕ್ಷತಾ ಗೀತೆಗಳನ್ನು ಹಾಡುವುದರ ಮೂಲಕ ಮಕ್ಕಳ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಅರಿವು ಮೂಡಿಸುವ ಜಾಥಾ ನಡೆಸಿದರು.
ಗುಡಿಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿ ಗ್ರಾಮದಲ್ಲಿ ಈಚೆಗೆ ಹಿರಿಯ ಕನ್ನಡಪರ ಹೋರಾಟಗಾರ ಖಂಡೇರಾವ್ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಸರ್ಕಾರಿ ಶಾಲೆಯೊಂದನ್ನು ದತ್ತು ತೆಗೆದುಕೊಂಡ ಕಂಪೆನಿಯ ಉದ್ಯೋಗಿಗಳು
ಸಂಸದರು ಮತ್ತು ಕೆಲ ಪೀಠಾಧಿಪತಿಗಳು ಗ್ರಾಮಗಳನ್ನು ಅಭಿವೃದ್ಧಿಪಡಿಸಲು ದತ್ತು ತೆಗೆದುಕೊಳ್ಳುತ್ತಿರುವುದು ಒಂದೆಡೆಯಾದರೆ, ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಗಳಾಗಿರುವ ಕೆಲ ಸ್ನೇಹಿತರು ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ತಾಲ್ಲೂಕಿನ ಸರ್ಕಾರಿ ಶಾಲೆಯೊಂದನ್ನು ದತ್ತು ತೆಗೆದುಕೊಂಡಿರುವ ಸಂಗತಿ ಈಚೆಗೆ ನಡೆದಿದೆ.
ತಾಲ್ಲೂಕಿನ ಕದಿರಿನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದಿ ಇಂಡಿಯನ್ ಡಿಸೈನ್ಸ್ ಎಕ್ಸ್ಪೋರ್ಟ್ಸ್ ಪ್ರೈ.ಲಿಮಿಟೆಡ್ ಕಂಪೆನಿಯ ಉದ್ಯೋಗಿಗಳಾದ ಜಿ.ಎನ್.ನಂದಕುಮಾರ್, ದೇವರಾಜ್, ಸತೀಶ್, ಸುಹಾಲ್ ಮತ್ತು ಇಮ್ರಾನ್ ದತ್ತು ತೆಗೆದುಕೊಂಡಿದ್ದಾರೆ.
ಈಚೆಗೆ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ‘ಶಾಲೆಗೆ ಬೇಕಾಗಿರುವ ಅನುಕೂಲತೆಗಳನ್ನು ದತ್ತು ತೆಗೆದುಕೊಂಡವರು ನೀಡುವುದು ಒಂದು ಅಂಶವಾದರೆ, ಅದನ್ನು ಸದುಪಯೋಗ ಪಡಿಸಿಕೊಳ್ಳುವ ಕಾರ್ಯಬದ್ಧತೆ ಶಾಲಾ ಸಿಬ್ಬಂದಿಯಲ್ಲಿ ಅತಿಮುಖ್ಯವಾಗಿರಬೇಕು. ಇದರ ಒಟ್ಟು ಉದ್ದೇಶ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವುದು ಹಾಗೂ ಕಲಿಕೆಯ ಪ್ರಗತಿ ಹೆಚ್ಚಿಸುವುದಾಗಿದೆ’ ಎಂದು ತಿಳಿಸಿದರು.
ಶಾಲೆಯ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿ.ಎನ್.ನಂದಕುಮಾರ್ ಮಾತನಾಡಿ, ‘ಶಾಲೆಯು ಒಂದು ದೇಗುಲ. ಶಾಲೆಯನ್ನು ಪ್ರವೇಶಿಸುವಾಗ ಶಾರದೆಯ ಗುಡಿಯನ್ನು ಪ್ರವೇಶಿಸುವ ಭಾವನೆ ಇರಬೇಕು. ಈ ಅವಿಭಾಜ್ಯ ಜಿಲ್ಲೆಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ, ಸಿ.ಎನ್.ಆರ್.ರಾವ್ ಅವರಂಥ ಎಂಜಿನಿಯರ್, ವಿಜ್ಞಾನಿಗಳು, ಮಾಸ್ತಿಯವರಂಥ ಕನ್ನಡದ ಆಸ್ತಿಯನ್ನು ಕಂಡಿದ್ದೇವೆ. ನಮ್ಮ ಮಣ್ಣಿನಲ್ಲಿ ಅಂಥಹ ಎಷ್ಟೋ ಪ್ರತಿಭಾವಂತರಿದ್ದು ಅವರಿಗೆ ಪೂರಕವಾದ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಾವು ನಿಮ್ಮ ಶಾಲೆಯನ್ನು ದತ್ತು ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಶಾಲೆಗೆ ಅಗತ್ಯವಿರುವ ಎಲ್ಲಾ ಪೂರಕಾಂಶಗಳನ್ನೂ ಪೂರೈಸುತ್ತೇವೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಎನ್.ನಂದಕುಮಾರ್ ಮತ್ತು ಸ್ನೇಹಿತರು ಶಾಲೆಗೆ ನೂರು ತಟ್ಟೆ ಲೋಟಗಳು, ಮಕ್ಕಳಿಗೆ ಜಾಮಿಟ್ರಿ ಬಾಕ್ಸ್ ಮತ್ತು ಲೇಖನ ಸಾಮಗ್ರಿಗಳನ್ನು ನೀಡಿದರು. ಶಿಕ್ಷಣ ಸಂಯೋಜಕ ಆರ್.ಕೆ.ಶ್ರೀನಾಥ್ ಅವರಿಗೆ ವಿವಿಧ ಶಾಲೆಗಳಲ್ಲಿ ನೀಡಲು 50 ಚಾಪೆಗಳನ್ನು ನೀಡಿದರು.
