ಮಕ್ಕಳ ಮೇಲೆ ಮಾನಸಿಕ ಒತ್ತಡವನ್ನು ಹೇರಿ ಅವರ ಸ್ವಾತಂತ್ರ್ಯವನ್ನು ಕಸಿಯುತ್ತಿರುವುದರಿಂದ ಮಕ್ಕಳ ಕ್ರಿಯಾಶೀಲತೆ ಕುಂಠಿತಗೊಳ್ಳುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ‘ಮಕ್ಕಳ ಸುರಕ್ಷತಾ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಗು ಸಮಾಜದ ಕಣ್ಣು. ಮಗುವು ಪ್ರಾಪ್ತ ವಯಸ್ಸಿಗೆ ಬರುವ ತನಕ ಪೋಷಿಸಿ, ಕಲಿಸಿ, ಸಂರಕ್ಷಿಸಿ ಸಮಾಜಮುಖಿಯಾಗಿ ಬೆಳೆಸಬೇಕಾದದ್ದು ಪೋಷಕರ ಹಾಗೂ ಸಮಾಜದ ಜವಾಬ್ದಾರಿ. ಈಚೆಗೆ ಹೆಚ್ಚಾಗಿ ಖಾಸಗಿ ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ಕಂಡುಬರುತ್ತಿರುವ ಹಿನ್ನೆಯಲ್ಲಿ ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಲವಾರು ನಿಯಮಗಳನ್ನು ಶಿಕ್ಷಣ ಸಂಸ್ಥೆಗಳು ಪಾಲಿಸಲು ಸೂಚನೆ ನೀಡಲಾಗಿದೆ. ಇದರೊಂದಿಗೆ ಬೋದಕ ಬೋದಕೇತರ ಸಿಬ್ಬಂದಿಗಳ ಸಂಪೂರ್ಣ ಮಾಹಿತಿಯನ್ನು ಭಾವಚಿತ್ರದ ಸಮೇತ ಸಂಗ್ರಹಿಸಿಡುವುದು ಖಡ್ಡಾಯ ಮಾಡಿದೆ. ಶಾಲೆಗೆ ಬರುವ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಯಿಂದ ಕಾಣಬೇಕು. ಮಕ್ಕಳ ಪೋಷಕರಿಗೆ ಗುರುತಿನ ಚೀಟಿ ನೀಡುವುದು ಹಾಗೂ ಅಪರಿಚಿತ ವ್ಯಕ್ತಿಗಳನ್ನು ಶಾಲಾ ಆವರಣದಲ್ಲಿ ಅಥವಾ ಮಕ್ಕಳೊಂದಿಗೆ ಕಂಡುಬಂದಲ್ಲಿ ವಿಚಾರಿಸಬೇಕು.ಅನುಮಾನ ಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ಮಕ್ಕಳ ಸುರಕ್ಷತಾ ವಿಷಯದಲ್ಲಿ ಪೋಷಕರ ಮತ್ತು ಶಿಕ್ಷರ ಪಾತ್ರ ಅತಿ ಮುಖ್ಯವಾದದ್ದು. ಮಕ್ಕಳ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸತಕ್ಕದ್ದು. ಮಾನವತ್ವ ಗುಣವು ಎಲ್ಲರ ಮನಸ್ಸಿನಲ್ಲೂ ಮನೆ ಮಾಡಬೇಕು. ಆಗ ಮಕ್ಕಳು ದೇವರಂತೆ ಕಾಣುತ್ತಾರೆ. ಮುಗ್ಧ ಮಕ್ಕಳ ಮನಸ್ಸನ್ನು ಘಾಸಿಗೊಳಿಸುವ ಅಮಾನವೀಯತೆಯನ್ನು ಸಮಾಜದಿಂದ ತೊಲಗಿಸಲು ಎಲ್ಲರೂ ಶ್ರಮಿಸಬೇಕು ಎಂದು ನುಡಿದರು.
ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮೀದೇವಮ್ಮ, ಪುರಸಭಾ ಅಧ್ಯಕ್ಷೆ ಮುಷ್ಠರಿ ತನ್ವೀರ್, ಆರೋಗ್ಯ ಇಲಾಖೆಯ ಕಿರಣ್ ಕುಮಾರ್, ಶಿಕ್ಷಣ ಸಂಯೋಜಕ ರಾಮಣ್ಣ, ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಒತ್ತಡದಿಂದ ಮಕ್ಕಳ ಕ್ರಿಯಾಶೀಲತೆ ಕುಂಠಿತಗೊಳ್ಳುತ್ತಿದೆ
ಡಿಸಂಬರ್ 5ರಂದು ಗುರುವಂದನಾ ಕಾರ್ಯಕ್ರಮ
ತಾಲ್ಲೂಕಿನ ಅಬ್ಲೂಡು ಗ್ರಾಮದಲ್ಲಿ ಡಿಸಂಬರ್ 5ರ ಶುಕ್ರವಾರ ತಾಲ್ಲೂಕು ಒಕ್ಕಲಿಗರ ಯುವ ಸೇನೆ ಮತ್ತು ಅಬ್ಲೂಡು ಗ್ರಾಮ ಪಂಚಾಯತಿ ಒಕ್ಕಲಿಗರ ಯುವಸೇನೆ ವತಿಯಿಂದ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮಿಗಳು ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಪಟ್ಟಣದಿಂದ ವಿವಿಧ ಗ್ರಾಮಗಳ ಪಲ್ಲಕ್ಕಿಗಳು, ಕಲಾತಂಡಗಳೊಂದಿಗೆ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮಿಗಳನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುವುದು. ನಾಡಿನ ಹಿರಿಮೆ ಗರಿಮೆ ಸಾರುವ ಸ್ಥಬ್ದ ಚಿತ್ರಗಳು, ಜನಪದ ಸಿರಿಯನ್ನು ಸಾರುವ ವಿವಿಧ ವೇಷಭೂಷಣಗಳು, ಮಂಗಳವಾದ್ಯಗಳು ಮೆರವಣಿಗೆಯಲ್ಲಿರುತ್ತವೆ. ಅಬ್ಲೂಡಿನ ಗ್ರಾಮದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಅಬ್ಲೂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹತ್ತು ಮಂದಿ ಸಾಧಕರಿಗೆ ಸನ್ಮಾನ ಇರುತ್ತದೆ. ಹತ್ತು ಸಾವಿರ ಮಂದಿಗೆ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿರುವುದಾಗಿ ತಿಳಿಸಿದರು.
ಅಬ್ಲೂಡು ಗ್ರಾಮ ಪಂಚಾಯತಿ ಒಕ್ಕಲಿಗ ಯುವ ಸೇನೆ ಅಧ್ಯಕ್ಷ ಪ್ರತಾಪ್, ತಾಲ್ಲೂಕು ಅಧ್ಯಕ್ಷ ಜೆ.ವಿ.ವೆಂಕಟಸ್ವಾಮಿ, ಉಪಾಧ್ಯಕ್ಷ ಆರ್.ಎ.ಉಮೇಶ್, ನಗರ ಘಟಕ ಅಧ್ಯಕ್ಷ ಪುರುಷೋತ್ತಮ್, ಪದಾಧಿಕಾರಿಗಳಾದ ಮುರಳಿ, ಗೋಪಾಲ್, ತ್ಯಾಗರಾಜ್, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಸಂಗಮ
ತಾಲ್ಲೂಕಿನ ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಕ್ಕಿಗಳ ಚಿಲಿಪಿಲಿ ಸದ್ದಿನಂತೆ ಮಕ್ಕಳ ಒಡನಾಟ, ಮಾತುಕತೆ, ಭಾವನೆಗಳ ಹಂಚಿಕೊಳ್ಳುವಿಕೆ ನಡೆದಿತ್ತು. ಶಾಲೆಯು ಎಂದಿನಂತಿರದೆ ನೂರು ಮಂದಿ ಹೊಸ ವಿದ್ಯಾರ್ಥಿಗಳ ಆಗಮನದಿಂದಾಗಿ ಕಳೆಗಟ್ಟಿತ್ತು.
ವಿವಿಧ ದೇಶಗಳಿಂದ ಬೆಂಗಳೂರಿಗೆ ಬಂದು ವೃತ್ತಿ ನಿರತರಾಗಿರುವವರು ತಮ್ಮ ಮಕ್ಕಳನ್ನು ಓದಿಸುವ ಬೆಂಗಳೂರಿನ ದಿ ಇಂಟರ್ನ್ಯಾಷನಲ್ ಸ್ಕೂಲ್ ಬ್ಯಾಂಗಳೂರ್(ಟಿಐಎಸ್ಬಿ) ಶಾಲೆಯ ಒಂಭತ್ತನೇ ತರಗತಿಯ ನೂರು ಮಂದಿ ವಿದ್ಯಾರ್ಥಿಗಳು ಮುತ್ತೂರಿನ ಸರ್ಕಾರಿ ಪ್ರೌಢಶಾಲೆಗೆ ಬಂದಿದ್ದರು.
‘ನಮ್ಮ ಮುತ್ತೂರು’ ಸಂಸ್ಥೆ ಆಯೋಜಿಸಿದ್ದ ಈ ನಗರ ಮತ್ತು ಗ್ರಾಮೀಣ ಮಕ್ಕಳ ಪರಸ್ಪರ ಒಡನಾಟದ ಕಾರ್ಯಕ್ರಮಕ್ಕೆ ಮಕ್ಕಳು ಉತ್ತಮವಾಗಿ ಸ್ಪಂದಿಸಿದರು. ಶಾಲೆಯ ಕೋಣೆಯಲ್ಲಿ ಒಬ್ಬ ಟಿಐಎಸ್ಬಿ ವಿದ್ಯಾರ್ಥಿ ಪಕ್ಕ ಮುತ್ತೂರಿನ ಪ್ರೌಢಶಾಲೆಯ ಒಬ್ಬ ವಿದ್ಯಾರ್ಥಿಯಂತೆ ಕುಳಿತುಕೊಂಡ ಮಕ್ಕಳಲ್ಲಿ ಹೊಸ ಪರಿಚಯದೊಂದಿಗೆ ಗೆಳೆತನ ಮೂಡಿದವು. ಪರಸ್ಪರ ಅರಿಯಲು ಇಂಗ್ಲೀಷ್ ಮಾಧ್ಯಮವಾದರೂ ಭಾವನೆಗಳನ್ನು ಹಂಚಿಕೊಳ್ಳಲು ಭಾಷೆಯು ಅಡ್ಡಿಯಾಗಲಿಲ್ಲ. ತಮ್ಮ ಕುಟುಂಬದ ಬಗ್ಗೆ ವಿವರಗಳನ್ನು ಬರೆಯಲು ಪ್ರತಿಯೊಬ್ಬರಿಗೂ ಕಾರ್ಡುಗಳನ್ನು ವಿತರಿಸಿ ಆ ಮೂಲಕ ಪರಸ್ಪರ ಅರಿಯಲು ನೆರವನ್ನು ನೀಡಲಾಯಿತು.
ಮುತ್ತೂರಿಗೆ ಆಗಮಿಸಿದ್ದ ಟಿಐಎಸ್ಬಿ ಶಾಲೆಯ ಮಕ್ಕಳು ಮುತ್ತೂರು ಗ್ರಾಮದಲ್ಲಿ ಹೈನುಗಾರಿಕೆ, ರೇಷ್ಮೆ ಗೂಡಿನ ಹಂತಗಳು, ದ್ರಾಕ್ಷಿ ಬೆಳೆ, ತರಕಾರಿ ಮುಂತಾದವುಗಳನ್ನು ಕಂಡು ಗ್ರಾಮೀಣ ಪರಿಸರವನ್ನು ಆಸ್ವಾದಿಸಿದರು. ಟ್ರಾಕ್ಟರಿನಲ್ಲಿ ಕುಳಿತು ಪಯಣಿಸಿದರು. ತಾವೂ ಮಣ್ಣಿನ ಮಕ್ಕಳಂತೆ ಮುತ್ತೂರು ಗ್ರಾಮದ ಸ್ಮಶಾನದ ಬಳಿ ನೂರು ಗಿಡಗಳನ್ನು ನೆಟ್ಟರು. ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿನ ಔಷಧಿ ವನದಲ್ಲಿ ತಾವೂ ಒಂದಷ್ಟು ಸಸಿಗಳನ್ನು ನೆಟ್ಟರು.
ಮುತ್ತೂರಿನ ಮಕ್ಕಳು ಚೀನಾ, ಬ್ರಿಟನ್ ಮುಂತಾದ ದೇಶಗಳ ಮೂಲದ ಹಾಗೂ ಉತ್ತರ ಭಾರತ ಮೂಲದ ಮಕ್ಕಳೊಂದಿಗೆ ಅವರ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆದರು. ಸರಾಗವಾಗಿ ಇಂಗ್ಲೀಷ್ನಲ್ಲಿ ಮಾತು ಬರದಿದ್ದರೂ ಸಂವಹನ ಸಾಧಿಸಿ ಹೊಸ ಹೊಸ ಗೆಳೆಯರನ್ನು ಸಂಪಾದಿಸಿದರು. ಪರಸ್ಪರ ಬರವಣಿಗೆಯ ರೀತಿಯನ್ನು ಹೋಲಿಕೆ ಮಾಡಿಕೊಂಡರು.