ಮುಖ್ಯಶಿಕ್ಷಕಿ ಹಂಸವೇಣಿ, ಜಿ.ಎನ್.ಶ್ಯಾಮಸುಂದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಚೌಡಸಂದ್ರ ಗ್ರಾಮದಲ್ಲಿ ಹನುಮಜಯಂತಿ ಆಚರಣೆ
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಗುರುವಾರ ಹನುಮಜಯಂತಿಯನ್ನು ಶ್ರದ್ಧಾಭಕ್ತಿಯಿಂದ ವಿಶೇಷವಾಗಿ ಆಚರಿಸಲಾಯಿತು.
ಸೀತಾರಾಮ ಲಕ್ಷ್ಮಣ ಸಮೇತ ಆಂಜನೇಯಸ್ವಾಮಿಯ ನೂತನ ಉತ್ಸವ ಮೂರ್ತಿಯ ಕಲ್ಯಾಣೋತ್ಸವ ಹಾಗೂ 26 ನೇ ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಮಹೋತ್ಸವದೊಂದಿಗೆ ಭಕ್ತಿಗೀತೆ, ಭಾವಗೀತೆ, ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಬುಧವಾರ ರಾತ್ರಿ ಗ್ರಾಮದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಮಾಡಲಾಯಿತು. ಹೂವಿನ ಪಲ್ಲಕ್ಕಿಯ ಉತ್ಸವಕ್ಕೆ ನೂರಾರು ಮಂದಿ ಸಾಕ್ಷಿಯಾದರು. ದೇವಾಲಯವನ್ನು ಹಾಗೂ ಗ್ರಾಮದ ಪ್ರಮುಖ ರಸ್ತೆಗಳನ್ನೆಲ್ಲಾ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ದೇವರನ್ನು ಮತ್ತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಹನುಮಜಯಂತಿಯ ಪ್ರಯುಕ್ತ ಗ್ರಾಮದಲ್ಲಿ ಜಾತ್ರೆಯ ವಾತಾವರಣ ಮೂಡಿದ್ದು, ಸಾವಿರಾರು ಭಕ್ತರು ವಿವಿಧ ತಾಲ್ಲೂಕು ಜಿಲ್ಲೆಗಳಿಂದ ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು. ತಿಂಡಿ ತಿನಿಸುಗಳು, ಆಟಿಕೆಗಳು, ಮುಂತಾದ ವಿವಿಧ ರೀತಿಯ ಅಂಗಡಿಗಳು ತರೆಯಲಾಗಿತ್ತು. ಆಗಮಿಸಿದ ಭಕ್ತರಿಗೆಲ್ಲಾ ದೇವಾಲಯದ ಸಮಿತಿ ವತಿಯಿಂದ ಭೋಜನ ವ್ಯವಸ್ಥೆಯನ್ನು ಮಾಡಿದ್ದರು.