ಗ್ರಾಮೀಣ ಕ್ರೀಡೆಗಳಾದ ಗಿಲ್ಲಿದಾಂಡು, ಬುಗುರಿ, ಲಗೋರಿ, ಗಾಳಿಪಟ, ಅಳಗುಳಿಮನೆ ಮುಂತಾದವುಗಳನ್ನು ಎಲ್ಲಾ ಮಕ್ಕಳೂ ಒಂದಾಗಿ ಆಡಿ ನಲಿದರು. ಎರಡೂ ಮಕ್ಕಳ ಬಾಂಧವ್ಯ ಬೆಸೆಯಲು ಕ್ವಿಜ್ ಮುಂತಾದ ಚಟುವಟಿಕೆಗಳನ್ನು ಎರಡೂ ಶಾಲೆಯ ಶಿಕ್ಷಕರು ನಡೆಸಿದರು.
ಬೆಂಗಳೂರಿನಿಂದ ಆಗಮಿಸಿದ್ದ ಮಕ್ಕಳು ಮುತ್ತೂರು ಶಾಲೆಯ ತಮ್ಮ ಹೊಸ ಸ್ನೇಹಿತರಿಗಾಗಿ ಪುಟ್ಟ ಪುಟ್ಟ ಉಡುಗೊರೆಗಳನ್ನು ತಂದಿದ್ದರು. ಉಡುಗೊರೆಗಳನ್ನು ತಮ್ಮ ಹೊಸ ಸ್ನೇಹಿತರಿಂದ ಪಡೆದ ಮುತ್ತೂರಿನ ಮಕ್ಕಳು ಶಾಲಾ ಅವಧಿ ಮುಗಿಯುತ್ತಿದ್ದಂತೆ ತಮ್ಮ ಮನೆ, ತೋಟ, ದೇವಸ್ಥಾನ ಮುಂತಾದ ಗ್ರಾಮದ ವಿವಿಧ ತಾಣಗಳನ್ನು ಸುತ್ತಾಡಿಸಿದರು. ತಮ್ಮ ಕುಟುಂಬದವರಿಗೆಲ್ಲಾ ಪರಿಚಯಿಸಿದರು.
‘ಮಕ್ಕಳ ಮನಸ್ಸು ಮುಗ್ಧವಾದುದು. ಕಲ್ಮಶವಿರುವುದಿಲ್ಲ. ಸಂಪರ್ಕ ಕ್ರಾಂತಿಯಿಂದಾಗಿ ಇಡೀ ಪ್ರಪಂಚವೇ ಒಂದು ಗ್ರಾಮದಂತಾದರೂ, ಎಷ್ಟೋ ಮಕ್ಕಳಿಗೆ ಹಳ್ಳಿಯ ಪರಿಕಲ್ಪನೆ ಇರುವುದಿಲ್ಲ. ತಾವು ಕುಡಿಯುವ ಹಾಲಿನ ಹಿಂದಿನ ಶ್ರಮದ ಅರಿವಿರುವುದಿಲ್ಲ. ಗ್ರಾಮೀಣ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಮತ್ತು ನಗರ ಮಕ್ಕಳಿಗೆ ಗ್ರಾಮವನ್ನು ತೋರಿಸಲು ಹೊಸ ಪ್ರಯತ್ನವನ್ನು ನಡೆಸಿದ್ದೇವೆ. ಇದಕ್ಕೆ ಶಾಲೆಯ ಶಿಕ್ಷಕರು, ಗ್ರಾಮಸ್ಥರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ನಮ್ಮ ಮುತ್ತೂರು ಸಂಸ್ಥೆಯ ಉಷಾಶೆಟ್ಟಿ ತಿಳಿಸಿದರು.
ಪ್ರತಿ ಮಂಗಳವಾರ ಹೋಬಳಿ ಮಟ್ಟದಲ್ಲಿ ಬಿ.ಜೆ.ಪಿ ಪಕ್ಷದ ಸ್ವಚ್ಛತಾ ಅಭಿಯಾನ
ಪ್ರತಿ ಮಂಗಳವಾರ ಪಟ್ಟಣ ಹಾಗೂ ಹೋಬಳಿ ಮಟ್ಟದಲ್ಲಿ ಬಿ.ಜೆ.ಪಿ ಪಕ್ಷದ ತಾಲ್ಲೂಕು ಘಟಕದ ವತಿಯಿಂದ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತೇವೆ ಎಂದು ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಬಿ.ಜೆ.ಪಿ ಪಕ್ಷದ ಸದಸ್ಯರೊಡಗೂಡಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ ಬಿ.ಜೆ.ಪಿ ಸದಸ್ಯತ್ವದ ಆಂದೋಲನವನ್ನು ತಾಲ್ಲೂಕಿನಲ್ಲಿ ಪ್ರಾರಂಭಿಸಿದ್ದೇವೆ. ಕೇಂದ್ರ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಸಾಕಷ್ಟು ಕಡಿಮೆ ಮಾಡಿದೆ. ಕೆ.ಎಸ್.ಆರ್.ಟಿ.ಸಿ ಸಂಸ್ಥೆಗೆ ಈಗಾಗಲೇ 4 ಕೋಟಿ ರೂ ಉಳಿತಾಯವಾಗುತ್ತಿದೆ. ರಾಜ್ಯ ಸರ್ಕಾರ ಬಸ್ ದರ ಇನ್ನೂ ಇಳಿಸಿಲ್ಲ. ಇದು ಖಂಡನೀಯ. ಜನರಿಗೆ ಅನುಕೂಲ ಆಗುವ ಕಾರ್ಯಯೋಜನೆಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಯು ತಾಲ್ಲೂಕಿನಾದ್ಯಂತ ಬರುವ ರೋಗಿಗಳನ್ನು ಗುಣಪಡಿಸುವ ತಾಣವಾಗಿದ್ದು, ಈ ಸ್ಥಳದಲ್ಲಿ ಸ್ವಚ್ಛತೆಯು ಅತಿಮುಖ್ಯವಾದದ್ದು. ಅದಕ್ಕಾಗಿ ಬಿ.ಜೆ.ಪಿ ಪಕ್ಷದ ವತಿಯಿಂದ ಸ್ವಚ್ಛತೆ ಕಾರ್ಯಕ್ರಮವನ್ನು ಸರ್ಕಾರಿ ಆಸ್ಪತ್ರೆಯಿಂದ ಪ್ರಾರಂಭಿಸುತ್ತಿರುವುದಾಗಿ ತಿಳಿಸಿದರು.
ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಯಿರಿ, ಶ್ರೀಧರ್, ರಾಘವೇಂದ್ರ, ದಾಮೋದರ್, ತ್ಯಾಗರಾಜ್, ನಂದೀಶ್, ಶಿವಕುಮಾರಗೌಡ, ಸುಜಾತಮ್ಮ, ಮುನಿರತ್ನಮ್ಮ, ಶಿವಮ್ಮ, ಪ್ರಕಾಶ್, ಅಶ್ವಥ್, ನರೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಡ್ಲಘಟ್ಟದ ಚಳಿಗಾಲದ ಆಗಸದ ಚಿತ್ತಾರಗಳು


ಶಿಡ್ಲಘಟ್ಟದ ರೈಲ್ವೆ ನಿಲ್ದಾಣ ಚಳಿಗಾಲದ ಆಗಸದ ಚಿತ್ತಾರಗಳನ್ನು ಪ್ರದರ್ಶಿಸುತ್ತಾ ಮಂಗಳವಾರ ಮುಂಜಾನೆ ಮತ್ತು ಸಂಜೆ ವಿವಿಧ ರಂಗನ್ನು ಬಳಿದುಕೊಂಡಂತೆ ಕಂಡುಬಂದಿತು.
ಕಾರ್ಯತತ್ಪರತೆ ವಿದ್ಯಾರ್ಥಿಗಳ ಮಂತ್ರವಾಗಬೇಕು
ವಿದ್ಯಾರ್ಥಿಗಳು ಅನಗತ್ಯ ವಿಷಯಗಳತ್ತ ಗಮನಹರಿಸಬಾರದು. ಕಾರ್ಯತತ್ಪರತೆ ವಿದ್ಯಾರ್ಥಿಗಳ ಮೂಲಮಂತ್ರವಾಗಬೇಕು ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಶಿಬಿರದಲ್ಲಿ ವಿದ್ಯಾರ್ಥಿಗಳ ಯಶಸ್ಸಿಗೆ ಸೂತ್ರಗಳು ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳಿಗೆ ತಮ್ಮ ಕರ್ತವ್ಯದ ಅರಿವಿರಬೇಕು. ಉತ್ತಮ ಪ್ರಯತ್ನವಿಲ್ಲದೆ ಒಳ್ಳೆಯ ಫಲಿತಾಂಶ ದೊರೆಯುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು. ನಿರಂತರವಾದ ಅಧ್ಯಯನ ಮಾಡಿ, ಮುಂಬರುವ ಪರೀಕ್ಷೆಗಳನ್ನು ಆತ್ಮವಿಶ್ವಾಸ ದಿಂದ ಎದುರಿಸಿ, ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಎಂದರು.