ವಕೀಲರ ಮೇಲೆ ಕಕ್ಷಿದಾರರಿಗೆ ನ್ಯಾಯದಾನ ಒದಗಿಸುವ ನಂಬಿಕೆ ಇರಬೇಕು
ವಕೀಲರ ವೃತ್ತಿಗೆ ಗರಿಷ್ಠ ವಯೋಮಿತಿಯನ್ನು ಕಡ್ಡಾಯಗೊಳಿಸಿ ಕಾನೂನ್ನು ಜಾರಿಗೆ ತರಬೇಕಿದೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ವಕೀಲರ ಸಂಘದ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವಕೀಲರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲ ಬದಲಾದಂತೆ ಜನ ಜೀವನ ಬದುಕಿನ ಶೈಲಿ ಬದಲಾಗಿದ್ದು ಅಪರಾಧ ಪ್ರಕರಣಗಳೂ ಕೂಡ ವಿಭಿನ್ನವಾಗಿವೆ. ಸಣ್ಣ ಪುಟ್ಟದಕ್ಕೂ ನ್ಯಾಯಾಲಯದ ಮೆಟ್ಟಿಲು ಹತ್ತುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಇಂತಹ ಬಿಕ್ಕಟಿನ ಸಮಯದಲ್ಲಿ ಯುವ ವಕೀಲ ಸಮುದಾಯ ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸಬೇಕಿದೆ. ಹಿರಿಯ ವಯಸ್ಸಿನ ವಕೀಲರು ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಲು ಅವರ ವಯಸ್ಸು ಅಡ್ಡಿಬರಲಿದೆ. ಇದರಿಂದ ಕಕ್ಷಿದಾರರಿಗೆ ನ್ಯಾಯದಾನ ಒದಗಿಸಲು ಕೂಡ ಅವರಿಂದ ಸಾಧ್ಯವಾಗದಿರಬಹುದು. ಹಾಗಾಗಿ ವಕೀಲಿ ವೃತ್ತಿ ಮಾಡುವವರಿಗೆ ಗರಿಷ್ಠ ೬೫ ವರ್ಷದ ವಯೋಮಿತಿಯನ್ನು ನಿಗದಿಗೊಳಿಸಿ ಕಾನೂನಿಗೆ ತಿದ್ದುಪಡಿತರುವಂತೆ ಆಗ್ರಹಿಸಿದರು.
ಇತ್ತೀಚೆಗೆ ರಾಜ್ಯ ವಕೀಲರ ಪರಿಷತ್ನಲ್ಲಿ ನಕಲಿ ದಾಖಲೆಗಳನ್ನು ಹಾಜರುಪಡಿಸಿ ವಕೀಲರು ತಮ್ಮ ಹೆಸರನ್ನು ನೋಂದಾಯಿಸಿರುವ ಪ್ರಕರಣ ಬಯಲಾಗಿದ್ದು ಈಗಾಗಲೇ ಅವರ ವಿರುದ್ದ ವಂಚನೆ, ಸುಳ್ಳು ದಾಖಲೆಗಳನ್ನು ಸಲ್ಲಿಕೆ ಮಾಡಿದ ಪ್ರಕರಣ ದಾಖಲಿಸಲಾಗಿದೆ. ಇತರೆ ಇನ್ನೂ ಹಲವು ಮಂದಿ ಇದೆ ರೀತಿ ನಕಲಿ ದಾಖಲೆಗಳನ್ನು ಸಲ್ಲಿಸಿರುವ ಬಗ್ಗೆ ಅನುಮಾನಗಳಿದ್ದು ಪರಿಷತ್ನ ಅಧ್ಯಕ್ಷರು ಈಗಾಗಲೆ ಅಂತಹವರ ಪತ್ತೆಗಾಗಿ ತನಿಖೆಗೆ ಆದೇಶಿಸಿದ್ದಾರೆ ಎಂದರು.
ವಕೀಲರ ಮೇಲೆ ಕಕ್ಷಿದಾರರಿಗೆ ನ್ಯಾಯದಾನ ಒದಗಿಸುವ ನಂಬಿಕೆ ಇರಬೇಕು. ಆ ರೀತಿ ವಕೀಲರ ಕಾರ್ಯಚಟುವಟಿಕೆಗಳು ಇರಬೇಕು. ದೇಶದಲ್ಲಿ ೧೯ ವಕೀಲರ ಪರಿಷತ್ಗಳಿದ್ದು ರಾಜ್ಯದಲ್ಲಿ ೭೦ ಸಾವಿರಕ್ಕೂ ಹೆಚ್ಚು ವಕೀಲರು ನೋಂದಾಯಿಸಿಕೊಂಡಿದ್ದಾರೆ. ವಕೀಲರ ಸನ್ನದ್ದನ್ನು ಜಾರಿಗೊಳಿಸಿ ೫೩ ವರ್ಷಗಳಾಗಿದ್ದು ಈ ದಿನವನ್ನು ವಕೀಲರ ದಿನವನ್ನಾಗಿ ಆಚರಿಸಲಾಗುತ್ತಿದೆ. ದೇಶದ ಉದ್ದಗಲಕ್ಕೂ ಲಕ್ಷಾಂತರ ವಕೀಲರು ಇದ್ದು ಕೇವಲ ವಕೀಲಿಕೆ ಮಾಡುವುದರ ಬದಲಿಗೆ ಮಾನವೀಯತೆ ದೃಷ್ಟಿಯಿಂದ ಹಾಗೂ ಸಾಮಾಜಿಕ ಕಳಕಳಿಯಿಂದಲೂ ಕಾರ್ಯನಿರ್ವಹಿಸುವಂತೆ ವಕೀಲರಲ್ಲಿ ಮನವಿ ಮಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ್ ಅರಸ್, ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ಎಸ್.ಕುಮುದಿನಿ, ವಕೀಲರ ಸಂಘದ ಪದಾಕಾರಿಗಳು ಹಾಜರಿದ್ದರು.