ಉಪನ್ಯಾಸದಲ್ಲಿ ಉದಾಹರಣೆ ಸಹಿತ ಹಲವಾರು ನಿದರ್ಶನಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು ಹಾಗೂ ವಿದ್ಯಾರ್ಥಿಗಳ ಓದಿಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿಗಳನ್ನು ನೀಡಿದರು.
ಶಾಲೆಯ ಮುಖ್ಯ ಶಿಕ್ಷಕಿ ರೋಸಲೀನ್ ಪೆರೇರಾ ಮಾತನಾಡಿ, ವಿದ್ಯಾರ್ಥಿ ಜೀವನದ ಯಶಸ್ಸಿನ ಬಗ್ಗೆ ಉಪನ್ಯಾಸ ನೀಡಿರುವ ವಿಷಯವನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯಿರಿ ಎಂದರು.
ಕುಂದಲಗುರ್ಕಿ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎಂ.ವೆಂಕಟೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಶಾಲೆಯ ಶಿಕ್ಷಕರಾದ ಟಿ.ಆರ್.ಗೀತಾಕುಮಾರಿ, ಸಿ.ಪ್ರಶಾಂತ್ ಕುಮಾರ್, ಕೆ.ಎಂ.ರಮೇಶ್ ಕುಮಾರ್, ಎಲ್.ವಿ.ವೆಂಕಟರೆಡ್ಡಿ, ವಿ.ಮಂಜುನಾಥ್, ಎಸ್.ಗುಂಡಪ್ಪ, ಹನುಮಪ್ಪ ಸೊಟಕ್ಕನವರ್, ಎಸ್. ವೆಂಕಟರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಂ.ಶಶಿಧರ್ ಅವರಿಗೆ ಬ್ಯುಸಿನೆಸ್ ಮ್ಯಾನೇಜ್ಮೆಂಟ್ಗಾಗಿ ಗೌರವ ಡಾಕ್ಟರೇಟ್
ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಶಿಡ್ಲಘಟ್ಟ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಶಶಿಧರ್ ಅವರಿಗೆ ಶ್ರೀಲಂಕಾ ದೇಶದ ಕೊಲಂಬೋ ನಗರದ ದ ಓಪನ್ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಫಾರ್ ಕಾಂಪ್ಲಿಮೆಂಟರಿ ಮೆಡಿಸಿನ್ಸ್(ಓಐಯುಸಿಎಂ)ನ ಕುಲಪತಿ ಡಾ.ಡೋಮ್ ಥೆರೇಸಾ ಬ್ಯುಸಿನೆಸ್ ಮ್ಯಾನೇಜ್ಮೆಂಟ್ಗಾಗಿ ಗೌರವ ಡಾಕ್ಟರೇಟ್ ನೀಡಿದ್ದಾರೆ.
ಎಚ್ಐವಿ ಎಂಬುದು ಬಯಸಿದರೆ ಮಾತ್ರ ಬರುವ ಕಾಯಿಲೆಯಾಗಿದೆ
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಳವಣಿಗೆಯ ಜೊತೆ ಆರೋಗ್ಯ ಬೆಳವಣಿಗೆ ಅಗತ್ಯವಾಗಿದ್ದು ಎಚ್ಐವಿ ಎಂಬುದು ಬಯಸಿದರೆ ಮಾತ್ರ ಬರುವ ಕಾಯಿಲೆಯಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್ ತಿಳಿಸಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ತಾಲ್ಲೂಕು ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುಣಪಡಿಸಲಾಗದ ಮಾರಕ ರೋಗ ಏಡ್ಸ್ ಭಾರತದಲ್ಲಿ ಶರವೇಗದಲ್ಲಿ ಹರಡುತ್ತಿದೆ. ರೋಗ ಬಾರದಂತೆ ಎಚ್ಚರಿಕೆ ವಹಿಸುವುದೊಂದೇ ಇದಕ್ಕೆ ಮದ್ದಾಗಿದ್ದು, ಜನತೆಯಲ್ಲ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ದೊಡ್ಡಮಟ್ಟದಲ್ಲಾಗಬೇಕು. ಅಜ್ಞಾನ, ಅಜಾಗರೂಕತೆ, ಅರಿವಿನ ಕೊರತೆಯಿಂದಾಗಿ ದಿನದಿಂದ ದಿನಕ್ಕೆ ಏಡ್ಸ್ ರೋಗ ಹೆಮ್ಮರದಂತೆ ಹರಡುತ್ತಿದೆ. ಯುವಜನತೆ ಹೆಚ್ಚಾಗಿ ರೋಗಕ್ಕೆ ತುತ್ತಾಗುತ್ತಿದ್ದು, ಇವರಿಗೆ ಜಾಗೃತಿ ಮೂಡಿಸುವ ಕೆಲಸ ಕೇವಲ ಆರೋಗ್ಯ ಇಲಾಖೆಯದೆಂದು ಸುಮ್ಮನಿರದೇ ಎಲ್ಲರೂ ಈ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಏಡ್ಸ್ ಎಂಬ ಮಹಾಮಾರಿಗೆ ಇಂದು ಯುವ ಜನತೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಅದರಲ್ಲೂ ಹಳ್ಳಿಗಳಲ್ಲಿ ಎಚ್ಐವಿ ಪೀಡಿತರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ಬೆಳವಣಿಗೆ ದೇಶದ ಭವಿಷ್ಯಕ್ಕೆ ಮಾರಕವಾಗಿದ್ದು ಯುವಜನತೆಗೆ ಏಡ್ಸ್ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಡಾ.ಕಿರಣ್ ಕುಮಾರ್ ಏಡ್ಸ್ ರೋಗದ ಕುರಿತಂತೆ ಉಪನ್ಯಾಸ ನೀಡಿದರು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ವಕೀಲರು, ಉಪನ್ಯಾಸಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಏಡ್ಸ್ ಜಾಗೃತಿ ಜಾಥಾ ನಡೆಸಿದರು.
ಪ್ರಾಂಶುಪಾಲ ಆನಂದ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಸರ್ಕಾರಿ ವಕೀಲ ಶ್ರೀನಿವಾಸ್, ಡಾ.ಕಿರಣ್ ಕುಮಾರ್, ವಕೀಲರಾದ ಬೈರಾರೆಡ್ಡಿ, ಸುಬ್ರಮಣ್ಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರಕ್ತದಾನವೂ ಒಂದು ರೀತಿಯಲ್ಲಿ ದೇಶಸೇವೆಯೇ
ದೇಶಸೇವೆಯನ್ನು ಗಡಿಯಲ್ಲಿ ಕಾದಾಡುವ ಯೋಧರ ರೀತಿಯಲ್ಲಿ ಸಾಮಾನ್ಯ ಜನರೂ ಮಾಡಬಹುದು. ರಕ್ತದಾನವೂ ಒಂದು ರೀತಿಯಲ್ಲಿ ದೇಶಸೇವೆಯೇ ಎಂದು ಕ್ಯಾಪ್ಟನ್ ಸುನಿಲ್ಕುಮಾರ್ ತಿಳಿಸಿದರು.
ಪಟ್ಟಣದ ಕ್ರೆಸೆಂಟ್ ವಿದ್ಯಾಸಂಸ್ಥೆಯ ಆವರಣದಲ್ಲಿ ಸೋಮವಾರ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಗೂ ಶಾಲಾ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಜಗತ್ತಿನ ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಟವಾದದ್ದು, ಸಕಾಲದಲ್ಲಿ ರೋಗಿಗಳಿಗೆ ಅಗತ್ಯವಿರುವ ರಕ್ತ ದೊರೆತರೆ ಪ್ರಾಣ ಉಳಿಸಲು ಸಹಕಾರಿಯಾಗಲಿದೆ. ಆರೋಗ್ಯ ವಂತರು ಸ್ವಯಂ ಪ್ರೇರಿತರಾಗಿ ರಕ್ತ ದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.
ರಕ್ತದಾನ ಶಿಬಿರದಿಂದ ಅನೇಕ ಲಾಭಗಳಿವೆ ಎಂದ ಅವರು, ಬಹಳಷ್ಟು ಕಡೆಗಳಲ್ಲಿ ರಕ್ತ ಸಿಗುವುದಿಲ್ಲ. ಮುಂದೆ ಇಂತಹ ಸಮಸ್ಯೆ ನಮ್ಮ ತಾಲೂಕಿನ ಜನರಿಗೂ ಆಗಬಹುದು. ಆದ್ದರಿಂದ ರಕ್ತದಾನದಂತಹ ಕಾರ್ಯಕ್ರಮವನ್ನು ಆಗಾಗ ಹಮ್ಮಿಕೊಳ್ಳಬೇಕು ಎಂದು ನುಡಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲೇ ನಮ್ಮ ಜಿಲ್ಲೆಯು ರಕ್ತ ಸಂಗ್ರಹಿಸುವುದರಲ್ಲಿ ಮೊದಲನೇ ಸ್ಥಾನದಲ್ಲಿದೆ. ನಮ್ಮ ಶಿಡ್ಲಘಟ್ಟ ತಾಲ್ಲೂಕು ಜಿಲ್ಲೆಯಲ್ಲೇ ರಕ್ತಸಂಗ್ರಹಿಸುವುದರಲ್ಲಿ ಪ್ರಥಮ ಸ್ಥಾನದಲ್ಲಿದೆ. ಸಾಮಾಜಿಕ ಕಳಕಳಿಯುಳ್ಳ ಮನಸ್ಸುಗಳು ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ತಾಲ್ಲೂಕು ಪದಾಧಿಕಾರಿಗಳ ಪರಿಶ್ರಮ ಇದರಿಂದ ವ್ಯಕ್ತವಾಗುತ್ತದೆ ಎಂದು ತಿಳಿಸಿದರು.
ಒಟ್ಟು 63 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಕ್ರೆಸೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಮೀಮ್ಪಾಷ, ರಜಸ್ವ ನಿರೀಕ್ಷಕ ಸುಬ್ರಮಣಿ, ಬೆಸ್ಕಾಂ ಎಂಜಿನಿಯರ್ ಅನ್ಸರ್ಪಾಷ, ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ರೆಡ್ಕ್ರಾಸ್ ಸಂಸ್ಥೆಯ ಡಾ.ರವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರಸ್ತೆಯ ಮರು ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ
ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಥಳೀಯ ಮುಖಂಡರು ಸೇರಿದಂತೆ ಗ್ರಾಮಸ್ಥರು ನಿಗಾವಹಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲೂಕಿನ ಫಲಿಚೇರ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಸುಮಾರು 50 ಲಕ್ಷ ರೂಗಳ ವೆಚ್ಚದ 05 ಕಿ.ಮೀ ರಸ್ತೆಯ ಮರು ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗಾಗಿ ಸರಕಾರ ಹೆಚ್ಚಿನ ಆಧ್ಯತೆ ನೀಡುತ್ತಿದ್ದು ಬಿಡುಗಡೆಗೊಳಿಸಿರುವಂತಹ ಅನುಧಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಗ್ರಾಮದಲ್ಲಿ ಗುಣಮಟ್ಟದ ಕಾಮಗಾರಿಗಳಾಗುವಂತೆ ನೋಡಿಕೊಳ್ಳುವುದು ಸ್ಥಳೀಯ ಮುಖಂಡರ ಹಾಗು ಗ್ರಾಮಸ್ಥರ ಕರ್ತವ್ಯವಾಗಿರುತ್ತದೆ.
ಹಾಗಾಗಿ ತಮ್ಮ ತಮ್ಮ ಗ್ರಾಮದಲ್ಲಿ ನಡೆಯುವ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೇ ಗ್ರಾಮದ ಅಬಿವೃದ್ದಿಗೆ ಎಲ್ಲರೂ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ಬಂಕ್‍ಮುನಿಯಪ್ಪ, ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ರೆಹಮತ್ತುಲ್ಲಾ, ಫಲಿಚೆರ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿನ್ನಮಂಗಲ ನರಸಿಂಹಪ್ಪ, ಪಿಡಬ್ಲ್ಯೂಡಿ ಎಇಇ ಜಮೀರ್‍ಪಾಷ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬೈರಾರೆಡ್ಡಿ, ಮುಖಂಡರಾದ ಜಯರಾಮರೆಡ್ಡಿ, ಮಲ್ಲಪ್ಪ, ಮತ್ತಿತರರು ಹಾಜರಿದ್ದರು.

